ಬೆಂಗಳೂರು: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ

0
232

ಬೆಂಗಳೂರು: “ಶಿಕ್ಷಣವೆಂದರೆ ಕೇವಲ ಓದು-ಬರಹ ಕಲಿಯುವುದು ಅಲ್ಲ. ಶಿಕ್ಷಣ ಎಂದರೆ ಬದುಕಿನಲ್ಲಿ ಶಿಸ್ತು, ಸಂಯಮ ಹಾಗೂ ಒಳ್ಳೆಯ ಸಂಸ್ಕಾರಗಳನ್ನು ಕಲಿಯುವುದಾಗಿದೆ” ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕದ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.

ಅವರು ಇತ್ತೀಚೆಗೆ ಸ್ಥಳೀಯ ವಾಲ್ಮೀಕಿ ನಗರದ ಇಸ್ಲಾಮಿಕ್ ಸೆಂಟರ್‌ನಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಇಂದು ನಾವು ನಮ್ಮ ಮಕ್ಕಳೊಂದಿಗೆ ಅವರ ಶಾಲಾ ಪಠ್ಯದ ಕುರಿತು ಬಹಳ ಆಸಕ್ತಿಯಿಂದ ಚರ್ಚಿಸುತ್ತೇವೆ, ಆದರೆ ಅದೇ ಮಕ್ಕಳೊಂದಿಗೆ ಬದುಕಿನ ಮೌಲ್ಯಗಳ ಕುರಿತು ನಾವು ಮಾತನಾಡುವುದು ವಿರಳ. ಭವಿಷ್ಯದಲ್ಲಿ ನಮ್ಮ ಮಕ್ಕಳು ಒಳ್ಳೆಯ ವೈದ್ಯರು, ಇಂಜಿನಿಯರ್‌ಗಳು ಅಥವಾ ದೊಡ್ಡ ಸರ್ಕಾರಿ ಅಧಿಕಾರಿಗಳಾಗುವುದನ್ನು ನೋಡುವ ಆಸೆ ನಮಗಿದೆ. ಅದರ ಜೊತೆಜೊತೆಗೆ ನಮ್ಮ ಮಕ್ಕಳು ಒಳ್ಳೆಯ ಮನುಷ್ಯರಾಗಿ ಬೆಳೆಯಬೇಕು ಎಂಬ ಇಚ್ಛೆಯನ್ನು ನಾವು ಹೊಂದಬೇಕು. ಆ ನಿಟ್ಟಿನಲ್ಲಿ ಅವರನ್ನು ತರಬೇತುಗೊಳಿಸಬೇಕು” ಎಂದು ಅವರು ಹೇಳಿದರು.

ಮಸ್ಜಿದೆ ಹುದಾದ ಇಮಾಮ್ ಹಾಗೂ ಖತೀಬ್ ಮೌಲಾನಾ ಮುಫ್ತಿ ಮುಸದ್ದೀಕ್ ಅಹ್ಮದ್ ಅವರು ಇಸ್ಲಾಮಿ ಶಿಕ್ಷಣದ ಅಗತ್ಯದ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಬಿಐಇ ರಾಜ್ಯ ಕೋ-ಆರ್ಡಿನೇಟರ್ ಮುಹಮ್ಮದ್ ನಸ್ರುಲ್ಲಾಹ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಬೀಹಾ ಇಕ್ಬಾಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಜಮಾಅತೆ ಇಸ್ಲಾಮೀ ಹಿಂದ್‌ನ ಸ್ಥಾನೀಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಗೂಡಿಹಾಳ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.