ಸನ್ಮಾರ್ಗ ವಾರ್ತೆ
ರಾಜ್ಯ ಬಿಜೆಪಿಯಲ್ಲಿ ಸಡನ್ ಆಪರೇಷನ್ ಮಾತುಗಳು ಕೇಳಿ ಬರ್ತಾ ಇದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಹಲವು ಶಾಸಕರು ಅಡ್ಡ ಮತದಾನ ಮಾಡಿರುವುದರಿಂದ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಸ್ಥಾನ ಅಲುಗಾಡ್ತಾ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ವಿಜಯೇಂದ್ರ ಅವರನ್ನು ತೆಗೆದುಹಾಕುವಂತೆ ದೆಹಲಿ ನಾಯಕರಿಗೆ ಒತ್ತಾಯ ಮಾಡಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ಬಿಜೆಪಿ ಕೇಂದ್ರ ನಾಯಕ ಪ್ರದೀಪ್ ಎಂಬವರ ಜೊತೆಗೆ ಡಿವಿ ಸದಾನಂದ ಗೌಡ ಅವರು ಇಂಗ್ಲಿಷ್ನಲ್ಲಿ ನಡೆಸಿದ ಸಂಭಾಷಣೆ ಬಹಿರಂಗಕ್ಕೆ ಬಂದಿದೆ. ಮೂರು ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜೇಂದ್ರ ಅವರನ್ನು ಕೆಳಗಿಳಿಸಿ ಎಂಬ ಬೇಡಿಕೆಯನ್ನು ಸದಾ ನಂದ ಗೌಡ ಈ ಸಂಭಾಷಣೆಯಲ್ಲಿ ಇಟ್ಟಿದ್ದಾರೆ. ಈ ಆಡಿಯೋ ಇದೀಗ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಬಣ ಬಡಿದಾಟಕ್ಕೆ ವೇದಿಕೆ ಸಜ್ಜು ಮಾಡಿದೆ.
ಇನ್ನು ಮೂರು ತಿಂಗಳಲ್ಲಿ ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮೂರು ವರ್ಷಗಳಾಗುತ್ತೆ. ಆದ್ದರಿಂದ ಮೂರು ತಿಂಗಳ ಬಳಿಕ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ ಎಂದು ಆಡಿಯೋದಲ್ಲಿ ಸದಾನಂದ ಗೌಡ ಹೇಳಿದ್ದಾರೆ. ಈಗಲೇ ತೆಗೆದುಹಾಕಿದ್ರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಎಂಬ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ. ಇದು ಪಕ್ಷಕ್ಕೆ ಡ್ಯಾಮೇಜ್ ತರಬಹುದು.. ಹಾಗಾಗಿ ಮುಂದಿನ ಅಕ್ಟೋಬರ್ವರೆಗೂ ಕಾದು ವಿಜಯೇಂದ್ರ ಅವರನ್ನು ಪದವಿಯಿಂದ ತೆಗೆಯುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸದಾನಂದ ಗೌಡ ಅವರು ಆಡಿಯೋ ಕುರಿತು ನಾನು ಯಾವುದೇ ಕಾಮೆಂಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.












