ಭೋಜಶಾಲಾ ತೀರ್ಪು ಕೇವಲ ದೋಷಪೂರಿತವಲ್ಲ; ಪೂರ್ವನಿರ್ಧರಿತ

0
313

✍️ ದರಾಬ್ ಫಾರೂಕಿ, ಸಿನೆಮಾ ಬರಹಗಾರರು

ಒಂದು ಸುಳ್ಳನ್ನು ಸುಲಭವಾಗಿ ಸೋಲಿಸಬಹುದು. ಆದರೆ ಹೆಚ್ಚು ಬಾಳಿಕೆ ಬರುವ ಸಾಧನವೆಂದರೆ ‘ತುಣುಕು’; ಸತ್ಯದ ಒಂದು ಸಣ್ಣ ಭಾಗವನ್ನು ಅದರ ಸಂದರ್ಭದಿಂದ ಎಷ್ಟು ಜಾಗರೂಕತೆಯಿಂದ ಹೊರತೆಗೆಯಲಾಗಿರುತ್ತದೆ ಎಂದರೆ, ಅದರ ಮೇಲೆ ನಿರ್ಮಿಸಲಾದ ಯಾವುದೇ ತೀರ್ಮಾನವನ್ನು ಅದು ಬೆಂಬಲಿಸಬಲ್ಲದು. ನಾವು ಇದನ್ನು ಅರ್ಧಸತ್ಯ ಎಂದು ಕರೆಯುತ್ತೇವೆ, ಆದರೆ ಈ ಸಂದರ್ಭದಲ್ಲಿ, ಇದು 1/12 ರಷ್ಟು ಸತ್ಯ. ಆ ಸತ್ಯದ ಪ್ರಮಾಣಕ್ಕಿಂತ ಅದರ ಸುತ್ತಲೂ ನಿರ್ಮಿಸಲಾದ ವಾದ ಹೆಚ್ಚು ಮುಖ್ಯವಾಗುತ್ತದೆ.

ಈ 1/12 ರಷ್ಟು ಸತ್ಯವು ಸುಳ್ಳಿಗಿಂತ ಹೆಚ್ಚು ಅಪಾಯಕಾರಿ, ಏಕೆಂದರೆ ಇದಕ್ಕೆ ‘ಫ್ಯಾಕ್ಟ್-ಚೆಕ್ಕಿಂಗ್’ (ಸತ್ಯಾಸತ್ಯತೆ ಪರಿಶೀಲನೆ) ಪ್ರಭಾವ ಬೀರುವುದಿಲ್ಲ. ಪ್ರತಿ ಬಾರಿ ಯಾರಾದರೂ ಆ ತೀರ್ಮಾನವನ್ನು ಪ್ರಶ್ನಿಸಿದಾಗ, ಆ ಸಣ್ಣ ಸತ್ಯದ ತುಣುಕನ್ನೇ ಗುರಾಣಿಯಾಗಿ ಬಳಸಲಾಗುತ್ತದೆ. “ಆದರೆ ಈ ಭಾಗ ನಿಜವಲ್ಲವೇ? ಹೌದು, ಆ ಭಾಗ ನಿಜ.” ಆದರೆ ಪ್ರಶ್ನೆ ಏನೆಂದರೆ, ಅದರ ಮೇಲೆ ಏನನ್ನು ನಿರ್ಮಿಸಲಾಯಿತು ಮತ್ತು ಏನನ್ನು ಗುಟ್ಟಾಗಿ ಬಿಟ್ಟುಬಿಡಲಾಯಿತು ಎಂಬುದಾಗಿದೆ.

ಕಮಲ್ ಮೌಲಾ ಮಸೀದಿ ತೀರ್ಪಿಗೆ ಸಂಪೂರ್ಣ ಕಟ್ಟುಕಥೆಗಳ ಅಗತ್ಯವಿರಲಿಲ್ಲ. ಸಮುದಾಯವೊಂದರಿಂದ 700 ವರ್ಷಗಳ ಹಳೆಯ ಆರಾಧನಾ ಸ್ಥಳವನ್ನು ಕಸಿದುಕೊಳ್ಳುವ ಇಂತಹ ತೀರ್ಪಿಗೆ ಕೇವಲ ಸತ್ಯದ ಕೆಲವು ತುಣುಕುಗಳು ಬೇಕಾಗಿದ್ದವು. ಮತ್ತು ಅಂತಹ ತುಣುಕುಗಳು ಅದಕ್ಕೆ ಸಿಕ್ಕವು. ಇದು ಆರಂಭವಾಗಿದ್ದು ಒಂದು ಹೆಸರಿನಿಂದ!

1903 ರಲ್ಲಿ, ಬ್ರಿಟಿಷ್ ಕಾಲದ ಶಿಕ್ಷಣ ಅಧಿಕಾರಿಯಾಗಿದ್ದ ಕೆ.ಕೆ. ಲೇಲೆ ಅವರು ಸ್ಥಳೀಯರು “ರಾಜಾ ಭೋಜ ಕಾ ಮದ್ರಸಾ” ಎಂದು ಕರೆಯುತ್ತಿದ್ದ ಕಟ್ಟಡವನ್ನು ನೋಡಿ, ಅದಕ್ಕೆ ‘ಭೋಜಶಾಲಾ’ ಎಂದು ಹೆಸರಿಡಲು ನಿರ್ಧರಿಸಿದರು. ಅವರಿಗಿಂತ ಮುಂಚಿನ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿಯೂ ಅದನ್ನು ಮಸೀದಿ ಎಂದೇ ಕರೆದಿದ್ದರು. 1822 ರಲ್ಲಿ ಧಾರ್ ಪ್ರದೇಶಕ್ಕೆ ಭೇಟಿ ನೀಡಿದ್ದ ಜಾನ್ ಮಾಲ್ಕಮ್ ಅಲ್ಲಿನ ಕಟ್ಟಡದಿಂದ ಶಾಸನವೊಂದನ್ನು ತೆಗೆದಿದ್ದರು. ಆ ಕಟ್ಟಡದ ಬಗ್ಗೆ ಅವರು “ಹಾಳಾದ ಮಸೀದಿ” ಎಂದು ಮಾತ್ರ ಹೇಳಿದ್ದರು. 1888 ರಲ್ಲಿ ಮಾಲ್ವಾದಲ್ಲಿನ ತಮ್ಮ ವಾಸದ ಬಗ್ಗೆ ಬರೆದ ವಿಲಿಯಂ ಕಿನ್ಕೈಡ್, ರಾಜಾ ಭೋಜನ ಬಗ್ಗೆ ಇರುವ ಸ್ಥಳೀಯ ದಂತಕಥೆಗಳನ್ನು ವ್ಯಾಪಕವಾಗಿ ದಾಖಲಿಸಿದ್ದಾರಾದರೂ ಎಲ್ಲಿಯೂ ಭೋಜಶಾಲಾದ ಬಗ್ಗೆ ಪ್ರಸ್ತಾಪಿಸಿಲ್ಲ. ಅವರು ಅದನ್ನು ಮರೆತಿದ್ದರಿಂದ ಅಲ್ಲ, ಬದಲಿಗೆ ಆಗ ಅಂತಹದ್ದೊಂದು ಅಸ್ತಿತ್ವದಲ್ಲೇ ಇರಲಿಲ್ಲ.

ಲೇಲೆ ಅವರು ಯಾವುದೇ ಉತ್ಖನನ ಅಥವಾ ಪುರಾವೆಗಳ ಮೂಲಕ ಅಲ್ಲ, ಕೇವಲ ನಾಮಕರಣದ ಮೂಲಕ ಅದನ್ನು ಬದಲಾಯಿಸಿದರು.

ಈ ಸಂಭವಗಳ ನೂರಾ ಇಪ್ಪತ್ತಮೂರು ವರ್ಷಗಳ ನಂತರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಮಧ್ಯಪ್ರದೇಶ ಹೈಕೋರ್ಟ್‌ಗೆ 2,000 ಪುಟಗಳ ವರದಿಯನ್ನು ಸಲ್ಲಿಸಿತು. ಅದರಲ್ಲಿ “ಭೋಜಶಾಲಾ ದೇವಸ್ಥಾನ” ಎಂಬ ಪದವು ಉದ್ದಕ್ಕೂ ಬಳಕೆ ಮಾಡಿದೆ. ಅದೊಂದು ವಿವಾದದ ಬಗ್ಗೆ ಪ್ರತಿಪಾದನೆ ಎಂಬಂತೆ ಇರಲಿಲ್ಲ, ಬದಲಿಗೆ ಖಚಿತ ಸತ್ಯ ಎಂಬಂತೆ ಬಳಸಿದೆ. 1/12 ರಷ್ಟು ಸತ್ಯವು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಉದಾಹರಣೆ. ಮೊದಲು ಯಾವುದಕ್ಕಾದರೂ ಒಂದು ಹೆಸರಿಡಿ. ಅದನ್ನು ದೀರ್ಘಕಾಲದವರೆಗೆ ಪುನರಾವರ್ತಿಸಿ. ನಂತರ ಉಳಿದದ್ದನ್ನು ಸಂಸ್ಥೆಗಳು ನೋಡಿಕೊಳ್ಳುತ್ತವೆ.

ಅನುಕೂಲಕರ ಮತ್ತು ವಂಚನೆಯ ಪುರಾತತ್ವ ಶಾಸ್ತ್ರ

98 ದಿನಗಳ ಸಮೀಕ್ಷೆ – ಎರಡು ಸಾವಿರ ಪುಟಗಳು – ಒಂದು ಸಾವಿರದ ಏಳುನೂರು ಕಲಾಕೃತಿಗಳು. ಈ ಸಂಖ್ಯೆಗಳು ಭಾರಿ ಪ್ರಭಾವಶಾಲಿಯಾಗಿ ಕೇಳಿಸುತ್ತವೆ. ವಿಜ್ಞಾನವು ಇಲ್ಲಿ ಪ್ರಭಾವಶಾಲಿಯಾಗಿ ಧ್ವನಿಸುತ್ತದೆ. ಹೌದು ಅದೇ ಇಲ್ಲಿನ ಮುಖ್ಯ ಉದ್ದೇಶವಾಗಿದೆ.

ಆದರೆ ಆ 1,700 ಕಲಾಕೃತಿಗಳು ವಾಸ್ತವವಾಗಿ ಏನು ಎಂಬುದನ್ನು ಹತ್ತಿರದಿಂದ ನೋಡಿಬೇಕು. ಬ್ರಿಟಿಷ್ ಕಾಲದ ನಾಣ್ಯಗಳು, ಮೊಘಲ್ ಕಾಲದ ನಾಣ್ಯಗಳು, ದೆಹಲಿ ಸುಲ್ತಾನರ ಕಾಲದ ನಾಣ್ಯಗಳು, ಪ್ರಾಣಿಗಳ ಕೆತ್ತನೆಗಳು, ವಾಸ್ತುಶಿಲ್ಪದ ತುಣುಕುಗಳು, ಸಾವಿರಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಜನರು ವಾಸಿಸುತ್ತಿರುವ ನಗರದ ಪ್ರತಿಯೊಂದು ಪದರದ ಅವಶೇಷಗಳನ್ನು ಒಂದೇ ನಾಟಕೀಯ ಸಂಖ್ಯೆಯಾಗಿ ಒಟ್ಟುಗೂಡಿಸಿ, ಒಂದು ನಿರ್ದಿಷ್ಟ ತೀರ್ಮಾನಕ್ಕೆ ಪುರಾವೆಯಾಗಿ ಪ್ರಸ್ತುತಪಡಿಸಲಾಯಿತು.

ಧಾರ್ ಅನ್ನುವುದು ಪರಮಾರ ರಾಜವಂಶದ ನಗರವಾಗಿತ್ತು. ಹೀಗಾಗಿ ಅದರ ಮಣ್ಣಿನಲ್ಲಿ ಹಿಂದೂ ಕಲಾಕೃತಿಗಳು ಇರುವುದು ಸಹಜ. ಅವುಗಳನ್ನು ಪತ್ತೆಹಚ್ಚುವುದು ಅಲ್ಲಿ ನಿರಂತರ ಜನವಾಸವಿತ್ತು ಎಂಬುದನ್ನು ಸಾಬೀತುಪಡಿಸುತ್ತದೆಯೇ ಹೊರತು, ಈ ನಿರ್ದಿಷ್ಟ ಕಟ್ಟಡವೇ ದೇವಸ್ಥಾನವಾಗಿತ್ತು ಎಂಬುದನ್ನು ಸಾಬೀತುಪಡಿಸುವುದಿಲ್ಲ.

ಆದರೆ, ಏನನ್ನು ಪತ್ತೆಹಚ್ಚಲಿಲ್ಲ ಅಥವಾ ಪತ್ತೆಹಚ್ಚಿದೆ ಅನ್ನುವುದಕ್ಕಿಂದ ಏನನ್ನು ವರದಿ ಮಾಡದಿರಲು ನಿರ್ಧರಿಸಿತು ಎಂಬುದು ಇಲ್ಲಿ ಮುಖ್ಯವಾಗಿದೆ. ಸಮೀಕ್ಷೆಯ ಸಮಯದಲ್ಲಿ ಗೌತಮ ಬುದ್ಧನ ಮೂರ್ತಿಯೊಂದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಅದು ಎಎಸ್‌ಐನ ವರದಿಯಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಬುದ್ಧನ ಪ್ರಸ್ತಾಪವು ಆ ಕಥನವನ್ನು ಸಂಕೀರ್ಣಗೊಳಿಸುತ್ತದೆ. ಬುದ್ಧನ ಮೂರ್ತಿಯು ಆ ಸ್ಥಳವು ಬಹು-ಧಾರ್ಮಿಕ ಇತಿಹಾಸವನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ, ಅದನ್ನು ಕೇವಲ ಒಂದೇ ಮೂಲದ ಕಥೆಯಾಗಿ ಸರಳೀಕರಿಸಲು ಸಾಧ್ಯವಿಲ್ಲದಾಗಿಸುತ್ತದೆ. ಆದ್ದರಿಂದ, ಬುದ್ಧನನ್ನು ಈ ಬಾರಿ ಮಣ್ಣಿನ ಬದಲಿಗೆ ಸಾಂಸ್ಥಿಕ ಮೌನದಲ್ಲಿ ಹೂತುಹಾಕಲಾಯಿತು.

ಕಲಾಕೃತಿಗಳ ವಯಸ್ಸನ್ನು ವಸ್ತುನಿಷ್ಠವಾಗಿ ನಿರ್ಧರಿಸಬಲ್ಲ ಏಕೈಕ ಸಾಧನ ಕಾರ್ಬನ್ ಡೇಟಿಂಗ್ ಆಗಿರುವುದರಿಂದ ಹೈಕೋರ್ಟ್ ಅದನ್ನು ನಡೆಸುವಂತೆ ನಿರ್ದೇಶಿಸಿತ್ತು. ಆದರೆ, ಎಎಸ್‌ಐ ಅದನ್ನು ನಡೆಸಲಿಲ್ಲ. ಯಾವುದೇ ಸ್ಪಷ್ಟನೆಯೂ ಇಲ್ಲ, ಯಾವುದೇ ಪರಿಣಾಮವೂ ಇಲ್ಲ, ಯಾವುದೇ ನ್ಯಾಯಾಂಗ ನಿಂದನೆ ಪ್ರಕ್ರಿಯೆಯೂ ಇಲ್ಲ. ಅದನ್ನು ಆದೇಶಿಸಿದ್ದ ನ್ಯಾಯಾಲಯವು ಹೇಗಿದ್ದರೂ ತನ್ನ ತೀರ್ಪನ್ನು ನೀಡಿತು.

ಇನ್ನೊಂದು ಅಚ್ಚರಿ ಎಂಬಂತೆ ಅಲ್ಲಿ ಪ್ಲಾಸ್ಟಿಕ್ ಇತ್ತು.

ಮಸೀದಿಯ ಪರ ವಕೀಲರು, ಒಂದೇ ಕಲ್ಲಿನ ಚಪ್ಪಡಿಯ ಅಡಿಯಿಂದ ಪತ್ತೆಯಾದ ಕಲಾಕೃತಿಗಳ ವಿಡಿಯೋ ದೃಶ್ಯಾವಳಿಗಳಲ್ಲಿ ಕಾಗದ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕಪ್‌ಗಳು ಒಟ್ಟಿಗೆ ಕಾಣಿಸಿಕೊಂಡಿವೆ ಎಂಬುದನ್ನು ಎತ್ತಿ ತೋರಿಸಿದರು. ಆ ಕಲಾಕೃತಿಗಳು ಅಸಹಜ ಎಂಬಂತೆ ತುಂಬಾನೇ ಸ್ವಚ್ಛವಾಗಿದ್ದವು; ಅವುಗಳ ಮೇಲೆ ಯಾವುದೇ ಮಣ್ಣಿನ ಪದರವಾಗಲಿ ಅಥವಾ ಶತಮಾನಗಳ ಶೇಖರಣೆಯ ಕುರುಹಾಗಲಿ ಇರಲಿಲ್ಲ. 13 ನೇ ಅಥವಾ 14 ನೇ ಶತಮಾನದಿಂದ ಹೂತುಹೋಗಿರುವ ವಸ್ತುಗಳು ಕಳೆದ ಮಂಗಳವಾರವಷ್ಟೇ ಧೂಳು ಕೊಡವಿದಂತೆ ಕಾಣಲು ಸಾಧ್ಯವೇ? 13 ನೇ ಶತಮಾನದಲ್ಲಿ ಪ್ಲಾಸ್ಟಿಕ್ ಆವಿಷ್ಕಾರವಾಗಿರಲಿಲ್ಲ ಎಂದು ಮಸೀದಿಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ನ್ಯಾಯಾಲಯವು ಅದಕ್ಕೆ ಒಪ್ಪಲಿಲ್ಲ.

ಇದು ತಮ್ಮ ಅನುಕೂಲಕ್ಕೆ ತಕ್ಕ ಪುರಾತತ್ವ ಶಾಸ್ತ್ರವಾಗಿದೆ. ತೀರ್ಮಾನಕ್ಕೆ ಪೂರಕವಾಗಿರುವುದನ್ನು ತೆಗೆದುಕೊಳ್ಳಿ. ಸಂಕೀರ್ಣಗೊಳಿಸುವುದನ್ನು ಬಿಟ್ಟುಬಿಡಿ. ಅನನುಕೂಲಕರ ಫಲಿತಾಂಶಗಳನ್ನು ನೀಡಬಹುದಾದ ಪರೀಕ್ಷೆಗಳನ್ನು ತಪ್ಪಿಸಿ. ಉಳಿದದ್ದನ್ನು ಸಾಂಸ್ಥಿಕ ಅಧಿಕಾರ ಮತ್ತು 2,000 ಪುಟಗಳ ರೂಪದಲ್ಲಿ ಪ್ರಸ್ತುತಪಡಿಸಿ. ಕಲಾಕೃತಿಗಳನ್ನು ಆಯ್ದುಕೊಳ್ಳಲಾಗಿತ್ತು, ಮತ್ತು ಅವುಗಳನ್ನು ವಿವರಿಸಲು ಬಳಸಿದ ಭಾಷೆಯನ್ನೂ ಸಹ ಆಯ್ದುಕೊಳ್ಳಲಾಗಿತ್ತು.

ಯಾರೂ ಪ್ರಶ್ನಿಸದ ಸಂಸ್ಥೆ:

ಭೋಜಶಾಲಾ ತೀರ್ಪನ್ನು ಹೇಗೆ ತಯಾರಿಸಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು, ಮೊದಲು ಅದನ್ನು ತಯಾರಿಸಿದ ಕಾರ್ಖಾನೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. 

1861ರ ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಎಎಸ್‌ಐ ಅನ್ನು ಸ್ಥಾಪಿಸಲಾಯಿತು. ಇದು ಸುಮಾರು 3,700 ಕೇಂದ್ರ ಸಂರಕ್ಷಿತ ಸ್ಮಾರಕಗಳನ್ನು ನಿರ್ವಹಿಸುತ್ತದೆ. ಹೆಚ್ಚಿನ ಭಾರತೀಯರು ಎಂದಿಗೂ ಪ್ರಶ್ನಿಸಲು ಯೋಚಿಸದ ಸಾಂಸ್ಥಿಕ ಪ್ರತಿಷ್ಠೆಯನ್ನು ಇದು ಹೊಂದಿದೆ. ಎಎಸ್‌ಐ ಮಾತನಾಡಿದಾಗ, ನ್ಯಾಯಾಲಯಗಳು ಆಲಿಸುತ್ತವೆ.

ಆದರೆ ಎಎಸ್‌ಐ ಸ್ವತಂತ್ರ ವೈಜ್ಞಾನಿಕ ಸಂಸ್ಥೆಯಲ್ಲ. ಇದು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಮತ್ತು ಆ ಸಚಿವಾಲಯವು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅದರ ವರದಿಗಳು ಯಾವುದೇ ‘ಪೀರ್ ರಿವ್ಯೂ’ಗೆ (ಬಾಹ್ಯ ವಿದ್ವಾಂಸರ ಪರಿಶೀಲನೆ) ಒಳಪಡುವುದಿಲ್ಲ. ಸ್ವತಂತ್ರ ವಿದ್ವಾಂಸರು ಅದರ ಕಾರ್ಯವಿಧಾನವನ್ನು ಪರೀಕ್ಷಿಸಲು, ಸಂಶೋಧನೆಗಳನ್ನು ಸವಾಲು ಮಾಡಲು ಅಥವಾ ಫಲಿತಾಂಶಗಳನ್ನು ಮರುಪರಿಶೀಲಿಸಲು ಸಾಧ್ಯವಾಗುವಂತಹ ಯಾವುದೇ ಪುರಾತತ್ವ ನಿಯತಕಾಲಿಕೆಗಳಲ್ಲಿ ಅವು ಪ್ರಕಟವಾಗುವುದಿಲ್ಲ. ಅವು ಮೊಹರು ಮಾಡಿದ ಲಕೋಟೆಗಳಲ್ಲಿ, ಅತ್ಯಂತ ರಹಸ್ಯವಾಗಿ ನೇರವಾಗಿ ನ್ಯಾಯಾಲಯಗಳಿಗೆ ಹೋಗುತ್ತವೆ. ಪುರಾತತ್ವ ಶಾಸ್ತ್ರಜ್ಞರಲ್ಲದ, ತಾವು ಸ್ವತಂತ್ರವಾಗಿ ಮೌಲ್ಯಮಾಪನ ಮಾಡಲಾಗದ ವಿಜ್ಞಾನವನ್ನು ಪರಿಶೀಲಿಸುವ ಮತ್ತು ತಮಗೆ ಅಪನಂಬಿಕೆ ಪಡಲು ಯಾವುದೇ ರಚನಾತ್ಮಕ ಕಾರಣವಿಲ್ಲದ ಸಂಸ್ಥೆಯು ನೀಡಿದ ವರದಿಯನ್ನು ನ್ಯಾಯಾಧೀಶರು ರಹಸ್ಯವಾಗಿ ವೀಕ್ಷಿಸುತ್ತಾರೆ.

ಯಾವುದೇ ಜೀವಂತ ಪ್ರಜಾಪ್ರಭುತ್ವದಲ್ಲಿ, ಇದನ್ನು ತಕ್ಷಣವೇ ಒಂದು ದೊಡ್ಡ ಸಮಸ್ಯೆ ಎಂದು ಗುರುತಿಸಬಹುದು. ಆರಾಧನಾ ಸ್ಥಳದ ಕಾನೂನು ಸ್ಥಿತಿಯನ್ನು ನಿರ್ಧರಿಸುವ, ಲಕ್ಷಾಂತರ ಜನರ ಧಾರ್ಮಿಕ ಹಕ್ಕುಗಳ ಮೇಲೆ ಪರಿಣಾಮ ಬೀರುವ ಪುರಾತತ್ವ ಪುರಾವೆಗಳನ್ನು ಸರ್ಕಾರಿ ಸಂಸ್ಥೆಯೊಂದು ಸಿದ್ಧಪಡಿಸುತ್ತದೆ, ಆ ಸಂಸ್ಥೆಯ ಹೊರಗಿನ ಯಾರೂ ಅದನ್ನು ಪರಿಶೀಲಿಸುವುದಿಲ್ಲ ಮತ್ತು ಅದನ್ನು ನ್ಯಾಯಾಲಯಕ್ಕೆ ಅಂತಿಮ ವಿಜ್ಞಾನದಂತೆ ಪ್ರಸ್ತುತಪಡಿಸಲಾಗುತ್ತದೆ. ಇದು ವಿಜ್ಞಾನದ ತರ ಕಾಣುವಂತೆ ರೂಪಿಸಲಾದ ಕೇವಲ ಒಂದು ಪ್ರಕ್ರಿಯೆ. ಪ್ರಾಯೋಗಿಕವಾಗಿ ಇದು ವಂಚನೆಗೆ ಹತ್ತಿರವಾಗಿದೆ.

ಎಎಸ್‌ಐ ತನ್ನ ವಿದ್ವತ್ಪೂರ್ಣ ಖ್ಯಾತಿಯನ್ನು ರಕ್ಷಿಸಿಕೊಳ್ಳಬೇಕಾದ ಸ್ವತಂತ್ರ ವೈಜ್ಞಾನಿಕ ಸಂಸ್ಥೆಯಲ್ಲ. ಇದು ರಾಜಕೀಯವಾಗಿ ನಿರ್ದೇಶಿಸಲ್ಪಟ್ಟ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ, ಯಾವುದೇ ಬಾಹ್ಯ ತಜ್ಞರ ಪರಿಶೀಲನೆಯ ಜವಾಬ್ದಾರಿಯಿಲ್ಲದ ಮತ್ತು ಶೈಕ್ಷಣಿಕ ಸಮುದಾಯಕ್ಕೆ ಯಾವುದೇ ಉತ್ತರದಾಯಿತ್ವವಿಲ್ಲದ ಅಧಿಕಾರಿಗಳನ್ನು ಒಳಗೊಂಡ ಸರ್ಕಾರಿ ಇಲಾಖೆಯಾಗಿದೆ. ಯಾವುದೇ ರಾಜಕೀಯ ಹಿತಾಸಕ್ತಿಗಳಿಲ್ಲದ ಮತ್ತು ದೆಹಲಿಯಲ್ಲಿ ಯಾರೂ ಅದರ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದ ಸಂದರ್ಭಗಳಲ್ಲಿ ಮಾತ್ರ ಇದು ಸಾಂದರ್ಭಿಕವಾಗಿ ನೈಜ ಪುರಾತತ್ವ ಮೌಲ್ಯದ ಕೆಲಸವನ್ನು ಮಾಡುತ್ತದೆ.

ಯಾವಾಗ ರಾಜಕೀಯ ಪ್ರೇರಣೆ ಪ್ರವೇಶಿಸುತ್ತದೆಯೋ, ಅಂದರೆ ಭೋಜಶಾಲಾ, ಜ್ಞಾನವಾಪಿ ಮತ್ತು ಕೀಲಾಡಿಗಳಲ್ಲಿ ಸ್ಪಷ್ಟವಾಗಿ ಕಂಡುಬಂದಂತೆ, ಆಗ ವಿಜ್ಞಾನವು ಅದಕ್ಕೆ ತಕ್ಕಂತೆ ಬಾಗುತ್ತದೆ. ಬಾಗದವರನ್ನು ಯಾವುದೇ ಪ್ರಾಮುಖ್ಯತೆಯಿಲ್ಲದ ಹುದ್ದೆಗಳಿಗೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ಏನೋ ಮೋಸಯಿದೆ ಎಂದು ಹೇಳುವುದು ತೀರಾ ಸಾಧಾರಣ ಮಾತಾಗುತ್ತದೆ. ಅದು ನ್ಯಾಯಾಲಯವನ್ನೇ ತನ್ನದಾಗಿಸಿಕೊಂಡು, ಪುರಾತತ್ವ ಸಂಶೋಧನೆಯ ಹೆಸರಿನಲ್ಲಿ ತೀರ್ಪುಗಳನ್ನು ತಯಾರಿಸಿಕೊಡುವಂತೆ ಆದೇಶ ಪಡೆದಿರುವ ಒಂದು ‘ಸಂಘಿ ಬಾಬುಗಳ ಕಚೇರಿ’ಯಾಗಿದೆ. ಕೊಟ್ಟ ಜವಾಬ್ದಾರಿಯನ್ನು ಅದು ಅಚ್ಚುಕಟ್ಟಾಗಿ ನಿಭಾಯಿಸಿಯೂ ಬಿಟ್ಟಿದೆ. 

ಭೋಜಶಾಲಾ ಸಮೀಕ್ಷೆಯ ವರದಿಯು ಹತ್ತು ಸಂಪುಟಗಳಲ್ಲಿ 2,000 ಪುಟಗಳವರೆಗೆ ಸಾಗುತ್ತದೆ. ನ್ಯಾಯಾಲಯದ ಆದೇಶ ಬರುವವರೆಗೂ ಮಸೀದಿಯ ಕಡೆಯವರಿಗೆ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ವೀಕ್ಷಿಸಲು ಅವಕಾಶ ನಿರಾಕರಿಸಲಾಗಿತ್ತು. 98 ದಿನಗಳ ಸಮೀಕ್ಷೆಯಿಂದ ಒದಗಿಸಲಾದ ಅನೇಕ ವಿಡಿಯೋ ತುಣುಕುಗಳು 45 ಸೆಕೆಂಡುಗಳಿಗಿಂತ ಹೆಚ್ಚಿರಲಿಲ್ಲ. ಸಂಪೂರ್ಣ ಛಾಯಾಚಿತ್ರಗಳ ದಾಖಲೆಯನ್ನು ಎಂದಿಗೂ ಸಾರ್ವಜನಿಕಗೊಳಿಸಲಾಗಿಲ್ಲ. ಯಾವುದೇ ಸ್ವತಂತ್ರ ಪುರಾತತ್ವ ಶಾಸ್ತ್ರಜ್ಞರು ಅದರ ಕಾರ್ಯವಿಧಾನವನ್ನು ಪರೀಕ್ಷಿಸಿಲ್ಲ. ಯಾವುದೇ ಬಾಹ್ಯ ತಜ್ಞರ-ಪರಿಶೀಲನಾ ನಿಯತಕಾಲಿಕೆಯು ಅದರ ಸಂಶೋಧನೆಗಳನ್ನು ಮೌಲ್ಯಮಾಪನ ಮಾಡಿಲ್ಲ.

ನ್ಯಾಯಾಲಯಕ್ಕೆ ಲಭಿಸಿದ್ದು ವಿಜ್ಞಾನವಲ್ಲ. ಅದೊಂದು ದಸ್ತಾವೇಜು (ಡೋಸಿಯರ್); ರಾಜಕೀಯವಾಗಿ ನಿರ್ದೇಶಿತ ಸಂಸ್ಥೆಯಿಂದ ತಯಾರಿಸಲ್ಪಟ್ಟ, ಆಯ್ದ ದಾಖಲೆಗಳನ್ನು ಒಳಗೊಂಡ, ಮೊಹರು ಮಾಡಿದ ಕವರ್‌ಗಳಲ್ಲಿ ನ್ಯಾಯಾಧೀಶರಿಗೆ ಹಸ್ತಾಂತರಿಸಲಾದ ಮತ್ತು ಕಾನೂನು ನಿದರ್ಶನವಾಗಿ ನಿಲ್ಲುವ ತೀರ್ಪಿನ ಆಧಾರವಾಗಿ ಅಂಗೀಕರಿಸಲ್ಪಟ್ಟ ದಾಖಲೆ. ಪ್ರಜಾಪ್ರಭುತ್ವದಲ್ಲಿ, ಸಮುದಾಯವೊಂದು 700 ವರ್ಷಗಳ ಹಳೆಯ ಆರಾಧನಾ ಸ್ಥಳವನ್ನು ಕಳೆದುಕೊಳ್ಳುವ ಪ್ರಕ್ರಿಯೆಯು ಪ್ರತಿಯೊಂದು ಹಂತದಲ್ಲೂ ಪಾರದರ್ಶಕ, ಕಟ್ಟುನಿಟ್ಟಾದ ಮತ್ತು ಸ್ವತಂತ್ರವಾಗಿ ಪರಿಶೀಲಿಸಬಹುದಾದದ್ದಾಗಿರಬೇಕು. ಆದರೆ ಇದರಲ್ಲಿ ಅಂತಹದ್ದೇನೂ ಇರಲಿಲ್ಲ.

ಪಾರಿಭಾಷಿಕ ಬಲೆ

ಮಸೀದಿಯ ಕಡೆಯವರು ಒಂದು ಆಕ್ಷೇಪಣೆಯನ್ನು ಎತ್ತಿದ್ದರು, ಅದು ಎಷ್ಟು ಸರಳವಾಗಿ ಕೇಳಿಸುತ್ತದೆಯೆಂದರೆ ಅದಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲವೇನೋ ಅನಿಸುತ್ತದೆ. ಮಧ್ಯಪ್ರದೇಶ ಹೈಕೋರ್ಟ್‌ನ ಮುಂದೆ ಸಲ್ಲಿಸಿದ ತಮ್ಮ ಔಪಚಾರಿಕ ಆಕ್ಷೇಪಣೆಗಳಲ್ಲಿ, ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿಯು ಎಎಸ್‌ಐ ತನ್ನ ಸಮೀಕ್ಷಾ ವರದಿಯಲ್ಲಿ “ಭೋಜಶಾಲಾ ದೇವಸ್ಥಾನ” ಎಂಬ ಪದವನ್ನು ಪದೇ ಪದೇ ಬಳಸಿದೆ ಎಂದು ಆರೋಪಿಸಿತು. ಯಾವುದೇ ಉದ್ಧರಣ ಚಿಹ್ನೆಗಳಿಲ್ಲದೆ (quotation marks), ಅಥವಾ “ಹಿಂದೂಗಳು ಭೋಜಶಾಲಾ ದೇವಸ್ಥಾನ ಎಂದು ಪ್ರತಿಪಾದಿಸುವ ಸ್ಥಳ” ಎಂದು ಬರೆಯದೆ, ಅದನ್ನು ಸ್ಥಾಪಿತ ಸತ್ಯ ಎಂಬಂತೆ ಬಳಸಲಾಗಿದೆ.

ಎಎಸ್‌ಐ ಈ ನಿರ್ದಿಷ್ಟ ಆರೋಪವನ್ನು ನಿರಾಕರಿಸಲಿಲ್ಲ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಇದನ್ನು ಪ್ರಸ್ತಾಪಿಸಲಿಲ್ಲ. ಆದರೆ 2,000 ಪುಟಗಳಲ್ಲಿ ಆ ಪದಬಳಕೆಯು ಏನು ಮಾಡುತ್ತದೆ ಎಂಬುದನ್ನು ಯೋಚಿಸಿ ನೋಡಿರಿ. ಕಲಾಕೃತಿಗಳು “ಭೋಜಶಾಲಾ ದೇವಸ್ಥಾನ”ದಲ್ಲಿ ಪತ್ತೆಯಾಗಿವೆ. ಶಾಸನಗಳು “ಭೋಜಶಾಲಾ ದೇವಸ್ಥಾನ”ದಲ್ಲಿವೆ. ಕೆತ್ತನೆಗಳು, ನಾಣ್ಯಗಳು, ವಾಸ್ತುಶಿಲ್ಪದ ತುಣುಕುಗಳನ್ನು “ಭೋಜಶಾಲಾ ದೇವಸ್ಥಾನ”ದ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.

ಆ ಸ್ಥಳವು ಹಿಂದೂ ದೇವಾಲಯವಾಗಿದೆ ಎಂಬ ವರದಿಯ ತೀರ್ಮಾನವನ್ನು ಎಲ್ಲಿಯೂ ತರ್ಕಬದ್ಧವಾಗಿ ವಾದಿಸಿಲ್ಲ. ಬದಲಿಗೆ ಅದನ್ನು ಪ್ರತಿ ನಮೂದಿನಲ್ಲೂ ಮೊದಲೇ ಊಹಿಸಿಕೊಳ್ಳಲಾಗಿದೆ ಮತ್ತು ಆ ಊಹೆಯು ಪದೇ ಪದೇ ಪುನರಾವರ್ತನೆಯಾಗಿ ಕೊನೆಗೆ ಸತ್ಯವಾಗಿ ಮಾರ್ಪಟ್ಟಿದೆ. ಇದು ಪೂರ್ವನಿರ್ಧರಿತ ತೀರ್ಮಾನಕ್ಕಾಗಿ ಬಳಸಲಾದ ಭಾಷೆ. ಪುರಾವೆಗಳನ್ನು ವಿವರಿಸುವ ದಾಖಲೆಯೇ ಈಗಾಗಲೇ ತೀರ್ಪನ್ನು ನಿರ್ಧರಿಸಿರುವಾಗ, ಒಳಗಿರುವ ಪುರಾವೆಗಳು ಕೇವಲ ಅಲಂಕಾರಿಕ ವಸ್ತುವಾಗುತ್ತವೆ. ಆ ವರದಿಯು ಭೋಜಶಾಲಾ ಒಂದು ದೇವಾಲಯ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಬದಲಿಗೆ ಅದು 2,000 ಪುಟಗಳ ಪೂರ್ತಿ ಅದನ್ನು ದೇವಾಲಯ ಎಂದೇ ಪದೇ ಪದೇ ಕರೆಯುತ್ತದೆ ಮತ್ತು ಆ ಪುನರಾವರ್ತನೆಯನ್ನು ನ್ಯಾಯಾಲಯಕ್ಕೆ ದಾಖಲೆಯಾಗಿ ಪ್ರಸ್ತುತಪಡಿಸುತ್ತದೆ.

ಈ ಲೇಖನದ ಮೊದಲ ಭಾಗದಲ್ಲಿ ಸ್ಥಾಪಿಸಿದಂತೆ, ಭೋಜಶಾಲಾ ಎಂಬ ಹೆಸರು 1903 ಕ್ಕಿಂತ ಮುಂಚೆ ಇರಲಿಲ್ಲ. ಲೇಲೆ ಅವರ ಲೇಖನಕ್ಕಿಂತ ಮುಂಚೆ, ಮಾಲ್ಕಮ್ ಅದನ್ನು ಹಾಳಾದ ಮಸೀದಿ ಎಂದು ಕರೆದಿದ್ದರು. 1902 ರ ಎಎಸ್‌ಐನ ಸ್ವಂತ ದಾಖಲೆಗಳು ಕಮಲ್ ಮೌಲಾ ಮಸೀದಿಯನ್ನು ಉಲ್ಲೇಖಿಸಿದ್ದವು. ವಸಾಹತುಶಾಹಿ ಕಾಲದಲ್ಲಿ ಈ ಪದಾವಳಿಯನ್ನು ಸೃಷ್ಟಿಸಿದ ಸಂಸ್ಥೆಯು 2024 ರಲ್ಲಿ ಅದನ್ನು ಕಾನೂನುಬದ್ಧವಾಗಿ ಶಾಶ್ವತಗೊಳಿಸಿತು. ಒಂದು ಹೆಸರು. ನೂರಾ ಇಪ್ಪತ್ತಮೂರು ವರ್ಷಗಳ ಪುನರಾವರ್ತನೆ. ಎರಡು ಸಾವಿರ ಪುಟಗಳ ಅಧಿಕೃತ ಬಳಕೆ. ಇದು ಪುರಾತತ್ವ ಶಾಸ್ತ್ರವಲ್ಲ. ಇದು 1/12 ರಷ್ಟು ಸತ್ಯವು ತೀರ್ಪಾಗಿ ಬದಲಾಗುವ ವಿಧಾನವಾಗಿದೆ.

ಕಾನೂನು ವಾಸ್ತುಶಿಲ್ಪ

ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991 ಎಂಬುದು ಸಂಸತ್ತು ಒಂದು ಬಾಗಿಲನ್ನು ಶಾಶ್ವತವಾಗಿ ಮುಚ್ಚಿ ಬೀಗ ಹಾಕಲು ಮಾಡಿದ ಪ್ರಯತ್ನವಾಗಿತ್ತು. ಅದರ ಭರವಸೆ ಸರಳವಾಗಿತ್ತು. ಆಗಸ್ಟ್ 15, 1947 ರಂದು ಇದ್ದಂತೆ ಪ್ರತಿಯೊಂದು ಆರಾಧನಾ ಸ್ಥಳದ ಧಾರ್ಮಿಕ ಸ್ವರೂಪವು ಹಾಗೆಯೇ ಮುಂದುವರಿಯುತ್ತದೆ. ಆ ಸ್ವರೂಪವನ್ನು ಬದಲಾಯಿಸಲು ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಕಾನೂನು ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ. ಅಂತಹ ಬದಲಾವಣೆಯನ್ನು ಬಯಸುವ ಎಲ್ಲಾ ಬಾಕಿ ಇರುವ ಪ್ರಕರಣಗಳು ರದ್ದಾಗುತ್ತವೆ. ಬಾಗಿಲು ಮುಚ್ಚಲ್ಪಟ್ಟಿದೆ, ಅದು ಮತ್ತೆ ತೆರೆಯುವುದಿಲ್ಲ.

ಅಯೋಧ್ಯೆಯ ನೆರಳಿನಲ್ಲಿ ಈ ಕಾಯ್ದೆಯನ್ನು ಅಂಗೀಕರಿಸಲಾಯಿತು, ಅಲ್ಲಿ ಸಂಭವಿಸುತ್ತಿರುವುದು ಬೇರೆಲ್ಲೂ ಸಂಭವಿಸಬಾರದು ಎಂಬ ಮುನ್ನೆಚ್ಚರಿಕೆಯ ಶಾಸನಾತ್ಮಕ ಘೋಷಣೆ ಅದಾಗಿತ್ತು. ಬಾಬರಿ ಮಸೀದಿ ಧ್ವಂಸವಾಗುವುದನ್ನು ನೋಡಿ ಸಂಸತ್ತು ಹೇಳಿದ್ದು: “ಇದು ಇಲ್ಲಿಗೆ ಕೊನೆಗೊಳ್ಳಬೇಕು.” ಆದರೆ ಅತ್ಯಂತ ಆಳವಾದ ವ್ಯಂಗ್ಯವೆಂದರೆ, ಈ ಕಾಯ್ದೆಯು ಬಾಬರಿ ಮಸೀದಿ ವಿವಾದಕ್ಕೆ ಸ್ಪಷ್ಟವಾಗಿ ವಿನಾಯಿತಿ ನೀಡಿತು. ಯಾವ ಒಂದು ಪ್ರಕರಣವನ್ನು ತಡೆಯಲು ಇದನ್ನು ರೂಪಿಸಲಾಯಿತೋ, ಅದೇ ಪ್ರಕರಣವು ನಂತರದ ಪ್ರತಿಯೊಂದು ಪ್ರಕರಣಕ್ಕೂ ಮಾದರಿಯಾಯಿತು. ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳು ತಮ್ಮ ಸ್ಥಳಕ್ಕೂ ಸಹ ಹೇಗೆ ವಿಶೇಷ ವಿನಾಯಿತಿ, ವಿಶಿಷ್ಟ ಐತಿಹಾಸಿಕ ಸಂದರ್ಭವನ್ನು ಪ್ರತಿಪಾದಿಸಬೇಕು ಮತ್ತು ಮುಚ್ಚಿದ ಬಾಗಿಲನ್ನು ಮತ್ತೊಮ್ಮೆ ಹೇಗೆ ತೆರೆಯಬೇಕು ಎಂಬುದನ್ನು ನಿಖರವಾಗಿ ಕಲಿತವು.

ಆದರೆ, ಈ ಕಾಯ್ದೆಯು ಅಯೋಧ್ಯೆ ವಿನಾಯಿತಿಗಿಂತ ಹೆಚ್ಚು ಅಪಾಯಕಾರಿ ಅಂಶವನ್ನು ತನ್ನೊಳಗೆ ಹೊಂದಿದೆ. ಕಾಯ್ದೆಯ ಸೆಕ್ಷನ್ 4(3) ರ ಪ್ರಕಾರ, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆ, 1958 ರ ಅಡಿಯಲ್ಲಿ ಬರುವ “ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳಿಗೆ” ಈ ನಿರ್ಬಂಧ ಅನ್ವಯಿಸುವುದಿಲ್ಲ. ಇದು ಶಾಸನದಲ್ಲೇ ಅಡಕವಾಗಿದ್ದ “ಮೊದಲೇ ಸಿದ್ಧ ಮಾಡಿರುವ ಕಳ್ಳದಾರಿ”(pre-authorised side corridor) ಆಗಿತ್ತು. ಯಾರಾದರೂ ಅದನ್ನು ಪತ್ತೆಹಚ್ಚುವುದಕ್ಕಾಗಿ ಅದು ಕಾಯುತ್ತಿತ್ತು. ಅದಕ್ಕೆ 30 ವರ್ಷಗಳು ಬೇಕಾದವು. ಕೊನೆಗೂ ಅದನ್ನು ಪತ್ತೆಹಚ್ಚಲಾಯಿತು.

ಕಮಲ್ ಮೌಲಾ ಮಸೀದಿ ಎಎಸ್‌ಐ ಸಂರಕ್ಷಿತ ಸ್ಮಾರಕವಾಗಿದೆ. ಜ್ಞಾನವಾಪಿ ಎಎಸ್‌ಐ ಸಂರಕ್ಷಿತ ಸ್ಮಾರಕವಾಗಿದೆ. ಬಿಜಾಮಂಡಲ ಎಎಸ್‌ಐ ಸಂರಕ್ಷಿತ ಸ್ಮಾರಕವಾಗಿದೆ. ಈ ಸ್ಮಾರಕಗಳ ವಿನಾಯಿತಿಯು ಕಾಯ್ದೆಯ ಸಂಪೂರ್ಣ ಉದ್ದೇಶವನ್ನು ಒಂದೇ ಒಂದು ನಿಬಂಧನೆಯಲ್ಲಿ ನುಂಗಿಹಾಕಿತು. ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಪ್ರತಿಯೊಂದು ಪ್ರಮುಖ ಮಸೀದಿಯನ್ನು (ನಿಖರವಾಗಿ ಗುರಿಯಾಗಿಸಬಹುದಾದ ಮಸೀದಿಗಳನ್ನು) ಈಗಾಗಲೇ ಪ್ರಾಚೀನ ಸ್ಮಾರಕ ಎಂದು ವರ್ಗೀಕರಿಸಲಾಗಿತ್ತು. ಆ ರಕ್ಷಣಾತ್ಮಕ ಗೋಡೆಯಲ್ಲಿದ್ದ ರಂಧ್ರವು ಎಷ್ಟೊಂದು ದೊಡ್ಡದಾಗಿತ್ತೆಂದರೆ, ಅದರ ಮೂಲಕ ತೆರವು ಆದೇಶವನ್ನೇ ನುಗ್ಗಿಸಬಹುದಿತ್ತು.

ಡಿಸೆಂಬರ್ 2024 ರ ಹೊತ್ತಿಗೆ ಸುಪ್ರೀಂ ಕೋರ್ಟ್‌ಗೆ ಏನು ನಡೆಯುತ್ತಿದೆ ಎಂಬುದು ಅರ್ಥವಾಗತೊಡಗಿತು. ಸಂಭಲ್‌ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದಾಗ ಅಲ್ಲಿ ಹಿಂಸಾಚಾರ ಭುಗಿಲೆದ್ದು ಐದು ಜನ ಮುಸ್ಲಿಮರು ಸಾವನ್ನಪ್ಪಿದ್ದರು. ಆ ಸಾಂಕ್ರಾಮಿಕವು ಬೀದಿಗಳಿಗೆ ಹರಡುತ್ತಿದ್ದಂತೆ ನ್ಯಾಯಾಲಯ ಮಧ್ಯಪ್ರವೇಶಿಸಿತು. ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ದೇಶಾದ್ಯಂತ ತಡೆಯಾಜ್ಞೆ ನೀಡಿ; ಯಾವುದೇ ಹೊಸ ಮೊಕದ್ದಮೆಗಳನ್ನು ದಾಖಲಿಸುವಂತಿಲ್ಲ, ಯಾವುದೇ ಸಮೀಕ್ಷೆಗಳಿಗೆ ಆದೇಶಿಸುವಂತಿಲ್ಲ, ಬಾಕಿ ಇರುವ ಪ್ರಕರಣಗಳಲ್ಲಿ ಯಾವುದೇ ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡುವಂತಿಲ್ಲ ಎಂದು ತಿಳಿಸಿತು. 

ಆ ಆದೇಶವು ಅತ್ಯಂತ ಜಾಗರೂಕ ಮತ್ತು ಉದ್ದೇಶಪೂರ್ವಕವಾಗಿತ್ತು. ಆರಾಧನಾ ಸ್ಥಳಗಳ ಕಾಯ್ದೆಗೆ ಇರುವ ಸಾಂವಿಧಾನಿಕ ಸವಾಲುಗಳು ಇನ್ನೂ ಬಾಕಿ ಇವೆ ಎಂಬುದನ್ನು ಅದು ಒಪ್ಪಿಕೊಂಡಿತ್ತು. ಕಾಯ್ದೆಯ ಸಿಂಧುತ್ವವೇ ಪ್ರಶ್ನೆಯಲ್ಲಿರುವಾಗ ನ್ಯಾಯಾಲಯಗಳು ಆದೇಶಗಳನ್ನು ಹೊರಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅದು ಅಭಿಪ್ರಾಯಪಟ್ಟಿತ್ತು. ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಬಳಸಲಾಗುತ್ತಿರುವ ರಾಜಕೀಯ ತಂತ್ರ ಮತ್ತು ನ್ಯಾಯಾಲಯಗಳ ಬಳಕೆಯನ್ನು ಸುಪ್ರೀಂ ಕೋರ್ಟ್ ಇಲ್ಲಿ ಸ್ಪಷ್ಟವಾಗಿ ಗುರುತಿಸಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವು ಅದನ್ನು ಗುಟ್ಟಾಗಿ ರದ್ದುಗೊಳಿಸುವ ವರೆಗೆ ಆ ತಡೆಯಾಜ್ಞೆಯು 14 ತಿಂಗಳುಗಳ ಕಾಲ ಜಾರಿಯಲ್ಲಿತ್ತು.

‘ಫ್ರಂಟ್‌ಲೈನ್’ ನಿಯತಕಾಲಿಕೆಯಲ್ಲಿ ಬರೆಯುತ್ತಾ, ತನಿಖಾ ಪತ್ರಕರ್ತ ಸೌರವ್ ದಾಸ್ ಈ ಪ್ರಕ್ರಿಯೆ ಹೇಗೆ ಮಾಡಲಾಯಿತು ಎಂಬುದನ್ನು ನಿಖರವಾಗಿ ಚಿತ್ರಿಸಿದ್ದಾರೆ. ಭೋಜಶಾಲಾ ಪ್ರಕರಣವು ಸಿವಿಲ್ ಮೊಕದ್ದಮೆಯಾಗಿರಲಿಲ್ಲ (civil suit). ಬದಲಾಗಿ, ಅದೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಆಗಿತ್ತು. ಡಿಸೆಂಬರ್ 2024 ರ ಆದೇಶವು ಸ್ಪಷ್ಟವಾಗಿ ಮೊಕದ್ದಮೆಗಳಿಗೆ (suits) ತಡೆಯಾಜ್ಞೆ ನೀಡಿದೆ. ತಾಂತ್ರಿಕವಾಗಿ, ಪಿಐಎಲ್ ಎಂಬುದು ಮೊಕದ್ದಮೆಯಲ್ಲ. ಜನವರಿ 22, 2026 ರಂದು, ನ್ಯಾಯಮೂರ್ತಿ ಕಾಂತ್ ಅವರ ಪೀಠವು ಕಾಯ್ದೆಯ ಸಾಂವಿಧಾನಿಕ ಪರಿಣಾಮಗಳನ್ನು ಪರಿಗಣಿಸದೆ ಈ ವ್ಯತ್ಯಾಸವನ್ನು ಬಳಸಿಕೊಂಡು, ಎಎಸ್‌ಐ ವರದಿಯ ಲಕೋಟೆ ತೆರೆಯಲು, ಎರಡೂ ಕಡೆಯವರಿಗೆ ಪ್ರತಿಗಳನ್ನು ನೀಡಲು ಮತ್ತು ಅಂತಿಮ ವಿಚಾರಣೆಗೆ ಮುಂದುವರಿಯಲು ಮಧ್ಯಪ್ರದೇಶ ಹೈಕೋರ್ಟ್‌ಗೆ ಆದೇಶಿಸಿತು.

ಹಳೇಯ ತಡೆಯಾಜ್ಞೆಯನ್ನು ಕೋರ್ಟ್‌ ಎಂದೂ ವಜಾಗೊಳಿಸಲಿಲ್ಲ, ಬದಲಾಯಿಸಲಿಲ್ಲ ಅಥವಾ ಅಧಿಕೃತವಾಗಿ ಹಿಂಪಡೆಯಲೂ ಇಲ್ಲ. ಸುಪ್ರೀಂ ಕೋರ್ಟ್ ಆದೇಶಗಳಿಗಿರುವ ಇಂತಹ ಸ್ಥಿತಿಯನ್ನು ದಾಸ್ ಅವರು ‘ಅರ್ಧ ಆಯುಷ್ಯದ ಸಮಸ್ಯೆ’ ಎಂದು ಕರೆದಿದ್ದಾರೆ; ಅಂದರೆ ಈ ಆದೇಶಗಳು ಯಾವಾಗಲೂ ನಾಟಕೀಯವಾಗಿ ಅಂತ್ಯವಾಗುವುದಿಲ್ಲ. ಬದಲಿಗೆ, ಕೆಲವೊಮ್ಮೆ ಅವು ಅವರು ಹೇಳುವ “ನಿಯಮಗಳ ಪ್ರಕಾರವೇ ಆಡುವ ನಾಟಕದ’ ಮೂಲಕ ಕೊನೆಗೊಳ್ಳುತ್ತವೆ: ಹಠಾತ್ತಾಗಿ ಪ್ರಕರಣವನ್ನು ವಿಚಾರಣೆಗೆ ತರುವುದು, ಸೀಮಿತವಾಗಿ ವಿಲೇವಾರಿ ಮಾಡುವುದು ಮತ್ತು ವರದಿಯನ್ನು ಬಹಿರಂಗಪಡಿಸಿ ಅಂತಿಮ ವಿಚಾರಣೆಗೆ ಹೋಗುವಂತೆ ನಿರ್ದೇಶಿಸುವುದು’. ಇವು ‘ಮೇಲ್ನೋಟಕ್ಕೆ ನಿಯಮ ಪಾಲನೆಯ ಗೌರವವನ್ನು ಉಳಿಸಿಕೊಂಡೇ, ಅದರ ಒಳಗಿನ ನಿಜವಾದ ಉದ್ದೇಶವನ್ನು ಖಾಲಿ ಮಾಡುವ ಕೃತ್ಯಗಳಾಗಿವೆ”. 

ದಾಸ್ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ: ನ್ಯಾಯಮೂರ್ತಿ ಕಾಂತ್ ಅವರ ಪೀಠವು “ದೇಶಾದ್ಯಂತ ರಾಜಕೀಯ ಪ್ರೇರಿತ ದಾವೆದಾರರಿಗೆ ಒಂದು ಕಾಪಿ-ಪೇಸ್ಟ್ ಮಾದರಿಯನ್ನು ಒದಗಿಸಿತು, ಇದು ಜಾತ್ಯತೀತ ರಚನೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತಂದಿದೆ […] ಜನವರಿ 22 ರ ಆದೇಶದ ಸಂದೇಶವೇನೆಂದರೆ, ತಡೆಯಾಜ್ಞೆಯು ‘ಮೊಕದ್ದಮೆಗಳನ್ನು’ ಸ್ಥಗಿತಗೊಳಿಸಬಹುದು, ಆದರೆ ಅದು ವಿಶಾಲವಾದ ಹಿಂದುತ್ವ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ. ಆ ಪ್ರಕ್ರಿಯೆಯು ‘ಮೊಕದ್ದಮೆ’ ಎಂಬ ಬಾಗಿಲಿನ ಬದಲಾಗಿ ‘ಪಿಐಎಲ್’ ಎಂಬ ಬಾಗಿಲಿನ ಮೂಲಕ ಮುಂದುವರಿಯಬಹುದು.”

ಮುಖ್ಯ ನ್ಯಾಯಮೂರ್ತಿ ಖನ್ನಾ ನಿವೃತ್ತರಾಗುತ್ತಿದ್ದಂತೆಯೇ ಅವರು ತಂದಿದ್ದ ತಡೆಯಾಜ್ಞೆ ಸಡಿಲಗೊಳ್ಳಲು ಶುರುವಾಯಿತು. ಅದು ದೋಷಪೂರಿತವಾಗಿತ್ತು ಎಂದಾಗಲಿ ಅಥವಾ ಅದರ ಬಗ್ಗೆ ಮರುಚಿಂತನೆ ನಡೆಸಲಾಯಿತು ಎಂದಾಗಲಿ ಇದರ ಅರ್ಥವಲ್ಲ. ಕೇವಲ ಆ ಆದೇಶ ನೀಡಿದ್ದ ನ್ಯಾಯಾಧೀಶರು ಈಗ ಅಧಿಕಾರದಲ್ಲಿಲ್ಲ ಎಂಬ ಕಾರಣಕ್ಕಷ್ಟೇ ಹೀಗಾಯಿತು. ಇಡೀ ಸಂಸ್ಥೆಯ ನಿರ್ಧಾರಕ್ಕಿಂತ ಆಯಾ ದಿನ ಪೀಠದಲ್ಲಿ ಯಾರು ಕುಳಿತಿದ್ದಾರೆ ಎಂಬುದರ ಮೇಲೆಯೇ ಆದೇಶಗಳು ಹೊರಬೀಳುವಂತಹ ನ್ಯಾಯಾಲಯದಲ್ಲಿ, ಕಾನೂನು ಯಾವುದೇ ವಿವಾದವನ್ನು ಶಾಶ್ವತವಾಗಿ ಬಗೆಹರಿಸುವುದಿಲ್ಲ. ಬದಲಿಗೆ, ನ್ಯಾಯಾಧೀಶರು ಬದಲಾಗುವ ತನಕ ಆ ವಿವಾದಗಳನ್ನು ಮುಂದೆ ದೂಡುತ್ತಿರುತ್ತದೆ. 

ಈ ಮಾದರಿ  ಅಥವಾ ‘ಕ್ರೋನಾಲಜಿ ಸಮಜಿಯೇ

ಧಾರ್ ಪ್ರದೇಶವು ತನ್ನ ತೀರ್ಪನ್ನು ಅರಗಿಸಿಕೊಳ್ಳುತ್ತಿರುವಾಗಲೇ, ವಿದಿಶಾದಲ್ಲಿ ಅರ್ಜಿಯೊಂದು ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠದ ಮುಂದೆ ಸಾಗುತ್ತಿದೆ. ಆ ಸ್ಥಳವನ್ನು ಮುಸ್ಲಿಮರು ಬಿಜಾಮಂಡಲ ಮಸೀದಿ ಎಂದು ಕರೆಯುತ್ತಾರೆ. ಹಿಂದೂ ಸಂಘಟನೆಗಳು ಅದನ್ನು ವಿಜಯ ಮಂದಿರ ಎಂದು ಕರೆಯುತ್ತವೆ ಮತ್ತು ಇದನ್ನು ಔರಂಗಜೇಬನು ಧ್ವಂಸಗೊಳಿಸಿದ ಚರ್ಚಿಕಾ ದೇವಿಯ ದೇವಸ್ಥಾನ ಎಂದು ಪ್ರತಿಪಾದಿಸುತ್ತವೆ. ಎಎಸ್‌ಐ ಇದನ್ನು 1951 ರಲ್ಲಿ ಸಂರಕ್ಷಿತ ಮಸೀದಿ ಎಂದು ಘೋಷಿಸಿತ್ತು.

ಆ ಅರ್ಜಿಯು ಮಾಲೀಕತ್ವದ ಹಕ್ಕನ್ನು ಕೋರುತ್ತಿಲ್ಲ. ಅದು ರಾಜ್ಯದ ದಾಖಲೆಗಳ ತಿದ್ದುಪಡಿಯನ್ನು ಕೋರುತ್ತಿದೆ, ಎಎಸ್‌ಐನ 1951 ರ ಸ್ವಂತ ವರ್ಗೀಕರಣವನ್ನು “ಬಿಜಾಮಂಡಲ ಮಸೀದಿ” ಇಂದ “ಶ್ರೀ ಬಿಜಾಮಂಡಲ ದೇವಸ್ಥಾನ” ಎಂದು ಬದಲಾಯಿಸಲು ನ್ಯಾಯಾಲಯವು ನಿರ್ದೇಶಿಸಬೇಕು ಎಂದು ಕೇಳುತ್ತಿದೆ. ಅರ್ಜಿದಾರರು ಆರಾಧನಾ ಸ್ಥಳಗಳ ಕಾಯ್ದೆಯ ಸೆಕ್ಷನ್ 4(3) ರ ಸ್ಮಾರಕಗಳ ವಿನಾಯಿತಿಯನ್ನು ಉಲ್ಲೇಖಿಸಿ ಕಾಯ್ದೆಯ ನಿರ್ಬಂಧವು ಇದಕ್ಕೆ ಅನ್ವಯಿಸುವುದಿಲ್ಲ ಎಂದು ವಾದಿಸುತ್ತಿದ್ದಾರೆ. ಹೈಕೋರ್ಟ್ ಈ ಅರ್ಜಿಯನ್ನು ಸೆಪ್ಟೆಂಬರ್ 2025 ರಲ್ಲಿ ಸ್ವೀಕರಿಸಿದೆ.

ಭೋಜಶಾಲಾ ಮಾದರಿಯು ತೀರ್ಪು ಬರುವ ಮೊದಲೇ ಬಳಕೆಯಲ್ಲಿತ್ತು. ಈ ಮಾದರಿಯು ಸಂಕೀರ್ಣವಾಗಿಲ್ಲ. ಇದು ನಾಲ್ಕು ಹಂತಗಳನ್ನು ಹೊಂದಿದೆ.

ಮೊದಲನೆಯದಾಗಿ, ನಿಮ್ಮ ಪ್ರತಿಪಾದನೆಯನ್ನು ಬದಲಾಯಿಸಿ. ಮಾಲೀಕತ್ವದ ಮೊಕದ್ದಮೆಯನ್ನು ದಾಖಲಿಸಬೇಡಿ, ಏಕೆಂದರೆ ಡಿಸೆಂಬರ್ 2024 ರ ತಡೆಯಾಜ್ಞೆಯು ಅವುಗಳನ್ನು ಒಳಗೊಳ್ಳುತ್ತದೆ. ಅದರ ಬದಲಾಗಿ ಪಿಐಎಲ್ ದಾಖಲಿಸಿ ಅಥವಾ ದಾಖಲೆಗಳ ತಿದ್ದುಪಡಿ ಅರ್ಜಿಯನ್ನು ಸಲ್ಲಿಸಿ. ತಾಂತ್ರಿಕವಾಗಿ ಮೊಕದ್ದಮೆಯಲ್ಲದ ಯಾವುದನ್ನಾದರೂ ಸಲ್ಲಿಸಿ. ನ್ಯಾಯಾಲಯದ ತಡೆಯಾಜ್ಞೆಯನ್ನು ಒಂದು ಕೈಯಿಂದ ಸಿದ್ಧಪಡಿಸಲಾಗಿದ್ದರೆ, ದಾವೆದಾರರು ಇನ್ನೊಂದು ಕೈ ಬಿಟ್ಟಿರುವ ಜಾಗವನ್ನು ಹುಡುಕಿಕೊಳ್ಳುತ್ತಾರೆ.

ಎರಡನೆಯದಾಗಿ, ಸ್ಮಾರಕಗಳ ವಿನಾಯಿತಿಯನ್ನು ಬಳಸಿ. ಆ ಸ್ಥಳವು ಎಎಸ್‌ಐ ಸಂರಕ್ಷಿತವಾಗಿದ್ದರೆ (ಮತ್ತು ಐತಿಹಾಸಿಕವಾಗಿ ಮಹತ್ವದ ಮಸೀದಿಗಳು ಯಾವಾಗಲೂ ಹಾಗೆಯೇ ಇರುತ್ತವೆ), ಸೆಕ್ಷನ್ 4(3) ಆರಾಧನಾ ಸ್ಥಳಗಳ ಕಾಯ್ದೆ ಅನ್ವಯಿಸುವುದಿಲ್ಲ ಎಂದು ವಾದಿಸಲು ಸಿದ್ಧ ಸೂತ್ರವನ್ನು ಒದಗಿಸುತ್ತದೆ. ಮಸೀದಿ ಎಷ್ಟು ಪ್ರಮುಖವಾಗಿದೆಯೋ, ಅಷ್ಟು ಅದು ಹೆಚ್ಚು ದುರ್ಬಲವಾಗಿರುತ್ತದೆ.

ಮೂರನೆಯದಾಗಿ, ಎಎಸ್‌ಐ ಸಮೀಕ್ಷೆಯ ಆದೇಶವನ್ನು ಪಡೆದುಕೊಳ್ಳುವುದು. ಆ ಸಮೀಕ್ಷೆಯು ಧ್ವಂಸಗೊಂಡ ದೇವಾಲಯದ ಅಸ್ತಿತ್ವವನ್ನು ಸಾಬೀತುಪಡಿಸುವ ಅಗತ್ಯವಿರುವುದಿಲ್ಲ. ಬದಲಿಗೆ ಪುನರ್ಬಳಕೆಯಾದ ವಾಸ್ತುಶಿಲ್ಪದ ಅವಶೇಷಗಳು, ವಿಕೃತಗೊಂಡ ಕೆತ್ತನೆಗಳು ಇಲ್ಲವೇ ಇಸ್ಲಾಮಿಕ್ ಪೂರ್ವ ರಾಜವಂಶಕ್ಕೆ ಸೇರಿದ ಶಾಸನವನ್ನು ಹುಡುಕಿದರೆ ಸಾಕು. ಇವೆಲ್ಲವೂ ಕೇವಲ ಸತ್ಯದ ಬಿಡಿಭಾಗಗಳು; ಪ್ರತಿಯೊಂದೂ ತಾಂತ್ರಿಕವಾಗಿ ಸತ್ಯವಾಗಿದ್ದರೂ, ಒಂದು ಸುದೀರ್ಘ ಕಥನದ ಕೇವಲ 1/12 ರಷ್ಟು ಭಾಗ ಮಾತ್ರ ಆಗಿರುತ್ತವೆ. ಯಾವುದೇ ಬಾಹ್ಯ ತಜ್ಞರ ಮರುಪರಿಶೀಲನೆಯ ಹೊಣೆಗಾರಿಕೆಯಿಲ್ಲದ ಸಂಸ್ಥೆಯೊಂದು ಸಿದ್ಧಪಡಿಸುವ 2,000 ಪುಟಗಳ ಸುದೀರ್ಘ ವರದಿಯಲ್ಲಿ ಇವೇ ತುಣುಕುಗಳು ಒಟ್ಟುಗೂಡಿ, ಒಂದು ಗಂಭೀರ ದಸ್ತಾವೇಜಾಗಿ (ಡೋಸಿಯರ್) ಬದಲಾಗುತ್ತವೆ. 

ನಾಲ್ಕನೆಯದಾಗಿ, ತೀರ್ಪಿಗಾಗಿ ಕಾಯಿರಿ. ವರದಿಯಲ್ಲಿ ಬಳಸಲಾದ ಪದಾವಳಿಯೇ ಈಗಾಗಲೇ ಅದನ್ನು ನಿರ್ಧರಿಸಿರುತ್ತದೆ.

ಇದು ಕಲ್ಪನೆಯಲ್ಲ, ಬದಲಿಗೆ ವಸ್ತುನಿಷ್ಠ ಅವಲೋಕನ. ಭೋಜಶಾಲಾ ಪ್ರಕರಣವು ಆ ಯೋಜನೆಯ ಯಶಸ್ವಿ ಮಾದರಿಯನ್ನು ಸಾಬೀತುಪಡಿಸಿತು. ಬಿಜಾಮಂಡಲ ಅದರ ಪ್ರಥಮ ಅನುಕರಣೆಯಾಗಿದೆ. ಇದರ ಹಿನ್ನೆಲೆಯಲ್ಲಿ, ದೇಶದಾದ್ಯಂತ ಹನ್ನೆರಡಕ್ಕೂ ಅಧಿಕ ಪ್ರಮುಖ ಮಂದಿರ-ಮಸೀದಿ ವಿವಾದಗಳು ನ್ಯಾಯಾಲಯದ ವಿವಿಧ ಹಂತದ ವಿಚಾರಣೆಯಲ್ಲಿವೆ. ಈಗ ಇವೆಲ್ಲದಕ್ಕೂ ಒಂದು ನಿರ್ದಿಷ್ಟ ಮಾರ್ಗಸೂಚಿ ಸಿದ್ಧವಾಗಿದೆ 

ಚುನಾವಣೆಗಿಂತ ಮುಂಚೆ ಕೋಮು ಗಲಭೆ ಅಥವಾ ಉದ್ವಿಗ್ನತೆ ಜಾಸ್ತಿಯಾದ ಕಡೆಗಳಲ್ಲೆಲ್ಲಾ ಬಿಜೆಪಿಗೆ ರಾಜಕೀಯವಾಗಿ ಲಾಭ ಸಿಗುತ್ತದೆ ಎಂದು ಸಂಶೋಧಿಸಿದ ಯೇಲ್ ಯೂನಿವರ್ಸಿಟಿಯ ವರದಿಯೊಂದು 2014 ರಲ್ಲೇ ಹೊರಬಂದಿತ್ತು. ಹಾಗಾಗಿ, 2019 ರ ಅಯೋಧ್ಯೆ ತೀರ್ಪು ಪ್ರಕಟವಾದ ಬಳಿಕ ಶುರುವಾದ ನ್ಯಾಯಾಲಯದ ಮೊಕದ್ದಮೆಗಳ ಮಹಾಪೂರವು ದಿಢೀರನೆ ನೆನಪಾದ ನಿಜವಾದ ಐತಿಹಾಸಿಕ ನೋವಿನಿಂದ ಹುಟ್ಟಿದ್ದಲ್ಲ. ಬದಲಿಗೆ, ಅದು ದಶಕಗಳಿಂದ ಹಂತ ಹಂತವಾಗಿ ಸಿದ್ಧಪಡಿಸಲಾದ ಮತ್ತು ಈಗ ದೊಡ್ಡ ಮಟ್ಟದಲ್ಲಿ ಪ್ರಯೋಗಿಸಲು ಸಿದ್ಧವಾಗಿರುವ ಒಂದು ರಾಜಕೀಯ ತಂತ್ರಗಾರಿಕೆಯಿಂದ ಹುಟ್ಟಿಕೊಂಡಿದ್ದಾಗಿದೆ. 

ಇಲ್ಲಿ ನ್ಯಾಯಾಲಯಗಳು ವಸ್ತುಗಳನ್ನು ತಯಾರಿಸುವ ಕಾರ್ಖಾನೆಯಿದ್ದಂತೆ, ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ತಂದುಕೊಡುವುದು ಎಎಸ್‌ಐ ಕೆಲಸ. ಹೀಗೆ ಹೊರಬರುವ ಪ್ರತಿಯೊಂದು ತೀರ್ಪು ಕೇವಲ ಅಂತಿಮ ಫಲಿತಾಂಶ ಮಾತ್ರವಲ್ಲ, ಅದು ಮುಂದಿನದನ್ನು ಹೇಗೆ ಮಾಡಬೇಕು ಎಂದು ಹೇಳಿಕೊಡುವ ಕೈಪಿಡಿಯೂ ಹೌದು. ಭೋಜಶಾಲಾ ತೀರ್ಪು ಕೇವಲ ಒಂದು ಸಮುದಾಯದ ಕೈಯಿಂದ ಒಂದು ಮಸೀದಿಯನ್ನು ಕಿತ್ತುಕೊಳ್ಳುವ ಕೆಲಸವನ್ನಷ್ಟೇ ಮಾಡಿಲ್ಲ. ಬದಲಿಗೆ, ಭಾರತದಲ್ಲಿ ಕೋಮು ಭಾವನೆಯಿಂದ ಮೊಕದ್ದಮೆ ಹೂಡುವ ಪ್ರತಿಯೊಬ್ಬನಿಗೂ ಮುಂದಿನ ಮಸೀದಿಯನ್ನು ಹೇಗೆ ಕಿತ್ತುಕೊಳ್ಳಬೇಕು ಎಂಬುದಕ್ಕೆ ಸರಿಯಾದ ದಾರಿಯನ್ನು ತೋರಿಸಿಕೊಟ್ಟಿದೆ. 

ತೀರ್ಪಿನ ಮೇಲಿನ ತೀರ್ಪು

ಕಮಲ್ ಮೌಲಾ ಮಸೀದಿಯನ್ನು ಕ್ರಿ.ಶ 1304 ಮತ್ತು 1331 ರ ನಡುವೆ ನಿರ್ಮಿಸಲಾಯಿತು. 2026 ರಲ್ಲಿ, ನ್ಯಾಯಾಲಯವೊಂದು ಕಾನೂನಿನ ಮೂಲಕ ಅದಕ್ಕೆ ಮರುನಾಮಕರಣ ಮಾಡಿತು. ಅದಕ್ಕೆ ಏನೆಲ್ಲಾ ಬೇಕಾಯಿತು ಎಂಬುದರ ಕುರಿತು ನಾವು ನಿಖರವಾಗಿರೋಣ.

ಯಾವುದೇ ಬಾಹ್ಯ ತಜ್ಞರ ಮರುಪರಿಶೀಲನೆಯ ಹೊಣೆಗಾರಿಕೆಯಿಲ್ಲದ ಹಾಗೂ ರಾಜಕೀಯ ಒತ್ತಡಗಳಿಗೆ ಮಣಿದ ಇತಿಹಾಸ ಹೊಂದಿರುವ ಸರ್ಕಾರಿ ಸಂಸ್ಥೆಯೊಂದು ಮುಚ್ಚಿದ ಲಕೋಟೆಯಲ್ಲಿ ವರದಿಯೊಂದನ್ನು ನೀಡಿತು. ಆ ವರದಿಯು ಕೋರ್ಟ್ ಕಡ್ಡಾಯವಾಗಿ ಮಾಡಲೇಬೇಕೆಂದು ಹೇಳಿದ್ದ ವೈಜ್ಞಾನಿಕ ಪರೀಕ್ಷೆಯನ್ನೇ ಮಾಡದೆ ಬಿಟ್ಟಿತು. ತನ್ನ ಅಂತಿಮ ತೀರ್ಮಾನಕ್ಕೆ ಅಡ್ಡಿಯಾಗಬಹುದಾಗಿದ್ದ ಮಹತ್ವದ ವಿಷಯವೊಂದನ್ನು ಅದರಿಂದ ಕೈಬಿಟ್ಟಿತು. ತಾಂತ್ರಿಕವಾಗಿ ನಿಜವಾಗಿದ್ದರೂ, ಇಡೀ ಕಥೆಯ ಕೇವಲ 1/12 ಭಾಗ ಮಾತ್ರವಾಗಿದ್ದ ಸಣ್ಣಪುಟ್ಟ ತುಣುಕುಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿಯನ್ನು ಸಿದ್ಧಪಡಿಸಲಾಯಿತು ಮತ್ತು ಆ ತುಣುಕುಗಳನ್ನೇ ವಿಜ್ಞಾನ ಎಂದು ಬಿಂಬಿಸಲಾಯಿತು. ಇದನ್ನು ನ್ಯಾಯಾಲಯಕ್ಕೆ ರಹಸ್ಯ ಲಕೋಟೆಯಲ್ಲಿ ಸಲ್ಲಿಸಲಾಯಿತು, ಯಾವುದೇ ಸ್ವತಂತ್ರ ತನಿಖೆಯಿಲ್ಲದೆ ಕೋರ್ಟ್ ಅದನ್ನು ಹಾಗೆಯೇ ಸ್ವೀಕರಿಸಿತು ಮತ್ತು ಕೊನೆಗೆ ಇದೇ ವರದಿಯು ಒಂದು ಸಮುದಾಯವು ಬರೋಬ್ಬರಿ 700 ವರ್ಷಗಳಿಂದ ಆರಾಧನೆಗಾಗಿ ಬಳಸುತ್ತಿದ್ದ ಧಾರ್ಮಿಕ ಸ್ಥಳವನ್ನು ಕಸಿದುಕೊಳ್ಳುವ ತೀರ್ಪಿಗೆ ಮುಖ್ಯ ಅಡಿಪಾಯವಾಯಿತು. 

ಇದು ಕೇವಲ ದೋಷಪೂರಿತ ತೀರ್ಪಲ್ಲ. ದೋಷಪೂರಿತ ತೀರ್ಪುಗಳು ಸದ್ಭಾವನೆಯಿಂದ ತಪ್ಪುಗಳನ್ನು ಮಾಡುತ್ತವೆ. ಆದರೆ ಇದು ಪೂರ್ವನಿರ್ಧರಿತವಾಗಿತ್ತು, ಇಲ್ಲಿ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ತೀರ್ಮಾನವು ಸಿದ್ಧವಾಗಿತ್ತು ಮತ್ತು ಕಾನೂನಿನ ಸಿಂಧುತ್ವದೊಂದಿಗೆ ಅದನ್ನು ತಲುಪಿಸಲು ಪ್ರಕ್ರಿಯೆಯನ್ನು ರೂಪಿಸಲಾಗಿತ್ತು.

ಅದೇ ಇದನ್ನು ಬಹಿರಂಗ ಕಿರುಕುಳಕ್ಕಿಂತ ಹೆಚ್ಚು ಅಪಾಯಕಾರಿಯಾಗಿಸುತ್ತದೆ. ಬಹಿರಂಗ ಕಿರುಕುಳವನ್ನು ಪ್ರತಿಭಟಿಸಬಹುದು. ಆದರೆ ಕಾನೂನು ಪ್ರಕ್ರಿಯೆಯ ಮುಖವಾಡ ಧರಿಸಿದ ಪೂರ್ವನಿರ್ಧರಿತ ತೀರ್ಪು ಮೇಲ್ಮನವಿಯ ಅವಕಾಶಗಳನ್ನು ಮುಚ್ಚಿಹಾಕುತ್ತದೆ, ಪ್ರತಿರೋಧವನ್ನು ಕಾನೂನುಬಾಹಿರಗೊಳಿಸುತ್ತದೆ ಮತ್ತು ಮುಂದಿನ ಪ್ರತಿಯೊಂದು ನ್ಯಾಯಾಲಯಕ್ಕೂ ಇದನ್ನು ಹೇಗೆ ಮಾಡಬೇಕು ಎಂಬುದನ್ನು ನಿಖರವಾಗಿ ಕಲಿಸಿಕೊಡುತ್ತದೆ.

ಬಿಜಾಮಂಡಲ ಈಗಾಗಲೇ ಸಿದ್ಧತೆಯಲ್ಲಿದೆ. ಸೂಚನಾ ಕೈಪಿಡಿಯನ್ನು ವಿತರಿಸಲಾಗಿದೆ. ಈಗ ಬೇಕಾಗಿರುವುದು ಆಕ್ರೋಶವಲ್ಲ, ಬದಲಿಗೆ ನಿಖರತೆ. ರಾಜಕೀಯ ಯೋಜನೆಗಳನ್ನು ಕಾನೂನುಬದ್ಧಗೊಳಿಸುವ “ವಿವಾದಿತ ಸ್ಥಳಗಳು” ಮತ್ತು “ವೈಜ್ಞಾನಿಕ ಸಮೀಕ್ಷೆಗಳು” ಎಂಬ ಭಾಷೆಯನ್ನು ನಿರಾಕರಿಸುವುದು. ಪ್ರಸ್ತುತಪಡಿಸಲಾದ 1/12 ರಷ್ಟು ಭಾಗದ ಬದಲಾಗಿ, ಹೂತುಹಾಕಲಾದ 11/12 ರಷ್ಟು ಸಂಪೂರ್ಣ ಸತ್ಯವನ್ನು ಒತ್ತಾಯಿಸುವುದು.

ಧಾರ್‌ನಲ್ಲಿರುವ ಆ ರಚನೆಯು ಕ್ರಿ.ಶ 1304 ರಿಂದ ನಿಂತಿದೆ. ಅದು ಕಮಲ್ ಮೌಲಾ ಮಸೀದಿಯಾಗಿದೆ.

ಕೃಪೆ: thewire.in