ಬಿಹಾರ: ಇನ್ನೂ ಮೂವರು ಮಕ್ಕಳ ಸಾವು; ಡಾ.ಕಫೀಲ್ ಖಾನ್ ಸೇವೆಯಲ್ಲಿ

0
832

ಮುಝಪ್ಫರ್‍ಪುರ, ಜೂ.21: ಮೆದುಳು ಜ್ವರ ಪೀಡಿತ ಬಿಹಾರದ ಮುಝಪ್ಫರ ನಗರ ಆಸ್ಪತ್ರೆಯಲ್ಲಿ ಇನ್ನೂ ಮೂರು ಮಕ್ಕಳು ಮೃತಪಟ್ಟಿವೆ. ಇದರೊಂದಿಗೆ 118 ಮಕ್ಕಳು ಮೃತಪಟ್ಟಂತಾಗಿದ್ದು ಉತ್ತರಪ್ರದೇಶದ ಮಕ್ಕಳ ರೋಗ ತಜ್ಞ ಕಫೀಲ್ ಖಾನ್ ವೈದ್ಯಕೀಯ ಸೇವೆ ಸಲ್ಲಿಸಲು ಮುಝಪ್ಫರ್ ನಗರಕ್ಕೆ ಆಗಮಿಸಿದ್ದಾರೆ. ಗೊರಕ್‍ಪುರ ಆಸ್ಪತ್ರೆಯಲ್ಲಿ ಜಪಾನೀಸ್ ಎನ್‍ಸಫಲೈಟಿಸ್ ರೋಗಕ್ಕೆ ತುತ್ತಾಗಿ ಮಕ್ಕಳ ಸಾವು ಸಂಭವಿಸಿದ್ದಕ್ಕಾಗಿ ಕಫೀಲ್ ಖಾನ್‍ರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಮಾನತು ಗೊಳಿಸಿ ಜೈಲಿಗಟ್ಟಿದ್ದರು. ಎಂಟು ತಿಂಗಳ ನಂತರ ಆಲಾಹಾಬಾದ್ ಹೈಕೋರ್ಟಿನಿಂದ ಜಾಮೀನಿನಲ್ಲಿ ಅವರು ಬಿಡುಗಡೆಗೊಂಡಿದ್ದರು.

ಬಿಹಾರಕ್ಕೆ ಬಂದಿರುವ ಅವರು ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಮುಝಪ್ಫರ್ ಪುರ ಜಿಲ್ಲೆಯ ದಾಮೋದರಪುರ ಜಿಲ್ಲೆಯಲ್ಲಿ ಶಿಬಿರ ಆರಂಭಿಸಿದ್ದು ಮೆದುಳು ಜ್ವರಕ್ಕೆ ಸಂಬಂಧಿಸಿದ ಲಕ್ಷಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ವೀಡಿಯೊಗಳು ಟ್ವಿಟರ್ ನಲ್ಲಿ ಪ್ರಚಾರವಾಗಿವೆ. ನಾವು ಇಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ತೀವ್ರ ರೋಗ ಪೀಡಿತ ಸ್ಥಳಗಳಿಗೆ ಹೋಗಿ ಅಲ್ಲಿನ ರೋಗಲಕ್ಷಣ ಇರುವವರನ್ನು ಗುರುತಿಸಿ ತ್ವರಿತ ತಪಾಸಣೆಗೆ ಸೂಚನೆ ನೀಡುತ್ತಿದ್ದೇವೆ ಎಂದು ಹಫ್‍ಪೋಸ್ಟ್ ಇಂಡಿಯಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಇಲ್ಲಿ ಮಕ್ಕಳಿಗೆ ಜಪಾನಿಸ್ ಎನ್‍ಸೆಪಲೈಟಿಸ್ ವೈರಸ್ ಬಾಧಿಸಿದೆ ಎಂದು ಗುರುತಿಸಲು ಸಾಧ್ಯವಾಗಿದೆ. ಆದರೆ ಮುಝಪ್ಫರ್‍ಪುರದಲ್ಲಿ ಯಾವ ವೈರಸ್ ಎಂದು ಇದುವರೆಗೆ ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಬಡತನ, ಶುದ್ಧನೀರಿನ ಕೊರತೆ, ಪೋಷಕಾಹಾರಗಳ ಕೊರತೆ, ಹೆಚ್ಚು ಜನರು ಒಗ್ಗೂಡಿ ವಾಸಿಸುತ್ತಿರುವುದು ಇತ್ಯಾದಿ ಜೀವನ ಪರಿಸ್ಥಿತಿ ರೋಗ ಹರಡಲು ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.