ಬಿಜೆಪಿ ಅಂದರೆ ‘ಭ್ರಷ್ಟ ಜನತಾ ಪಕ್ಷ’: ಉದ್ಧವ್ ಠಾಕ್ರೆ

0
539

ಸನ್ಮಾರ್ಗ ವಾರ್ತೆ

ಜಾರಿ ನಿರ್ದೇಶನಾಲಯ (ಇಡಿ), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಂತಹ ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಮೂಲಕ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಪಡೆದಿದೆ ಎಂದ ಶಿವಸೇನೆ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ, ಬಿಜೆಪಿ ಅಂದರೆ ‘ಭ್ರಷ್ಟ ಜನತಾ ಪಕ್ಷ’ ಎಂದು ವ್ಯಾಖ್ಯಾನಿಸಿದ್ದಾರೆ.

“ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದೆ; ಅದು ‘ಭ್ರಷ್ಟ ಜನತಾ ಪಕ್ಷ’. ಅವರ ನಿಜವಾದ ಮುಖವನ್ನು ಜನರ ಮುಂದೆ ಬಹಿರಂಗಗೊಂಡಿದೆ” ಎಂದು ಮಾಧ್ಯಮದವರ ಮುಂದೆ ಠಾಕ್ರೆ ಹೇಳಿದರು.

ಬಿಜೆಪಿ ಈ ಹಿಂದೆ ಭ್ರಷ್ಟಾಚಾರದ ಆರೋಪ ಮಾಡಿದ್ದ ಹಲವು ನಾಯಕರು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ಪ್ರಫುಲ್ ಪಟೇಲ್ ವಿರುದ್ಧ ಆರೋಪ ಮಾಡಿದವರು ಯಾರು? ಆದರ್ಶ್ (ಹಗರಣ) ಬಗ್ಗೆ ಆರೋಪ ಮಾಡಿದವರು ಯಾರು? ಜನಾರ್ದನ ರೆಡ್ಡಿ ಮತ್ತು ನವೀನ್ ಜಿಂದಾಲ್ ವಿರುದ್ಧ ಆರೋಪ ಮಾಡಿದವರು ಯಾರು ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಬಿಜೆಪಿಯ ‘ಮೋದಿ ಕಾ ಪರಿವಾರ್’ ಅಭಿಯಾನದ ಬಗ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ನಾನು ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ‘ಮೇರಾ ಪರಿವಾರ, ಮೇರಿ ಜಿಮ್ಮೆದಾರಿ’ (ನನ್ನ ಕುಟುಂಬ, ನನ್ನ ಜವಾಬ್ದಾರಿ) ಎಂದು ಸಂಕಲ್ಪ ಮಾಡಿದ್ದೆ. ನಿಮ್ಮ ‘ಪರಿವಾರ’ದಲ್ಲಿ ನೀವು ಮತ್ತು ಕುರ್ಚಿ ಮಾತ್ರ ಇದೆ” ಎಂದು ಲೇವಡಿ ಮಾಡಿದರು.