ಝಕಾತ್: ಭಿನ್ನ ಪ್ರಯೋಗದ ಮೂಲಕ ಮಾಧ್ಯಮ ಗಮನ ಸೆಳೆದ ಜಮಾಅತೆ ಇಸ್ಲಾಮೀ ಹಿಂದ್

0
768

ಸನ್ಮಾರ್ಗ ಸಂಪಾದಕೀಯ 

ಮೂವ್‌ಮೆಂಟ್  ಫಾರ್ ಪೀಸ್ ಆ್ಯಂಡ್ ಜಸ್ಟೀಸ್ (ಎಂಪಿಜೆ) ಎಂಬ ತೆಲಂಗಾಣದ ಸಂಸ್ಥೆಯೊಂದು  ಝಕಾತ್‌ನ ಮೂಲಕ ಕೈದಿಗಳಿಗೆ ಹೇಗೆ ನೆರವಾಗುತ್ತಿದೆ ಎಂಬ ಬಗ್ಗೆ ದಿ ಹಿಂದೂ ಪತ್ರಿಕೆ ಮಾರ್ಚ್ 31ರ ಸಂಚಿಕೆಯ ಮುಖಪುಟದಲ್ಲಿ ವಿವರವಾದ ವರದಿಯೊಂದನ್ನು ಪ್ರಕಟಿಸಿದೆ. ‘Zakaat helps free inmates during Ramzan ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ವರದಿ ಹಲವು ಸಕಾರಾತ್ಮಕ ಅಂಶಗಳನ್ನು ಎತ್ತಿ ಹೇಳಿದೆ. ಝಕಾತ್ ಎಂಬುದು ಮುಸ್ಲಿಮರಲ್ಲಿ ಮಾತ್ರ ಆಚರಣೆಯಲ್ಲಿರುವ ಮತ್ತು ಶ್ರೀಮಂತರು ತಮ್ಮ ಆಸ್ತಿಯಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ದಾನ ಮಾಡಲೇಬೇಕು ಎಂಬ ನಿಯಮವಿರುವ ಕ್ರಮ. ಸಾಮಾನ್ಯವಾಗಿ ಝಕಾತನ್ನು ಬಡವರಿಗೆ, ಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕಾಗಿ ಬಳಸುವ ರೂಢಿಯಿದೆ. ಆದರೆ ತೆಲಂಗಾಣದ ಎಂಪಿಜೆ ಸಂಸ್ಥೆಯು ಈ ಸಾಮಾನ್ಯ ಆಲೋಚನೆಗಿಂತ ಭಿನ್ನವಾಗಿ ಅಸಹಾಯಕ ಕೈದಿಗಳು ಮತ್ತು ಅವರ ಕುಟುಂಬದ ಕಡೆಗೆ ಗಮನ ಹರಿಸಿದೆ. ಆದ್ದರಿಂದಲೇ ಈ ಸಂಸ್ಥೆಯು ದೇಶದ ಪ್ರಮುಖ ಮಾಧ್ಯಮವೊಂದರ ಮುಖಪುಟದಲ್ಲಿ ಕಾಣಿಸಿಕೊಂಡಿದೆ. ಈ ಎಂಪಿಜೆಯು ತೆಲಂಗಾಣ ಜಮಾಅತೆ ಇಸ್ಲಾಮೀ ಹಿಂದ್‌ನ ಅಂಗಸಂಸ್ಥೆ.

ಗೊತ್ತಿದ್ದೋ  ಗೊತ್ತಿಲ್ಲದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಆ ಬಳಿಕ ಜಾಮೀನು ಮೊತ್ತವನ್ನೂ ಭರಿಸಲಾಗದೇ ಜೈಲಲ್ಲೇ  ಕೊಳೆಯುವ ಕೈದಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿದಿರುವುದು ಬಹಳ ಕಡಿಮೆ. ಜೊತೆಗೆ, ವ್ಯವಸ್ಥೆಯದ್ದೋ  ವ್ಯಕ್ತಿಗಳದ್ದೋ  ಸಂಚಿನಿಂದ  ಆರೋಪಿಯಾಗಿ ಜೈಲಲ್ಲಿ ಕಳೆಯುವವರೂ ಇದ್ದಾರೆ. ಹಾಗೆಯೇ, ಅಪರಾಧಿ ಎಂದು ಸಾಬೀತಾದ ವ್ಯಕ್ತಿ ಶಿಕ್ಷಾ ಅವಧಿಯನ್ನು ಜೈಲಲ್ಲಿ ಕಳೆದರೂ ದಂಡದ  ಮೊತ್ತವನ್ನು ಪಾವತಿಸುವ ಸಾಮರ್ಥ್ಯವಿಲ್ಲದೇ ಜೈಲಲ್ಲೇ  ಕೊಳೆಯಬೇಕಾಗಿ ಬರುವುದೂ ಇದೆ. ಇಂಥ ಅಪರಾಧಿಗಳು ಮತ್ತು ಕೈದಿಗಳ ಬಗ್ಗೆ ನಾಗರಿಕ ಸಮಾಜದಲ್ಲಿ ಒಂದು ಬಗೆಯ ಅಂತರಭಾವ ಇದ್ದೇ  ಇರುತ್ತದೆ. ಹಾಗೆಯೇ ಆಯಾ ಕುಟುಂಬಗಳೂ ಒಂದು ಹಂತದವರೆಗೆ ಅಪರಾಧಿ ಭಾವದೊಂದಿಗೆ ಬದುಕುವುದೂ ಇದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದ ಸಂಕಟದೊಂದಿಗೆ ಅವು ಬದುಕುತ್ತಿರುತ್ತವೆ. ಮನೆಯ ಏಕೈಕ ಆಧಾರಸ್ತಂಭವಾಗಿದ್ದ ವ್ಯಕ್ತಿ ಯಾವುದೋ ಅಪರಾಧ ಕೃತ್ಯದ ಆರೋಪದಲ್ಲಿ ಬಂಧನಕ್ಕೀಡಾದಾಗ ಅಥವಾ ಕೋರ್ಟು ಅಪರಾಧಿಯೆಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದಾಗ ಆ ವ್ಯಕ್ತಿಗಿಂತಲೂ ಕುಟುಂಬ ಹೆಚ್ಚು ಕಂಗಾಲಾಗುತ್ತದೆ. ಆ ಸಮಯದಲ್ಲಿ ಸಮಾಜ ಆದರಿಸದೇ ಹೋದರಂತೂ ಕುಟುಂಬ ಅಕ್ಷರಶಃ ಒಂಟಿತನದ ಭಾವದಿಂದ ಬೇಯುತ್ತದೆ. ಅಲ್ಲದೇ, ಆರೋಪಿಯ ಕುಟುಂಬದೊಂದಿಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ನೆರೆಕರೆಯವರು ಅಂಜುವುದೂ ಇದೆ. ಎಲ್ಲಿ ತಮ್ಮ ಮೇಲೆ ಅಪವಾದ ಬೀಳುತ್ತೋ, ಸರಕಾರ ಎಲ್ಲಿ ತಮ್ಮನ್ನೂ ಗುರಿ ಮಾಡುತ್ತೋ ಎಂಬ ಭಯ ಸಾಮಾನ್ಯ ಜನರನ್ನು ಕಾಡುವುದೂ ಇದೆ. ಇಂಥ ಸ್ಥಿತಿಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವ ಮತ್ತು ಅವರಲ್ಲಿ ಧೈರ್ಯ ಮೂಡಿಸುವ ಪ್ರಯತ್ನಗಳೂ ಆಗಲೇಬೇಕು. ಆರೋಪಿ ಅಪರಾಧಿಯಲ್ಲ ಮತ್ತು ಅಪರಾಧಿಯ ಅಪರಾಧವು ಜೈಲು ಶಿಕ್ಷೆ ಪೂರ್ಣಗೊಳ್ಳುವುದರೊಂದಿಗೆ ಕೊನೆಗೊಳ್ಳುತ್ತದೆ ಎಂಬ ಸಕಾರಾತ್ಮಕ ಭಾವವನ್ನು ಸಮಾಜದಲ್ಲಿ ತುಂಬಬೇಕು. ಆದರೆ ಇಂಥ ಪ್ರಯತ್ನಗಳು ಆಗುತ್ತಿರುವುದು ಕಡಿಮೆ. ಈ ಹಿನ್ನೆಲೆಯಲ್ಲಿಯೇ ಜಮಾಅತೆ ಇಸ್ಲಾಮೀ ಹಿಂದ್‌ನ ಈ ನಡೆಯನ್ನು ದಿ ಹಿಂದೂ ಪತ್ರಿಕೆ ಮುಖಪುಟದ ವಿಷಯವಾಗಿ ಎತ್ತಿಕೊಂಡಿದೆ ಎಂದೇ ಹೇಳಬೇಕಾಗುತ್ತದೆ.

ಮೂವ್‌ಮೆಂಟ್ ಫಾರ್ ಪೀಸ್ ಆ್ಯಂಡ್ ಜಸ್ಟೀಸ್‌ನ ಪ್ರಕಾರ, ಈವರೆಗೆ 130 ಕೈದಿಗಳ ದಂಡದ ಮೊತ್ತವನ್ನು ಸಂಸ್ಥೆಯು ಭರಿಸಿದೆ. ಹಾಗೆಯೇ 35 ಆರೋಪಿಗಳ ಜಾಮೀನು ಮೊತ್ತವನ್ನು ಪಾವತಿಸಿದೆ. ಹೀಗೆ 165ರಷ್ಟು ಕೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸುವುದಕ್ಕೆ ಅದು ನೆರವಾಗಿದೆ. ಸಾಮಾನ್ಯವಾಗಿ ಈ ಎಂಪಿಜೆ ಸಂಸ್ಥೆಯು ಮೊದಲ ಬಾರಿ ಅಪರಾಧ ಎಸಗಿದ ಮತ್ತು ಜಾಮೀನು ಅಥವಾ ದಂಡದ ಮೊತ್ತವನ್ನು ಪಾವತಿಸಲು ಕುಟುಂಬಿಕರು ಅಥವಾ ಸ್ನೇಹಿತರನ್ನು ಹೊಂದಿರದ ಜೈಲು ಬಂಧಿಗಳನ್ನು ಗುರುತಿಸುತ್ತದೆ. ಇಂಥ ಕೈದಿಗಳ ಕೆಲವು ಕುಟುಂಬಗಳು ಎಷ್ಟು ದಯನೀಯ ಸ್ಥಿತಿಯಲ್ಲಿ ಇರುತ್ತಾರೆಂದರೆ, 500 ರೂಪಾಯಿ ಪಾವತಿಸುವುದಕ್ಕೂ ಅವರಲ್ಲಿ ಸಾಮರ್ಥ್ಯ ಇರುವುದಿಲ್ಲ. ಹಾಗೆಯೇ ತಮ್ಮ ಮನೆಯ ವ್ಯಕ್ತಿ ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದ ಕುಟುಂಬಗಳಿರುತ್ತವೆ. ವಾರಗಳು ಅಥವಾ ತಿಂಗಳುಗಳ ನಂತರವಷ್ಟೇ ತಮ್ಮ ಮನೆಯ ವ್ಯಕ್ತಿ ಜೈಲಲ್ಲಿದ್ದಾನೆ ಎಂದು ತಿಳಿಯುವ ಬಡಪಾಯಿ ಕುಟುಂಬಗಳೂ ಇವೆಯೆಂದು ಎಂಪಿಜೆಯ ಮುಖ್ಯಸ್ಥರಾದ ಅಹ್ಮದ್ ಹಮೀದುದ್ದೀನ್ ಶಕೀಲ್ ಹೇಳಿರುವುದನ್ನು ದಿ ಹಿಂದೂ ಪ್ರಕಟಿಸಿದೆ. 2007ರಿಂದಲೇ ಸಕ್ರಿಯವಾಗಿರುವ ಈ ಸಂಸ್ಥೆಯು ಇವತ್ತು ಅಸಹಾಯಕ ಕೈದಿಗಳು ಮತ್ತು ಕುಟುಂಬಗಳ ಪಾಲಿಗೆ ಆಶಾಕಿರಣವಾಗಿ ಮಾರ್ಪಟ್ಟಿದೆ. ಝಕಾತನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು ಎಂಬ ಬಗ್ಗೆ ಅದು ಮಾದರಿಯೊಂದನ್ನು ಪರಿಚಯಿಸಿದೆ. ನಿಜವಾಗಿ,

ಝಕಾತ್ ಎಂಬುದು ಅತ್ಯಂತ ಕ್ರಾಂತಿಕಾರಿ ಯೋಜನೆ. ಶ್ರೀಮಂತರ ಸಂಪತ್ತಿನಲ್ಲಿ ಬಡವರಿಗೂ ಪಾಲಿದೆ ಎಂಬ ಅತಿ ವಿಶಿಷ್ಟ ಮತ್ತು ಅತಿ ಉದಾತ್ತ ಪರಿಕಲ್ಪನೆ. ವ್ಯಕ್ತಿಯ ವಾರ್ಷಿಕ ಉಳಿತಾಯದಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಬಡವರಲ್ಲಿ ಹಂಚಬೇಕು ಎಂಬ ಈ ನಿಲುವು ವರ್ಗ ಸಂಘರ್ಷವನ್ನು ತಡೆಯುತ್ತದೆ. ಶ್ರೀಮಂತನ ಶ್ರೀಮಂತಿಕೆಯ ಮೇಲೆ ಬಡವ ಅಸೂಯೆ ಪಡುವುದರ ಬದಲು ಆತನ ಶ್ರೀಮಂತಿಕೆಯು ತನ್ನ ಅಭಿವೃದ್ಧಿಗೆ ಕೊಡುಗೆಯಾಗಲಿದೆ ಎಂಬ ಆಶಾವಾದವನ್ನು ಸೃಷ್ಟಿಸುತ್ತದೆ. ಹಾಗೆಯೇ, ಈ ಝಕಾತ್ ಶ್ರೀಮಂತನನ್ನೂ ದೇವನಿಗೆ ವಿನೀತಗೊಳಿಸುತ್ತದೆ. ತನ್ನ ಸಂಪತ್ತು ದೇವನ ಅನುಗ್ರಹವಾಗಿದೆ ಎಂಬ ಭಾವವನ್ನು ಮೂಡಿಸುತ್ತದೆ. 2.5%ದಿಂದ ಆರಂಭವಾಗುವ ಈ ಝಕಾತ್ ನಿಯಮವು ನೀರಾವರಿ ಕೃಷಿ, ಮಳೆ ನೀರಿನ ಕೃಷಿ, ವಿವಿಧ ವ್ಯಾಪಾರ ವಹಿವಾಟುಗಳಿಗೆ ಬೇರೆ ಬೇರೆ ಶೇಕಡಾವಾರನ್ನು ನಿರ್ಣಯಿಸಿದೆ. ಇವತ್ತು ಜಾಗತಿಕವಾಗಿ ಝಕಾತ್ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತದೆ ಮತ್ತು ಅವು ಬಡರಾಷ್ಟ್ರಗಳ ಪಾಲಿನ ಭರವಸೆಯಾಗಿಯೂ ಉಳಿದಿದೆ. ಆಫ್ರಿಕಾ ಖಂಡದ ಬಡರಾಷ್ಟ್ರಗಳ ಜನರ ಶ್ರೇಯೋಭಿವೃದ್ಧಿಗೆಂದೇ ಅರಬ್ ರಾಷ್ಟ್ರಗಳ ಕೋಟ್ಯಂತರ ಹಣವು ಪ್ರತಿವರ್ಷ ವಿನಿಯೋಗವಾಗುತ್ತದೆ. ಒಂದುವೇಳೆ,

ಝಕಾತ್‌ನ ಮೊತ್ತ ಸಮರ್ಪಕವಾಗಿ ಸಂಗ್ರಹವಾದರೆ ಮತ್ತು ಯೋಜನಾಬದ್ಧವಾಗಿ ವಿನಿಯೋಗವಾದರೆ, ಸರಕಾರವನ್ನು ಅವಲಂಬಿಸದೆಯೇ ಸಮುದಾಯದ ಏಳಿಗೆ ಸಾಧ್ಯವಾದೀತು ಎಂಬ ಅಭಿಪ್ರಾಯವೂ ಇದೆ. ಪ್ರತಿ ಮಸೀದಿ ವ್ಯಾಪ್ತಿಯಲ್ಲೂ ಝಕಾತ್ ಪಾವತಿಸಲು ಅರ್ಹವಾದ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರ ಝಕಾತ್ ಆಯಾ ಮಸೀದಿ ವ್ಯಾಪ್ತಿಯ ಬಡವರು, ನಿರ್ಗತಿಕರು ಮತ್ತು ಇನ್ನಿತರ ವ್ಯಕ್ತಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ವ್ಯಯವಾಗುವಂತೆ ನೋಡಿಕೊಳ್ಳುವ ಕ್ರಿಯಾ ಯೋಜನೆ ತಯಾರಾಗಬೇಕು. ಅದಕ್ಕಿಂತ ಮೊದಲು ಪ್ರತಿ ಮಸೀದಿಯೂ ತನ್ನ ಜಮಾಅತ್‌ಗೊಳಪಟ್ಟ ಪ್ರತಿ ಮನೆಯ ಡೇಟಾವನ್ನು ಸಂಗ್ರಹಿಸಬೇಕು. ಮನೆಯಲ್ಲಿ ಎಷ್ಟು ಮಂದಿಯಿದ್ದಾರೆ, ಅವರಲ್ಲಿ ದುಡಿಯುವವರು ಎಷ್ಟು, ರೋಗಿಗಳು, ಮದುವೆ ಪ್ರಾಯಕ್ಕೆ ಬಂದ ಗಂಡು ಮತ್ತು ಹೆಣ್ಣು ಎಷ್ಟು, ವಿದ್ಯಾರ್ಥಿಗಳು, ವಿಧವೆ ಮತ್ತು ವಿಚ್ಛೇದಿತೆಯರು, ನಿರುದ್ಯೋಗಿಗಳು ಎಷ್ಟು, ಕೈದಿಗಳಿದ್ದಾರಾ… ಎಂಬೆಲ್ಲಾ ಪಕ್ಕಾ ಮಾಹಿತಿಗಳು ಮಸೀದಿ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರಬೇಕು. ಇದಕ್ಕಾಗಿ ಮಸೀದಿ ಆಡಳಿತ ಸಮಿತಿಯು ಉತ್ಸಾಹಿ ಯುವಕರನ್ನು ಸಂಘಟಿಸಿ ಸಮೀಕ್ಷೆ ನಡೆಸಬೇಕು. ಪ್ರತಿ ಮಸೀದಿಯೂ ಒಂದಕ್ಕಿಂತ  ಹೆಚ್ಚು ಯುವಕರ ಸಂಘಟನೆಯನ್ನು ಹೊಂದಿರುವುದರಿಂದ ಈ ಸಮೀಕ್ಷಾ ಕಾರ್ಯ ಕಷ್ಟವಲ್ಲ. ಈ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡಕೊಂಡು ಹೊಣೆಗಾರಿಕೆಯನ್ನು ವಿಭಜಿಸಿಕೊಟ್ಟರೆ ಕ್ರಾಂತಿಕಾರಿ ಬದಲಾವಣೆಗೆ ಬಹುದೊಡ್ಡ ಅಡಿಗಲ್ಲು ಹಾಕಿದಂತಾದೀತು.

ಏನೇ ಇದ್ದರೂ ತೆಲಂಗಾಣದ ಮೂವ್‌ಮೆಂಟ್ ಫಾರ್ ಪೀಸ್ ಆ್ಯಂಡ್ ಜಸ್ಟೀಸ್ ಸಂಸ್ಥೆಯು ಭಿನ್ನ ಆಲೋಚನೆಯ ಮೂಲಕ ಸಾರ್ವಜನಿಕ ಗಮನ ಸೆಳೆದಿದೆ. ಝಕಾತ್ ಎಂಬ ಅಪ್ಪಟ ಧರ್ಮಾಧಾರಿತ ಯೋಜನೆಯು ಹೇಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪಾಲಿಗೆ ಆಶಾಕಿರಣವಾಗಿ ಮಾರ್ಪಡಬಲ್ಲುದು ಎಂಬುದನ್ನು ಅದು ಎತ್ತಿ ತೋರಿಸಿದೆ. ದಶಕದ ಹಿಂದೆಯೇ  ಚಟುವಟಿಕೆಯಲ್ಲಿ ತೊಡಗಿರುವ ಈ ಸಂಸ್ಥೆಯನ್ನು ಇದೀಗ ಇಲ್ಲಿನ ಮುಂಚೂಣಿ ಮಾಧ್ಯಮವೂ ಗುರುತಿಸಿದೆ. ಒಂದು ರೀತಿಯಲ್ಲಿ ಇದು ಝಕಾತ್‌ನ ಗೆಲುವು. ಇಸ್ಲಾಮ್‌ನ ಕಡ್ಡಾಯ ಕರ್ಮವೊಂದು ನಾಗರಿಕ ಸ್ನೇಹಿಯಾಗಿ ಬಳಕೆಯಾದಾಗ ಹೇಗೆ ಸಾರ್ವತ್ರಿಕ ಮನ್ನಣೆಗೆ ಪಾತ್ರವಾಗುತ್ತದೆ ಎಂಬುದಕ್ಕೆ ಈ ಎಂಪಿಜೆ ಚಟುವಟಿಕೆಯೇ ಸಾಕ್ಷಿ.