ಕೇಸರಿ ಶಾಲು ಬಿಟ್ಟು ಮುಸ್ಲಿಮರ ಟೋಪಿ ಧರಿಸಿದ ಬಿಜೆಪಿ ಶಾಸಕ

0
170

ಯಾದಗಿರಿ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣ ಅನೇಕ ಹೈಡ್ರಾಮಗಳಿಗೆ ಸಾಕ್ಷಿಯಾಗುತ್ತಿದೆ. ಸುರುಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಅವರು ಕೇಸರಿ ಶಾಲು ಬಿಟ್ಟು ಮುಸ್ಲಿಮರ ಟೋಪಿ ಧರಿಸಿ ಅಲ್ಪಸಂಖ್ಯಾತರ ಮತಬೇಟೆಗೆ ಇಳಿದಿದ್ದಾರೆ.

ಸ್ವಗ್ರಾಮ ಕೊಡೇಕಲ್‌ನಲ್ಲಿ ರಾಜುಗೌಡ ಅವರು ಬಿಲಾಲ್ ಮಸೀದಿ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಹಿಂದೂ – ಮುಸ್ಲಿಂ ಸೌಹಾರ್ದತೆಗೆ ಸಂದೇಶ ಸಾರಿದ್ದಾರೆ. ಸದಾ ಮುಸ್ಲಿಮರ ವಿರುದ್ಧ ಕತ್ತಿ ಮಸೆಯುವ ಬಿಜೆಪಿ ನಾಯಕರು ಏಕಾಏಕಿ ಮುಸ್ಲಿಮರ ಓಲೈಕೆಗೆ ಮುಂದಾಗಿದ್ದಾರೆ.

ಮಸೀದಿಯ ನಿರ್ಮಾಣದ ಭೂಮಿ ಪೂಜೆ ಬಳಿಕ ಮಾತನಾಡಿದ ರಾಜುಗೌಡ, “ನಾನು ಹಿಂದೂ ಆಗಿದ್ದರೂ ಮುಸ್ಲಿಮನಾಗಿ ಟೋಪಿ ಧರಿಸಿದ್ದೇನೆ. ಇವರು ಮುಸ್ಲಿಮರಾಗಿದ್ದರೂ ಹಿಂದೂವಾಗಿ ಕೇಸರಿ ಶಾಲು ಹಾಕಿಕೊಂಡಿದ್ದಾರೆ. ನಮ್ಮ ಬಳಿ ಯಾವುದೇ ಜಾತಿ-ಧರ್ಮ, ಭೇದ-ಭಾವ ಇಲ್ಲ. ನಮ್ಮ ಮುಂದಿನ ಪೀಳಿಗೆ ಇದೇ ಸಂಪ್ರದಾಯ ಮುಂದುವರಿಸಬೇಕು” ಎಂದಿದ್ದಾರೆ.

ಕೊಡೇಕಲ್ ಗ್ರಾಮದ ಬಸವಣ್ಣನವರ ಜಾತ್ರೆಯ ಕುರಿತು ಮಾತನಾಡಿದ ಅವರು, “ನಾವೆಲ್ಲಾ ಬಸವಣ್ಣನ ಮಕ್ಕಳು. ನಮ್ಮ ಹಿಂದಿನಿಂದಲೂ ನಾವೆಲ್ಲ ಒಟ್ಟಾಗಿ ಬದುಕುತ್ತಿದ್ದೇವೆ. ಮುಂದಿನ ತಲೆಮಾರು ಸಹ ಇದನ್ನೆ ಮುಂದುವರಿಸಲಿ. ಇನ್ನು ಸ್ವಲ್ಪ ದಿನಗಳಲ್ಲಿ ಬಸವಣ್ಣನ ಜಾತ್ರೆ ನಡೆಯುತ್ತದೆ. ಎಲ್ಲ ಸಮಾಜದವರು ಸೇರಿ ಇಲ್ಲಿ ಜಾತ್ರೆ ನಡೆಸುತ್ತಾರೆ” ಎಂದು ಹೇಳಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲು ಯತ್ನಿಸುತ್ತಿರುವ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.