ರಕ್ತದಾನ ಮಾಡಿದ ಬೆಂಗರೆಯ ನೂರಾರು ಯುವಕರು: ಸ್ಫೂರ್ತಿಯಾದ ದೃಷ್ಟಿಹೀನ ಯುವಕ

0
780

ಸನ್ಮಾರ್ಗ ವಾರ್ತೆ

ಕಸ್ಬಾ ಬೆಂಗರೆ: ರಕ್ತದಾನದ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಕೆಲಸ ಆಗಬೇಕು. ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಬೆಂಗ್ರೆ ಮಹಾಜನ ಸಭೆಯ ಅಧ್ಯಕ್ಷ ಚೇತನ್ ಬೆಂಗ್ರೆ ಇವರು ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಕಸ್ಬಾ ಬೆಂಗರೆ, ಹೆಚ್.ಆರ್.ಎಸ್. ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಆಯೋಜಿಸಿದ್ದ ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿ ಸ್ಥಳೀಯ ಕಾಪೆರ್ಪೋ ರೇಟರ್ ಮುನೀಬ್ ಬೆಂಗ್ರೆ ಮಾತನಾಡುತ್ತಾ, ಮಂಗಳೂರು ಆಸ್ಪತ್ರೆಗಳ ನಗರ ಎಂಬ ಖ್ಯಾತಿ ಪಡೆದಿದೆ. ರಕ್ತಕ್ಕಾಗಿ ಹಪಹಪಿಸುವ ಕಾಲ ಸಂಜಾತವಾಗಿದೆ. ಆದುದರಿಂದ ಯುವಕರೆಲ್ಲರೂ ರಕ್ತದಾನ ಮಾಡುವ ಮೂಲಕ ಈ ಕೊರತೆಯನ್ನು ನೀಗಿಸಬೇಬೇಕೆಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಆರ್.ಎಸ್. ಸಂಚಾಲಕ ಗಫೂರ್ ಕುಳಾಯಿ ಮಾತನಾಡಿ, ರಕ್ತದಾನ ಮಹಾದಾನ. ಜಾತಿ ಬೇಧ ಮರೆತು ಜೀವ ಉಳಿಸುವ ಕೆಲಸ ದೇವನು ಇಷ್ಟ ಪಡುತ್ತಾನೆ. ಪರಸ್ಪರ ಧರ್ಮೀಯರ ಮಧ್ಯೆ ಗೋಡೆ ಕಟ್ಟುವ ಜನರ ಮಧ್ಯೆ ಸೌಹಾರ್ದದ ಸೇತುವೆ ಕಟ್ಟುವ ಕೆಲಸ ರಕ್ತದಾನ ಶಿಬಿರದಿಂದ ಸಾಧ್ಯ ಎಂದರು.

ಇದೇವೇಳೆ, ಸಲ್ಮಾನ್ ಅನ್ನುವ ದೃಷ್ಠಿ ಕಳಕೊಂಡ ಯುವಕ ರಕ್ತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಜಮಾಅತೆ ಇಸ್ಲಾಮೀ ಹಿಂದ್ ಕಸ್ಬಾ ಬೆಂಗ್ರೆ ಅಧ್ಯಕ್ಷ ಅಬ್ದುಲ್ಲತೀಫ್ ಆಲಿಯಾ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಅಬ್ಬುಸ್ಸತ್ತಾರ್ ಸಂದರ್ಭೋಚಿತವಾಗಿ ಮಾತನಾಡಿದರು.

ಸನ್ಮಾನ ಕಾರ್ಯಕ್ರಮ: ಇದೇ ಸಂದರ್ಭದಲ್ಲಿ ಗರಿಷ್ಠ ರಕ್ತದಾನ ಮಾಡಿದ ಅಸ್ಲಮ್ ಕಸ್ಬಾ ಬೆಂಗ್ರೆ ಹಾಗೂ ಸಂಜಯ್ ಸುವರ್ಣ ತೋಟ ಬೆಂಗರೆಯನ್ನು ಸನ್ಮಾನಿಸಲಾಯಿತು. ಶಿಬಿರದ ಕೊನೆಯಲ್ಲಿ ಕಳೆದ 23-25 ವರ್ಷಗಳಿಂದ ಬ್ಲಡ್ ಬ್ಯಾಂಕ್ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆಗೈಯ್ಯುತ್ತಿರುವ ಕೆ.ಎಂ.ಸಿ. ಆಸ್ಪತ್ರೆಯ ಟೆಕ್ನಿಕಲ್ ಸೂಪರವೈಸರ್ ಗಳಾಗಿರುವ ಸೆಲೀನ್ ಡಿ’ಸೋಜಾ ಹಾಗೂ ಶ್ರೀಜಿ ಮೇಡಮ್‍ರಿಗೆ ಶಾಲು ಹೊದಿಸುವ ಮೂಲಕ ಸನ್ಮಾನಿಸಲಾಯಿತು. ಈ ಶಿಬಿರದಲ್ಲಿ ಒಟ್ಟು 118 ಮಂದಿ ರಕ್ತದಾನ ಮಾಡಿದರು.