ಪೆಗಾಸಸ್ ಕುರಿತು ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು: ಸಂಸತ್ ಗೆ ಸೈಕಲ್ ಜಾಥಾದ ನೇತೃತ್ವ ವಹಿಸಿದ ರಾಹುಲ್ ಗಾಂಧಿ

0
379

ಸನ್ಮಾರ್ಗ ವಾರ್ತೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಸೇರಿದ ವಿಪಕ್ಷ ನಾಯಕರು, ಪೆಗಾಸಸ್ ಕುರಿತು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಉಪಹಾರ ಕೂಟದಲ್ಲಿ ತೃಣಮೂಲ ಕಾಂಗ್ರೆಸ್, ಶಿವಸೇನೆ, ಸಮಾವಾದಿ ಪಾರ್ಟಿ ಸೇರಿದಂತೆ ಅನೇಕ ವಿಪಕ್ಷ ನಾಯಕರು ಭಾಗಿಯಾಗಿದ್ದರು. ಸಂಸತ್ ಗೆ ಸೈಕಲ್ ಜಾಥಾವನ್ನು ನಡೆಸಿದ್ದು, ಅದರ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ.

ಈ ಬಾರಿಯ ಅಧಿವೇಶನದಲ್ಲಿ ವಿಪಕ್ಷಗಳು ಪೆಗಾಸಸ್ ಗೂಢಚಾರಿಕೆಗೆ ಸಂಬಂಧಿಸಿದಂತೆ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳು ಈ ಸಂಬಂಧ ಚರ್ಚೆಗೆ ಆಗ್ರಹಿಸುತ್ತಿವೆ. ವಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸಲು ರಾಹುಲ್ ಗಾಂಧಿ ಇಂದು ಬೆಳಗಿನ ಉಪಹಾರ ಕೂಟ ಆಯೋಜಿಸಿದ್ದರು.

ಉಪಹಾರ ಕೂಟದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿಪಕ್ಷಗಳ ಮಧ್ಯೆ ಏನೇ ವಾದಗಳಿರಬಹುದು. ಆದರೆ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕುರಿತು ಧ್ವನಿ ಎತ್ತಬೇಕಿದೆ. ಹಾಗಾಗಿ ಸಭೆ ಬಳಿಕ ಎಲ್ಲರೂ ಸೈಕಲ್ ಮೂಲಕ ಅಧಿವೇಶನಕ್ಕೆ ತೆರಳೋಣ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಸೈಕಲ್ ಮೇಲೆ ಸಂಸತ್ ಗೆ ಆಗಮಿಸಿ ತೈಲ ಬೆಲೆ ಏರಿಕೆಯನ್ನು ಖಂಡಿಸಿದರು.