ಕುಟುಂಬ ಸಂಬಂಧ ಮುರಿದಿರುವಿರಾ?

0
223

ಸನ್ಮಾರ್ಗ ವಾರ್ತೆ

✍️ಅಬೂ ಝೀಶಾನ್

ಹ. ಅಬ್ದುಲ್ಲಾ ಬಿನ್ ಅಬೀ ಔಫ್(ರ) ಎಂಬ ಸಹಾಬಿ ಪ್ರವಾದಿ(ಸ)ರ ಒಂದು ಘಟನೆಯನ್ನು ಹೇಳುತ್ತಾರೆ,
“ಒಮ್ಮೆ ನಾವೆಲ್ಲರೂ ಪ್ರವಾದಿ(ಸ)ರ ಒಂದು ಸಭೆಯಲ್ಲಿ ಕುಳಿತಿದ್ದೆವು. ಪ್ರವಾದಿ(ಸ) ಅಲ್ಲಿ ಕುಳಿತಿರುವವರೊಂದಿಗೆ ಹೇಳಿದರು, “ಕುಟುಂಬ  ಸಂಬಂಧವನ್ನು ಮುರಿದವರು ದಯವಿಟ್ಟು ಈ ಸಭೆಯಿಂದ ಹೊರಗೆ ಹೋಗಿ. ಕುಟುಂಬ ಸಂಬಂಧ ಮುರಿದವರು ಕುಳಿತಿರುವ ಸಭೆಯಲ್ಲಿ ಅಲ್ಲಾಹನ ಕರುಣೆ ಇರುವುದಿಲ್ಲ.”

ಇದನ್ನು ಕೇಳಿ ಒಬ್ಬರು ಆ ಸಭೆಯಿಂದ ಎದ್ದು ಹೋದರು. ಚಿಕ್ಕಮ್ಮನೊಂದಿಗೆ ಅವರಿಗೆ ವೈಮನಸ್ಸಿತ್ತು. ಅವರು ಆ ಮೈಮನಸ್ಸನ್ನು ಸರಿ ಮಾಡಿ ತಿರುಗಿ ಬಂದರು.

ಕುಟುಂಬ ಸಂಬಂಧ ಎಂಬುದು ನಮಗೆಲ್ಲರಿಗೂ ಸಾಮಾನ್ಯವಾಗಿ ಕಾಣಬಹುದು. ಆದರೆ ಇಸ್ಲಾಮ್ ಕುಟುಂಬ ಸಂಬಂಧಕ್ಕೆ ಬಹಳ ಮಹತ್ವ ನೀಡಿದೆ. ನಮ್ಮ ಕುಟುಂಬದ ಯಾವುದಾದರೂ ಓರ್ವ ಸದಸ್ಯನೊಂದಿಗೆ ನಾವು ಸಲಾಮ್ ಹೇಳುವುದಿಲ್ಲವೆಂದಾದರೆ, ಸಂಬಂಧ ಮುರಿದರೆ ಅದು ಎಷ್ಟು ಗಂಭೀರವಾದುದೆಂದು ಹೆಚ್ಚಿನವರು ಅರಿಯುವ ಗೊಡವೆಗೆ ಹೋಗುವುದಿಲ್ಲ.

ಖುದ್ಸಿಯಾದ ಒಂದು ಹದೀಸ್‌ನಲ್ಲಿ ಪ್ರವಾದಿ(ಸ) ಹೇಳುತ್ತಾರೆ, “ಅಲ್ಲಾಹನು ಹೀಗೆ ಹೇಳುತ್ತಾನೆ,
ನಾನು ಅಲ್ಲಾಹ್, ನಾನು ರಹ್ಮಾನ್ (ಕರುಣೆಯುಳ್ಳವನು) ಆಗಿದ್ದೇನೆ. ನಾನು ರಹೀಮ್ (ಕುಟುಂಬ) ಅನ್ನು ಸ್ಥಾಪಿಸಿದವನು. ನನ್ನ  ಹೆಸರಿನಿಂದ ಒಂದು ಹೆಸರನ್ನು ಅದಕ್ಕೆ ನೀಡಿದ್ದೇನೆ. (ಅಲ್ಲಾಹನ ಹೆಸರು ರಹ್ಮಾನ್. ಅಲ್ಲಾಹನು ಕುಟುಂಬಕ್ಕೆ ನೀಡಿದ ಹೆಸರು ರಹೀಮ್). ಯಾರು ಆ ಕುಟುಂಬ ಸಂಬಂಧವನ್ನು ಜೋಡಿಸುತ್ತಾನೋ ಅವನೊಂದಿಗೆ ನಾನು ಸಂಬಂಧವನ್ನು ಜೋಡಿಸುವೆನು. ಯಾರು ಆ ಕುಟುಂಬ ಸಂಬಂಧವನ್ನು ಮುರಿಯುತ್ತಾನೋ ಅವನೊಂದಿಗೆ ನಾನೂ ಸಂಬಂಧವನ್ನು ಮುರಿಯುವೆನು.”

ಅಲ್ಲಾಹನು ನಮ್ಮೊಂದಿಗೆ ಸಂಬಂಧವನ್ನು ಮುರಿದರೆ ನಮ್ಮ ಅವಸ್ಥೆಯೇನಾಗಬಹುದು? ನಮ್ಮೆಲ್ಲರ ಜೀವನದ ಉದ್ದೇಶವೇನು?  ಅಲ್ಲಾಹನ ಸಂಪ್ರೀತಿಯಲ್ಲವೇ? ನಾವು ನಮಾಝ್ ಮಾಡುವುದು, ದಾನ ಮಾಡುವುದು, ರಾತ್ರಿ ನಿದ್ದೆಯನ್ನು ಬದಿಗೊತ್ತಿ ತಹಜ್ಜುದ್ ನಿರ್ವಹಿಸುವುದು, ಕಷ್ಟಪಟ್ಟು ಉಪವಾಸ ಆಚರಿಸುವುದು ಇವೆಲ್ಲ ಯಾತಕ್ಕಾಗಿ? ಕೇವಲ ಅಲ್ಲಾಹನ ಸಂಪ್ರೀತಿಗಾಗಿಯಲ್ಲವೇ?

ಆದರೆ  ಒಂದು ವೇಳೆ ನಾವು ಅಲ್ಲಾಹನ ದೃಷ್ಟಾಂತಗಳಲ್ಲಿ ಒಂದಾದ ಕುಟುಂಬದ ಯಾರಾದರೊಂದಿಗೆ ಸಲಾಮ್ ಹೇಳುವುದಿಲ್ಲವೆಂದಾದರೆ,  ಸಂಬಂಧವನ್ನು ಮುರಿದರೆ ನಮ್ಮ ಈ ಇಬಾದತ್ ಗಳು ಅಲ್ಲಾಹನ ಬಳಿ ಸ್ವೀಕೃತವಾಗಬಹುದೇ ಎಂದು ನಮ್ಮಲ್ಲಿಯೇ ಪ್ರಶ್ನಿಸಬೇಕಾಗಿದೆ.  

ನಾವು ಹೇಳುವುದಿದೆ, ದಿನಾಲೂ ಪ್ರಾರ್ಥಿಸುತ್ತಾ ಇದ್ದೇನೆ, ಆದರೆ ಯಾವುದೇ ಉತ್ತರ ಸಿಗುವುದಿಲ್ಲ. ನಮ್ಮ ಮುರಿದ ಸಂಬಂಧಗಳ  ಕಾರಣ ಬಹುಶಃ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗುವುದಿಲ್ಲವೋ ಎಂದು ನಾವು ಆಲೋಚಿಸಬೇಕಾಗಿದೆ.

ಮನಸ್ಸುಗಳು ನೋವಾದಾಗ ಹೆಚ್ಚಿನ ಕಡೆಗಳಲ್ಲಿ ಸಂಬಂಧಗಳು ಮುರಿಯುತ್ತವೆ. ಆದರೆ ಪರಲೋಕ ವಿಜಯ ನಮ್ಮ ಉದ್ದೇಶವಾದರೆ ನಮ್ಮ ಮನಸ್ಸನ್ನು ನೋಯಿಸಿದವರನ್ನು ಕ್ಷಮಿಸಲು ಸುಲಭವಾಗುವುದು. ನಮ್ಮೊಂದಿಗೆ ಯಾರು ಚೆನ್ನಾಗಿರುತ್ತಾರೋ ಅವರೊಂದಿಗೆ ಉತ್ತಮವಾದ ಸಂಬಂಧ ಇಡುವುದು ದೊಡ್ಡ ಕಾರ್ಯ ಅಲ್ಲ. ತಿನ್ನಲು ಕೊಟ್ಟರೆ ಪ್ರಾಣಿಗಳೂ ಪ್ರೀತಿಯನ್ನು ತೋರಿಸುತ್ತವೆ. ತೊಂದರೆ  ಕೊಟ್ಟರೆ ಕಚ್ಚಲು ಬರುತ್ತವೆ. ನಾವೂ ಕೂಡಾ ಹಾಗಿರಬೇಕೇ?

ನಮ್ಮೊಂದಿಗೆ ಯಾರು ಉತ್ತಮವಾಗಿ ವರ್ತಿಸುವುದಿಲ್ಲವೋ ಅವರೊಂದಿಗೆ  ಉತ್ತಮವಾಗಿ ವರ್ತಿಸುವುದು, ಅವರನ್ನು ಕ್ಷಮಿಸುವುದು ಬಹಳ ಪುಣ್ಯ ಕಾರ್ಯವಾಗಿದೆ. ಕೇವಲ ಅಲ್ಲಾಹನ ಸಂಪ್ರೀತಿಗಾಗಿ ಇತರರ ತಪ್ಪುಗಳನ್ನು ಕ್ಷಮಿಸಲು ಕಲಿಯಬೇಕಾಗಿದೆ. ಹೀಗಾದಾಗ ಕುಟುಂಬ ಸಂಬಂಧಗಳು ಸುದೃಢವಾಗುತ್ತವೆ. ಪರಲೋಕದ ವಿಜಯ ಹಾಗೂ ಅಲ್ಲಾಹನ ಸಂಪ್ರೀತಿಗಾಗಿ ನಮ್ಮ ಕುಟುಂಬದ (ಅದು ಎಷ್ಟು ದೂರದ ಸಂಬಂಧಿ ಕೂಡಾ ಆಗಿರಲಿ) ಯಾವನೇ ಒಬ್ಬ ಸದಸ್ಯನೊಂದಿಗೆ ಕೂಡಾ ಸಂಬಂಧಗಳು ಮುರಿಯದ ಹಾಗೆ ನೋಡಿಕೊಳ್ಳಬೇಕು.