ಬುಲ್ಡೋಜರ್‌ (ಅ)ನ್ಯಾಯ: 60+ ದಿನಗಳು | 50+ ಧಾಮಿಕ ಕೇಂದ್ರಗಳು

0
210

ವಿಶೇಷ ಸಂದರ್ಶನ

✍️ ನದೀಮ್‌ ಖಾನ್‌, ದೆಹಲಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅಸೋಸಿಯೇಶನ್‌ ಫಾರ್‌ ಪ್ರೊಟೆಕ್ಷನ್‌ ಆಫ್‌ ಸಿವಿಲ್‌ ರೈಟ್ಸ್‌ (APCR) ಮತ್ತು ಸ್ಥಾಪಕರು, ಯುನೈಟೆಡ್‌ ಅಗೈನ್ಸ್‌ಟ್‌ ಹೇಟ್‌(UAH)

ಪ್ರಶ್ನೆ 1: ಮೇ ತಿಂಗಳ ಆರಂಭದಿಂದ ಜೂನ್ ಮಧ್ಯದವರೆಗಿನ 45 ದಿನಗಳ ಅವಧಿಯಲ್ಲಿ ಮಸೀದಿಗಳು, ಮದ್ರಸಾಗಳು ಮತ್ತು ದರ್ಗಾಗಳು ಸೇರಿದಂತೆ 23 ಸಂಸ್ಥೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ ಎಂದು ಎಪಿಸಿಆರ್‌ ವರದಿ ಹೇಳುತ್ತದೆ. ಇವು ಅನಧಿಕೃತ ಒತ್ತುವರಿಗಳಾಗಿದ್ದವು ಎಂಬುದು ಸರ್ಕಾರದ ನಿಲುವು. ಹೀಗಿರುವಾಗ, ಕಾನೂನುಬಾಹಿರ ಕಟ್ಟಡಗಳನ್ನು ತೆರವುಗೊಳಿಸಬಾರದು ಎಂಬುದು ನಿಮ್ಮ ನಿಲುವೇ ಅಥವಾ ಈ ತೆರವು ಪ್ರಕ್ರಿಯೆಯ ಕಾನೂನುಬದ್ಧತೆಯನ್ನೇ ನೀವು ಪ್ರಶ್ನಿಸುತ್ತಿದ್ದೀರಾ? 

ಉತ್ತರ: ನೀವು ಹೇಳುತ್ತಿರುವ ಅಂಕಿ-ಅಂಶಗಳಲ್ಲಿ ಅವತ್ತಿನಿಂದ ಇವತ್ತಿನವರೆಗೆ ಸಾಕಷ್ಟು ಹೆಚ್ಚಾಗಿವೆ ಮತ್ತು ಸದ್ಯ ತಳಮಟ್ಟದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ವರದಿಯಾಗಿರುವ ಆ ಅಂಕಿ-ಅಂಶಗಳು ವಾಸ್ತವಕ್ಕಿಂತ ಕಡಿಮೆ ಇವೆ ಮತ್ತು ಅವು ವಾಸ್ತವವನ್ನು ಪ್ರತಿಬಿಂಬಿಸುತ್ತಿಲ್ಲ. ಉದಾಹರಣೆಗೆ, ಕಳೆದ ಕೇವಲ 10 ರಿಂದ 12 ದಿನಗಳಲ್ಲಿ ಗುಜರಾತ್ ಒಂದರಲ್ಲೇ ಮಸೀದಿಗಳು, ದರ್ಗಾಗಳು ಮತ್ತು ಮದ್ರಸಾಗಳು ಸೇರಿದಂತೆ 30 ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಲಾಗಿದೆ. ಅದು ಕೇವಲ ಗುಜರಾತ್‌ನ ಕಥೆ; ಬೇರೆ ರಾಜ್ಯಗಳ ಕಥೆ ಬೇರೆಯೇ ಇದೆ. ಕಾನೂನುಬದ್ಧತೆಯ ವಿಷಯಕ್ಕೆ ಬಂದರೆ, ಈ ಪ್ರಕ್ರಿಯೆಯಲ್ಲಿ ಲೋಪದೋಷಗಳಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ ಮತ್ತು ನಿಮ್ಮ ಪ್ರಶ್ನೆಗಳಿಗೆ ಕಾರಣವಾದ ವಿಡಿಯೋಗಳಲ್ಲಿ ತೋರಿಸಿರುವಂತೆ, 600 ವರ್ಷ, 300 ವರ್ಷ ಅಥವಾ 200 ವರ್ಷ ಹಳೆಯದಾದ ಕಟ್ಟಡವನ್ನು ಕಾನೂನುಬಾಹಿರ ಒತ್ತುವರಿ ಎಂದು ನಿರ್ಧರಿಸುವವರು ಯಾರು?

ಇವುಗಳಲ್ಲಿ ಹಲವು ಆಸ್ತಿಗಳು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿವೆ; ಕೆಲವು ಶತಮಾನಗಳಷ್ಟು ಹಳೆಯದಾಗಿವೆ. ಕೇವಲ 50–70 ವರ್ಷಗಳಷ್ಟು ಹಳೆಯದಾದ ಸಂಸ್ಥೆಗಳು ನೂರಾರು ವರ್ಷಗಳಷ್ಟು ಹಳೆಯದಾದ ಕಟ್ಟಡಗಳ ಕಾನೂನುಬದ್ಧತೆಯನ್ನು ಹೇಗೆ ತಾನೇ ನಿರ್ಧರಿಸಲು ಸಾಧ್ಯ? ಇಡೀ ಪ್ರಕ್ರಿಯೆಯೇ ಕಾನೂನುಬಾಹಿರವಾಗಿದೆ ಮತ್ತು ಯಾವುದೇ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಪ್ರತಿಯೊಂದು ಆಸ್ತಿಗೂ ನೋಟಿಸ್‌ಗಳನ್ನು ನೀಡಲಾಗುತ್ತಿದೆ; ಉದಾಹರಣೆಗೆ, ಮೀರತ್‌ನಲ್ಲಿರುವ ಮಸೀದಿಗೆ ಪೊಲೀಸ್ ಠಾಣೆಯಿಂದ ನೋಟಿಸ್ ಬಂದಿದೆ. ಆದರೆ, ಆ ಪೊಲೀಸ್ ಠಾಣೆಯನ್ನು ನಿರ್ಮಿಸಿರುವುದೇ ಆ ಮಸೀದಿಯ ನಂತರ. ಆ ಪ್ರಕರಣದಲ್ಲಿ ಈಗಾಗಲೇ 1986 ರಲ್ಲೇ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸೋಲಾಗಿತ್ತು. ಆದರೂ, ಅವರು ಮಸೀದಿ ಕಾನೂನುಬಾಹಿರವಾಗಿದೆ ಮತ್ತು ಅದನ್ನು ತೆರವುಗೊಳಿಸಬೇಕು ಎಂದು ಪ್ರತಿಪಾದಿಸಿ ಮತ್ತೊಂದು ನೋಟಿಸ್ ನೀಡಿದ್ದಾರೆ. ಈ ವಾದಗಳಲ್ಲಿ ಯಾವುದೇ ಹುರುಳಿಲ್ಲ; ಇದು ಯಾವುದೇ ನೈಜ ಕಾನೂನು ಆಧಾರವಿಲ್ಲದ, ಕೇವಲ ಸರ್ಕಾರಿ ಮಟ್ಟದ ಒತ್ತಡ. ಈ ಯಾವುದೇ ಭೂಮಿಯೂ ಕಾನೂನುಬಾಹಿರವಲ್ಲ; ಇವು ಪುರಾತನ, ಮಾನ್ಯತೆ ಹೊಂದಿರುವ ಆಸ್ತಿಗಳಾಗಿವೆ.

ಪ್ರಶ್ನೆ 2: ಇತರ ಧರ್ಮಗಳ ಧಾರ್ಮಿಕ ಸ್ಥಳಗಳಾದ ದೇವಸ್ಥಾನಗಳು, ಚರ್ಚ್‌ಗಳು ಮತ್ತು ಬಸದಿಗಳು ಸಹ ಇಂತಹದ್ದೇ ವಿವಾದಿತ ಅಥವಾ ಅನಧಿಕೃತ ಜಾಗಗಳಲ್ಲಿ ನಿರ್ಮಾಣವಾಗಿಲ್ಲವೇ? ಈ ಬಗ್ಗೆ ನಿಮ್ಮ ಬಳಿ ಯಾವ ಡಾಟಾ ಇವೆ? ಅಂತಹ ಕಟ್ಟಡಗಳೂ ಸಹ ಸರ್ಕಾರದ ಇದೇ ರೀತಿಯ ಕ್ರಮವನ್ನು ಎದುರಿಸುತ್ತಿದ್ದಾವೆಯೇ?

ಉತ್ತರ: ನೋಡಿ, ಇದು ತುಂಬಾ ಸರಳವಾಗಿದೆ; ಈ ಕ್ರಮಗಳು ಗುಜರಾತ್ ಅಥವಾ ರಾಜಸ್ಥಾನದಲ್ಲಿ ನಡೆಯುತ್ತಿರಲಿ ಅಥವಾ ಭದ್ರತಾ ಪಡೆಗಳು “ಆಪರೇಷನ್ ಕ್ಲೀನ್” ನಡೆಸುತ್ತಿರುವ ರಾಜಸ್ಥಾನದ ಮೇಲೆ ನೀವು ಗಮನ ಹರಿಸಿದರೂ — ಪ್ರಶ್ನೆ ಇಷ್ಟೇ; ಕೇವಲ ಮಸೀದಿಗಳನ್ನು ಮಾತ್ರ ಸೂಕ್ಷ್ಮ ಅಥವಾ ಕಾನೂನುಬಾಹಿರ ಎಂದು ಪರಿಗಣಿಸಿ, ಧ್ವಂಸಗೊಳಿಸಲು ಗುರುತಿಸಲಾಗುತ್ತಿದೆಯೇ? ಇತರ ಧರ್ಮಗಳ ಧಾರ್ಮಿಕ ಸ್ಥಳಗಳು ನಿಮಗೆ ಕಾಣಿಸುತ್ತಿಲ್ಲವೇನೋ ಅನಿಸುತ್ತದೆ. ಆ ಡಾಟಾ ನಮ್ಮ ಬಳಿ ಇಲ್ಲ ಮತ್ತು ನಾವು ಆ ಡೇಟಾ ಮೇಲೆ ಕೆಲಸ ಮಾಡಲು ಬಯಸುವುದೂ ಇಲ್ಲ. ನಾವು ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮತ್ತು ಅವುಗಳೊಂದಿಗೆ ಜನರಿಗಿರುವ ಭಾವನಾತ್ಮಕ ನಂಟನ್ನು ಗೌರವಿಸುತ್ತೇವೆ ಹಾಗೂ ಯಾರ ವಿರುದ್ಧವೂ ಇಂತಹ ಕ್ರಮ ಜರುಗುವುದನ್ನು ನಾವು ಬಯಸುವುದಿಲ್ಲ. ಆದರೆ, ಕಾರ್ಯಾಚರಣೆಗಳನ್ನು ನಡೆಸುತ್ತಿರುವ ರೀತಿ ಮಾತ್ರ ಏಕಪಕ್ಷೀಯವಾಗಿದೆ. ನಿರ್ದಿಷ್ಟ ಸಮುದಾಯಗಳು ಮತ್ತು ನಿರ್ದಿಷ್ಟ ಧಾರ್ಮಿಕ ಸ್ಥಳಗಳ ವಿರುದ್ಧ ಮಾತ್ರ ಕಾನೂನನ್ನು ಆಯ್ದು ಅನ್ವಯಿಸಲಾಗುತ್ತಿದೆ. ನಮಗೆ ಬರುತ್ತಿರುವ ಡಾಟಾ ಪ್ರಕಾರ; ಉದಾಹರಣೆಗೆ, ರಾಜಸ್ಥಾನದಲ್ಲಿ 350 ಮಸೀದಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅದರಲ್ಲಿ ಯಾವುದೇ ದೇವಸ್ಥಾನಗಳನ್ನು ಸೇರಿಸಲಾಗಿಲ್ಲ. ಇದಕ್ಕೆ ತದ್ವಿರುದ್ಧವಾಗಿ

, ಉತ್ತರಾಖಂಡದಲ್ಲಿ ನಡೆದಿರುವ ಕ್ರಮಗಳಲ್ಲಿ ಯಾವುದೇ ಮಸೀದಿಗಳು ಒಳಗೊಂಡಿಲ್ಲ. ಬದಲಿಗೆ ಇತರ ವಿಷಯಗಳನ್ನು ಗುರಿಯಾಗಿಸಲಾಗಿದೆ. ತಳಮಟ್ಟದ ಮಾಹಿತಿಯು ಏನನ್ನು ಖಚಿತಪಡಿಸುತ್ತದೆ ಎಂದರೆ, ಮುಸ್ಲಿಮರ ಪವಿತ್ರ ಮತ್ತು ಆಧ್ಯಾತ್ಮಿಕ ಸ್ಥಳಗಳನ್ನು ಹೊರತುಪಡಿಸಿ ಈ ಕಾನೂನುಗಳ ಅಡಿಯಲ್ಲಿ ಬೇರೆ ಯಾವುದೇ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. 50, 100, 200 ಅಥವಾ 300 ವರ್ಷ ಹಳೆಯದಾದ ಪ್ರತಿಯೊಂದು ದೇವಸ್ಥಾನವೂ ಪರಿಪೂರ್ಣವಾದ ದಾಖಲೆಪತ್ರಗಳನ್ನು ಹೊಂದಿದ್ದು, ಧ್ವಂಸಗೊಳಿಸಲಾಗುತ್ತಿರುವ ಪ್ರತಿಯೊಂದು ಮಸೀದಿಯು ಯಾವುದೇ ದಾಖಲೆಗಳನ್ನು ಹೊಂದಿಲ್ಲ ಎಂಬುದು ನಂಬಲಸಾಧ್ಯವಾದದ್ದು. ತಳಮಟ್ಟದಲ್ಲಿ ಕಾಣಿಸುತ್ತಿರುವ ಈ ಮಾದರಿಯೇ ಹಾಸ್ಯಾಸ್ಪದವಾಗಿದೆ ಮತ್ತು ಇಡೀ ಪ್ರಕ್ರಿಯೆಯು ಸರಿಯಾಗಿಲ್ಲ ಎಂಬುದನ್ನು ಇದುವೇ ಎತ್ತಿ ತೋರಿಸುತ್ತದೆ.

ಪ್ರಶ್ನೆ 3: ‘ಬುಲ್ಡೋಜರ್ ನ್ಯಾಯ’ದ ವಿರುದ್ಧ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ನ್ಯಾಯಾಲಯದ ಎಚ್ಚರಿಕೆಗಳಿಗೂ ಮತ್ತು ತಳಮಟ್ಟದಲ್ಲಿ ನಾವು ನೋಡುತ್ತಿರುವ ಆಕ್ರಮಣಕಾರಿ ಕಾರ್ಯಾಚರಣೆಗಳಿಗೂ ನಡುವೆ ಇಷ್ಟೊಂದು ದೊಡ್ಡ ಕಂದಕ ಇರಲು ಕಾರಣವೇನು?

ಉತ್ತರ: ಈ ಧಾರ್ಮಿಕ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವಾಗ, ಎಲ್ಲಕ್ಕಿಂತ ದೊಡ್ಡ ಪ್ರಶ್ನೆ ಮೂಡುವುದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಆಗಿದೆ. ಯಾರದ್ದೋ ಮನೆ, ಅಂಗಡಿ, ವಾಣಿಜ್ಯ ಮಳಿಗೆಗಳ ಮೇಲೆ ಅಥವಾ ಈಗ ಎರಡನೇ ಹಂತದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ ಬಳಸಲಾಗುತ್ತಿರುವ ಈ “ಬುಲ್ಡೋಜರ್ ನ್ಯಾಯ” ಎಂದು ಕರೆಯಲ್ಪಡುವ ಕ್ರಮವು ಒಂದು ಗಂಭೀರವಾದ ಕಳಕಳಿಯನ್ನು ಹುಟ್ಟುಹಾಕುತ್ತದೆ. ಕಾರ್ಯಾಂಗಕ್ಕೆ ಕಾನೂನು ವ್ಯವಸ್ಥೆ ಅಥವಾ ನ್ಯಾಯಾಂಗದ ಅಗತ್ಯವೇ ಇಲ್ಲದಷ್ಟು ಅಧಿಕಾರವನ್ನು ನೀಡಲಾಗಿದೆಯೇ? ನ್ಯಾಯಾಂಗವನ್ನು ಸಂಪೂರ್ಣವಾಗಿ ಬದಿಗೊತ್ತಬೇಕೇ? ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನೇನೋ ಹೊರಡಿಸಿತ್ತು, ಆದರೆ ಹಲವು ಕಡೆಗಳಲ್ಲಿ ಆ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಲಾಯಿತು. ಉದಾಹರಣೆಗೆ, ರಾಜಸ್ಥಾನದಲ್ಲಿ ಮಸೀದಿಯೊಂದರ ವಿಚಾರಣೆಯು 10 ರಂದು ನಿಗದಿಯಾಗಿತ್ತು, ಆದರೂ ಆ ಮಸೀದಿಯನ್ನು 8 ರಂದೇ ಧ್ವಂಸಗೊಳಿಸಲಾಯಿತು. ಆ ನ್ಯಾಯಮಂಡಳಿಯು (ಟ್ರಿಬ್ಯುನಲ್) ನಂತರ ತೀರ್ಪು ನೀಡಿತೇ ಎಂಬುದು ಬೇರೆ ವಿಷಯ; ಮುಖ್ಯವಾದ ವಿಷಯವೇನೆಂದರೆ ಅಧಿಕಾರಿಗಳು 10 ನೇ ತಾರೀಖಿನವರೆಗೆ ಕಾಯಲಿಲ್ಲ. ನ್ಯಾಯಾಲಯಗಳು ರಜೆಯಲ್ಲಿದ್ದ ಕಾರಣದಿಂದಾಗಿಯೂ ಈ ನಿರಂತರ ಕ್ರಮಗಳು ಮುಂದುವರಿದವು. ಆದರೆ,

ನ್ಯಾಯಾಲಯಗಳು ಪುನಃ ತೆರೆದಾಗ ನ್ಯಾಯಾಂಗ ಪರಾಮರ್ಶೆಯ (ಜ್ಯುಡಿಷಿಯಲ್ ರಿವ್ಯೂ) ಯಾವುದೇ ಭಯ ಅವರಿಗಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ನ್ಯಾಯಮೂರ್ತಿ ಗವಾಯಿ ಅವರ ತೀರ್ಪಿನ ಮಾರ್ಗಸೂಚಿಗಳನ್ನು ಎಲ್ಲೂ ಪಾಲಿಸಲಿಲ್ಲ. ಆ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ ನಂತರ, ಅನೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ದಾಖಲಿಸಲಾಯಿತು ಮತ್ತು ಅವುಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ವರ್ಗಾಯಿಸಲಾಯಿತು. ಆದರೆ ದುರದೃಷ್ಟವಶಾತ್, ಒಂದು ಅಥವಾ ಎರಡು ಪ್ರಕರಣಗಳನ್ನು ಹೊರತುಪಡಿಸಿ, ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸ್ವೀಕರಿಸಲಿಲ್ಲ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಅಧಿಕಾರಿಗಳು ಅಥವಾ ಸರ್ಕಾರಗಳ ವಿರುದ್ಧ ತೀರ್ಪುಗಳನ್ನು ನೀಡಲಿಲ್ಲ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ನಂತರವೂ ಸರ್ಕಾರಗಳು ಯಾವುದೇ ನಿಯಂತ್ರಣವಿಲ್ಲದೆ ಉಳಿದಿವೆ ಮತ್ತು ಕಾರ್ಯಾಂಗದ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಇಶಾರೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬರುತ್ತಿದ್ದಾರೆ. ಇದು ಕೇವಲ ಮಾರ್ಗಸೂಚಿಗಳ ವೈಫಲ್ಯ ಮಾತ್ರವಲ್ಲದೆ, ಇಡೀ ಭಾರತೀಯ ನ್ಯಾಯಾಂಗ ವ್ಯವಸ್ಥೆಯೇ ವಿಫಲವಾದಂತೆ ತೋರುತ್ತಿದೆ.

ಪ್ರಶ್ನೆ 4: ಈ ರೀತಿಯ ಬುಲ್ಡೋಜರ್ ಕ್ರಮಗಳು ಉತ್ತರ ಭಾರತದಲ್ಲೇ ಹೆಚ್ಚು ನಡೆಯುವಂತೆ ಕಾಣುತ್ತಿವೆ. ದಕ್ಷಿಣ ಭಾರತದಲ್ಲಿ ಇಂತಹ ಕಾರ್ಯಾಚರಣೆಗಳು ಬಹುತೇಕ ಇಲ್ಲವೇ ಇಲ್ಲ ಎನ್ನಬಹುದು. ನಿಮ್ಮ ವಿಶ್ಲೇಷಣೆಯ ಪ್ರಕಾರ, ಈ ಪ್ರಾದೇಶಿಕ ತಾರತಮ್ಯಕ್ಕೆ ಭೌಗೋಳಿಕ ರಾಜಕೀಯ ಕಾರಣವಾಗಿದೆಯೇ?

ಉತ್ತರ: ನೋಡಿ, ಇದು ಉತ್ತರ ಅಥವಾ ದಕ್ಷಿಣದ ವಿಷಯವಲ್ಲ. ನೀವು ಈ ಪ್ರಶ್ನೆಗಳನ್ನು ಕರ್ನಾಟಕದಿಂದ ಕೇಳುತ್ತಿದ್ದೀರಿ. ಕಳೆದ ಬಾರಿ ಅಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು, ಆದರೆ ಈ ಬಾರಿ ಇಲ್ಲ. ಒಂದು ವೇಳೆ ಅವರು ಈಗ ಅಧಿಕಾರದಲ್ಲಿದ್ದಿದ್ದರೆ, ಬಹುಶಃ ನೀವು ಅಲ್ಲೂ ಬುಲ್ಡೋಜರ್ ಕ್ರಮಗಳನ್ನು ಕಾಣಬಹುದಿತ್ತು. ಹಿಮಾಚಲದಲ್ಲಿ ಯಾವುದೇ ಬುಲ್ಡೋಜರ್ ಕ್ರಮ ನಡೆಯುತ್ತಿಲ್ಲ ಏಕೆಂದರೆ ಅಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ. ಪಂಜಾಬ್‌ನಲ್ಲೂ ಯಾವುದೇ ಬುಲ್ಡೋಜರ್ ಕ್ರಮ ನಡೆಯುತ್ತಿಲ್ಲ ಏಕೆಂದರೆ ಅಲ್ಲೂ ಸಹ ಬಿಜೆಪಿ ಅಧಿಕಾರದಲ್ಲಿಲ್ಲ. ಪಂಜಾಬ್ ಮತ್ತು ಹಿಮಾಚಲ ಎರಡೂ ಉತ್ತರ ಭಾರತದ ರಾಜ್ಯಗಳೇ ಆಗಿವೆ. ಎರಡು ತಿಂಗಳ ಹಿಂದಿನವರೆಗೂ ಪಶ್ಚಿಮ ಬಂಗಾಳದಲ್ಲಿ ಯಾವುದೇ ಬುಲ್ಡೋಜರ್ ಕ್ರಮ ಇರಲಿಲ್ಲ; ಈಗ ಅಲ್ಲಿ ಅದು ಪ್ರಾರಂಭವಾಗಿದೆ. ಹಾಗಾಗಿ ಇದು ಉತ್ತರ ಮತ್ತು ದಕ್ಷಿಣದ ನಡುವಿನ ವಿಷಯವಲ್ಲ. ಇದು ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ನಡುವಿನ ವಿಚಾರವಾಗಿದೆ. ಅದೊಂದೇ ವ್ಯತ್ಯಾಸ. ಸ್ಪಷ್ಟವಾಗಿ ಹೇಳಬೇಕೆಂದರೆ,

ಬುಲ್ಡೋಜರ್ ಕಾರ್ಯಾಚರಣೆಗಳು ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತಿವೆ. ದೆಹಲಿಯನ್ನೇ ತೆಗೆದುಕೊಳ್ಳಿ: ಮುಂಚೆ ಬುಲ್ಡೋಜರ್‌ಗಳನ್ನು ಬಳಸುತ್ತಿರಲಿಲ್ಲ, ಆದರೆ ಈಗ ಬಳಸಲಾಗುತ್ತಿದೆ. ಕೆಲವೊಮ್ಮೆ ರಸ್ತೆ ಅಗಲೀಕರಣ ಯೋಜನೆಗಳ ಹೆಸರಿನಲ್ಲಿ ಬಳಸಲಾಗುತ್ತಿದೆ. ಆ ಕ್ರಮಗಳಲ್ಲಿ ಮುಸ್ಲಿಮರನ್ನು ಮೊದಲ ಬಲಿ ಮಾಡಲಾಗುತ್ತಿದೆ ಮತ್ತು ದ್ವೇಷದಿಂದ ಗುರಿಮಾಡಲಾಗುತ್ತದೆ. ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಕಟ್ಟಡಗಳನ್ನು ಮತ್ತು ಉತ್ತಮ ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ವರ್ಗಾಯಿಸಲಾಗುತ್ತಿದೆ; ಬಡವರಿಂದ ಭೂಮಿಯನ್ನು ಕಸಿದುಕೊಳ್ಳಲು ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ. ಈ ವ್ಯತ್ಯಾಸವು ಒಂದು ರಾಜ್ಯವನ್ನು ಯಾವ ಪಕ್ಷ ಆಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಇದಕ್ಕೆ ಯಾವುದೇ ಸ್ಪಷ್ಟವಾದ ಉತ್ತರ-ದಕ್ಷಿಣದ ಗಡಿ ಇಲ್ಲ.

ಪ್ರಶ್ನೆ 5: ಈ ಬುಲ್ಡೋಜರ್ ಕ್ರಮಗಳು ಕೇವಲ ಇಟ್ಟಿಗೆ ಮತ್ತು ಗಾರೆಯ ಕಟ್ಟಡಗಳನ್ನಷ್ಟೇ ಧ್ವಂಸಗೊಳಿಸುತ್ತಿಲ್ಲ. ಬದಲಿಗೆ ಕೋಮು ಸೌಹಾರ್ದತೆ ಮತ್ತು ಸಾಂವಿಧಾನಿಕ ಮೌಲ್ಯಗಳ ರಚನಾತ್ಮಕ ಚೌಕಟ್ಟನ್ನೇ ಧ್ವಂಸಗೊಳಿಸುತ್ತಿದೆ ಎಂದು ತಜ್ಞರು ವಾದಿಸುತ್ತಾರೆ. ನಿಮ್ಮ ಪ್ರಕಾರ, ಸರ್ಕಾರದ ಈ ಆಕ್ರಮಣಕಾರಿ ನಿಲುವಿನಿಂದಾಗಿ ಪೀಡಿತ ಸಮುದಾಯದ ಮೇಲಾಗುತ್ತಿರುವ ದೀರ್ಘಕಾಲೀನ ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳೇನು?

ಉತ್ತರ: ಇದೊಂದು ಬಹಿರಂಗ ರಹಸ್ಯವಾಗಿದೆ. ಈ ವಿಷಯ ಅರ್ಥಮಾಡಿಕೊಳ್ಳಲು ನಮಗೆ ಯಾವುದೇ ತಜ್ಞರ ಅಗತ್ಯವಿಲ್ಲ. ಒಂದು ಧಾರ್ಮಿಕ ಸ್ಥಳವನ್ನು ಧ್ವಂಸಗೊಳಿಸಿದಾಗ, ಅಲ್ಲಿ ಕೇವಲ ಒಂದು ಕಟ್ಟಡವಷ್ಟೇ ನಾಶವಾಗುವುದಿಲ್ಲ; ಜನರ ಭಾವನೆಗಳು ಅದರೊಂದಿಗೆ ಬೆಸೆದುಕೊಂಡಿರುತ್ತವೆ. ಆ ಕಟ್ಟಡವನ್ನು ಕೆಡವಿದಾಗ, ಆ ಭಾವನೆಗಳು ಚೂರುಚೂರಾಗುತ್ತವೆ. ಮಸೀದಿಯ ಪಕ್ಕದಲ್ಲೇ ಒಂದು ದೇವಸ್ಥಾನವಿದ್ದಾಗ, ದೇವಸ್ಥಾನವನ್ನು ಹಾಗೇ ಬಿಟ್ಟು ಮಸೀದಿಯನ್ನು ಮಾತ್ರ ಧ್ವಂಸಗೊಳಿಸುವುದನ್ನು ಜನರು ಗಮನಿಸುತ್ತಾರೆ. ಖಂಡಿತವಾಗಿಯೂ ಇದು ನೋವನ್ನು ಉಂಟುಮಾಡುತ್ತದೆ. ಇನ್ನೊಂದು ವಿಷಯವೆಂದರೆ ಸೂಫಿ ದರ್ಗಾಗಳ ಬಗ್ಗೆ; ಅವುಗಳನ್ನು ಯಾವಾಗಲೂ ಜನರನ್ನು ಒಗ್ಗಟ್ಟಾಗಿಸುವ ಕೇಂದ್ರಗಳಾಗಿ ನೋಡಲಾಗುತಿತ್ತು. ಮಸೀದಿಗಳಿಗೆ ಸಾಮಾನ್ಯವಾಗಿ ಮುಖ್ಯವಾಗಿ ಒಂದು ಧರ್ಮದ ಜನರು ಮಾತ್ರ ಭೇಟಿ ನೀಡಿದರೆ, ಸೂಫಿ ದರ್ಗಾಗಳಿಗೆ ಭಿನ್ನ ಸಮುದಾಯಗಳ ಜನರು ಭೇಟಿ ನೀಡುತ್ತಾರೆ. ಅವುಗಳು ಗಂಗಾ-ಜಮುನಿ  ಸೌಹಾರ್ದ ಸಂಸ್ಕೃತಿಯ ಸಂಕೇತವಾಗಿವೆ. ಸೂಫಿ ದರ್ಗಾಗಳ ಮೇಲಿನ ದಾಳಿಗಳು ಮತ್ತು ಸೂಫಿ ಶ್ರೇಷ್ಠರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನಗಳು,

ಇದು ಕೇವಲ ಬುಲ್ಡೋಜರ್‌ಗಳಿಗೆ ಸಂಬಂಧಿಸಿದ ವಿಷಯವಲ್ಲ ಎಂಬುದನ್ನು ತೋರಿಸುತ್ತವೆ. ಐದೋ ಹತ್ತು ವರ್ಷಗಳ ಹಿಂದಕ್ಕೆ ಹೋಲಿಸಿದರೆ, ಹಝ್ರತ್ ಮೊಯಿನುದ್ದೀನ್ ಚಿಸ್ತಿ ಅವರ ಬಗೆಗಿನ ಚರ್ಚೆಗಳು ಹೇಗೆ ಬದಲಾಗಿವೆ ಮತ್ತು ಬಲಪಂಥೀಯರು ಆ ಚರ್ಚೆಯನ್ನು ಈಗ ಹೇಗೆ ಬಿಂಬಿಸುತ್ತಿದ್ದಾರೆ ಎಂಬುದನ್ನು ನೋಡಿರಿ. ಉತ್ತರ ಭಾರತದಲ್ಲಿ, ಬಹರೈಚ್‌ನ ಮಸೂದ್ ಸಾಲಾರ್ ಗಾಝಿ ಅವರಂತಹ ವ್ಯಕ್ತಿಗಳ ಮೇಳಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಆದರೆ, ಅವರ ಹೆಸರನ್ನು ಕೆಡಿಸಲು ಒಂದು ಅಭಿಯಾನವನ್ನು ಪ್ರಾರಂಭಿಸುವವರೆಗೆ ಮಾತ್ರ ಅದು ಮುಂದುವರಿಯಿತು. ದರ್ಗಾಗಳ ಮೇಲಿನ ಈ ದಾಳಿಗಳು ಕೇವಲ ಒಂದು ಸಮುದಾಯವನ್ನು ಗುರಿ ಮಾಡುವುದು ಮಾತ್ರವಲ್ಲದೆ, ಸಮುದಾಯಗಳ ನಡುವಿನ ಸಂಬಂಧಗಳನ್ನು ನಾಶಪಡಿಸುವುದೇ ಇದರ ಉದ್ದೇಶ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಗುರಿಯಾಗುತ್ತಿರುವ ಸಮುದಾಯವು ತೀವ್ರ ಅಭದ್ರತೆ ಮತ್ತು ನೋವನ್ನು ಅನುಭವಿಸುತ್ತಿದೆ. ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ ಮತ್ತು ಇತರ ಕಡೆಗಳಲ್ಲಿ ಮುಸ್ಲಿಮರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಈ ನೋವಿನಲ್ಲಿ ಸಿಲುಕಿದ್ದಾರೆ.

ಪ್ರಶ್ನೆ 6: ಕೇವಲ ಪತ್ರಿಕಾಗೋಷ್ಠಿಗಳನ್ನು ನಡೆಸುವುದರಿಂದ ಯಾವುದೇ ರಚನಾತ್ಮಕ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ವಿಮರ್ಶಕರು ವಾದಿಸಬಹುದು. ಸಾರ್ವಜನಿಕವಾಗಿ ಧ್ವನಿ ಎತ್ತುವುದನ್ನು ಹೊರತುಪಡಿಸಿ, ಆಡಳಿತ ವ್ಯವಸ್ಥೆಯ ಈ ಅಕ್ರಮಗಳ ವಿರುದ್ಧ ಎಪಿಸಿಆರ್ ಯಾವ ರೀತಿಯ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳುತ್ತಿದೆ?

ಉತ್ತರ: ನಾವು ಪ್ರಸ್ತುತ ತೀವ್ರ ಬಿಕ್ಕಟ್ಟು ಮತ್ತು ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಯಾರು ಏನು ಹೇಳುತ್ತಾರೆ ಮತ್ತು ಯಾರು ಏನು ಹೇಳುವುದಿಲ್ಲ ಎಂಬುದು ನಮ್ಮ ಮುಖ್ಯ ಕಳಕಳಿಯಲ್ಲ. ಕೆಲಸದ ವಿಷಯಕ್ಕೆ ಬಂದರೆ, ಕೇವಲ ಪತ್ರಿಕಾಗೋಷ್ಠಿಯ ತುಣುಕುಗಳನ್ನು ಅಥವಾ ಸಾರ್ವಜನಿಕ ವಿಡಿಯೋಗಳನ್ನು ನೋಡಿದ ಜನರು ತಮಗೆ ಇಷ್ಟಬಂದ ಅಭಿಪ್ರಾಯವನ್ನು ರೂಪಿಸಿಕೊಳ್ಳಬಹುದು. ಆ ಅಭಿಪ್ರಾಯಗಳಿಂದ ನಮಗೇನೂ ಅಷ್ಟಾಗಿ ವ್ಯತ್ಯಾಸವಾಗುವುದಿಲ್ಲ. ಹೋರಾಟ ಅಥವಾ ವಕಾಲತ್ತು (ಅಡ್ವೊಕಸಿ) ಎಂಬುದು ಅನೇಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು: ಪತ್ರಿಕಾಗೋಷ್ಠಿಗಳು, ಸೆಮಿನಾರ್‌ಗಳು, ವಿಚಾರಗೋಷ್ಠಿಗಳು, ಬುಲ್ಡೋಜರ್ ನ್ಯಾಯದ ಕುರಿತಾದ ಕಾರ್ಯಕ್ರಮಗಳು – ನಾವು ಇವುಗಳಲ್ಲಿ ಹಲವನ್ನು ನಡೆಸಿದ್ದೇವೆ. ನಾವು ಎಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂಬುದು ನನಗೇ ನೆನಪಿಲ್ಲ. ಆದರೆ, ಎಲ್ಲಕ್ಕಿಂತ ಮುಖ್ಯವಾದುದು ತಳಮಟ್ಟಕ್ಕೆ ಹೋಗುವುದು, ದೌರ್ಜನ್ಯಗಳ ದಾಖಲೀಕರಣ ಮಾಡುವುದು, ಸತ್ಯಶೋಧನೆಯ (ಫ್ಯಾಕ್ಟ್-ಫೈಂಡಿಂಗ್) ಕೆಲಸ ಮಾಡುವುದು, ಪ್ರವೇಶವನ್ನು ನಿರ್ಬಂಧಿಸಿದಾಗಲೂ ನಗರಗಳೊಳಗೆ ಹೋಗಿ ಕೆಲಸ ಮಾಡುವುದು ಮತ್ತು ಸ್ಥಳೀಯರೊಂದಿಗೆ ಸಮನ್ವಯ ಸಾಧಿಸುವುದು. ನಾನು ಮೊದಲೇ ಹೇಳಿರುವಂತೆ, ಅನೇಕ ಸ್ಥಳಗಳಲ್ಲಿ ನಾವು ಈಗಾಗಲೇ ನ್ಯಾಯಾಲಯಗಳಿಂದ ತಡೆಯಾಜ್ಞೆಗಳನ್ನು ಪಡೆದಿದ್ದೆವು. ಆದರೂ,

ಆ ತಡೆಯಾಜ್ಞೆಗಳ ಹೊರತಾಗಿಯೂ ಧ್ವಂಸ ಕಾರ್ಯಗಳು ನಡೆದವು ಮತ್ತು ರಜಾಕಾಲದ ಪೀಠಗಳ (ವೆಕೇಷನ್ ಬೆಂಚ್‌ಗಳು) ಸಾಮರ್ಥ್ಯ ಸೀಮಿತವಾಗಿದ್ದರಿಂದ ಜನರು ಆ ಧ್ವಂಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪ್ರಶ್ನಿಸಲು ಸಾಧ್ಯವಾಗಲಿಲ್ಲ. ನಾವು ಮಾಡುತ್ತಿರುವ ಅನೇಕ ಕೆಲಸಗಳಲ್ಲಿ ಇವು ಕೆಲವು; ಸದ್ಯ ನಾವು ಸರಿಸುಮಾರು 2,700 ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದೇವೆ. ಉದಾಹರಣೆಗೆ, ಬನಾರಸ್‌ನ ಧ್ವಂಸ ಕಾರ್ಯಗಳಿಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳನ್ನು ನಾವೇ ನಿರ್ವಹಿಸುತ್ತಿದ್ದೆವು. ನಾನು ಇಂದು(ಜುಲೈ 2) ನಿಮ್ಮೊಂದಿಗೆ ಮಾತನಾಡುತ್ತಿರುವ, ಕೇವಲ ಒಂದು ದಿನದ ಮುಂಚೆಯಷ್ಟೇ ಮಧ್ಯಪ್ರದೇಶದಲ್ಲಿ 35 ಮನೆಗಳನ್ನು ಧ್ವಂಸಗೊಳಿಸಲು ನೋಟಿಸ್‌ಗಳನ್ನು ನೀಡಲಾಗಿತ್ತು; ನ್ಯಾಯಾಲಯಗಳು ಮುಚ್ಚಿದ್ದಾಗಲೂ ನಾವು ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅದು ನಮ್ಮ ಕಾನೂನು ಹೋರಾಟದ ಒಂದು ಭಾಗ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಆ ನಿರ್ದೇಶನಗಳು ಬರಲು ಇಬ್ಬರ ಅರ್ಜಿಗಳು ಕಾರಣವಾಗಿದ್ದವು: ಒಬ್ಬರು ಉದಯಪುರದ ವ್ಯಕ್ತಿ, ಅವರ ಬಾಡಿಗೆದಾರನ ಮಗುವಿಗೆ ಸಂಬಂಧಿಸಿದಂತೆ ಅವರ ಮನೆಯನ್ನು ಧ್ವಂಸಗೊಳಿಸಲಾಗಿತ್ತು ಮತ್ತು ಇನ್ನೊಬ್ಬರು ರತ್ಲಾಮ್‌ನ ಜಾವ್ರಾದ ಅವಿಭಕ್ತ ಕುಟುಂಬದ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು. ಆ ವಿಷಯಗಳನ್ನು ಸುಪ್ರೀಂ ಕೋರ್ಟ್‌ಗೆ ಯಾರು ಕೊಂಡೊಯ್ದರು ಮತ್ತು ಯಾರು ಅದನ್ನು ಹಿಂಬಾಲಿಸಿದರು ಎಂಬುದು ಒಂದು ದೀರ್ಘವಾದ ಕಥೆ. ಯಾರು ಏನು ಮಾಡಿದರು ಮತ್ತು ಯಾರಿಗೆ ಶ್ರೇಯಸ್ಸು ಸಿಗಬೇಕು ಎಂದು ವಾದಿಸುವ ಬದಲು, ಈ ಇಡೀ ಬಿಕ್ಕಟ್ಟಿನ ಸಮಯದಲ್ಲಿ ನಾವು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ನಾವು ಚರ್ಚಿಸಬೇಕು; ನಾವು ಕ್ರೆಡಿಟ್ ಪಡೆಯುವ ಹಂತವನ್ನು ದಾಟಿ ಬಹುದೂರ ಬಂದಿದ್ದೇವೆ, ಆದ್ದರಿಂದ ಅದರ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಅಗತ್ಯವಿದೆ ಎಂದು ನಾನು ಭಾವಿಸುವುದಿಲ್ಲ.

ಪ್ರಶ್ನೆ 7: ನಿಮ್ಮ ಸಂಸ್ಥೆಯು ಕೇವಲ ನ್ಯಾಯಾಲಯದ ಔಪಚಾರಿಕ ಕಾನೂನು ಹೋರಾಟಕ್ಕಷ್ಟೇ ಸೀಮಿತವಾಗಿದೆಯೇ ಅಥವಾ ನಿಮ್ಮ ಕಾರ್ಯವ್ಯಾಪ್ತಿಯು ತಳಮಟ್ಟದ ಸಾಮಾಜಿಕ–ಕಾನೂನು ಮಧ್ಯಸ್ಥಿಕೆಗಳಿಗೂ ವಿಸ್ತರಿಸಿದೆಯೇ?  

ಉತ್ತರ: ನೋಡಿ, ನಾವು ಈಗಾಗಲೇ ತೆಗೆದುಕೊಳ್ಳದೇ ಇರುವ ಯಾವುದೇ ಹೆಜ್ಜೆಯೂ ಬಾಕಿ ಉಳಿದಿಲ್ಲ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗವಿರುತ್ತದೆ ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ಒಂದು ಕಾನೂನು ಚೌಕಟ್ಟು ಇರುತ್ತದೆ. ಕಾರ್ಯಾಂಗದ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದಾಗ, ನಾವು ಕಾನೂನು ವ್ಯವಸ್ಥೆಯ ಕಡೆಗೆ ಮುಖ ಮಾಡುತ್ತೇವೆ. ನಾನು ನಿಮಗೆ ಮೊದಲೇ ಹೇಳಿದಂತೆ, ಬುಲ್ಡೋಜರ್ ಕ್ರಮಗಳು ತುತ್ತತುದಿಗೆ ತಲುಪಿದಾಗ ನಾವು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೆವು. ನಾವು ಆ ಇಡೀ ಪ್ರಕ್ರಿಯೆಯನ್ನು ಅನುಸರಿಸಿದೆವು, ಮಾರ್ಗಸೂಚಿಗಳನ್ನು ಪಡೆದುಕೊಂಡೆವು ಮತ್ತು ನಾವು ಅದೇ ಪ್ರಕ್ರಿಯೆಯನ್ನು ಮತ್ತೊಮ್ಮೆ ಪ್ರಾರಂಭಿಸುತ್ತೇವೆ: ನಾವು ನ್ಯಾಯಾಲಯಗಳನ್ನು ಸಂಪರ್ಕಿಸುತ್ತೇವೆ, ಅರ್ಜಿಗಳನ್ನು ದಾಖಲಿಸುತ್ತೇವೆ, ಕ್ರಮ ಕೈಗೊಳ್ಳಲಿ ಅಥವಾ ಬಿಡಲಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸುತ್ತೇವೆ ಮತ್ತು ಇದರೊಂದಿಗೆ ಏಕಕಾಲದಲ್ಲಿ ಸಾರ್ವಜನಿಕ ಒತ್ತಡವನ್ನು ನಿರ್ಮಿಸಲು ಕೆಲಸ ಮಾಡುತ್ತೇವೆ. ಆ ಹೋರಾಟದ ಪ್ರಯತ್ನದ ಅಡಿಯಲ್ಲಿ ನಾವು ಸಮ್ಮೇಳನಗಳು, ಸೆಮಿನಾರ್‌ಗಳು, ವಿಚಾರಗೋಷ್ಠಿಗಳನ್ನು ನಡೆಸುತ್ತೇವೆ ಮತ್ತು ಅಗತ್ಯವಿದ್ದರೆ ಬೀದಿಗಿಳಿದು ಹೋರಾಟ (ಸ್ಟ್ರೀಟ್ ಆಕ್ಟಿವಿಸಂ) ಮಾಡುತ್ತೇವೆ. ನಮ್ಮ ಮುಂದೆ ಬರುವ ಯಾವುದೇ ಸಂವಿಧಾನಾತ್ಮಕ ಮಾರ್ಗಗಳನ್ನಾದರೂ ನಾವು ಅನುಸರಿಸುತ್ತೇವೆ ಮತ್ತು ಎಲ್ಲಿ ಅಗತ್ಯವಿದೆಯೋ ಅಲ್ಲಿ ವ್ಯಾಪಕವಾದ ಸಮಾಲೋಚನೆಗಳನ್ನು ನಡೆಸುತ್ತೇವೆ.

ಪ್ರಶ್ನೆ 8: ಆಡಳಿತ ವ್ಯವಸ್ಥೆಯ ಈ ಪ್ರವೃತ್ತಿಯನ್ನು ತಡೆಯಲು ಎಪಿಸಿಆರ್ ನಡೆಸುವ ನ್ಯಾಯಾಲಯದ ಔಪಚಾರಿಕ ಕಾನೂನು ಹೋರಾಟವೊಂದೇ ಸಾಕೇ, ಅಥವಾ ಜಾತ್ಯತೀತ ಸಂಸ್ಥೆಗಳು, ವಿವಿಧ ಧರ್ಮಗಳ ಮುಖಂಡರು ಮತ್ತು ಸಾರ್ವಜನಿಕ ನಾಗರಿಕ ಚಳವಳಿಗಳೊಂದಿಗೆ ಸೇರಿ ಒಂದು ವಿಶಾಲವಾದ ಒಕ್ಕೂಟವನ್ನು ರಚಿಸಬೇಕಾದ ಅಗತ್ಯವಿರುವ ಹಂತವನ್ನು ಇದು ತಲುಪಿದೆಯೇ? 

ಉತ್ತರ: ನಾವು ಎಲ್ಲಾ ಮಾನವ ಹಕ್ಕುಗಳ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮುಂಬೈನಲ್ಲಿ ಕ್ರಮ ಜರುಗಿದಾಗ, ನಾವು ಪಿಯುಸಿಎಲ್ (PUCL) ಜೊತೆಗೂಡಿ ಇಡೀ ಪ್ರಕ್ರಿಯೆಯನ್ನು ನಡೆಸಿದೆವು. ರಾಜಸ್ಥಾನದಲ್ಲೂ ನಾವು ಪಿಯುಸಿಎಲ್ ಜೊತೆಗೆ ಸಕ್ರಿಯರಾಗಿದ್ದೇವೆ; ಕೆಲವು ಸ್ಥಳಗಳಲ್ಲಿ ನಾವು ಪಿಯುಡಿಆರ್ (PUDR) ಜೊತೆಗೆ ಸಕ್ರಿಯರಾಗಿದ್ದೇವೆ ಮತ್ತು ಪಶ್ಚಿಮ ಬಂಗಾಳದಲ್ಲಿ ನಾವು ಬಂದಿ ಮುಕ್ತಿ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಮುಂಚೆ, ನಾವು ಕಾರವಾನ್-ಎ-ಮೊಹಬ್ಬತ್ ಜೊತೆಗೂಡಿ ಬುಲ್ಡೋಜರ್ ಪ್ರಕರಣಗಳ ಮೇಲೆ ಒಟ್ಟಾಗಿ ಕೆಲಸ ಮಾಡಿದ್ದೆವು. ನಾವು ಜೊತೆಗೆ ಕೆಲಸ ಮಾಡದ ಯಾವುದೇ ಪ್ರಮುಖ ಸಂಸ್ಥೆಯಾಗಲಿ ಅಥವಾ ನಾವು ಭಾಗಿಯಾಗದ ಯಾವುದೇ ವಿಶಾಲವಾದ ಒಕ್ಕೂಟ ಅಥವಾ ಮೈತ್ರಿಯಾಗಲಿ ತಳಮಟ್ಟದಲ್ಲಿ ಇಲ್ಲ ಎಂಬುದು ನಮ್ಮ ಕೆಲಸವನ್ನು ಆಳವಾಗಿ ಗಮನಿಸಿದರೆ ನಿಮಗೆ ತಿಳಿಯುತ್ತದೆ.

ನಾವು ಐಎಂಸಿಆರ್ (IMCR) ಜೊತೆಗೂಡಿ ಅನೇಕ ಸಮ್ಮೇಳನಗಳನ್ನು ನಡೆಸಿದ್ದೇವೆ ಮತ್ತು ವಿವಿಧ ಇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಎಪಿಸಿಆರ್ (APCR) ಎಂಬುದು ಒಂದು ಕಾನೂನು ಹೋರಾಟದ (ಲೀಗಲ್-ಅಡ್ವೊಕಸಿ) ಸಂಸ್ಥೆಯಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಜನಸಾಮಾನ್ಯರ ಚಳವಳಿಗಳನ್ನು ನಡೆಸುವುದು ನಮ್ಮ ಪಾತ್ರವಲ್ಲ; ಸಾಮೂಹಿಕ ಚಳವಳಿಗಳು ಸಾರ್ವಜನಿಕ ಸಂಘಟನೆಗಳ ಕೆಲಸವಾಗಿವೆ. ಆ ಸಂಘಟನೆಗಳು ಈ ವಿಷಯದ ಮೇಲೆ ಸಾಮೂಹಿಕ ಚಳವಳಿಯನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ನಮ್ಮ ಕೆಲಸವೇನಿದ್ದರೂ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು, ನ್ಯಾಯಾಲಯದ ಕೊಠಡಿಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಪಡೆಯುವುದು, ಪತ್ರಿಕಾಗೋಷ್ಠಿಗಳು ಮತ್ತು ಸೆಮಿನಾರ್‌ಗಳ ಮೂಲಕ ಈ ವಿಷಯವನ್ನು ಎತ್ತುವುದು, ಸತ್ಯಶೋಧನೆ ನಡೆಸುವುದು ಮತ್ತು ತರಬೇತಿ ಹಾಗೂ ಕಾರ್ಯಾಗಾರಗಳ ಮೂಲಕ ಜನರನ್ನು ಸಿದ್ಧಪಡಿಸುವುದಾಗಿದೆ. ನಾವು ವಕೀಲರಲ್ಲಿ ಕಾನೂನು ಸಾಮರ್ಥ್ಯವನ್ನೂ ಸಹ ಬೆಳೆಸುತ್ತೇವೆ. ನಮ್ಮ ವ್ಯಾಪ್ತಿಗೆ ಬರುವ ಇಂತಹ ಎಲ್ಲಾ ಚಟುವಟಿಕೆಗಳನ್ನು ನಾವು ನಿರ್ವಹಿಸುತ್ತೇವೆ. ಆದರೆ, ನಾವೇ ಪ್ರತಿಯೊಂದು ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. 

ಪ್ರಶ್ನೆ 9: ಹಿಂದೆ ನಿಮ್ಮ ವಿರುದ್ಧ ಕಾನೂನು ಮೊಕದ್ದಮೆಯೊಂದನ್ನು ದಾಖಲಿಸಲಾಗಿತ್ತು. ಆ ಕ್ರಮದ ಹಿಂದಿನ ಹಿನ್ನೆಲೆ, ಪ್ರಸ್ತುತ ಆ ಪ್ರಕ್ರಿಯೆಯ ಸ್ಥಿಗತಿ ಏನು ಮತ್ತು ಆ ಅನುಭವವು ನಿಮ್ಮ ಹೋರಾಟದ ಹಾದಿಯ ಮೇಲೆ ಎಂತಹ ಪರಿಣಾಮ ಬೀರಿದೆ ಎಂಬುದನ್ನು ಸ್ಪಷ್ಟಪಡಿಸಬಹುದೇ?

ಉತ್ತರ: ಪ್ರಕರಣವು ಇನ್ನೂ ನಡೆಯುತ್ತಿದೆ, ಮತ್ತು ಖಂಡಿತವಾಗಿಯೂ ಇವೆಲ್ಲವೂ ನ್ಯಾಯಾಂಗ ವಿಷಯಗಳಾಗಿವೆ. ಆದ್ದರಿಂದ, ನಾನು ಈ ಪ್ರಕರಣದ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಆ ಪ್ರಕರಣದ ಕಾರಣದಿಂದಾಗಿ ಎಪಿಸಿಆರ್ ನ ಕೆಲಸವು ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ, ಅಥವಾ ನನ್ನ ಹೋರಾಟದ ಹಾದಿಯ ಮೇಲೆ ಪರಿಣಾಮ ಬೀರಿದೆಯೇ ಎಂಬುದನ್ನು ನಮ್ಮ ಕೆಲಸವನ್ನು ಹತ್ತಿರದಿಂದ ಗಮನಿಸುವವರು ನಿರ್ಧರಿಸುತ್ತಾರೆ. ನೀವು ಅಥವಾ ಇತರರು ಅದನ್ನು ಮೌಲ್ಯಮಾಪನ ಮಾಡಬಹುದು. ಪ್ರಕರಣದ ವಿಷಯಕ್ಕೆ ಬಂದರೆ, ಯಾವುದೇ ಮಾನವ ಹಕ್ಕುಗಳ ಕಾರ್ಯಕರ್ತನ ಕೆಲಸವು ಸಹಜವಾಗಿಯೇ ಸರ್ಕಾರದ ನೀತಿಗಳು ಮತ್ತು ಕ್ರಮಗಳನ್ನು ಪ್ರಶ್ನಿಸುತ್ತದೆ, ಮತ್ತು ಇಂತಹ ಪ್ರಕರಣಗಳು ಅದರ ಪರಿಣಾಮವೇ ಆಗಿರುತ್ತವೆ. ಪ್ರಕರಣಗಳನ್ನು ಎದುರಿಸುವುದು ಯಾವುದೇ ಮಾನವ ಹಕ್ಕುಗಳ ಕಾರ್ಯಕರ್ತನಿಗೆ ಹೆಮ್ಮೆಯ ವಿಷಯವಾಗಿದೆ. ಇದು ನಮ್ಮ ಕೆಲಸದ ಅವಿಭಾಜ್ಯ ಅಂಗ; ಇವು ನಾವು ಮಾಡುವ ಕೆಲಸದ ವೇಗವನ್ನು ಕಡಿಮೆ ಮಾಡುವುದೂ ಇಲ್ಲ ಅಥವಾ ನಿಲ್ಲಿಸುವುದೂ ಇಲ್ಲ. ಹಾಗಾಗಿ ಇದರಿಂದ ಯಾವುದೇ ದೊಡ್ಡ ವ್ಯತ್ಯಾಸವಾಗುವುದಿಲ್ಲ.