ಸನ್ಮಾರ್ಗ ವಾರ್ತೆ
ಗಾಂಧಿನಗರ: ಗುಜರಾತ್ನ ಗಿರ್ ಸೋಮನಾಥ ಜಿಲ್ಲೆಯಲ್ಲಿ ಐತಿಹಾಸಿಕ ಮುಸ್ಲಿಂ ಪಾರಂಪರಿಕ ತಾಣಗಳು ಮತ್ತು ದರ್ಗಾಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ಧ್ವಂಸ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ. ಸೋಮನಾಥ್ ಕಾರಿಡಾರ್ ಯೋಜನೆಯ ಭಾಗವಾಗಿ ಐತಿಹಾಸಿಕ ಪೀರ್ ಅಹಮದ್ ಶಾ ದರ್ಗಾವನ್ನು ಧ್ವಂಸಗೊಳಿಸಿರುವುದನ್ನು ಪ್ರಶ್ನಿಸಿ ಎಂಟು ಮುಸ್ಲಿಂ ಪಾರಂಪರಿಕ ತಾಣಗಳ ಮಾಲೀಕರು ಮತ್ತು ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ನಡೆಸಿದೆ.
“ಮತ್ತೊಂದು ದರ್ಗಾ ಬಿದ್ದಿದೆ. ಗಿರ್ ಸೋಮನಾಥದಿಂದ ಮುಸ್ಲಿಮರನ್ನು ಮತ್ತು ಇಸ್ಲಾಮ್ಗೆ ಸಂಬಂಧಿಸಿದ ಪ್ರತಿಯೊಂದನ್ನೂ ಅಳಿಸಿಹಾಕಲು ಅವರು ಯತ್ನಿಸುತ್ತಿದ್ದಾರೆ” ಎಂದು ಜಿಲ್ಲೆಯ ಪ್ರಭಾಸ್ ಪಟಾನ್ ಪ್ರದೇಶದ ಮಹಿಳೆ ರೋಷನ್ ಬಾನು ಹೇಳಿದ್ದಾರೆ.
ಸೋಮನಾಥ್ ಕಾರಿಡಾರ್ ಯೋಜನೆಯ ಭಾಗವಾಗಿ ಹಿಂದೂ ಭಕ್ತರಿಗೆ ಪ್ರದೇಶವನ್ನು ಲಭ್ಯವಾಗುವಂತೆ ಮಾಡಲು ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ದರ್ಗಾ, 14 ನೇ ಶತಮಾನದ ಪರ್ಷಿಯನ್ ಶಾಸನ ಮತ್ತು ಹಳೆಯ ಗೇಟ್ ಅನ್ನು ಕೆಡವಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಆನಂದ್ ಯಾಗ್ನಿಕ್, ವಕ್ಫ್ ಕಾಯ್ದೆಗಳು, ಭೂಸ್ವಾಧೀನ ನಿಯಮಗಳು ಮತ್ತು ಸಂರಕ್ಷಿತ ಸ್ಮಾರಕಗಳ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಧ್ವಂಸ ಕಾರ್ಯಗಳನ್ನು ನಡೆಸಲಾಗಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿದರು.
ವಕ್ಫ್ ಆಸ್ತಿಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ, ಟ್ರಸ್ಟಿಗಳ ಅರಿವು ಅಥವಾ ಸಮ್ಮತಿಯಿಲ್ಲದೆ ಜಿಲ್ಲಾಧಿಕಾರಿಯಿಂದ ನೇಮಕಗೊಂಡ ಮುತವಲ್ಲಿ (ಪಾಲಕ) ಒಬ್ಬರು ಆಸ್ತಿಯನ್ನು ವರ್ಗಾಯಿಸಲು ನಿರಾಕ್ಷೇಪಣಾ ಪತ್ರ (NOC) ನೀಡಿದ್ದಾರೆ ಮತ್ತು ರಾಜ್ಯ ವಕ್ಫ್ ಮಂಡಳಿಯು ಯಾವುದೇ ಪರಿಶೀಲನೆ ನಡೆಸದೆ ತಕ್ಷಣವೇ ಇದಕ್ಕೆ ಅನುಮೋದನೆ ನೀಡಿದೆ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.
1904 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ASI) ಸಂರಕ್ಷಿತ ಸ್ಮಾರಕ ಎಂದು ಘೋಷಿಸಲ್ಪಟ್ಟಿದ್ದ ಈ ರಚನೆಯನ್ನು ಅನುಮತಿಯಿಲ್ಲದೆ ಕೆಡವಲಾಗಿದೆ. ಸ್ಥಳೀಯರು ನಂತರ ಅವಶೇಷಗಳ ನಡುವಿನಿಂದ ಪ್ರಾಚೀನ ಕಲ್ಲಿನ ಶಾಸನವೊಂದನ್ನು ವಶಪಡಿಸಿಕೊಂಡಿದ್ದಾರೆ. ಅನಧಿಕೃತ ಧ್ವಂಸಕ್ಕಾಗಿ ಎಎಸ್ಐ ಜಿಲ್ಲಾಧಿಕಾರಿಗೆ ನೋಟಿಸ್ ಕಳುಹಿಸಿದೆ ಎಂದೂ ವಕೀಲರು ತಿಳಿಸಿದ್ದಾರೆ.
ಪೀರ್ ಅಹಮದ್ ಶಾ ದರ್ಗಾ ಮಾತ್ರವಲ್ಲದೆ, ಗಿರ್ ಸೋಮನಾಥ ಜಿಲ್ಲೆಯ ಹಲವಾರು ಇಸ್ಲಾಮಿಕ್ ಪ್ರಾರ್ಥನಾ ಸ್ಥಳಗಳನ್ನು ಇತ್ತೀಚಿನ ದಿನಗಳಲ್ಲಿ ಬುಲ್ಡೋಝರ್ ಮೂಲಕ ಕೆಡವಲಾಗಿದೆ. ಸೆಪ್ಟೆಂಬರ್ 2024 ರಲ್ಲಿ, ಸೋಮನಾಥ ದೇವಾಲಯದ ಸಮೀಪವಿರುವ ಪ್ರಭಾಸ್ ಪಟಾನ್ನಲ್ಲಿ ಬೃಹತ್ ಪೊಲೀಸ್ ಕಾರ್ಯಾಚರಣೆಯಲ್ಲಿ ಒಂಬತ್ತು ಇಸ್ಲಾಮಿಕ್ ಪ್ರಾರ್ಥನಾ ಸ್ಥಳಗಳು ಮತ್ತು 47 ಮುಸ್ಲಿಂ ಮನೆಗಳನ್ನು ಕೆಡವಲಾಯಿತು.
ಹಾಜಿ ಮಾಂಗ್ರೋಲ್ ದರ್ಗಾ, ಪೀರ್ ಸಿಲಾರ್ ಶಾ ದರ್ಗಾ, ಗರೀಬ್ ಶಾ ದರ್ಗಾ ಮತ್ತು ಜಾಫರ್ ಮುಜಫರ್ ದರ್ಗಾದಂತಹ ಐತಿಹಾಸಿಕ ದರ್ಗಾಗಳನ್ನು ಅಂದು ಬುಲ್ಡೋಝರ್ ಮೂಲಕ ಧ್ವಂಸಗೊಳಿಸಲಾಯಿತು.
ಹಾಜಿ ಮಾಂಗ್ರೋಲ್ ಶಾ ದರ್ಗಾವನ್ನು 1924 ರ ಜೂನಾಗಢ ರಾಜ್ಯದ ಕಂದಾಯ ದಾಖಲೆಗಳಲ್ಲೂ ಸೇರಿಸಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ತಲೆಮಾರುಗಳಿಂದ ಅಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಮತ್ತು ಈ ಪ್ರಾರ್ಥನಾ ಸ್ಥಳಗಳನ್ನು ನೆಚ್ಚಿಕೊಂಡಿದ್ದವರು ಅನಾಥರಾಗಿದ್ದಾರೆ.
ಈ ವರ್ಷದ ಆಗಸ್ಟ್ 19 ರಂದು ಬೆಳಗಿನ ಜಾವ 3 ಗಂಟೆಗೆ ಪೀರ್ ಅಹಮದ್ ಶಾ ದರ್ಗಾವನ್ನು ಕೆಡವಲಾಯಿತು. ಟ್ರಸ್ಟಿ ಸಲೀಂ ಶಾ ದಾದಾಶಾ ಅವರ ಮರಣದ ನಂತರ, ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲು ಸಹಿಗಳನ್ನು ಪಡೆಯಲು ಮತ್ತು ಹಾದಿ ಸುಗಮಗೊಳಿಸಲು ಮಗ ದಾದಾಶಾ ಸಲೀಂ ಶಾ ಅವರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಅರ್ಜಿದಾರರು ತಿಳಿಸಿದ್ದಾರೆ. ವಕ್ಫ್ ಮಂಡಳಿಯು ಆಗಸ್ಟ್ 18 ರಂದು ತನ್ನ ಅನುಮೋದನೆಯನ್ನು ನೀಡಿತು, ಮತ್ತು ಮರುದಿನ ಬೆಳಿಗ್ಗೆ ದರ್ಗಾವನ್ನು ಕೆಡವಲಾಯಿತು ಹಾಗೂ ಸಮಾಧಿಗಳನ್ನು ಅಪವಿತ್ರಗೊಳಿಸಲಾಯಿತು.
ಸೋಮನಾಥ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಿ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳ ಹಿಂದೆ ದೊಡ್ಡ ಹಿಂದುತ್ವ ಅಜೆಂಡಾ ಇದೆ ಎಂದು ಟೀಕಾಕಾರರು ಬೆಟ್ಟು ಮಾಡುತ್ತಾರೆ. 2012 ರಲ್ಲಿ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅವರು ಜೂನಾಗಢವನ್ನು ವಿಭಜಿಸಿ ಗಿರ್ ಸೋಮನಾಥ ಎಂಬ ಹೊಸ ಜಿಲ್ಲೆಯನ್ನು ರಚಿಸಿದರು. ಇದು ಸೋಮನಾಥ ದೇವಾಲಯಕ್ಕೆ ಪ್ರತ್ಯೇಕ ಹಿಂದೂ ಸಾಂವಿಧಾನಿಕ ಮುಖವನ್ನು ನೀಡಲು ಕಾರಣವಾಯಿತು.
ಪೀರ್ ಅಹಮದ್ ಶಾ ದರ್ಗಾ ಪ್ರಕರಣದ ಪ್ರತಿನಿಧಿಯಾಗಿರುವ ಹಿರಿಯ ವಕೀಲ ಆನಂದ್ ಯಾಗ್ನಿಕ್ ಅವರು ಶೈವ ಹಿಂದೂ ಆಗಿದ್ದರೂ, ಇತರರ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಇಂತಹ ಕ್ರಮಗಳನ್ನು ಬಲವಾಗಿ ವಿರೋಧಿಸುತ್ತಾರೆ. ಸೋಮನಾಥ್ ಕಾರಿಡಾರ್ ಹೆಸರಿನಲ್ಲಿ ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳನ್ನು ಅಳಿಸಿಹಾಕಲು ಸರ್ಕಾರ ಮತ್ತು ಕಾರ್ಪೊರೇಟ್ಗಳು ಯತ್ನಿಸುತ್ತಿವೆ ಎಂದು ಅವರು ಸೇರಿಸಿದ್ದಾರೆ. ಬಾಬ್ರಿ, ಮಥುರಾ, ಸೋಮನಾಥ ಮುಂತಾದ ಕಡೆಗಳಲ್ಲೂ ಇದೇ ಅಜೆಂಡಾವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವಕ್ಫ್ ಮಂಡಳಿಯು ಸರ್ಕಾರಕ್ಕೆ ಅಧೀನವಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಗುಜರಾತ್ ಸರ್ಕಾರವು ಇಂತಹ ಧ್ವಂಸ ಕೃತ್ಯಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದೆ. ಫೆಬ್ರವರಿ 2024 ರಲ್ಲಿ, ಅಂದಿನ ಗೃಹ ರಾಜ್ಯ ಸಚಿವ ಹರ್ಷ ಸಂಘವಿ ಅವರು ಗುಜರಾತ್ ವಿಧಾನಸಭೆಗೆ ರಾಜ್ಯದಲ್ಲಿ ಇದುವರೆಗೆ 108 ಇಸ್ಲಾಮಿಕ್ ಪ್ರಾರ್ಥನಾ ಸ್ಥಳಗಳನ್ನು ಕೆಡವಲಾಗಿದೆ ಎಂದು ತಿಳಿಸಿದ್ದರು.












