ಮುಂಬೈ -ಅಹ್ಮದಾಬಾದ್ ಬುಲೆಟ್ ಟ್ರೈನ್: ಭೂ ಸ್ವಾಧೀನ ವಿರೋಧಿಸಿ ರೈತರಿಂದ ಹೈಕೋರ್ಟ್ ಗೆ ಮನವಿ

0
760

ಮುಂಬೈ- ಅಹ್ಮದಾಬಾದ್ ನಡುವೆ ನಿಯೋಜಿಸಲಾದ ಬುಲೆಟ್ ಟ್ರೈನ್ ಯೋಜನೆಯನ್ನು ವಿರೋಧಿಸಿ ಸಾವಿರಾರು ರೈತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜ್ಯ ಸರಕಾರವು ಯೋಜನೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ.

ಜಪಾನಿನ ಆರ್ಥಿಕ ಸಹಕಾರದೊಂದಿಗೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅತಿ ವೇಗಿ ಬುಲೆಟ್ ಟ್ರೈನ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು ಇದನ್ನು ವಿರೋಧಿಸಿ ಈಗಾಗಲೇ ಐದು ಮನವಿಗಳು ಹೈಕೋರ್ಟ್ ನಲ್ಲಿವೆ. ಈ ಮನವಿಗಳ ವಿವಿಧ ಆಯಾಮಗಳನ್ನು ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಆರ್‌ ಸುಭಾಶ್ ರೆಡ್ಡಿ ಹಾಗೂ ಜಸ್ಟೀಸ್ ವಿ.ಎಮ್.ಪಾಂಚೋಲಿಯವರ ಪೀಠವು ವಿಚಾರಣೆ ನಡೆಸಲಿದೆ.

ಸಾವಿರಾರು ರೈತರ ಕೃಷಿ ಭೂಮಿಯು ಈ ಯೋಜನೆಯಿಂದ ಮುಟ್ಟುಗೋಲಾಗುವುದರ ಕುರಿತು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. 1.10 ಲಕ್ಷ ಕೋಟಿ ರೂಪಾಯಿಗಳ ಈ ಯೋಜನೆಯನ್ನು ದೇಶದಲ್ಲಿ ಜಾರಿಗೆ ತರಲು ಭಾರತ ಸರಕಾರಕ್ಕೆ ಜಪಾನ್ ಆರ್ಥಿಕವಾಗಿ ಮೃದು ಸಾಲವನ್ನು ದೊರಕಿಸಲಿದೆ. ಇದಲ್ಲದೇ ರೈತರ ಭೂ ಸ್ವಾಧಿನವನ್ನೂ ಕೂಡ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯ ನಿಯಮಾವಳಿಗನುಸಾರವಾಗಿಯೇ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಮೊದಲು ಗುಜರಾತ್ ರಾಜ್ಯ ಸರಕಾರವು 2013 ರರಲ್ಲಿ ಭೂ ಸ್ವಾಧೀನ ನಿಯಮಾವಳಿಯನ್ನು ಹೊರ ತಂದಿತ್ತಾದರೆ ತದನಂತರ ಸರಕಾರವು 2015 ರಲ್ಲಿ ಜಪಾನ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವುದು ರೈತರಿಗೆ ಸಿಗಬೇಕಾದ ಪರಹಾರ ಧನದ ಪ್ಯಾಕೇಜ್ ಮೇಲೆ ಗಂಭೀರ ಪರಿಣಾಮ ಬೀರುವುದೆಂದು ರೈತರು ಆಪಾದಿಸಿದ್ದಾರೆ.

ಈ ಯೋಜನೆಗಾಗಿ 1400 ಹೆಕ್ಟರ್ ಭೂಮಿಯನ್ನು ಗುಜರಾತಿನಿಂದ ಹಾಗೂ 1120 ಹೆಕ್ಟರ್ ಭೂಮಿಯನ್ನು ಮಹಾರಾಷ್ಟ್ರದಿಂದ ಖಾಸಗಿ ಒಡೆತನಗಳಿಂದ ವಶಪಡೆಸಿಕೊಳ್ಳಲಿದೆ. ಇದಲ್ಲದೇ 6000 ಭೂ ಮಾಲಿಕರಿಗೆ ಪರಿಹಾರ ಧನವನ್ನು ನೀಡಬೇಕಾಗಿದೆ. ಬುಲೆಟ್ ಟ್ರೈನ್ 320- 350 ಕಿಲೋಮೀಟರ್ ವೇಗದಲ್ಲಿ ಓಡಲಿದ್ದು ಈ ಎರಡು ನಗರಗಳ ನಡುವೆ 15 ನಿಲ್ದಾಣಗಳನ್ನು ಹೊಂದಿದೆ.