ಮಾನವ ಹಕ್ಕು: ಭಾರತ ಎಲ್ಲಿದೆ?

0
1010

 ಸಲೀಮ್ ಬೋಳಂಗಡಿ


ಭಾರತದಲ್ಲಿ ಮಾನವ ಹಕ್ಕು ಕಾರ್ಯಕರ್ತರ ವಿರುದ್ಧದ ದೌರ್ಜನ್ಯಗಳು ಅಪಾಯಕಾರಿ ರೀತಿಯಲ್ಲಿ ವರ್ಧಿಸುತ್ತಿದೆಯೆಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟನಿಯೋ ಗುಟೆರಸ್‍ರಿಗೆ ನೀಡಲಾದ ವರದಿಯಲ್ಲಿ ಭಾರತ ಸಹಿತ 38 ರಾಷ್ಟ್ರಗಳನ್ನು ವಿಮರ್ಶಿಸಲಾಗಿದೆ.

ವಿಶ್ವಸಂಸ್ಥೆಯೊಂದಿಗೆ ಸಹಕರಿಸಿ ಕಾರ್ಯಾಚರಿಸುತ್ತಿರುವ ಮಾನವ ಹಕ್ಕು ಕಾರ್ಯಕರ್ತರಿಗೆ ಬೆದರಿಕೆ ಮತ್ತು ಪ್ರತೀಕಾರ ಕ್ರಮಗಳನ್ನು ಎದುರಿಸಬೇಕಾಗಿದೆ ಬಂದಿರುವ ರಾಷ್ಟ್ರಗಳ ಕುರಿತಾಗಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಯವರಿಗೆ ವರದಿ ಒಪ್ಪಿಸಲಾಗಿತ್ತು. ಆದರೆ ಇವರಲ್ಲಿ ಹೆಚ್ಚಿನವು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಸದಸ್ಯ ರಾಷ್ಟ್ರ ಗಳಾಗಿವೆಯೆಂದೂ ಕಾರ್ಯದರ್ಶಿಗಳು ಒತ್ತಿ ಹೇಳಿದ್ದರು. ಇಂತಹ ಮಾನವ ಹಕ್ಕುಗಳ ಸಂಘಟನೆಗಳನ್ನು ಭಾರತದಲ್ಲಿ ಕಾನೂನಿನ ಮೂಲಕ ಮತ್ತು ರಾಜಕೀಯ ಪ್ರಭಾವ ಬಳಸಿ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ವಿಶ್ವಸಂಸ್ಥೆಯೊಂದಿಗೆ ಸಹಕರಿಸುತ್ತಿರುವ ಸರಕಾರೇತರ ಸಂಘಟನೆಗಳ ಪರವಾನಿಗೆಯನ್ನು ನವೀಕರಣಗೊಳಿಸದೆ ಭಾರತದಲ್ಲಿ ಸತಾಯಿಸಲಾಗುತ್ತದೆಯೆಂದೂ ವರದಿಯಲ್ಲಿ ಹೇಳಲಾಗಿದೆ. ಈ ಪಟ್ಟಿಯಲ್ಲಿ ಭಾರತದೊಂದಿಗೆ ಪಾಕಿಸ್ತಾನ ಚೀನಾ ಕೂಡಾ ಸ್ಥಾನ ಪಡೆದಿದೆ.

ದೇಶದ ಪ್ರಸಕ್ತ ಸ್ಥಿತಿಯನ್ನು ಗಮನಿಸಿದಾಗ ಮಾನವ ಹಕ್ಕುಗಳ ಹೋರಾಟಗಾರರು ಆಂತಕಕಾರಿ ದಿನಗಳನ್ನು ಎದುರಿಸುತ್ತಿದ್ದಾರೆಂದರೆ ತಪ್ಪಾಗಲಾರದು. ಅದಕ್ಕೆ ಪೂರಕವಾದ ಹಲವು ಘಟನೆಗಳು ಈ ದೇಶದಲ್ಲಿ ಸದಾ ನಡೆಯುತ್ತಲೇ ಇದೆ. ಜನವರಿಯ ಮೊದಲ ವಾರದಲ್ಲಿ ನಡೆದ ಮಹಾರಾಷ್ಟ್ರದ ಬೀಮಾ ಕೊರಗಾಂವ್‍ನಲ್ಲಿ ನಡೆದ ಸಂಘರ್ಷಗಳ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರ ವರ್ತನೆಯು ಹೋರಾಟಗಾರರ ಮೇಲೆ ಅದು ಮಾಡುವ ಅಕ್ರಮ ವೆಂದರೆ ತಪ್ಪಾಗಲಾರದು. ಸವರ್ಣೀಯರ ದೌರ್ಜನ್ಯದ ವಿರುದ್ಧ ಐನ್ನೂರಕ್ಕಿಂತಲೂ ಹೆಚ್ಚಿನ ದಲಿತ ಸೈನಿಕರು 2 ಶತಮಾನಗಳ ಹಿಂದೆ ನಡೆಸಿದ ವೀರ ಹೋರಾಟದ ವಿಜಯ ದಿವಸವನ್ನು ಜನವರಿ 10ರಂದು ದಲಿತ ಸ್ವಾತಂತ್ರ್ಯ ಘೋಷಣಾ ದಿನವೆಂದು ಆಚರಿಸುತ್ತಾರೆ. ಹತ್ತು ಲಕ್ಷದಷ್ಟು ದಲಿತರು ಸೇರುತ್ತಾರೆ.

ಆದರೆ ಈ ವಿಜಯೋತ್ಸವವನ್ನು ಹಾಳುಗೆಡಹಲು ಹಲವು ಸಮಾಜಘಾತುಕ ಶಕ್ತಿಗಳು ಶ್ರಮಿಸಿ ದಲಿತರ ವಿರುದ್ಧ ಏಕಾಏಕಿ ದಾಳಿ ನಡೆಸುತ್ತಾರೆ. ಸವರ್ಣೀಯ ಸಂಘಟನೆಗಳು ಇದರ ಹಿಂದಿ ದ್ದವು. ಇದರಲ್ಲಿ ಕೆಲವು ಜೀವಹಾನಿಗಳಾಗಿದ್ದವು. ಈ ಘಟನೆಯಲ್ಲಿ ಬಹಳ ಆತಂಕ ಕಾರಿ ವಿಚಾರವೆಂದರೆ ಈ ದಾಳಿಗೆ ತುತ್ತಾದವರು ಮತ್ತು ಅವರ ಪರವಾಗಿ ಧ್ವನಿಯೆತ್ತಿದವರನ್ನೇ ಆರೋಪಿಗಳನ್ನಾಗಿ ಬಿಂಬಿಸುವ ಪ್ರಯತ್ನ ನಡೆದಿದೆ. ತನಿಖಾ ಸಂಸ್ಥೆಯ ನಿಧಾನಗತಿಯ ನಡೆಯು ಅದನ್ನೇ ಸೂಚಿಸುತ್ತಿದೆ. ತನಿಖಾ ಸಂಸ್ಥೆಗಳ ಈ ಅನ್ಯಾಯದ ನಡೆಯ ಕುರಿತು ಹೈದರಾಬಾದ್‍ನ ನಿವೃತ್ತ ನ್ಯಾಯಾಧೀಶ ಚಂದ್ರ ಕುಮಾರರ ನೇತೃತ್ವ ತನಿಖಾ ತಂಡವು ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿದಾಗ ಪೊಲೀಸರ ಕಾಪಟ್ಯ ಬಯಲಾಗಿತ್ತು. ಆರಕ್ಷಕರರೇ ರಾಕ್ಷಸರಾದ ಕತೆಯಿದು. ಬೀಮ ಕೊರೆಗಾಂವ್ ರ್ಯಾಲಿಗೆ ತಲುಪಿದ ಅನೇಕ ಮಂದಿ ಪೊಲೀಸರ ಈ ನಡೆಯ ವಿರುದ್ಧ ದ್ವನಿಯೆತ್ತಿದ್ದರು. ದಲಿತರು ದಾಳಿಗೊಳಗಾದಾಗ ಪೊಲೀಸರು ಪ್ರೇಕ್ಷಕರಾಗಿ ನೋಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

ಪೊಲೀಸರು ಮತ್ತು ಆಡಳಿತವು ನಡೆಸಿದ ಈ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ ಹತ್ತು ಮಾನವ ಹಕ್ಕು ಹೋರಾಟಗಾರರ ಎರಡು ಹಂತಗಳಲ್ಲಿ ಬಂಧಿಸಲಾಯಿತು. ರಾಣಾ ವಿಲ್ಸನ್, ಸುರೇಂದ್ರ ಗಾಡ್ಸಿಂಗ್, ಸುಧೀರ್ ದವಾಲೆ, ಮಹೇಶ್ ರಾವತ್, ಶೋಮಾಸೆನ್ ಈಗಲೂ ಜಾಮೀನು ದೊರೆಯದೆ ಸೆರೆಮನೆಯಲ್ಲಿದ್ದಾರೆ. ಮತ್ತೆ ಐವರನ್ನು ವಿಚಿತ್ರ ವಾದ ಆರೋಪ ಹೊರಿಸಿ ಬಂಧಿಸಲಾಗಿದೆ. ಅರ್ಬನ್ ಮಾಮೋಯಿಸ್ಟೆಗಳೆಂದೂ ದೇಶದಲ್ಲಿ ಅರಾಜ ಕತೆ ಸೃಷ್ಟಿಸಿ ಪ್ರಧಾನಿಯನ್ನೇ ಮುಗಿಸುವ ಯೋಜನೆಯಲ್ಲಿದ್ದಾರೆಂದು ಆರೋಪಿಸಿ ಬಂಧಿಸಲಾಗಿತ್ತು. ಹೀಗೆ ಆಡಳಿತದ ವಿರುದ್ಧ ಧ್ವನಿಯೆತ್ತುವವರ ಧ್ವನಿಯಡಗಿಸುವ ಪ್ರಯತ್ನಗಳು ಧಾರಾಳವಾಗಿ ನಡೆಯುತ್ತಿದೆ. ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸುಗಳನ್ನು ಹೆಣೆದು ಜೈಲಿಗೆ ತಳ್ಳಿ ಸುಮ್ಮನಾಗಿಸುವ ಶ್ರಮವಿದು. ಆದರೆ ಗಲಭೆಗೆ ಪ್ರಚೋದನೆ ನೀಡಿದ ಹಿಂದುತ್ವ ಸಂಘಟನೆಯ ನಾಯಕರು ಸ್ವಚ್ಛಂಧವಾಗಿ ತಿರುಗುತ್ತಿದಾರೆ. ಹೀಗೆ ಆಡಳಿತದ ವಿರುದ್ಧ ಧ್ವನಿಯೆತ್ತುವವರ ಮೇಲಿನ ದೌರ್ಜನ್ಯ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ.

ಹೌದು. ತುರ್ತು ಪರಿಸ್ಥಿತಿಗಿಂತಲೂ ಭಯಾನಕತೆಯೆಡೆಗೆ ದೇಶ ಸಾಗುತ್ತಿದೆ ಎಂದು ಖ್ಯಾತ ಬರಹಗಾರ್ತಿ ಮಾನವ ಹಕ್ಕು ಕಾರ್ಯಕರ್ತೆ ಅರುಂಧತಿ ರಾಯ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹೌದು ಮಹಾರಾಷ್ಟ್ರ ಪೊಲೀಸರು ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಿದ ತಕ್ಷಣ ಮಧ್ಯ ಪ್ರವೇಶಿಸಿದ ಬಾಂಬೆ ಹೈಕೋರ್ಟು ಅವರನ್ನು ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿತ್ತು. ಈಗ ಈ ಮಾನವ ಹಕ್ಕು ಕಾರ್ಯಕರ್ತರು ಸುಪ್ರೀಮ್ ಕೋರ್ಟಿನ ಮೊರೆ ಹೋಗಿದ್ದಾರೆ. ಸಮಾಜದಲ್ಲಿ ಗೌರವಾರ್ಹ ಸ್ಥಾನದಲ್ಲಿರುವವರನ್ನು ಅನ್ಯಾಯದ ವಿರುದ್ಧ ಹೋರಾಡಿದವರನ್ನು ಬಹಳ ವ್ಯವಸ್ಥಿತವಾಗಿ ಮಟ್ಟ ಹಾಕುವ ಪ್ರಯತ್ನ ನಡೆಯುತ್ತಿದೆಯೆಂಬುದು ಬಹಿರಂಗವಾದ ವಿಚಾರವಾಗಿದೆ. ಈ ಮಾನವ ಹಕ್ಕುಗಳ ಕಾರ್ಯಕರ್ತರನ್ನು ದಮನಿಸಲು ಮಾಡುವ ಪ್ರಯತ್ನವನ್ನು ಈ ದೇಶದ ಭ್ರಷ್ಟಾಚಾರಿಗಳ, ಧಗಾಕೋರರ, ವಂಚಕರ ವಿರುದ್ಧ ಮಾಡುತ್ತಿದ್ದರೆ ಅದು ದೇಶಕ್ಕೆ ಪ್ರಯೋಜನಕಾರಿಯಾಗುತ್ತಿತ್ತು. ಎಲ್ಲವನ್ನು ರಾಜಕೀಯ ಲಾಭದ ಉದ್ದೇಶವಿಟ್ಟು ಕೊಂಡೇ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯ ಮುಂದೆಯೂ ನಾವು ತಲೆ ತಗ್ಗಿಸಿ ನಿಲ್ಲುವ ಹಂತಕ್ಕೆ ಅದು ತಲುಪಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.

ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧದ ಈ ಪ್ರಕ್ರಿಯೆಯು ಪ್ರಜಾಪ್ರಭುತ್ವ ದೇಶದ ಮಟ್ಟಿಗೆ ಅಪಾಯಕಾರಿಯಾಗಿದೆ. ಎಲ್ಲಾ ರೀತಿಯ ಆಡಳಿತಗಾರರ ಕುತಂತ್ರಗಳನ್ನು ಬೇಧಿಸಿ ಕೆಲ ಮಾಧ್ಯಮಗಳ ಪಕ್ಷಪಾತೀ ಧೋರಣೆಯನ್ನು ಮೀರಿ ಅಸಹಾಯಕರಾದ ಜನರ ಹಕ್ಕುಗಳನ್ನು ಸಂರಕ್ಷಿಸುವ ಪ್ರಯತ್ನಗಳು ಈ ದೇಶದ ಪ್ರಜಾಪ್ರಭುತ್ವಕ್ಕೆ ಬಲ ನೀಡುತ್ತದೆ.

ಆದರೆ ಅದು ಆಡಳಿತಗಾರರ ನಿದ್ದೆ ಕೆಡಿಸುತ್ತಿದೆ. ಭಾರೀ ತ್ಯಾಗಗಳನ್ನು ಸಹಿಸಿ ಎಲ್ಲ ರೀತಿಯ ಕಿರುಕುಳವನ್ನು ಲೆಕ್ಕಿಸದೆ ಸಕ್ರಿಯವಾಗಿ, ರಂಗಕ್ಕಿಳಿದಿರುವ ಮಾನವ ಹಕ್ಕುಗಳ ಹೋರಾಟಗಾರರಿಗೆ ಈ ದೇಶದ ನ್ಯಾಯ ಪ್ರಿಯ ಶಾಂತಿ ಪ್ರಿಯ ಜನತೆಯ ಬೆಂಬಲದ ಅಗತ್ಯವಿದೆ. ಈ ಹೋರಾಟಗಾರರನ್ನು ನಿಯಂತ್ರಿಸಿದರೆ ಜನರ ಹಕ್ಕುಗಳ ದಮನವಾದಂತೆ ಎಂಬ ವಾಸ್ತವವನ್ನು ಜನರು ಅರಿಯಬೇಕಾಗಿದೆ. ಹೌದು ಪ್ರತಿಯೊಂದು ನಗರಗಳಲ್ಲಿಯೂ ಮಾನವ ಹಕ್ಕು ಕಾರ್ಯಕರ್ತರ ತಂಡವಿರುತ್ತದೆ. ಅವರು ಎಲ್ಲ ಮಾನವ ಹಕ್ಕುಗಳ ಹರಣದ ವಿರುದ್ಧ ದನಿಯೆತ್ತಿ ಪ್ರಜಾಪ್ರಭುತ್ವದ ಕಾವಲುಗಾರರಂತಿರುತ್ತಾರೆ. ಇವರು ಎತ್ತುವ ಐಕ್ಯತೆಯ ಧ್ವನಿಯನ್ನು ಬಲಪಡಿಸಬೇಕಾದ ಅಗತ್ಯ ಖಂಡಿತಾ ಇದೆ.