ದಿಲ್ಲಿಯಲ್ಲಿ ಸಿಎಎ ಪ್ರತಿಭಟನಾಕಾರರ ಮೇಲೆ ಪುನಃ ದಾಳಿ; ನಿಷೇಧಾಜ್ಞೆ, ಗಾಯಾಳು ಪೊಲೀಸ್ ಸಾವು

0
1495

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 24: ದಿಲ್ಲಿಯಲ್ಲಿ ಪೌರತ್ವ ಪರ ಪ್ರತಿಭಟನಾಕಾರರು ಮತ್ತು ವಿರೋಧಿಗಳ ನಡುವೆ ಪರಸ್ಪರ ಘರ್ಷಣೆ ನಡೆದಿದ್ದು ಎರಡು ವಿಭಾಗವೂ ಪರಸ್ಪರ ಕಲ್ಲೆಸೆದದ್ದರಿಂದ ಘರ್ಷಣೆ ತೀವ್ರವಾಗಿದೆ. ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದೆ. ಕಲ್ಲೆಸತದಿಂದ ಗಾಯಗೊಂಡ ಪೊಲೀಸರೊಬ್ಬರು ಮೃತಪಟ್ಟರು. ಹೆಡ್‍ಕಾನ್ಸ್ ಟೇಬಲ್ ರತನ್ ಲಾಲ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ನಂತರ ಈಶಾನ್ಯ ದಿಲ್ಲಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಹಿಂಸಾಚಾರದಿಂದ ಮೌಜ್‍ಪುರ, ಬಾಬರ್ಪುರ ಮೆಟ್ರೋ ನಿಲ್ದಾಣ ಸಮೀಪ ಮತ್ತು ಯಮುನಾ ವಿಹಾರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಜಾಫರಾಬಾದಿನಲ್ಲಿ ಮೌಜ್‍ಪುರದಲ್ಲಿ ಎರಡಕ್ಕೂ ಹೆಚ್ಚು ವಾಹನಗಳು ಅಗ್ನಿಗಾಹುತಿಯಾಗಿದೆ. ಗಾಯಾಳುಗಳನ್ನು ಸಮೀಪದ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತದನಂತರ ಜಾಫರಾಬಾದ್, ಮೌಜ್‍ಪುರ-ಬಾಬರ್‍ಪುರಗಳಲ್ಲಿ ಮೆಟ್ರೋ ನಿಲ್ದಾಣಗಳನ್ನು ಡಿಎಂ ಆರ್ ಸಿ ಮುಚ್ಚಿದೆ. ಶಾಂತಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯಪಾಲ ಅನಿಲ್ ಬೈಜು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ನೋಟಿಸು ಕಳುಹಿಸಿದ್ದಾರೆ. 24 ಗಂಟೆಗಳಲ್ಲಿ ಎರಡನೆ ಬಾರಿಗೆ ದಿಲ್ಲಿಯಲ್ಲಿ ಪೌರತ್ವ ವಿರೋಧಿ ಹೋರಾಟಗಾರರ ಮೇಲೆ ದಾಳಿ ನಡೆದಿದೆ. ಘರ್ಷಣೆಯ ಹಲವು ವೀಡಿಯೊಗಳು ಹೊರಬಂದಿವೆ. ಇದರಲ್ಲಿ ದುಷ್ಕರ್ಮಿಗಳು ಜೈಶ್ರೀರಾಂ ಎಂದು ಕೂಗುವುದು ಕೇಳಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಂಪು ಟೀಶಟ್ ಧರಿಸಿ ಬಂದೂಕು ಹಿಡಿದ ವ್ಯಕ್ತಿಯ ಚಿತ್ರವೂ ಹೊರಬಂದಿದೆ. ಶಾಂತಿ ಸ್ಥಾಪಿಸಲು ಪ್ರದೇಶದಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಜಾಫರಾಬಾದಿನಲ್ಲಿ ಪೌರತ್ವ ಪ್ರತಿಭಟನಾಕಾರರ ವಿರುದ್ಧ ನಿನ್ನೆ ದಾಳಿ ನಡೆದಿದ್ದು ಇದು ಅದರ ಮುಂದುವರಿದ ಭಾಗವಾಗಿದೆ. ಇದೇವೇಳೆ ಜಾಫರಾಬಾದಿನಲ್ಲಿ ಪೌರತ್ವ ತಿದುಪಡಿ ಕಾನೂನು ವಿರುದ್ಧ ಶಾಹಿನ್ ಬಾಗ್ ಮಾದರಿ ಪ್ರತಿಭಟನೆ ಮುಂದುವರಿದಿದೆ. ಕಳೆದ ದಿನ ಪ್ರತಿಭಟನಾಕಾರರ ಮೇಲೆ ದಿಲ್ಲಿ ಬಿಜೆಪಿ ನಾಯಕನ ನೇತೃತ್ವದಲ್ಲಿ ಸಿಎಎ ಬೆಂಬಲಿಗರು ದಾಳಿ ನಡೆಸಿದ್ದರು. ನಂತರ ನಡೆದ ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು. ಇನ್ನೊಂದು ಶಾಹಿನ್ ಬಾಗ್‍ಗೆ ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೇತೃತ್ವದಲ್ಲಿ ಜನರ ಗುಂಪು ದಾಳಿ ಮಾಡಿತ್ತು.