✍️ ಅಮಾನ್ ಕೆ.
ನೋಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುವುದಕ್ಕಿಂತ ಒಂದು ದಿನ ಮೊದಲು ಹಮಾಸ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ ಆಗಿರುವುದನ್ನು ಅನುಮಾನಗಳಿಂದ ನೋಡಲಾಗಿತ್ತು. ಟ್ರಂಪ್ ಅವರ ನೋಬೆಲ್ ಪ್ರಶಸ್ತಿ ಬಯಕೆಯ ಉದ್ದೇಶದಿಂದಲೇ ಈ ಕದನ ವಿರಾಮ ಒಪ್ಪಂದವನ್ನು ತರಾತುರಿಯಿಂದ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ಒಪ್ಪಂದವನ್ನು ಮೊದಲು ಅನೌನ್ಸ್ ಮಾಡಿದ್ದೆ ಅಮೆರಿಕಾದ ಅಧ್ಯಕ್ಷ ಟ್ರಂಪ್. ನೋಬೆಲ್ ಶಾಂತಿ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡೆ ಅವರು ತರಾತುರಿಯಿಂದ ಈ ಒಪ್ಪಂದ ಮಾಡಿಸಿದ್ದಾರೆ ಎಂಬ ಅನುಮಾನ ಇತ್ತು. ನೋಬೆಲ್ ಶಾಂತಿ ಪ್ರಶಸ್ತಿ ಪಡಕೊಳ್ಳುವುದಕ್ಕಾಗಿ ಟ್ರಂಪ್ ಮತ್ತು ನೆತನ್ಯಾಹು ಮಾಡಿರುವ ಸಂಚು ಇದಾಗಿರಬಹುದೇ, ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿದ ಬಳಿಕ ಇಸ್ರೇಲ್ ಗಾಝಾದ ಮೇಲೆ ಎರಗಬೇಕು ಮತ್ತು ಹಮಾಸನ್ನು ಸರ್ವನಾಶ ಮಾಡಬೇಕು ಎಂದು ಇಸ್ರೇಲ್ನ ಅರ್ಥ ಸಚಿವ ಬೇಝಾಲೆಲ್ ಸ್ಮೋ ಟ್ರಿಕ್ ಹೇಳಿಕೆ ನೀಡಿರುವುದು ಯಾವುದರ ಸೂಚನೆ ಎಂಬ ಪ್ರಶ್ನೆಯೂ ಎದ್ದಿತ್ತು. ಇದೀಗ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಟ್ರಂಪ್ಗೆ ನಿರಾಶೆಯಾಗಿದೆ.
ಮೊದಲ ಹಂತದ ಕದನ ವಿರಾಮ ಒಪ್ಪಂದಕ್ಕೆ ಗಾಝಾದಲ್ಲಿ ಮತ್ತು ಇಸ್ರೇಲ್ನಲ್ಲಿ ಸಂಭ್ರಮ ಕಾಣಿಸಿದೆ. ಒತ್ತೆಯಾಳುಗಳ ಬಂಧುಗಳು ಟೆಲ್ ಅವಿವುನ ಹೋಸ್ಟೇಜಸ್ ಸ್ಕ್ವಯರ್ನಲ್ಲಿ ಸಂಭ್ರಮ ಆಚರಿಸಿದ್ದಾರೆ. ಖಾನ್ ಯೂನಿಸ್ನಲ್ಲಿ ಫೆಲಸ್ತೀನಿಯರು ಸಂಭ್ರಮ ಆಚರಿಸಿದ್ದಾರೆ.
ಈ ಕದನ ವಿರಾಮ ಒಪ್ಪಂದವು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಸಾಕಾರಗೊಳಿಸುವತ್ತ ಕೊಂಡೋಯ್ಯಲಿದೆ ಎಂದು ಫೆಲಸ್ತೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ ಕೂಡಾ ಸ್ವಾಗತಿಸಿದೆ. ಈಜಿಪ್ಟಿನ ಕೈರೋದಲ್ಲಿ ಅಮೆರಿಕ, ಟರ್ಕಿ ಖತಾರ್ ಮತ್ತು ಈಜಿಪ್ಟ್ಗಳು ಜೊತೆ ಸೇರಿ ಈ ಒಪ್ಪಂದವನ್ನು ಸಾಧ್ಯವಾಗಿಸಿವೆ.
ಆದರೆ ಕೆಲವು ಪ್ರಶ್ನೆಗಳಿವೆ. ಕದನ ವಿರಾಮ ಒಪ್ಪಂದವನ್ನು ಈ ಹಿಂದೆಯೂ ಉಲ್ಲಂಘಿಸಿದ ಇತಿಹಾಸವಿರುವ ಇಸ್ರೇಲ್ ಈ ಬಾರಿ ಈ ಒಪ್ಪಂದಕ್ಕೆ ಬದ್ಧವಾಗುತ್ತಾ? ಕತಾರ್ ಮೇಲೆ ನಡೆಸಿದ ದಾಳಿಯೇ ಇಸ್ರೇಲ್ಗೆ ತಿರುಗೇಟಾಗಿ ಪರಿಣಮಿಸಿತಾ? ಹಮಾಸ್ ಮುಂದಿಟ್ಟಿರುವ ನಾಲ್ಕು ಶರತ್ತುಗಳೇನು?
ಮೊದಲ ಹಂತದ ಕದನ ವಿರಾಮ ಒಪ್ಪಂದದಂತೆ ತನ್ನ ಒತ್ತೆಯಲ್ಲಿರುವ ಎಲ್ಲಾ ಬಂಧಿಗಳನ್ನು ಹಮಾಸ್ ಬಿಡುಗಡೆಗೊಳಿಸಬೇಕು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನ ವಶದಲ್ಲಿರುವ ಸುಮಾರು 2000 ಫೆಲಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಬೇಕು. ಇವರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ 250 ಮಂದಿಯೂ ಸೇರಿದ್ದಾರೆ. ಟ್ರಂಪ್ ಮುಂದಿರುವ 20 ಅಂಶಗಳ ಕದನ ವಿರಾಮ ಪ್ರಸ್ತಾಪದಲ್ಲಿ ಇವು ಸೇರಿವೆ. ಈ ಪ್ರಸ್ತಾಪಕ್ಕೆ ಇಸ್ರೇಲ್ ತಕ್ಷಣ ಒಪ್ಪಿಗೆ ಸೂಚಿಸಿತು. ಆದರೆ ಹಮಾಸ್ ತಕ್ಷಣ ಒಪ್ಪಿಕೊಂಡಿರಲಿಲ್ಲ. ಕೊನೆಗೆ ನಾಲ್ಕು ಶರತ್ತಿನೊಂದಿಗೆ ಈ ಪ್ರಸ್ತಾಪಕ್ಕೆ ಅನುಮೋದನೆಯನ್ನು ನೀಡಿದೆ.
- ಯುದ್ಧ ಕೊನೆಗೊಳಿಸುವುದು.
- ಗಾಝಾದಿಂದ ಇಸ್ರೇಲ್ ಸೇನೆಯನ್ನು ಸಂಪೂರ್ಣವಾಗಿ ಹಿಂದೆಗೆಯುವುದು.
- ಗಾಝಕ್ಕೆ ನಿರಂತರ ನೆರವನ್ನು ಒದಗಿಸುವುದು.
- ಫೆಲೆಸ್ತೀನಿ ಬಂಧಿಗಳ ಬಿಡುಗಡೆ.
ಕತಾರ್ ಮೇಲೆ ದಾಳಿ ಮಾಡಿದ ಬಳಿಕ ಇಸ್ರೇಲ್ ಪತನ ಆರಂಭವಾಯಿತು ಎಂದು ಹೇಳಲಾಗುತ್ತಿದೆ. ಈ ದಾಳಿ ಅಂತಾರಾಷ್ಟ್ರೀಯವಾಗಿ ಇಸ್ರೇಲನ್ನು ಒಂಟಿಯಾಗಿಸಿತು. ಅಮೆರಿಕಾದ ಬೆಂಬಲವೂ ನೇತನ್ಯಾಹುಗೆ ಸಿಗಲಿಲ್ಲ. ಅರಬ್ ರಾಷ್ಟ್ರಗಳೂ ತಿರುಗಿ ಬಿದ್ದವು. ಈ ಹಿನ್ನೆಲೆಯಲ್ಲಿಯೇ ಟ್ರಂಪ್ ಅವರ ಕದನ ವಿರಾಮ ಪ್ರಸ್ತಾಪಕ್ಕೆ ಇಸ್ರೇಲ್ ಒಪ್ಪಿಕೊಳ್ಳಬೇಕಾಯಿತು ಎಂಬ ಅಭಿಪ್ರಾಯ ಇದೆ. ಇನ್ನೊಂದೆಡೆ ಹಮಾಸ್ ನ ಮೇಲೆಯೂ ಅರಬ್ ರಾಷ್ಟ್ರಗಳು ಒತ್ತಡ ಹೇರಿದವು. ಮತ್ತೊಂದು ಕಡೆ ಟ್ರಂಪ್ ಅವರಿಗೆ ನೋಬೆಲ್ ಹುಚ್ಚಿತ್ತು. ಈ ಯುದ್ಧವನ್ನು ನಿಲ್ಲಿಸುವ ಮೂಲಕ ನೊಬೆಲ್ ಪ್ರಶಸ್ತಿಗೆ ಹತ್ತಿರವಾಗುವುದು ಅವರ ಬಯಕೆಯಾಗಿತ್ತು. ಆದರೆ ಇದುವೇ ಕೆಲವು ಸಂದೇಹಗಳಿಗೂ ಕಾರಣವಾಗಿದೆ.
ಒತ್ತೆಯಾಳುಗಳನ್ನು ಬಿಡಿಸಿಕೊಂಡ ಬಳಿಕ ಮತ್ತೆ ಯಾವುದಾದರೂ ನೆಪವನ್ನು ಹೂಡಿ ಗಾಝಾದ ಮೇಲೆ ನೇತನ್ಯಾಹು ದಾಳಿ ಮಾಡಬಹುದೇ? ಹಾಗೆ ಮಾಡಿದರೆ ಟ್ರಂಪ್ ನಿಲುವು ಏನು? ನೋಬೆಲ್ ಪ್ರಶಸ್ತಿಯನ್ನು ಪಡೆಯುವ ಉದ್ದೇಶಕ್ಕಾಗಿ ಮಾತ್ರ ಅವರು ಈ ಒಪ್ಪಂದಕ್ಕೆ ಶ್ರಮಿಸಿದ್ದಾರೆಯೇ ಎಂಬ ಪ್ರಶ್ನೆಗಳೂ ಇವೆ.
ಸದ್ಯ ಗಾಝಾದಲ್ಲಿ ನಿರಾಳತೆ ಕಾಣಿಸುತ್ತಿದೆ. ಇಸ್ರೇಲಿನಲ್ಲೂ ಸಂಭ್ರಮ ಕಾಣಿಸುತ್ತಿದೆ. ಈ ನಿರಾಳತೆ ಶಾಶ್ವತವಾಗಲಿ ಮತ್ತು ಟ್ರಂಪ್ ರ ನೊಬೆಲ್ ಹುಚ್ಚಿಗಾಗಿ ಏರ್ಪಟ್ಟ ಕದನ ವಿರಾಮ ಇದು ಆಗದಿರಲಿ ಎಂದಷ್ಟೇ ಹಾರೈಕೆ.












