ಸನ್ಮಾರ್ಗ ವಾರ್ತೆ
ಫೆಲೆಸ್ತೀನ್ ಸಂಘರ್ಷಕ್ಕೆ ದ್ವಿರಾಷ್ಟ್ರ ಸೂತ್ರ ಒಂದೇ ಪರಿಹಾರ ಎಂಬ ಕೂಗಿಗೆ ಮತ್ತಷ್ಟು ರಾಷ್ಟ್ರಗಳು ಧನಿ ಸೇರಿಸಿವೆ. ಈಗಾಗಲೇ ಬ್ರಿಟನ್ ಮತ್ತು ಫ್ರಾನ್ಸ್ ಗಳು ದ್ವಿರಾಷ್ಟ್ರ ಸಿದ್ದಾಂತವನ್ನು ಬೆಂಬಲಿಸಿದ್ದರೆ ಇದೀಗ ಕೆನಡ ಕೂಡ ಈ ದ್ವಿರಾಷ್ಟ್ರ ಸಿದ್ದಾಂತವನ್ನು ಬೆಂಬಲಿಸಿದೆ. ಸೆಪ್ಟೆಂಬರ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫೆಲೆಸ್ತೀನ್ ಅನ್ನು ರಾಷ್ಟ್ರವಾಗಿ ಅಂಗೀಕರಿಸುವುದಾಗಿ ಅದು ಹೇಳಿದೆ.
ಈ ಐತಿಹಾಸಿಕ ಘೋಷಣೆಯನ್ನು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷಕ್ಕೆ ದ್ವಿರಾಷ್ಟ್ರ ಒಂದೇ ಪರಿಹಾರ ಎಂಬುದನ್ನು ಇತರ ರಾಷ್ಟ್ರಗಳಿಗೂ ಮನವರಿಕೆ ಮಾಡಿಸುವುದು ಮತ್ತು ಒಮ್ಮತಾಭಿಪ್ರಾಯಕ್ಕೆ ತರುವುದು ತನ್ನ ಉದ್ದೇಶ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಗಾಝಾದ ನೆರವಿಗಾಗಿ 30 ಮಿಲಿಯನ್ ಡಾಲರ್ ಮತ್ತು ಪಶ್ಚಿಮದಂಡೆಯ ಆಡಳಿತವನ್ನು ಬೆಂಬಲಿಸುವುದಕ್ಕಾಗಿ 10 ಮಿಲಿಯನ್ ಡಾಲರ್ ನೀಡುವುದಾಗಿಯೂ ಅವರು ಈ ಸಂದರ್ಭದಲ್ಲಿ ಘೋಷಿಸಿದ್ದಾರೆ.
ಫೆಲೆಸ್ತೀನಿ ನಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕೆ ನಡೆಯುವ ಅಂತಾರಾಷ್ಟ್ರೀಯ ಪ್ರಯತ್ನಗಳ ಜೊತೆ ನಿಲ್ಲುವೆ. ಅದರಿಂದ ದೂರ ನಿಲ್ಲಲು ಕೆನಡಕ್ಕೆ ಸಾಧ್ಯವಿಲ್ಲ. ಪಶ್ಚಿಮ ಏಷ್ಯಾದ ಅಸ್ತಿರತೆಯನ್ನು ಕೊನೆಗೊಳಿಸುವುದಕ್ಕೆ ದ್ವಿರಾಷ್ಟ್ರ ಸಿದ್ದಾಂತವಲ್ಲದೆ ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಇದೇ ವೇಳೆ ಫೆಲೆಸ್ತೀನಿ ಅಥಾರಿಟಿಯಲ್ಲಿ ಮಹತ್ವದ ಬದಲಾವಣೆಗಳು ಕೂಡ ಆಗಬೇಕು ಎಂದು ಅವರು ಹೇಳಿದ್ದಾರೆ.
2026ರಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸುವುದು, ಭವಿಷ್ಯದ ಸರ್ಕಾರದಿಂದ ಹಮಾಸನ್ನು ಹೊರಗಿಡುವುದು ಇತ್ಯಾದಿ ಬದಲಾವಣೆಗಳನ್ನು ಫೆಲೆಸ್ತೀನಿ ಅಥಾರಿಟಿ ಜಾರಿಗೆ ತರಬೇಕು ಎಂದವರು ಹೇಳಿದ್ದಾರೆ.












