ಕ್ರಿಮಿನಲ್ ಕೇಸಿರುವ ಅಭ್ಯರ್ಥಿಗಳ ವಿವರ ಪ್ರಕಟಿಸಬೇಕು- ಸುಪ್ರೀಂ ಕೋರ್ಟು

0
766

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 13: ಕ್ರಿಮಿನಲ್ ಪ್ರಕರಣ ಇರುವ ಅಭ್ಯರ್ಥಿಗಳ ವಿವರಗಳನ್ನು ರಾಜಕೀಯ ಪಾರ್ಟಿಗಳು ತಮ್ಮ ವೆಬ್‍ಸೈಟ್‍ನಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕೆಂದು ಸುಪ್ರೀಂಕೋರ್ಟು ಹೇಳಿದೆ. ವಿವರಗಳನ್ನು 48 ಗಂಟೆಗಳೊಳಗೆ ಪ್ರಕಟಿಸಬೇಕು. 72 ಗಂಟೆಗಳೊಳಗೆ ಇದಕ್ಕೆ ಸಂಬಂಧಿಸಿದ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಸೂಚನೆ ಇದೆ. ಕ್ರಿಮಿನಲ್ ಕೇಸುಗಳ ವಿವರಗಳ ಜೊತೆಗೆ ,ಇಂತಹ ಹಿನ್ನೆಲೆಯ ವ್ಯಕ್ತಿಗಳನ್ನು ಯಾಕೆ ಅಭ್ಯರ್ಥಿಯನ್ನಾಗಿಸಲಾಯಿತು ಎಂದು ಪಾರ್ಟಿಗಳು ಸ್ಪಷ್ಟೀಕರಣವನ್ನೂ ನೀಡಬೇಕಾಗಿದೆ. ರಾಜಕೀಯ ಪಾರ್ಟಿಗಳು ವಿವರಗಳನ್ನು ನೀಡದಿದ್ದರೆ ಅದು ಕೋರ್ಟು ನಿಂದೆಯಾಗಿ ಪರಿಗಣಿಸಲಾಗುವುದು. ಗೆಲುವಿನ ಸಾಧ್ಯತೆಯನ್ನು ನೋಡಬಾರದು, ಅಭ್ಯರ್ಥಿಗಳ ಗುಣವನ್ನು ನೋಡಿ ಅಂತಹವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಕೋರ್ಟು ಹೇಳಿದೆ.

ವಕೀಲ ಆಶ್ವಿನಿ ಕುಮಾರ ಉಪಾಧ್ಯಾಯರ ಕೋರ್ಟು ನಿಂದೆ ಕುರಿತ ಅರ್ಜಿಯಲ್ಲಿ ಈ ಆದೇಶ ಹೊರಬಂದಿದೆ. ಗಂಭೀರ ಅಪರಾಧ ಕೃತ್ಯದಲ್ಲಿ ತೊಡಗಿದವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಪಾರ್ಟಿಗಳು ಉನ್ನತ ಮಟ್ಟದಿಂದ ನಿಷೇಧ ಹೇರುವ ಕಾನೂನು ಜಾರಿಗೆ ತರಬೇಕೆಂದು 2018ರಲ್ಲಿ ಸುಪ್ರೀಂಕೋರ್ಟಿನ ಐವರ ಸಂವಿಧಾನ ಪೀಠ ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು.