“50,000 ಜನರನ್ನು ರಾತ್ರೋರಾತ್ರಿ ಹೊರಹಾಕಲು ಸಾಧ್ಯವಿಲ್ಲ”: ಉತ್ತರಾಖಂಡ ಹಲ್ದ್ವಾನಿ ಭೂ ತೆರವಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

0
536

ಸನ್ಮಾರ್ಗ ವಾರ್ತೆ

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ರೈಲ್ವೇ ಭೂಮಿಯಲ್ಲಿನ ಅತಿಕ್ರಮಣವನ್ನು ತೆಗೆದುಹಾಕುವಂತೆ ಆದೇಶಿಸಿದ ಉತ್ತರಾಖಂಡ ಹೈಕೋರ್ಟ್‌‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.

ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನ್ಯಾಯಮೂರ್ತಿ ಎಸ್‌ಕೆ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರನ್ನೊಳಗೊಂಡ ಪೀಠವು ರೈಲ್ವೆ ಮತ್ತು ಉತ್ತರಾಖಂಡ ಸರ್ಕಾರದಿಂದ ಉತ್ತರ ಕೇಳಿದೆ‌.

“ಸಂಪೂರ್ಣ ಭೂಮಿ ರೈಲ್ವೆಗೆ ಸೇರಿದೆಯೇ ಅಥವಾ ಯಾವ ಭೂಮಿ ರಾಜ್ಯಕ್ಕೆ ಸೇರಿದೆ ಎಂಬ ಬಗ್ಗೆ ಸ್ಪಷ್ಟತೆ ಬೇಕು. 50,000 ಜನರನ್ನು ರಾತ್ರೋರಾತ್ರಿ ಹೊರಹಾಕಲು ಸಾಧ್ಯವಿಲ್ಲ. ಇದು ಮಾನವೀಯ ಸಮಸ್ಯೆ, ಸೂಕ್ತ ಪರಿಹಾರವನ್ನು ಕಂಡುಹಿಡಿಯಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ಕೇವಲ 7 ದಿನಗಳಲ್ಲಿ ಖಾಲಿ ಮಾಡಲು ಹೇಗೆ ಕೇಳುತ್ತೀರಿ?” ಎಂದು ಕೋರ್ಟ್ ಪ್ರಶ್ನಿಸಿದೆ. “ನಾವು ಪ್ರಾಯೋಗಿಕ ಪರಿಹಾರವನ್ನು ಕಂಡುಹಿಡಿಯಬೇಕು. ಇದು ಪರಿಹಾರದ ಮಾರ್ಗವಲ್ಲ. ಭೂಮಿಯ ಸ್ವರೂಪ, ಹಕ್ಕುಗಳ ಸ್ವರೂಪ, ಮಾಲೀಕತ್ವದ ಸ್ವರೂಪ ಇತ್ಯಾದಿಗಳಿಂದ ಉದ್ಭವಿಸುವ ಹಲವು ಕೋನಗಳಿವೆ, ಅವುಗಳನ್ನು ಪರಿಶೀಲಿಸಬೇಕು” ಎಂದಿದೆ‌. ಈ ಭೂಮಿಯಲ್ಲಿ ಹೆಚ್ಚಿನ ನಿರ್ಮಾಣ ಕಾಮಗಾರಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಹಾಗೂ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 7 ರಂದು ನಡೆಯಲಿದೆ.

ವಿವಾದಿತ 29 ಎಕರೆ ಪ್ರದೇಶದಲ್ಲಿ ಪ್ರಸ್ತುತ ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು, ನಾಲ್ಕು ಸರ್ಕಾರಿ ಶಾಲೆಗಳು, 11 ಖಾಸಗಿ ಶಾಲೆಗಳು, ಒಂದು ಬ್ಯಾಂಕ್‌, 2 ಬೃಹತ್‌ ನೀರಿನ ಟ್ಯಾಂಕ್‌ ಗಳು, 10 ಮಸೀದಿ, 4 ಮಂದಿರಗಳು, ಹಲವು ವಾಣಿಜ್ಯ ಮಳಿಗೆಗಳು ದಶಕಗಳಿಂದ ಇವೆ.

ಸುದೀರ್ಘ‌ ವಿಚಾರಣೆಯ ನಂತರ ಉತ್ತರಾಖಂಡ ಹೈಕೋರ್ಟ್‌ ಡಿ.20ರಂದು ತೀರ್ಪು ನೀಡಿದ್ದು, ಜ.9ರೊಳಗೆ ತಮಗೆ ಸೇರಿದ ವಸ್ತುಗಳನ್ನು ತೆಗೆದುಕೊಂಡು, ಸ್ಥಳವನ್ನು ತೆರವುಗೊಳಿಸಬೇಕು ಎಂದು ಅಲ್ಲಿನ ನಿವಾಸಿಗಳಿಗೆ ನೋಟಿಸ್‌ ನೀಡಿತ್ತು.