ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಈ ವರ್ಷ ಮೊಬೈಲ್ ಸೇವಾ ಕಂಪನಿಗಳು ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಇದೆ. 2021ರ ನವೆಂಬರ್ನಲ್ಲಿ ಮೊಬೈಲ್ ಸೇವಾ ಕಂಪೆನಿಗಳು ಸೇವಾ ಶುಲ್ಕವನ್ನು 42ರಷ್ಟು ಏರಿಕೆ ಮಾಡಿದ್ದವು. ಏರ್ಟೆಲ್ ಮತ್ತು ಜಿಯೊ ಕಂಪನಿಗಳೆರಡೂ ಪ್ರೀಪೇಯ್ಡ್ ಬಳಕೆದಾರರಿಗೆ 5G ಸೇವೆಯನ್ನು ಒದಗಿಸುತ್ತಿವೆ. ಇನ್ನು 5G ಸೇವೆ ಪಡೆಯಲು ಪ್ರತ್ಯೇಕ ಪ್ಲ್ಯಾನ್ ಆಯ್ದುಕೊಳ್ಳಬೇಕಾಗುತ್ತದೆ.
ಮೊಬೈಲ್ ಸೇವಾ ಕಂಪನಿಗಳು ಪ್ರೀ ಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಶುಲ್ಕಗಳೆರಡನ್ನೂ ಏರಿಕೆ ಮಾಡುವ ಸಾಧ್ಯತೆ ಇದೆ. ಪೋಸ್ಟ್ ಪೇಯ್ಡ್ ಬಳಕೆದಾರರು ತಮ್ಮ ಯೋಜನೆಗಳಲ್ಲಿ ಹೆಚ್ಚು ಶುಲ್ಕ ಏರಿಕೆಯನ್ನು ಕಾಣಲಿದ್ದಾರೆ ಎಂದು ಟೆಲಿಕಾಂ ವಿಶ್ಲೇಷಕರು ಅಂದಾಜಿಸಿದ್ದಾರೆ. ಇದೇ ವೇಳೆ ಮೊಬೈಲ್ ಸೇವಾ ಶುಲ್ಕ ಏರಿಕೆ 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಆಸುಪಾಸು ನಡೆದರೆ, ಅದರಿಂದ ರಾಜಕೀಯ ತಿರುಗೇಟು ಆಗುವ ಸಾಧ್ಯತೆಯೂ ಇದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ಮೊಬೈಲ್ ಸೇವಾ ಕಂಪನಿಗಳು ನವೆಂಬರ್, 2021ರಲ್ಲಿ ಮೊಬೈಲ್ ಸೇವಾ ಶುಲ್ಕಗಳ ಏರಿಕೆಯನ್ನು ಪ್ರಕಟಿಸಿದ್ದವು. ಮೊದಲಿಗೆ ವೊಡಾಫೋನ್-ಐಡಿಯಾ ಕಂಪನಿಯು ಮೊಬೈಲ್ ಸೇವಾ ಶುಲ್ಕವನ್ನು ಶೇ.42ರಷ್ಟು ಏರಿಕೆ ಮಾಡಿತ್ತು. ನಂತರ ವೊಡಾಫೋನ್-ಐಡಿಯಾ ಕಂಪನಿಯನ್ನು ಭಾರತೀಯ ಏರ್ಟೆಲ್ ಮತ್ತು ಜಿಯೊ ಕಂಪನಿಗಳು ಅನುಸರಿಸಿದ್ದವು. ಬಳಕೆದಾರರು 5G ಸೇವೆಯನ್ನು ಪಡೆಯಲು ಕನಿಷ್ಠ ಪ್ರಮಾಣದ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬೇಕಿದ್ದು, ಆ ನೀತಿ ಈಗಾಗಲೇ ಜಾರಿಯಲ್ಲಿದೆ. ನಿರ್ದಿಷ್ಟ ಸೇವಾ ಶುಲ್ಕ ಯೋಜನೆಗಳನ್ನು ಹೊರತುಪಡಿಸಿ, ಈಗಾಗಲೇ ಏರ್ಟೆಲ್ ಮತ್ತು ಜಿಯೊ ಕಂಪನಿಗಳೆರಡೂ ಪ್ರೀಪೇಯ್ಡ್ ಬಳಕೆದಾರರಿಗೆ 5G ಸೇವೆಯನ್ನು ಒದಗಿಸುತ್ತಿವೆ.












