“ಕಾರಲ್ಲಿ ನೀರು ತುಂಬಿದೆ, ನೀರಲ್ಲಿ ಕೊಚ್ಚಿ ಹೋಗುತ್ತಿದ್ದೇನೆ”: ವೆಂಕಟೇಶನ್‌ರವರ ಹೃದಯವಿದ್ರಾವಕ ಕೊನೆಯ ಫೋನ್ ಕರೆ ವೈರಲ್

0
1079

ಸನ್ಮಾರ್ಗ ವಾರ್ತೆ

ಹೈದರಾಬಾದ್, ಅ.16: ತೆಲಂಗಾಣದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿರುವಂತೆಯೇ ವೆಂಕಟೇಶ್ ಗೌಡ ಎಂಬವರ ಫೋನ್ ಕರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಜನರನ್ನು ಭಾವುಕ ಗೊಳಿಸುತ್ತಿದೆ.

“ಕಾರಿನ ಟೈರುಗಳು ಕೊಚ್ಚಿಹೋಗಿವೆ. ಹೇಗಾದರೂ ಮಾಡಿ ನನ್ನನ್ನು ರಕ್ಷಿಸಿ. ನನ್ನ ಕಾರು ನೀರಿನಲ್ಲಿ ಹರಿದು ಹೋಗತೊಡಗಿದೆ. ಕಾರಿನ ಒಳಗಡೆ ತುಂಬಾ ನೀರು ತುಂಬಿದೆ” ಎಂದು ಹೈದರಾಬಾದಿನ ವೆಂಕಟೇಶ್ ಎಂಬವರು ತನ್ನ ಕುಟುಂಬಸ್ಥರನ್ನು ಫೋನ್ ಮುಖಾಂತರ ಕರೆದು ರಕ್ಷಣೆಗಾಗಿ ಅಂಗಲಾಚುತ್ತಿರುವ ಕರೆ ಈಗ ವೈರಲ್ ಆಗಿದೆ.

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರು ಒಂದಷ್ಟು ಹೊತ್ತು ಮರಕ್ಕೆ ತಾಗಿ ನಿಂತಿತ್ತಾದರೂ ಆ ಬಳಿಕ ಮರವೇ ನೀರಿನಲ್ಲಿ ಕೊಚ್ಚಿ ಹೋಗುವ ಮೂಲಕ ಅವರು ಸಾವಿಗೀಡಾಗಿದ್ದರು.

ತನ್ನನ್ನು ರಕ್ಷಿಸಲು ಯಾರನ್ನಾದರೂ ಕಳುಹಿಸಬಹುದೇ ಎಂದು ವೆಂಕಟೇಶ ತನ್ನ ಗೆಳೆಯನಿಗೆ ಕೇಳುತ್ತಿರುವುದು ಮತ್ತು ಕಾರಿನಿಂದ ಇಳಿದು ಹತ್ತಿರದ ಮರವನ್ನು ಏರಿ ಪಾರಾಗುವಂತೆ ಗೆಳೆಯ ವಿನಂತಿಸುವುದು ಕರೆಯಲ್ಲಿದೆ.

ಕಾರಿನಿಂದ ಇಳಿದರೆ ನೀರು ತನ್ನನ್ನು ಕೊಚ್ಚಿಕೊಂಡು ಹೋಗಬಹುದು, ಈಗ ಮರಕ್ಕೆ ತಾಗಿ ಕಾರು ನಿಂತಿದೆ, ಈಗ ಮರವೂ ಕೊಚ್ಚಿಕೊಂಡು ಹೋಯಿತು. ನಾನೂ ಹೋಗುತ್ತಿದ್ದೇನೆ ಎಂದು ಆತ ಕೊನೆಯ ಬಾರಿ ತನ್ನ ಗೆಳೆಯನಲ್ಲಿ ಹೇಳುವುದು ಕರೆಯಲ್ಲಿದೆ.

ಧೈರ್ಯದಿಂದಿರು, ನಿನಗೇನೂ ಆಗಲ್ಲ ಎಂದು ಗೆಳೆಯ ಉತ್ತರಿಸುವುದು ಈ ಒಂದು ನಿಮಿಷ 40 ಸೆಕೆಂಡುಗಳ ಕರೆಯಲ್ಲಿ ದಾಖಲಾಗಿದೆ.