ಸನ್ಮಾರ್ಗ ವಾರ್ತೆ
ಆರ್ಎಸ್ಎಸ್ ಕಾರ್ಯಕರ್ತರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಕ್ಷೇಪಾರ್ಹ ಕಾರ್ಟೂನ್ ಹಂಚಿದ್ದಾರೆ ಎಂಬ ಆರೋಪ ಹೊತ್ತಿದ್ದ ಕಾರ್ಟುನಿಸ್ಟ್ ಹೇಮಂತ್ ಮಾಲವಿಯ ಅವರಿಗೆ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತನ್ನ ಕಾರ್ಟೂನಿಗಾಗಿ ಅವರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಈಗಾಗಲೇ ಕ್ಷಮೆಯಾಚನೆ ಮಾಡಿದ್ದಾರೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಮತ್ತು ಅಂಜಾರಿಯ ಅವರು ಪೊಲೀಸರ ತನಿಖೆಗೆ ಸಹಕಾರ ನೀಡದಿದ್ದರೆ ಈ ಜಾಮೀನನ್ನು ರದ್ದು ಪಡಿಸಬಹುದು ಎಂದು ಹೇಳಿದ್ದಾರೆ.
ಮಾಲವಿಯ ಅವರು ನಿಶ್ಯರ್ಥ ಕ್ಷಮೆ ಯಾಚಿಸಿದ್ದಾರೆ ಎಂದು ಅವರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯವಾದಿ ವೃಂದ ಗ್ರೋವಾರ್ ತಿಳಿಸಿದರು. ಅವರ ಈ ಕ್ಷಮೆಯಾಚನೆ ಹೃದಯದಿಂದ ಬಂದಿದೆ ಪೆನ್ನಿನಿಂದಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಅದಕ್ಕೆ ನ್ಯಾಯಾಧೀಶರು ಉತ್ತರಿಸಿದರು.
ಮಾಳವಿಯ ಅವರ ವಿರುದ್ಧ ಮಧ್ಯಪ್ರದೇಶದ ಇಂದೋರ್ ನಲ್ಲಿ ಪ್ರಕರಣ ದಾಖಲಾಗಿತ್ತು. ಧಾರ್ಮಿಕ ಸೌಹಾರ್ದವನ್ನು ಕೆಡಿಸುತ್ತದೆ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಿ ನ್ಯಾಯವಾದಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರಾದ ವಿನಯ್ ಜೋಶಿ ಅವರು ಕೇಸು ದಾಖಲಿಸಿದ್ದರು.
ಈ ಮೊದಲು ಮಧ್ಯಪ್ರದೇಶದ ಹೈಕೋರ್ಟು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.












