ಗುಲ್ಫಿಶ ಫಾತಿಮಾ: ಜಾಮೀನು ನಿರಾಕರಣೆಯ ಐದು ವರ್ಷಗಳು

0
264

ಸನ್ಮಾರ್ಗ ವಾರ್ತೆ

ಯುಎಪಿಎ ಕಾಯ್ದೆಯಡಿ ಬಂಧಿತರಾಗಿ 1978 ದಿನಗಳನ್ನು ಕಳೆದ ಗುಲ್ಫಿಶಾ ಫಾತಿಮಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಬಂಡಾಯದ ಧ್ವನಿಯನ್ನು ಬಂಧಿಸಲಾಗಿದೆ, ಪ್ರಜಾತಂತ್ರ ಸ್ವಯಂ ಶಿಕ್ಷೆಗೆ ಒಳಪಡುತ್ತಿದೆ ಎಂಬ ಪೋಸ್ಟರ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಫ್ರೀ ಗುಲ್ಫಿಶಾ ಎಂಬ ಹೆಸರಲ್ಲಿ ಸೋಶಿಯಲ್ ಮೀಡಿಯಾ ಮಾತಾಡುತ್ತಿದೆ. ಗುಲ್ಫಿಶ ಅವರ ಜಾಮೀನು ಕೋರಿಕೆಯನ್ನು ದಿನದ ಹಿಂದೆ ದೆಹಲಿ ಹೈಕೋರ್ಟು ತಳ್ಳಿ ಹಾಕಿತ್ತು.

ದಿನದ ಹಿಂದೆ ದೆಹಲಿ ಹೈಕೋರ್ಟು ಜಾಮೀನು ನಿರಾಕರಿಸಿದ ಸಿ ಎ ಎ ವಿರೋಧಿ 10 ಕಾರ್ಯಕರ್ತರ ಪೈಕಿ ಗುಲ್ಫಿಶಾ ಒಬ್ಬರಾಗಿದ್ದಾರೆ.

ದೆಹಲಿ ಹೈ ಕೋರ್ಟು ಇವರೆಲ್ಲರಿಗೆ ಜಾಮೀನು ನೀಡುತ್ತದೆ ಎಂಬ ನಿರೀಕ್ಷೆ ಇತ್ತು. ಅವರ ಗೆಳೆಯರು ಇವರೆಲ್ಲ ಜೈಲಿನಿಂದ ಹೊರಬರುವುದನ್ನು ಕಾಯುತ್ತಿದ್ದರು. ಇವರ ವಿರುದ್ಧ ಉದ್ದೇಶಪೂರ್ವಕ ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬ ಆರೋಪ ಬಲವಾಗಿದೆ.

ಈ ಹತ್ತು ಮಂದಿಯ ಜಾಮೀನು ಕೋರಿಕೆಯನ್ನು ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರಾದ ಜಸ್ಟಿಸ್ ನವೀನ್ ಚಾವ್ಲಾ ಮತ್ತು ಶಾಲಿಂದಾರ್ ಕೌರ್ ಅವರಿದ್ದ ಪೀಠ ತಳ್ಳಿ ಹಾಕಿತ್ತು. ಕಳೆದ ಐದು ವರ್ಷಗಳಿಂದ ಇವರೆಲ್ಲ ಜೈಲಿನಲ್ಲಿದ್ದಾರೆ.

ನ್ಯಾಯಾಲಯ ಮತ್ತೊಮ್ಮೆ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಎಡವಿದೆ. ನ್ಯಾಯಾಧೀಶರ ಮೇಲೆ ನ್ಯಾಯಾಧೀಶರು ಬೆಂಚ್ ಮೇಲೆ ಬೆಂಚ್ ರಚನೆಯಾದ್ರು ಯಾರೂ ಕೂಡ ಧೈರ್ಯವನ್ನು ಪ್ರದರ್ಶಿಸುತ್ತಿಲ್ಲ. ಉದ್ದೇಶಪೂರ್ವಕ ಹೂಡಲಾದ ನಕಲಿ ಮೊಕದ್ದಮೆಗಳನ್ನು ಎದುರಿಸಲು ತಯಾರಾಗುತ್ತಿಲ್ಲ. ಗುಲ್ಫಿಶ ಅವರು ವಿಚಾರಣೆ ಇಲ್ಲದೆ ಐದು ವರ್ಷಗಳಿಂದ ಜೈಲಲ್ಲಿದ್ದಾರೆ. ಧೈರ್ಯದಿಂದ ಮಾತಾಡುವ ಗುಲ್ಫಿಶಾರಂತಹ ಯುವ ಮಹಿಳೆಯನ್ನು ಸರಕಾರ ಸಹಿಸಿಕೊಳ್ಳುತ್ತಿಲ್ಲ. ಇನ್ನು ಮುಂದೆ ಯಾರೂ ಇಂಥ ಧೈರ್ಯ ಪ್ರದರ್ಶಿಸಬಾರದು ಎಂಬುದಕ್ಕಾಗಿ ಸರ್ಕಾರ ಹೀಗೆ ಮಾಡ್ತಾ ಇದೆ. ಕಾನೂನಿನ ಹೆಸರಲ್ಲಿ ನ್ಯಾಯಾಲಯ ಕೂಡ ಅನಗತ್ಯ ಶಿಕ್ಷೆ ನೀಡುತ್ತಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಒಬ್ಬರು ಬರೆದಿದ್ದಾರೆ.

ಗುಲ್ಫಿಶ ಅವರನ್ನು 2020 ಮೇ ಒಂದರಂದು ರಂದು ಬಂಧಿಸಲಾಗಿತ್ತು. 2022 ಮೇಯಲ್ಲಿ ಮೊದಲ ಬಾರಿ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಮೇಲೆ ಹೈ ಕೋರ್ಟ್ ನ ಮೂರು ಬೆಂಚುಗಳಲ್ಲಿ ಮತ್ತು ಮೂರು ಹಂತಗಳಲ್ಲಿ ವಿಚಾರಣೆ ನಡೆಯಿತು ಮತ್ತು ಮೂರು ವರ್ಷಗಳ ಕಾಲ ತಡ ಮಾಡಲಾಯಿತು. ಕೊನೆಗೆ ಜಾಮೀನು ನಿರಾಕರಿಸಲಾಯಿತು.

ಗುಲ್ಫಿಶರಿಗೆ ಈಗ 31 ವರ್ಷ.