ಸನ್ಮಾರ್ಗ ವಾರ್ತೆ
ಉ.ಪ್ರ: ಶುಕ್ರವಾರ ಹಾಗೂ ಈದ್ ಪ್ರಾರ್ಥನೆಯ ಸಮಯದಲ್ಲಿ ಕಪ್ಪು ಪಟ್ಟಿ ಧರಿಸಿ ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ ಸೂಚಿಸಿದ ಮುಜಫರ್ನಗರದ ನೂರಾರು ಮುಸ್ಲಿಮರ ವಿರುದ್ಧ ಉತ್ತರ ಪ್ರದೇಶ ಪೊಲೀಸರು “ಶಾಂತಿ ಭಂಗ” ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಸ್ಲಿಮರು ಮಸೀದಿಗಳ ಆವರಣದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು, ಈ ವರ್ತನೆ ಸಾರ್ವಜನಿಕರನ್ನು ಪ್ರಚೋದಿಸುವ ಸಾಧ್ಯತೆ ಇದೆ ಎಂದ ಪೊಲೀಸರು, ಭಾರತೀಯ ನಾಗರಿಕ ರಕ್ಷಣಾ ಸಂಹಿತೆಯ ಸೆಕ್ಷನ್ 130ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ.
ನಗರ ಮ್ಯಾಜಿಸ್ಟ್ರೇಟ್ ವತಿಯಿಂದ ನೀಡಲಾದ ನೋಟಿಸ್ನಲ್ಲಿ, ಈ ವ್ಯಕ್ತಿಗಳು ಭವಿಷ್ಯದಲ್ಲಿ ತಪ್ಪು ಮಾಹಿತಿ ಹರಡಬಹುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಏಪ್ರಿಲ್ 16ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದು, ಶಾಂತಿ ಕಾಪಾಡಲು ರೂ.2 ಲಕ್ಷ ಶ್ಯೂರಿಟಿ ಬಾಂಡ್ ಸಲ್ಲಿಸಲು ಸೂಚಿಸಲಾಗಿದೆ. ಕಪ್ಪು ಪಟ್ಟಿ ಧರಿಸದಿದ್ದರೂ ಮದರಸಾ ಮಹಮುದಿಯಾದ ಪ್ರಾಂಶುಪಾಲ ನಯೀಮ್ ತ್ಯಾಗಿಗೂ ನೋಟಿಸ್ ದೊರೆತಿದೆ.
ಪ್ರತಿಭಟನಾಕಾರರು ತಮ್ಮ ಪ್ರತಿಕ್ರಿಯೆಯಲ್ಲಿ, ಯಾರನ್ನೂ ಪ್ರಚೋದಿಸಿಲ್ಲ, ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಇದು ಒಂದು ಸಾಂಕೇತಿಕ ಪ್ರತಿಭಟನೆ ಮಾತ್ರವಾಗಿತ್ತು. ಆದರೆ, ಮುಜಫರ್ನಗರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗಳಿಂದ ಪಡೆದ ಚಾರ್ಜ್ ವರದಿಯಲ್ಲಿ ಕಪ್ಪು ಪಟ್ಟಿ ಧರಿಸುವ ಕ್ರಿಯೆಯು ನಿಗದಿತ ಸ್ಥಳ, ಸಮಯ ಹಾಗೂ ಸಂದರ್ಭದ ಹಿನ್ನೆಲೆ ಆಧರಿಸಿ ಶಾಂತಿ ಭಂಗವಾಗಬಹುದಾದ ಕಾರ್ಯವೆಂದು ಹೇಳಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯ ಪರಿಚಯದ ನಂತರ ಉತ್ತರ ಪ್ರದೇಶದ ಪ್ರಮುಖ ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಲಕ್ನೋ, ಸಂಭಾಲ್, ಮೀರತ್, ಮೊರಾದಾಬಾದ್, ಶಾಮ್ಲಿ, ಬರೇಲಿ, ರಾಂಪುರ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಮುಜಫರ್ನಗರದಲ್ಲಿ ಡಿಐಜಿ ಸಹರಾನ್ಪುರ, ಎಸ್ಎಸ್ಪಿ ಮತ್ತು ಎಡಿಎಂ ನೇತೃತ್ವದಲ್ಲಿ ಧ್ವಜ ಮೆರವಣಿಗೆ ನಡೆಸಿ, ಕಾನೂನು ಸುವ್ಯವಸ್ಥೆಗೆ ಒತ್ತು ನೀಡಲಾಗಿದೆ.












