ರೈತರ ಪ್ರತಿಭಟನೆ ಹತ್ತಿಕ್ಕಲು ಟ್ವಿಟರ್ ಮೇಲೆ ಕೇಂದ್ರ ಒತ್ತಡ: ಜಾಕ್ ಡೋರ್ಸಿ ಗಂಭೀರ ಆರೋಪ

0
153

ಸನ್ಮಾರ್ಗ ವಾರ್ತೆ

ಐತಿಹಾಸಿಕ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಭಾರತದಲ್ಲಿ ಟ್ವಿಟ್ಟರ್ ಬಂದ್‌ ಮಾಡುವ ಬೆದರಿಕೆ ಒಡ್ಡಲಾಗಿತ್ತು ಎಂದು ಟ್ವಿಟ್ಟರ್‌ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿ ಹೇಳಿದ್ದಾರೆ.

ಜಾಕ್ ಡೋರ್ಸಿ,ಯವರು ʻಬ್ರೇಕಿಂಗ್‌ ದಿ ಪಾಯಿಂಟ್ಸ್‌ʼ ಯೂಟ್ಯೂಬ್‌ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರೈತರ ಪ್ರತಿಭಟನೆಯ ವೇಳೆ ರೈತ ಚಳವಳಿಯನ್ನು ಬೆಂಬಲಿಸಿದ ಮತ್ತು ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿ ಟ್ವೀಟ್‌ ಮಾಡಿದ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಜನಸಮಾನ್ಯರ ಟ್ವಿಟರ್‌ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರವು ನಮಗೆ ಮನವಿ ಮಾಡತ್ತು ಎಂದವರು ಹೇಳಿದ್ದಾರೆ.

ʻಸರ್ಕಾರದ ಸೂಚನೆಯನ್ನು ಪಾಲಿಸದಿದ್ದಲ್ಲಿ ಭಾರತದಲ್ಲಿ ಟ್ವಿಟ್ಟರ್ ಸಂಪೂರ್ಣ ಬಂದ್ ಮಾಡುತ್ತೇವೆ, ನಿಮ್ಮ ಸಿಬ್ಬಂದಿಗಳ ಮನೆಗಳ ಮೇಲೆ ದಾಳಿ ನಡೆಸಲಾಗುವುದು, ನಿಮ್ಮ ಕಚೇರಿಗಳನ್ನು ಮುಚ್ಚಲಾಗುವುದು, ಕಾನೂನು ಹೋರಾಟಕ್ಕೆ ಸಿದ್ಧರಾಗಿರಿ ಎಂದು ಬೆದರಿಕೆ ಹಾಕಲಾಗಿತ್ತು. ನಮ್ಮ ಕೆಲ ಉದ್ಯೋಗಿಗಳ ಮನೆ ಮೇಲೆ ದಾಳಿ ಕೂಡ ಆಗಿತ್ತುʼ ಎಂದು ಜಾಕ್ ಡೋರ್ಸಿ ಗಂಭೀರ ಆರೋಪ ಮಾಡಿದ್ದಾರೆ.

ರೈತರ ಪ್ರತಿಭಟನೆ ವೇಳೆ ಭಾರತದಲ್ಲಿ ಟ್ವಿಟ್ಟರ್‌ ನಿಷೇಧಿಸುವ ಬೆದರಿಕೆ ಹಾಕಲಾಗಿತ್ತು ಎಂಬ ಟ್ವಿಟ್ಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸಿ ಹೇಳಿಕೆಯನ್ನು ಕೇಂದ್ರ ಸರ್ಕಾರವು ನಿರಾಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ʻಜಾಕ್​ ಹೇಳಿಕೆ ಶುದ್ಧ ಸುಳ್ಳುʼ ಎಂದಿದ್ದಾರೆ. 2020-2022ರ ಅವಧಿಯಲ್ಲಿ ಟ್ವಿಟ್ಟರ್‌, ಹಲವು ಬಾರಿ ದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿತ್ತು. ರೈತರ ಪ್ರತಿಭಟನೆ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡಿದ್ದವು. ಇಂತಹ ಸುಳ್ಳು ಸುದ್ದಿಗಳನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಾಗಿತ್ತು ಎಂದು ರಾಜೀವ್‌ ಹೇಳಿದ್ದಾರೆ.

ಹಿರಿಯ ವಕೀಲರಾದ ಪ್ರಶಾಂತ್‌ ಭೂಷಣ್‌, ರಾಜ್ಯಸಭಾ ಸದಸ್ಯ ರಣದೀಪ್‌ ಸಿಂಗ್‌ ಸುರ್ಜೇವಾಲ ಸೇರಿದಂತೆ ಹಲವರು, ಜಾಕ್ ಡೋರ್ಸಿ ಸಂದರ್ಶನದ ತುಣುಕುಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಜಾಕ್ ಡೋರ್ಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್‌, ʼರೈತರ ಪ್ರತಿಭಟನೆಗೆ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ನಾವು ನಿರೀಕ್ಷಿಸಿದ ರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂಬ ಮಾಹಿತಿ ನಮಗೆ ಇತ್ತು. ಅವರ ಮಟ್ಟದಲ್ಲಿ ತಡೆಯಲು ಪ್ರಯತ್ನಿಸಿದ್ದರು. ಈ ವಿಚಾರವನ್ನು ಜಾಕ್ ಡೋರ್ಸಿ ಇದೀಗ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಈ ಸಂಸ್ಥೆಗಳು ಯಾರ ಒತ್ತಡಕ್ಕೂ ಒಳಗಾಗುವುದಿಲ್ಲ. ಕೇಂದ್ರ ಸರ್ಕಾರವು ಅಂತಹ ಪ್ರಯತ್ನಗಳನ್ನು ಮಾಡಿರಬೇಕುʼ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ಟಿಕಾಯತ್‌ ಪ್ರತಿಕ್ರಿಯಿಸಿದ್ದಾರೆ.

SHARE
Previous articleIssue 02 PDF
Next articleIssue 03 PDF