ರಾಮ ಸೇತುವೆ ಬಗ್ಗೆ ಅಧ್ಯಯನ ನಡೆಸಲು ಸಂಶೋಧನಾ ಕೇಂದ್ರಕ್ಕೆ ಅನುಮೋದನೆ ನೀಡಿದ ಕೇಂದ್ರ ಸರಕಾರ

0
920

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ 48 ಕಿ.ಮೀ ಉದ್ದದ ರಾಮ ಸೇತು ರೂಪುಗೊಂಡಿದ್ದು ಹೇಗೆ ಎಂಬುದನ್ನು ಕಂಡುಹಿಡಿಯಲು ಮತ್ತು ನೀರೊಳಗಿರುವ ಸಾಧನಗಳನ್ನು ಸಂಶೋಧನೆ ನಡೆಸುವ ಯೋಜನೆಗೆ ನರೇಂದ್ರ ಮೋದಿ ಸರಕಾರ ಅನುಮತಿ ನೀಡಿದೆ.

ರಾಮ ಸೇತುವೆ ಅಥವಾ ಆಡಮ್ಸ್ ಸೇತುವೆ ಎಂದೂ ಕರೆಯಲ್ಪಡುವ ರಾಮ್ ಸೇತು ಅಥವಾ ನಲಾ ಸೇತು, ಸುಣ್ಣದ ಕಲ್ಲುಗಳ ಸರಪಳಿಯಾಗಿದ್ದು, ಪಂಬನ್ ದ್ವೀಪ ಹಾಗೂ ಇದನ್ನು ರಾಮೇಶ್ವರಂ ದ್ವೀಪ ಎಂದೂ ಕರೆಯಲಾಗುತ್ತಿದೆ. ಇದು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯಲ್ಲಿರುವ ಮನ್ನಾರ್ ದ್ವೀಪವಾಗಿದೆ.

ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾ(ASI) ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಕಿಯಾಲಜಿ ಕುರಿತ ಕೇಂದ್ರ ಸಲಹಾ ಮಂಡಳಿಯು ರಾಮಸೇತುವೆ ಬಗ್ಗೆ ಸಂಶೋಧನಾ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಈಗ ಕೇಂದ್ರ ಅನುಮೋದಿಸಿದ್ದು, ಪ್ರಾಚೀನ ಭಾರತದ ಎರಡು ಪ್ರಮುಖ ಹಿಂದೂ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಕಾರಣದಿಂದಾಗಿ ಈ ಸೇತುವೆ ಧಾರ್ಮಿಕ ಮಹತ್ವವನ್ನು ಹೊಂದಿದೆ.

ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನೊಗ್ರಫಿ (NIO) ಗೋವಾ ನಡೆಸುವ ಈ ಅಧ್ಯಯನವು ರಾಮಾಯಣದ ಅವಧಿ ನಿರ್ಧರಿಸಲು ಮತ್ತು ರಾಮ ಸೇತು ರಚನೆಯ ಹಿಂದಿನ ಪ್ರಕ್ರಿಯೆಯತ್ತ ಗಮನ ಹರಿಸಲು ನೆರವು ನೀಡಲಿದೆ. ರಾಮ ಸೇತುವೆ ಸುತ್ತಮುತ್ತ ಯಾವುದೇ ಮುಳುಗಿರುವ ವಸ್ತುಗಳು ಏನಾದರೂ ಇದೆಯೇ ಎಂದು ಕಂಡುಹಿಡಿಯಲು ಕೂಡ ಸಹಾಯ ಮಾಡಲಿರುವುದಾಗಿ ವರದಿಯಾಗಿದೆ.

ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷವೇ ಸಂಶೋಧನೆ ಪ್ರಾರಂಭವಾಗುವ ಸಾಧ್ಯತೆಯಿದೆ. ಮೋದಿ ಸರಕಾರ ಇದನ್ನು ಚುನಾವಣಾ ಅಸ್ತ್ರವಾಗಿ ಬಳಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಭೌಗೋಳಿಕ ಪುರಾತತ್ವ, ರೇಡಿಯೊಮೆಟ್ರಿಕ್ ಮತ್ತು ಥರ್ಮೋಲ್ಯುಮಿನೆನ್ಸಿನ್ಸ್ (TL) ಡೇಟಿಂಗ್ ಅನ್ನು ಆಧರಿಸಿ ಈ ಪ್ರಸ್ತಾವಿತ ಅಧ್ಯಯನ ನಡೆಯಲಿದೆ ಎಂದು ಎನ್ಐಒ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.