ಮೂಢನಂಬಿಕೆಗೆ ಇಬ್ಬರು ಹೆಣ್ಣು ಮಕ್ಕಳನ್ನು ಬಲಿಪಡೆದ ವಿದ್ಯಾವಂತ ಹೆತ್ತವರು…!

0
1539

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಹೃದಯ ವಿದ್ರಾವಕ ಘಟನೆ

ಸನ್ಮಾರ್ಗ ವಾರ್ತೆ

ಆಂಧ್ರಪ್ರದೇಶ: ಜ. 24ರಂದು ರಾತ್ರಿ ಆಂಧ್ರಪ್ರದೇಶದ ಮದನಪಲ್ಲಿ ನಗರ ದಂಗಾಗಿತ್ತು. ಮೂಢ ನಂಬಿಕೆಯನ್ನು ನಂಬಿ ವಿದ್ಯಾವಂತ ಹೆತ್ತ ತಂದೆ-ತಾಯಿಯೇ ತಮ್ಮ ಹೆಣ್ಣು ಮಕ್ಕಳಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದ್ದು, ಇಡೀ ದೇಶವೇ ಬೆಚ್ಚಿಬಿದ್ದಿದೆ.

ಮದನಪಲ್ಲಿಯ ಪ್ರತಿಷ್ಠಿತ ಶಿಕ್ಷಣೋದ್ಯಮಿಯಾಗಿರೋ ದಂಪತಿಯೇ ಧಾರ್ಮಿಕ ಅಂಧತ್ವದಲ್ಲಿ ಮುಳುಗಿ ತಮ್ಮ 22 ವರ್ಷದ ಮಗಳು ಹಾಗೂ 27 ವರ್ಷದ ಮತ್ತೊಬ್ಬ ಮಗಳನ್ನ ಡಂಬಲ್ಸ್‌ನಿಂದ ಹೊಡೆದು ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಆಧ್ಯಾತ್ಮಿಕ ಗುರು ಮೆಹರ್‌ ಬಾಬಾ ಅನುಯಾಯಿಗಳಾಗಿದ್ದ ಪುರುಷೋತ್ತಮ್‌ ನಾಯ್ಡು ಹಾಗೂ ವಿ. ಪದ್ಮಜಾ ತಮ್ಮ ಮಕ್ಕಳನ್ನೇ ಬಲಿ ಕೊಟ್ಟಿದ್ದಾರೆ.

ಜನವರಿ 24 ಅಂದ್ರೆ ನಿನ್ನೆ ಕಲಿಯುಗದ ಅಂತ್ಯ ಅಂತ ನಂಬಿಕೊಂಡು, ನಮ್ಮ ಮಕ್ಕಳನ್ನ ಕೊಂದ್ರೆ ಮತ್ತೆ ಮರುದಿನವೇ ಬದುಕಿ ಬರ್ತಾರೆ ಅನ್ನೋ ಅಂಧ ನಂಬಿಕೆಯಿಂದ ಈ ಹೀನ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದನಪಲ್ಲಿಯಲ್ಲಿ ಮಾಸ್ಟರ್ ಮೈಂಡ್ಸ್‌ ಐಐಟಿ ಟ್ಯಾಲೆಂಟ್ಸ್ ಶಾಲೆ ನಡೆಸ್ತಿರೋ ಪುರುಷೋತ್ತಮ್‌ ನಾಯ್ಡು ದಂಪತಿ ಹುಚ್ಚಾಟಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ದಂಪತಿಯ ಹಿರಿಯ ಪುತ್ರಿ 27 ವರ್ಷದ ಅಲೆಖ್ಯಾ ಎಂಬಿಎ ಬಳಿಕ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಉದ್ಯೋಗದಲ್ಲಿದ್ದಳು. ಮತ್ತೊಬ್ಬ ಮಗಳು 22 ವರ್ಷದ ದಿವ್ಯಾ ಎ.ಆರ್ ರೆಹಮಾನ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಮ್ಯೂಸಿಕ್‌ ಕೋರ್ಸ್ ಮಾಡುತ್ತಿದ್ದಳು.

ಸ್ವಘೋಷಿತ ಮೆಹರ್‌ ಬಾಬಾ ಹಾಗೂ ಶಿರಡಿ ಸಾಯಿ ಬಾಬಾ ಆರಾಧಕರಾಗಿರೋ ಪುರುಷೋತ್ತಮ್‌ ನಾಯ್ಡು ವಿಕೃತಿ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದು, ದೇವರ ಕೋಣೆಯಲ್ಲೇ ಹೆಣ್ಣು ಮಕ್ಕಳಿಬ್ಬರನ್ನೂ ವಿವಸ್ತ್ರಗೊಳಿಸಿ ಪೂಜೆ ಮಾಡಿ ಆನಂತರ ಡಂಬಲ್ಸ್‌ ಮೂಲಕ ಹಲ್ಲೆ ಮಾಡಿ ಸಾಯಿಸಿದ್ದಾರೆ ಎನ್ನಲಾಗಿದೆ.

ತಮ್ಮಿಬ್ಬರು ಹೆಣ್ಣು ಮಕ್ಕಳನ್ನ ದೇವರ ಹೆಸರಿನಲ್ಲಿ ಹತ್ಯೆಗೈದಿರೋದು ಮಾತ್ರ ನಿಜಕ್ಕೂ ದುರಂತ. ಆರೋಪಿ ದಂಪತಿ ಯಾಕೆ ಇಂಥಾ ಮನಸ್ಥಿತಿಗೆ ತಲುಪಿದ್ದರು ಅನ್ನೋದು ಮಾತ್ರ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

ಆರೋಪಿ ದಂಪತಿ ಸ್ವಯಂ ಘೋಷಿತ ದೇವಮಾನವನ ಮೆಹರ್‌ ಬಾಬಾ ಸಂಪರ್ಕಕ್ಕೆ ಬಂದಿದ್ದು, ಅವನ ಪ್ರಭಾವಕ್ಕೆ ಒಳಗಾಗಿ ಕಲಿಯುಗ ಅಂತ್ಯವಾಗುತ್ತಿದೆ, ಸತ್ಯಯುಗ ಆರಂಭವಾಗಲಿದೆ, ನೀವು ಅದಕ್ಕಾಗಿ ನಿಮ್ಮ ಮಕ್ಕಳಿಬ್ಬರ ಬಲಿದಾನ ಮಾಡಬೇಕು, ಮಾಡಿದರಷ್ಟೆ ನಿಮಗೆ ಸತ್ಯಯುಗದಲ್ಲಿ ಮರುಹುಟ್ಟು ಸಾಧ್ಯ ಎಂದು ನಂಬಿಸಿದ್ದಾನೆ. ಇದನ್ನೇ ನಂಬಿ ಈ ಕೃತ್ಯ ಎಸಗಿದ್ದಾರೆ ಎಂದು ಪೋಲೀಸರ ಪ್ರಾಥಮಿಕ ಹಂತದ ತನಿಖೆಯಿಂದ ಮಾಹಿತಿ ತಿಳಿದು ಬಂದಿದೆ.

ವೆಬ್ ಸೀರೀಸ್ ನ ಪ್ರಭಾವವೇ?
ಇತ್ತೀಚಿನ ದಿನಗಳಲ್ಲಿ ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ವೆಬ್ ಸೀರೀಸ್ ವೀಕ್ಷಿಸುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಓಟಿಟಿ ಎಂದರೆ ಓವರ್ ದಿ ಟಾಪ್ ಮತ್ತು ಇಂಟರ್ನೆಟ್ ಮೂಲಕ ವಿಷಯವನ್ನು ತಲುಪಿಸುವ ಯಾವುದೇ ಸ್ತ್ರೀಮಿಂಗ್ ಸೇವೆಯನ್ನು ಸೂಚಿಸುತ್ತದೆ. ಆಧುನಿಕ ತಾಂತ್ರಿಕತೆ ಬೆಳೆದಂತೆ ಜನರು ಇಂಟರ್ನೆಟ್ ಮೂಲಕ ತಮಗೆ ಇಷ್ಟ ಇರುವುದನ್ನು ನೋಡಲು ತಮಗೆ ಇಷ್ಟ ಇರುವ ಸಮಯದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಭಾರತದಲ್ಲಿ ಕೆಲವು ತಿಂಗಳುಗಳಿದ ವೆಬ್ ಸೀರೀಸ್‌ಗಳ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗಿದೆ.

2018ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಸೈಫ್ ಅಲಿ ಖಾನ್ ನಟನೆಯ The Sacred Games ನಲ್ಲಿ ಕೂಡ ಇಂತಹದ್ದೇ ಘಟನೆಯುಳ್ಳ ಕಥಾವಸ್ತು ಹೊಂದಿದ್ದು, ಇದರ ಪ್ರಭಾವ ಇತ್ತೇ ಎಂಬುದು ಕೂಡ ಆಂಧ್ರಪ್ರದೇಶದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.