ಮೋಬ್ ಲಿಂಚಿಂಗ್ ತಡೆಯಲು ಉಡುಗೆಯ ಶೈಲಿ ಬದಲಾಯಿಸಿಕೊಳ್ಳಿ: ಮುಸ್ಲಿಮರಿಗೆ ಮಾಜಿ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಸಲಹೆ

0
281

ಸನ್ಮಾರ್ಗ ವಾರ್ತೆ

ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಮತ್ತು ಲೇಖಕ ನಿಯಾಝ್‌ ಖಾನ್, ಮೋಬ್ ಲಿಂಚಿಂಗ್ (ಗುಂಪು ಹಲ್ಲೆ) ಘಟನೆಗಳ ಸಂದರ್ಭದಲ್ಲಿ ಗುರುತಿಸಲ್ಪಡುವ ಅಪಾಯವನ್ನು ಕಡಿಮೆ ಮಾಡಲು ಮುಸ್ಲಿಮರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದು, ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಿಯಾಝ್‌ ಖಾನ್, ಮೋಬ್ ಲಿಂಚಿಂಗ್‌ಗೆ ಬಲಿಯಾದ ಅನೇಕ ಮುಸ್ಲಿಂ ಸಂತ್ರಸ್ತರನ್ನು ಕುರ್ತಾ, ಪೈಜಾಮ, ಟೊಪ್ಪಿ ಮತ್ತು ಗಡ್ಡದಂತಹ ಉಡುಗೆಗಳ ಮೂಲಕ ಗುರುತಿಸಲಾಗಿದೆ ಎಂದು ಹೇಳಿದ್ದಾರೆ. ಸಾರ್ವಜನಿಕವಾಗಿ ಅವರ ಧಾರ್ಮಿಕ ಗುರುತು ಎದ್ದು ಕಾಣದಿರಲಿ ಎಂಬ ಕಾರಣಕ್ಕೆ, ಟರ್ಕಿಯ ಮುಸ್ಲಿಮರ ಮಾದರಿಯ ಉಡುಗೆಯನ್ನು ಅಳವಡಿಸಿಕೊಳ್ಳುವಂತೆ ಅವರು ಮುಸ್ಲಿಮರಿಗೆ ಸಲಹೆ ನೀಡಿದ್ದಾರೆ.

ಸಾಂಪ್ರದಾಯಿಕ ಇಸ್ಲಾಮಿಕ್ ಉಡುಗೆ ಧರಿಸಿದಾಗಲೆಲ್ಲಾ ಮುಸ್ಲಿಮರ ಮೇಲೆ ಹೆಚ್ಚಿನ ಗುಂಪು ಹಲ್ಲೆಗಳು ನಡೆದಿವೆ ಎಂದು ನಿಯಾಝ್‌ ಖಾನ್ ಬರೆದಿದ್ದಾರೆ. ಉಡುಗೆ ಮತ್ತು ಹೊರನೋಟವನ್ನು ಬದಲಾಯಿಸಿಕೊಳ್ಳುವುದರಿಂದ ತಕ್ಷಣಕ್ಕೆ ಅವರನ್ನು ಗುರುತಿಸುವುದು ಕಷ್ಟವಾಗುತ್ತದೆ ಎಂದು ವಾದಿಸಿದ್ದಾರೆ.

ನಿಯಾಝ್‌ ಖಾನ್ ಅವರ ಈ ಹೇಳಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರ ಸುರಕ್ಷತೆಯ ಬಗೆಗಿನ ಕಳವಳವನ್ನು ವ್ಯಕ್ತಪಡಿಸಿರುವುದರಿಂದ ಹೆಚ್ಚಿನ ಗಮನ ಸೆಳೆದಿದೆ. ಅಲ್ಲದೆ, ಈ ಹೇಳಿಕೆಯು ಗುರುತು, ಧಾರ್ಮಿಕ ಅಭಿವ್ಯಕ್ತಿ ಮತ್ತು ಭದ್ರತೆಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.

ಬೇರೆ ಬೇರೆ ಪೋಸ್ಟ್‌ಗಳಲ್ಲಿ, ಹಲವು ದೇಶಗಳಲ್ಲಿನ ಪ್ರಜಾಪ್ರಭುತ್ವದ ಸ್ಥಿತಿಗತಿಯ ಬಗ್ಗೆ ನಿಯಾಝ್‌ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಸ್ವತಂತ್ರ ರಾಷ್ಟ್ರಗಳು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಅಳವಡಿಸಿಕೊಳ್ಳದೆ ಕೇವಲ ವ್ಯವಸ್ಥೆಯನ್ನು ಮಾತ್ರ ಅಳವಡಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಜನಸಾಮಾನ್ಯರು ಕಲ್ಯಾಣ ಯೋಜನೆಗಳಲ್ಲಿ ಮಗ್ನರಾಗಿರುವಾಗ, ರಾಜಕೀಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಭ್ರಷ್ಟಾಚಾರ ಮುಂದುವರಿದಿದೆ.

ಮುಸ್ಲಿಂ ಉಡುಗೆ, ಪ್ರಜಾಪ್ರಭುತ್ವ, ಪರಿಸರ ಸಂರಕ್ಷಣೆ ಮತ್ತು ರಾಜಕೀಯ ನಾಯಕತ್ವದ ಕುರಿತು ನಿಯಾಝ್‌ ಖಾನ್ ನೀಡಿರುವ ಅಭಿಪ್ರಾಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮೋಬ್ ಲಿಂಚಿಂಗ್‌ಗೆ ಸಂಬಂಧಿಸಿದ ಅವರ ಹೇಳಿಕೆಯು ಅತಿ ಹೆಚ್ಚು ಗಮನ ಸೆಳೆದಿದೆ.