‘ಚಿಕನ್ ರೋಲ್ ಇಶ್ಯೂ’; ಪ್ರತಿಭಟನೆಯ ವೇಳೆ ರಾಹುಲ್ ಸೇವಿಸಿದ ಆಹಾರದ ಕುರಿತು ಸಂಘ ಪರಿವಾರದ ದ್ವೇಷ ಅಭಿಯಾನ

0
458

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇವಿಸಿದ ಆಹಾರದ ಕುರಿತು ಸಂಘ ಪರಿವಾರದ ಪ್ರೊಫೈಲ್‌ಗಳು ದ್ವೇಷಪೂರಿತ ವಾದಗಳನ್ನು ಹರಡುತ್ತಿವೆ.

ಆಲ್ ಇಂಡಿಯಾ ರೇಡಿಯೋ ಭವನದಲ್ಲಿ ಕುಳಿತು ಪ್ರತಿಭಟಿಸುತ್ತಿರುವಾಗ ರಾಹುಲ್ ಸೇರಿದಂತೆ ನಾಯಕರು ಆಹಾರ ಸೇವಿಸುತ್ತಿರುವ ದೃಶ್ಯಗಳನ್ನು ಹಂಚಿಕೊಳ್ಳುವ ಮೂಲಕ ಸಂಘ ಪರಿವಾರ ಈ ಅಪಪ್ರಚಾರವನ್ನು ಹರಡುತ್ತಿದೆ. ಹಿಂದೂ ಆಗಿರುವ ರಾಹುಲ್ ಗಾಂಧಿ ಮಂಗಳವಾರದಂದು ಚಿಕನ್ ತಿನ್ನುತ್ತಾರೆ ಎಂಬುದು ಈ ಅಪಪ್ರಚಾರವಾಗಿದೆ. ಪಿತೃಪಕ್ಷದ ದಿನವಾದ ಮಂಗಳವಾರದಂದು ರಾಹುಲ್ ಚಿಕನ್ ರೋಲ್ ತಿಂದು ಸಂತೋಷವಾಗಿದ್ದಾರೆ ಎಂಬ ಅಪಪ್ರಚಾರವೂ ನಡೆಯುತ್ತಿದೆ.

“ಖಾನ್ ಚಾಚಾದಿಂದ ಪ್ರತಿಭಟನಾಕಾರರಿಗೆ ತಲುಪಿಸಲಾದ ಆಹಾರದ ಪ್ಯಾಕೆಟ್‌ಗಳು ಕೆಂಪು ಲೇಬಲ್‌ ಅನ್ನು ಹೊಂದಿವೆ. ಇದು ಅವು ಮಾಂಸಾಹಾರಿ ಎಂಬುದರ ಸೂಚನೆಯಾಗಿದೆ. ರಾಹುಲ್ ಗಾಂಧಿ ಅವರ ಕೈಯಲ್ಲಿರುವ ಆಹಾರದ ಪ್ಯಾಕೆಟ್‌ನಲ್ಲೂ ಇದೇ ರೀತಿಯ ಲೇಬರ್ ಕಾಣಬಹುದು. ಇದು ಆಶ್ಚರ್ಯಕರವಾಗಿದೆ… ರಾಹುಲ್ ಗಾಂಧಿ ಶ್ರಾದ್ಧದ ಸಮಯದಲ್ಲಿ ಚಿಕನ್ ತಿನ್ನಬಹುದೇ?” ಎಂಬ ಪ್ರತಿಕ್ರಿಯೆ ಸಫ್ರಾನ್ ಚಾರ್ಜರ್ಸ್ ಪ್ರೊಫೈಲ್‌ನಿಂದ ಬಂದಿದೆ.

ಆದರೆ ಸಾಮಾಜಿಕ ಜಾಲತಾಣದ ಮತ್ತೊಂದು ವರ್ಗವು ಸಂಘ ಪರಿವಾರದ ಪ್ರೊಫೈಲ್‌ಗಳ ಈ ದ್ವೇಷ ಅಭಿಯಾನವನ್ನು ವಿರೋಧಿಸಲು ಮುಂದೆ ಬಂದಿದೆ. “ಕೆಲವು ಕೋಳಿಗಳು ಅಸಮಾಧಾನಗೊಂಡಿವೆ” ಎಂದು ಎಕ್ಸ್ (X) ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ವಿರೋಧ ಪಕ್ಷದ ವಿರುದ್ಧ ಅಸ್ತ್ರವೊಂದನ್ನು ಹುಡುಕಲು ಬಿಜೆಪಿಯು ಮತ್ತು ಕೇಂದ್ರ ಸರ್ಕಾರವು ಕಾಯುತ್ತಿತ್ತು ಎಂದೂ ಕೆಲವು ನೆಟ್ಟಿಗರು ಎತ್ತಿ ತೋರಿಸಿದ್ದಾರೆ.

ಯಾವ ಆಹಾರವನ್ನು ಸೇವಿಸಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ ಎಂಬುದನ್ನು ಕೆಲವರು ನೆನಪಿಸಿದ್ದಾರೆ. ಸಂಘ ಪರಿವಾರವು ರಾಜಕೀಯ ಪ್ರತಿಭಟನೆಯ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನೆಯ ಬೆಂಬಲಿಗರು ಸಹ ಬೆಟ್ಟು ಮಾಡಿ ತೋರಿಸಿದ್ದಾರೆ.
ಇದಲ್ಲದೆ, ಗಂಟೆಗಟ್ಟಲೆ ಪ್ರತಿಭಟನೆಯ ನಂತರ, ಪೊಲೀಸರು ನಿನ್ನೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರನ್ನು ಬಂಧಿಸಿ ಕರೆದೊಯ್ದಿದ್ದರು. ದೆಹಲಿ ಪೊಲೀಸರು ಸುಮಾರು 250 ಜನರನ್ನು ವಶಕ್ಕೆ ಪಡೆದಿದ್ದರು.

ಬಂಧನಕ್ಕೂ ಮುನ್ನ, ಸಂಸತ್ ಭವನದಿಂದ ನಿರ್ವಾಚನ ಸದನದ ಕಡೆಗೆ ವಿರೋಧ ಪಕ್ಷದ ಸಂಸದರ ಮಾರ್ಚ್ ಅನ್ನು ಸಂಸದ್ ಮಾರ್ಗ್‌ನಲ್ಲಿ ಪೊಲೀಸರು ತಡೆದಿದ್ದರು. ಬಳಿಕ ರಾಹುಲ್ ಅವರು ಕಾರ್ಯತಂತ್ರದ ಮೂಲಕ ಆಲ್ ಇಂಡಿಯಾ ರೇಡಿಯೋ ಭವನದ ಕಡೆಗೆ ತೆರಳಿದ್ದರು. ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಪವನ್ ಖೇರಾ ಅವರಂತಹ ನಾಯಕರು ಸಹ ಆಲ್ ಇಂಡಿಯಾ ರೇಡಿಯೋದಲ್ಲಿ ನಿಂತಿದ್ದರು.