ಚೀನಾದವರು ನಲವತ್ತಲ್ಲ ನಾಲ್ಕು ನೂರು ಸಾಯಲಿ: ಆದರೆ, ನೀವು ಸತ್ಯವನ್ನು ಯಾಕೆ ಮುಚ್ಚಿಟ್ಟಿರಿ? ಗಾಯಗೊಂಡ ಯೋಧರನ್ನು ಭೇಟಿಯಾದ ಫೋಟೋ ಯಾವ ಸಂದೇಶವನ್ನು ಕೊಡುತ್ತೆ- ಪ್ರಧಾನಿಯವರೇ?

0
1885

ಸನ್ಮಾರ್ಗ ವಾರ್ತೆ

ಅಲ್ಮೈಡಾ ಗ್ಲ್ಯಾಡ್ಸನ್

ನಾನು ಗಾಲ್ವಾನ್ ದುರಂತದ ಎರಡು ದಿನಗಳ ಬಳಿಕ ನಮ್ಮ ನೂರಕ್ಕಿಂತ ಹೆಚ್ಚು ಗಾಯಾಳು ಸೈನಿಕರಿಗೆ ಲೇಹ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ರಕ್ಷಣಾ ಮೂಲಗಳನ್ನು ಕೋಟ್ ಮಾಡಿ ಬರೆದಾಗ ನನ್ನ ವಾಲ್‍ಗೆ ಬಂದು ಸುಳ್ಳು, ಏನೂ ಆಗಿಲ್ಲ, ಅಷ್ಟೊಂದು ಮಂದಿ ಗಾಯಾಳಾಗಿಲ್ಲ ಎಂದು ಬೊಬ್ಬೆ ಹೊಡೆದವರು ಇಲ್ ಬನ್ನಿ ಈವಾಗ.

ಘಟನೆ ಆಗಿ ಹದಿನೇಳು ದಿನಗಳಾಗಿವೆ. ಇವತ್ತು ಪ್ರಧಾನಿ ಆಸ್ಪತ್ರೆಯನ್ನು ಭೇಟಿ ಮಾಡಿದಾಗ ತೆಗೆದ ಒಂದು ವಾರ್ಡಿನ ಫೊಟೋ ಇದು. ಹದಿನೈದು ದಿನಗಳ ನಂತರನೂ ಇಷ್ಟೊಂದು ಮಂದಿ ಸೈನಿಕರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆಂದರೆ ಅದೆಷ್ಟು ಮಂದಿ ಯೋಧರ ಮೇಲೆ ಹೇಡಿ ಚೀನಿಯರು ಹಲ್ಲೆ ಮಾಡಿರಬಹುದೆಂದು ಊಹಿಸಿಕೊಳ್ಳಿ.

ಯೋಧರು ನಮ್ಮ-ನಿಮ್ಮಂತಲ್ಲ. ಸ್ಟ್ರಾಂಗ್. ಸಣ್ಣಪುಟ್ಟ ಗಾಯಗಳನ್ನಿಟ್ಟು ಆಸ್ಪತ್ರೆಯಲ್ಲಿ ಕೂರಲ್ಲ. ಇವರು ಇಷ್ಟು ದಿನಗಳಾದರೂ ಆಸ್ಪತ್ರೆಯಲ್ಲೇ ಇದ್ದಾರೆಂದರೆ ಇವರು ಗಂಭೀರವಾಗಿ ಗಾಯಗೊಂಡಿದ್ದರೆಂದರ್ಥ ಅಲ್ವೇ? ಅದೂ ಇದು ಒಂದು ವಾರ್ಡಿನ ಕಥೆ. ಇನ್ನೂ ಹಲವಾರು ಸೈನಿಕರು ಇನ್ನೂ ಚಿಕಿತ್ಸೆ ಪಡೆಯುತ್ತಿರಬಹುದು. ಇವರು ತಕ್ಕಮಟ್ಟಿಗೆ ಗುಣಮುಖವಾದವರು. ಇನ್ನೂ ಹಲವಾರು ಮಂದಿ ಇದಕ್ಕಿಂತ ಗಂಭೀರವಾಗಿ ಗಾಯಗೊಂಡಿದ್ದು, ನಮಗೆ ತೋರಿಸಲಾಗದ ಪರಿಸ್ಥಿತಿಯಲ್ಲಿರಬಹುದು.

ಇಷ್ಟಿದ್ದ ಮೇಲೂ ಪ್ರಧಾನಿ ಒಂದು ವಾರದ ಮೊದಲು ಗಡಿಯಲ್ಲಿ ಏನೂ ಆಗಿಲ್ಲ, ನಮ್ಮ ಗಡಿಯೊಳಗೆ ಯಾರೂ ಬಂದಿಲ್ಲ ಅಂದ್ರಲ್ಲ, ಹಾಗಾದರೆ ಈ ಸೈನಿಕರು ಹೇಗೆ ಗಾಯಗೊಂಡರು? ಅವರು ಚೀನಾದ ಗಡಿಯೊಳಗೆ ಹೋಗಿದ್ದರೆ? ಗುಂಡಿನ ಚಕಮಕಿ ನಡೆದಿಲ್ಲವೆಂದು ನೀವೇ ಹೇಳುತ್ತೀರಿ. ಹಾಗೆಂದಮೇಲೆ ಗಡಿಯಾಚೆ ನಿಂತು ನಮ್ಮ ಸೈನಿಕರ ಮೇಲೆ ಹಲ್ಲೆ ನಡೆದಿಲ್ಲ. ಒಂದೇ ನಮ್ಮ ಸೈನಿಕರು ಗಡಿ ದಾಟಿದ್ದಾರೆ ಇಲ್ಲ ಚೀನೀ ಸೈನಿಕರು ಗಡಿ ದಾಟಿ ಬಂದು ನಮ್ಮ ಯೋಧರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಗಡಿಯಲ್ಲಿ ಏನ್ ನಡೆದಿದೆ, ಎಷ್ಟು ಮಂದಿ ನಮ್ಮ ಯೋಧರು ಹುತಾತ್ಮರಾಗಿದ್ದಾರೆ, ಎಷ್ಟು ಮಂದಿ ಗಾಯಾಗೊಂಡಿದ್ದಾರೆಂದು ತಿಳಿಯುವ ಹಕ್ಕು ದೇಶದ ಪ್ರಜೆಗಳಾದ ನಮಗಿಲ್ಲವೇ?

ಚೀನಾದವರು ನಲವತ್ತಲ್ಲ ನಾಲ್ಕು ನೂರು ಸಾಯಲಿ. ನೀವು ಚೀನೀ ಸೈನಿಕರ ರುಂಡ ತನ್ನಿ, ಬುಂಡ ತನ್ನಿ. ಹಾಗೆ ಆಗಿದ್ದರೆ ಅದು ನಮ್ಮ ಸೈನಿಕರ ಪರಾಕ್ರಮದಿಂದಾಗಿ. ಆದರೆ ನಮ್ಮ ಸೈನಿಕರೊಡನೆ ಏನಾಗಿದೆ, ಅವರ ಮೇಲೆ ಎಲ್ಲಿ ಹಾಗೂ ಯಾಕೆ ಹಲ್ಲೆಯಾಯಿತೆಂದು ನಮಗೆ ತಿಳಿಯಬೇಕಲ್ವೇ? ಯಾಕೆ ಪದೇ ಪದೇ ದೇಶದ ಜನತೆಗೆ ತಪ್ಪು ಮಾಹಿತಿ ಕೊಡುತ್ತೀರಿ?

ಕಳೆದ ಐವತ್ತು ವರುಷಗಳಲ್ಲಿ ಚೀನಾ ಗಡಿಯಲ್ಲಿ ನಮ್ಮ ಸೈನ್ಯದ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಲ್ಲೆ ನಡೆದಿಲ್ಲ, ಇಷ್ಟೊಂದು ಸೈನಿಕರು ಹುತಾತ್ಮರಾಗಿಲ್ಲ. ಕಾರ್ಗಿಲ್ ಕಾರ್ಯಾಚರಣೆಯ ನಂತರ ವಿರೋಧಿ ದೇಶದ ಸೈನ್ಯದ ಆಕ್ರಮಣದಿಂದ ಇಷ್ಟೊಂದು ಭಾರತೀಯ ಸೈನಿಕರು ಹುತಾತ್ಮರಾಗಿಲ್ಲ. ಆದರೂ ಇನ್ನೂ ಯೋಧರನ್ನು ಬಳಸಿ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ. ಚೇತರಿಸುತ್ತಿದ್ದ ಸೈನಿಕರ ವಾರ್ಡಿಗೆ ಹೋಗಿ, ಅವರ ಬಳಿ ನಿಂತು, ಅವರ ಫೊಟೋ ತೆಗೆದು ಇಡೀ ಜಗತ್ತಿಗೆ ತೋರಿಸುತ್ತಿದ್ದೀರಲ್ಲಾ, ಗಡಿ ರಕ್ಷಣೆ ಮಾಡುತ್ತಾ ಚೀನೀ ಸೈನಿಕರ ವಿರುದ್ಧ ಹೋರಾಡಿದ ಈ ಸೈನಿಕರ ಮುಖಚರ್ಯೆಯನ್ನು ವಿರೋಧಿ ದೇಶದ ಸೈನಿಕರು ನೋಡುತ್ತಾರೆ. ಭದ್ರತೆಯ ದೃಷ್ಟಿಯಿಂದ ಇದು ತೀರಾ ಅಪಾಯಕಾರಿ ಎನ್ನುವ ಕನಿಷ್ಟ ಪ್ರಜ್ಞೆಯೂ ಈ ದೇಶದ ಪ್ರಧಾನಿಯವರಿಗಿಲ್ವಾ?

ಅವರನ್ನು ಭೇಟಿ ಮಾಡಬೇಕಿತ್ತೇ. ಮಾಡಿ. ಬಹಳ ಒಳ್ಳೆಯ ಕೆಲಸ. ಪ್ರಧಾನಿ ತಮ್ಮನ್ನು ನೋಡಲು ಬಂದಾಗ, ಸೈನಿಕರಿಗೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತೆ. ಪ್ರಧಾನಿಯೇ ನಮ್ಮೊಂದಿಗಿದ್ದಾರೆನ್ನುವ ಭಾವನೆ ಬರುತ್ತೆ. ಬಹಳ ಒಳ್ಳೆಯ ಕೆಲಸವಿದು. ಆದರೆ ಅವರ ಫೊಟೋ ತೆಗೆದು, ಅವರ ಪರಿಚಯವನ್ನು ಎಲ್ಲರಿಗೂ ತೋರಿಸುವುದು ದೇಶದ ಭದ್ರತೆಯ ದೃಷ್ಟಿಯಿಂದ ಎಷ್ಟು ಸರಿ?

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.