ಕಾಂಗ್ರೆಸ್‍ನ ಅಂತಿಮ ನರಳಾಟ

0
776

ಅರಫಾ ಮಂಚಿ

ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿರುವ ವಿಜಯದಿಂದ ಬೀಗುತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಸಾಫ್ಟ್ ಮೋದಿ ರೂಪಧಾರಣೆ ಮಾಡುವ ಪ್ರಯತ್ನ ಆರಂಭಿಸಿದ್ದರೆ ಪ್ರಧಾನ ಪ್ರತಿಪಕ್ಷ ತತ್ತರಿಸಿ ಹೋಗಿದೆ. ಮುಖ್ಯವಾಗಿ ಕಾಂಗ್ರೆಸ್ಸಿಗೆ ಈ ದುರ್ಗತಿ ಯಾಕೆ ಬಂತು ಎನ್ನುವ ಎಲ್ಲ ಅವಸ್ಥೆಯನ್ನು ಅದರ ನಾಯಕರು ಈಗಾಗಲೇ ಬಯಲುಗೊಳಿಸುತ್ತಿದ್ದಾರೆ. ಅಧಿಕಾರ ದಾಹಿಗಳಂತೆ ವರ್ತಿಸುತ್ತಿರುವ ಈ ನಾಯಕರು ಸೋಲಿನ ಕುರಿತು ಅವಲೋಕನ ನಡೆಸದೆ ಕಚ್ಚಾಟಕ್ಕೆ ಇಳಿದಿದ್ದಾರೆ. ಕಚ್ಚಾಟವೇ ಕಾಂಗ್ರೆಸ್ಸಿನ ಪತನಕ್ಕೆ ಪ್ರಮುಖ ಕಾರಣವೆಂಬುದು ಇಷ್ಟು ಸ್ಪಷ್ಟವಾದ ಉದಾಹರಣೆ ಬೇರೆಂದೂ ಕಂಡು ಬಂದಿಲ್ಲ ಅನಿಸುತ್ತದೆ.

ಪಂಜಾಬ್‍ನಲ್ಲಿ ಬಿಜೆಪಿಯಿಂದ ಕಾಂಗ್ರೆಸ್‍ಗೆ ಬಂದು ಸಚಿವರೂ ಆದ ನವಜೋತ್ ಸಿಂಗ್ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಸಿದ್ಧುರಿಂದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸ್ಥಳೀಯಾಡಳಿತ ಖಾತೆಯನ್ನು ಬದಲಾಯಿಸಿದ್ದಕ್ಕೆ ಕೋಪ ಗೊಂಡಿರುವ ಅವರು ಶಾಸಕಾಂಗ ಪಕ್ಷದ ಸಭೆಯನ್ನೂ ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆ. ಇದೇವೇಳೆ ಲೋಕ್ ಇನ್ಸಾಪ್ ಪಾರ್ಟಿಯ ಶಾಸಕ ಸಿಮರ್‍ಜಿತ್ ಸಿಂಗ್ ಭೈನ್ಸ್‍ರು ಸಿದ್ಧುರನ್ನು ತಮ್ಮೆಡೆಗೆ ಬನ್ನಿ. ಕಾಂಗ್ರೆಸ್‍ನಲ್ಲಿ 99 ಶೇಕಡ ಲೂಟಿಕೋರರಿರುವುದು, ನಿಮ್ಮ ಜೊತೆ ನಾವಿದ್ದೇವೆ, 2022ರಲ್ಲಿ ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಬಹಿರಂಗ ಆಹ್ವಾನವನ್ನೂ ನೀಡಿದ್ದಾರೆ. ಸಿದ್ಧು ಮುಂದಿನ ನಡೆ ಪಂಜಾಬ್‍ನಲ್ಲಿ ಕಾಂಗ್ರೆಸ್ಸಿನ ಅಸ್ತಿತ್ವಕ್ಕೆ ಮಾರಕವಾಗುವುದರಲ್ಲಿ ಸಂದೇಹವೇ ಇಲ್ಲ. ಅಂದರೆ ಕಾಂಗ್ರೆಸ್ ಕಾಂಗ್ರೆಸ್ಸಿಗರಿಂದ ದುರ್ಬಲ ಗೊಂಡು ಸಾಮೂಹಿಕ ಪತನಕ್ಕೆ ಶಿಲೆಯೂರುತ್ತಿದೆ ಎಂದಾಯಿತು.

ಇವಿಷ್ಟು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯ ಕಣ್ಣುತೆರೆಸಲು ಕಾರಣವಾಗಬಹುದೇ?. ಅವರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ಹಟ ಹಿಡಿದು ಕಾಂಗ್ರೆಸ್‍ನ ಪತನಕ್ಕೆ ಮೊದಲ ಮೊಳೆ ಜಡಿದಿದ್ದಾರೆ ಎಂದಿರುವಾಗ ಕಪ್ತಾ ನನಿಲ್ಲದ ಅಥವಾ ದುರ್ಬಲ ಕಪ್ತಾನನಿರುವ ನಾವೆ ಮುಳುಗದೆ ಇನ್ನೇನಾದೀತು. ರಾಹುಲ್‍ರಲ್ಲಿ ಸೋನಿಯಾರ ಗಟ್ಟಿತನವಿಲ್ಲ. ಅವರ ಗಾಂಧಿಗಿರಿ ದೇಶದಲ್ಲೇನು ಅವರ ಪಕ್ಷದಲ್ಲಿಯೇ ಮೌಲ್ಯವಿಲ್ಲದ್ದೆಂದು ಸಾಬೀ ತಾಯಿತು. ಒಂದು ಹೀನಾಯ ಸೋಲಿ ನಿಂದ ಕಂಗೆಟ್ಟವರಂತೆ ವರ್ತಿಸುವ ಓರ್ವ ವ್ಯಕ್ತಿ ಎಷ್ಟೇ ಸಂಭಾವಿತನಾದರೂ ಪಕ್ಷ ಮುನ್ನಡೆ ಸಲು ಖಂಡಿತಾ ನಾಲಾಯಕ್ಕು. ತಂತ್ರ, ಯೋಜನೆ ಹಾಗೂ ಅಪಾರ ಬುದ್ಧಿಮತ್ತೆ, ಪರಿಸ್ಥಿತಿಯನ್ನು ನಿಭಾಯಿಸುವ ಕುಶಲತೆ ಒಬ್ಬ ರಾಷ್ಟ್ರೀಯ ಅಧ್ಯಕ್ಷನಿಗೆ ಅತ್ಯಗತ್ಯ. ರಾಹುಲ್ ತಾನೇ ಮನೆಗೆ ಹೋಗುವೆ ಎಂದಾಡಿದ ಮಾತು ಸಮಯ ಸಾಧಕ ಅಧಿಕಾರದಾಹಿ ಕಾಂಗ್ರೆಸ್ಸಿಗರಿಗೆ ಗೊಬ್ಬರ ಸುರಿದಂತಾಯಿತು. ಸಿದ್ಧು ಇಲ್ಲಿ ಯಾವ ಪಾತ್ರ ನಿರ್ವಹಿಸಿದ್ದಾರೆ ಎನ್ನುವುದು ಕಾಂಗ್ರೆಸ್‍ನ ಹಿತಕ್ಕೆ ತೀರಅಪಾಯಕಾರಿಯಾಗಿಯೇ ಸಾಬೀತಾಯಿತು.

ಅತ್ತ ಬಿಜೆಪಿ ಈ ವಿದ್ಯಮಾನಗಳನ್ನೇ ನಿರೀಕ್ಷಿಸಿತ್ತು ಅಥವಾ ಈ ವಿದ್ಯಮಾನಕ್ಕೆ ರಂಗಸ್ಥಳವನ್ನು ನಿರ್ಮಿಸಿತು. ಕಾಂಗ್ರೆಸ್ ಮುಕ್ತ ಭಾರತ ಅದರ ಧ್ಯೇಯ. ಕೇವಲ ಅಧಿಕಾರವೊಂದೇ ಅದರ ಉದ್ದೇಶವಲ್ಲ. ಕಾಂಗ್ರೆಸ್ ಮುಕ್ತ ಮಾತ್ರ ಯಾಕೆ ಭಾರತದ ಅಷ್ಟೂ ಪಕ್ಷಗಳನ್ನು ಸೆಗಣಿ ಗೊಬ್ಬರದಂತೆ ಬಳಸುವ ಒಳ ತವಕ ಅದಕ್ಕಿದೆ. ಈ ಮಾತಿಗೆ ಉದಾಹರಣೆಯನ್ನು ಬಿಹಾರದಿಂದ ಹೆಕ್ಕಿಕೊಳ್ಳಬಹುದು. ಅಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಹಕರಿಸಿದ ನಿತೀಶ್ ಕುಮಾರ್‍ಗೆ ಟಾಂಗು ಕೊಟ್ಟು ಯಶಸ್ವಿ ಯಾಗಿದೆ. ಮುಂದಿನ ದಿನದಲ್ಲಿ ನಿತೀಶರನ್ನೊಬ್ಬರನ್ನು ಉಳಿದು ಈಶಾನ್ಯ ಭಾರತದಲ್ಲಾದಂತೆ ಜೆಡಿಯುನ ಎಲ್ಲ ಶಾಸಕರು ಬಿಜೆಪಿ ಸೇರಿದರೂ ಅಚ್ಚರಿ ಯಿಲ್ಲ ಎಂದು ಈಗಿನ ಬೆಳವಣಿಗೆಗಳು ಸೂಚಿಸುತ್ತಿವೆ. ನಿತೀಶ್‍ರ ನೈಪುಣ್ಯ ಅಷ್ಟೇನೂ ಸರಿಯಿಲ್ಲ. ಪ್ರಶಾಂತ್ ಕಿಶೋರ್‍ರನ್ನು ಅವರಿಗೆ ಕೊಟ್ಟದ್ದೂ ಬಿಜೆಪಿ. ಈಗ ಅವರಿಂದ ಬಿಡಿಸಿ ಮಮತಾರೆಡೆಗೆ ಕಳುಹಿಸುತ್ತಿರುವುದು ಅದುವೇ ಎಂದು ಅರ್ಥಮಾಡಿಕೊಳ್ಳ ದಷ್ಟು ನಿತೀಶರಷ್ಟೇ ಮಮತಾ ದಡ್ಡಿಯಾ ದರೇ ಎಂದು ಯೋಚಿಸುವಾಗಲೂ ಆಶ್ಚರ್ಯವಾಗುತ್ತಿದೆ. ಚುನಾವಣಾ ರಣ ತಂತ್ರಗಾರನೆಂದು ಬಿಜೆಪಿಯ ಮೂಲಕ ಪರಿಚಿತರಾದ ಪ್ರಶಾಂತ್ ಕಿಶೋರ್ ಜೆಡಿಯುಗೆ ಗುಡ್ ಬೈ ಹೇಳುವ ಕಾಲ ದೂರವಿಲ್ಲ. ಅಂದರೆ ಅದು ಬಿಜೆಪಿ ತನಗೆ ಕೊಟ್ಟ ಟಾಂಗು ಎಂದು ನಿತೀಶ್ ಇಷ್ಟ ರಲ್ಲೇ ಅರ್ಥ ಮಾಡಿಕೊಂಡಿರಬಹುದು ಅನಿಸುತ್ತೆ. ಅಂದರೆ ಕಾಂಗ್ರೆಸ್ಸಿನಂತೆ ಜೆಡಿಯು ಮುಕ್ತ ಬಿಹಾರ ಆಗುವ ಕಾಲ ನಿಕಟದಲ್ಲಿದೆ ಅನಿಸುತ್ತದೆ. ಇತ್ತ ಪ್ರಶಾಂತ್ ಕಿಶೋರ್ ಮೂಲಕ ಮಮತಾರನ್ನು ಮೇಲೆತ್ತುವ ಪ್ರಕ್ರಿಯೆಯನ್ನೂ ಬಿಜೆ ಪಿಯೇ ಆರಂಭಿಸಿದೆ ಎನ್ನಬಹುದು. ಅಂದರೆ ಟಿಎಂಸಿಯೂ ಇನ್ನಷ್ಟು ಪತನದ ಹಾದಿಗೆ ತೆರಳಬಹುದು.

ಪಂಜಾಬ್‍ನಲ್ಲಿ ಸಿದ್ಧು ಆಟದ ಹಿಂದೆ ಬಿಜೆಪಿ ಆಟ ಇಲ್ಲ ಎಂದು ನಾವನ್ನುವಂತೆ ಇಲ್ಲ ಅಥವಾ ಸಿದ್ಧು ಅಸಮಾಧಾನವನ್ನು ಲೋಕ್ ಇನ್ಸಾಫ್ ಪಾರ್ಟಿಯ ಮೂಲಕ ಎನ್‍ಕ್ಯಾಶ್ ಮಾಡಿಕೊಳ್ಳುವ ತೆರೆಯ ಮರೆಯ ಕಾರ್ಯ ಬಿಜೆಪಿ ಸರ್ವಾಧ್ಯಕ್ಷ ಅಮಿತ್ ಶಾರ ಮೂಲಕ ಆಗಿರಲಾರದು ಎನ್ನು ವಂತಿಲ್ಲ. ಹೀಗೆ 2022ಕ್ಕಾಗುವಾಗ ಕಾಂಗ್ರೆಸ್ ಮುಕ್ತ ಪಂಜಾಬ್ ಆಗಬಹುದು.

ಇತ್ತ ಮಧ್ಯಪ್ರದೇಶದಲ್ಲೂ ಭಿನ್ನಮತ ಕಂಡು ಬಂದಿದೆ. ಕಮಲನಾಥ್‍ರನ್ನು ಎಲ್ಲರೂ ಒಪ್ಪುವುದಿಲ್ಲ. ಕಮಲನಾಥ್‍ರ ಪ್ರತಿಸ್ಪರ್ಧಿ ಸಿಂಧಿಯಾ ಲೋಕಸಭೆ ಯಲ್ಲಿ ಸೋತು ಸುಣ್ಣವಾಗಿದ್ದಾರೆ. ಅಲ್ಪಮತದ ಸರಕಾರಕ್ಕೆ ಕೊಳ್ಳಿ ಇಡುವ ಕಾರ್ಯವು ಭರದಿಂದ ಸಾಗುತ್ತಿದೆ. ತೆರೆಮರೆಯಲ್ಲಿ ನಡೆಯುವ ಕೆಲಸ ಅಲ್ಲಿ ಹೇಗೆ ಸ್ಫೋಟಿಸಲಿದೆ ಎಂದು ದೇಶದ ಜನರಿಗೆ ಮಾತ್ರವಲ್ಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೂ ಗೊತ್ತೇ ಆಗಲಾರದು. ಅಂತಹ ತಂತ್ರಗಾರಿಕೆ ಅವರಲ್ಲೇನೂ ಇಲ್ಲ. ಕಮಲ್‍ನಾಥ್‍ರಂತ ಹವರು ಬಿಜೆಪಿಗೆ ಸುಲಭದಲ್ಲಿ ಬಲಿ ಯಾಗುವವರಲ್ಲ ನಿಜ. ಆದರೆ ಅಂತಹ ವರನ್ನೇ ಖರೀದಿಸಿ ಬಿಜೆಪಿ ಶಕ್ತಿ ಮೆರೆದದ್ದು ಇಷ್ಟರಲ್ಲೇ ಸಾಬೀತಾಗಿದೆ. ಅಲ್ಲಿ ಕಾಂಗ್ರೆಸ್ ಮುಕ್ತಗೊಳಿಸುವುದು ಹೆಚ್ಚು ಕಷ್ಟದ ಕೆಲಸವೇನಲ್ಲ. ಕಾಂಗ್ರೆಸ್ ಭಿನ್ನಮತ ರಾಜಸ್ತಾನದಲ್ಲಿಯೂ ಮಿತಿ ಮೀರಿ ಹೋಗಿದೆ. ಸಚಿನ್ ಪೈಲಟ್ ರನ್ನು ಮುಖ್ಯಮಂತ್ರಿಯನ್ನಾಗಿಸ ಬೇಕೆಂದು ಬೆಂಬಲಿಗರು ಬೊಬ್ಬೆ ಹೊಡೆ ಯುತ್ತಿದ್ದಾರೆ. ತನ್ನ ಪುತ್ರನ ಸೋಲಿಗೆ ಸಚಿನ್ ಪೈಲೆಟ್ ಕಾರಣ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಹೇಳು ತ್ತಿದ್ದಾರೆ. ಒಂದು ಕಡೆ ವೊಟಿಂಗ್ ಮೆಶಿನ್ ಮೋಸದ ಕುರಿತು ಕೆಂಡ ಕಾರುತ್ತಾ ಇನ್ನೊಂದೆಡೆ ಇಂತಹ ಭಿನ್ನ ಮತಗಳಿಂದ ಕಾಂಗ್ರೆಸನ್ನು ದುರ್ಬಲ ಗೊಳಿಸುತ್ತಿದ್ದಾರೆ. ಅಂದರೆ ಒಂದು ವೇಳೆ ಇವಿಎಂನಲ್ಲಿ ಮೋಸ ಆಗಿದ್ದರೂ ಈ ಒಗ್ಗಟ್ಟಿಲ್ಲದ ಕಾಂಗ್ರೆಸಿಗರು ಏನು ಮಾಡಿಯಾರು? ಇವರಲ್ಲಿ ಒಗ್ಗಟ್ಟು ಮೂಡಿದರೆ ಇವಿಎಂ ಕಗ್ಗಂಟಾಗಬಹು ದೆಂದು ಬಿಜೆಪಿಗೂ ಗೊತ್ತಿದೆ. ಆದ್ದ ರಿಂದ ಕಾಂಗ್ರೆಸ್‍ನ ಎಲ್ಲ ದೌರ್ಬಲ್ಯ ಗಳಿಂದ ಲಾಭ ಪಡೆಯಲು ಬಿಜೆಪಿ ಹವಣಿಸುವುದು ಖಂಡಿತ. ಆದ್ದರಿಂದ ಕಾಂಗ್ರೆಸ್ಸಿಗರ ಒಳಜಗಳ ಅಧಿಕಾರ ದಾಹಗಳಲ್ಲಿ ಈ ಅಂಶವೂ ಪ್ರಮುಖ ವಾಗಿದೆ. ಅಂದರೆ ಸಿದ್ಧುರಿಗೆ ಸಿಕ್ಕಂತೆ ಬೆನ್ನ ಹಿಂದೆ ಧೈರ್ಯ ಸಿಗದೆ ಕಾಂಗ್ರೆಸ್ಸಿನ ನಾಯಕರು ಈ ರೀತಿ ವರ್ತಿಸುವುದು ಖಂಡಿತ ಸಾಧ್ಯವಿಲ್ಲ. ಈ ಬೆನ್ನ ಹಿಂದಿನ ಶಕ್ತಿ ಯಾವುದು ಎಂದು ಕಾಂಗ್ರೆಸ್ ಹೈಕಮಾಂಡ್ ಗುರುತಿಸದೆ, ತಮ್ಮ ಪತನದ ಕಾರಣವನ್ನೂ ಅರಿಯದೆ ಕತ್ತಲಲ್ಲಿ ತಡವರಿಸುತ್ತಿದೆ. ಅಂದರೆ ಕಾಂಗ್ರೆಸನ್ನು ಇವರ ಮೂಲಕ ದುರ್ಬಲಗೊಳಿಸುತ್ತಿರುವವರು ಯಾರೆಂದು ಎಷ್ಟು ಬೇಗ ಗುರುತಿಸು ತ್ತಾರೋ ಅಷ್ಟು ಉತ್ತಮ. ಅದರಲ್ಲೇ ಅವರ ಅಸ್ತಿತ್ವದ ಪ್ರಶ್ನೆ ನೆಲೆಯೂರಿದೆ.

ಇತ್ತ ದಕ್ಷಿಣದಲ್ಲಿ ತೆಲಂಗಾಣದತ್ತ ಬಂದರೆ ಕಾಂಗ್ರೆಸ್ಸಿನ ಹದಿಮೂರು ಶಾಸಕರು ಟಿಆರ್‍ಎಸ್‍ಗೆ ಹೋಗುತ್ತಿ ದ್ದಾರೆ. ಏನಿದು ಕಾಂಗ್ರೆಸ್ಸಿನಲ್ಲಿ ಮತ ಪಡೆದು ಗೆದ್ದು ಪಕ್ಷಾಂತರ ಮಾಡಿಸು ವಷ್ಟು ಇವರಿಗೆ ಶಕ್ತಿ ಕೊಟ್ಟವರು ಯಾರು? ಟಿಆರ್‍ಎಸ್ ಈಗಾಗಲೇ ಬಿಜೆಪಿಯ ಆಪ್ತನಾಗಿರಲು ಬಯಸುವ ಪಕ್ಷ. ಇರುವ ಅಸ್ತಿತ್ವವನ್ನೂ ಕಾಂಗ್ರೆಸ್ ಇಲ್ಲಿ ಕಳಕೊಳ್ಳುವುದು ಖಂಡಿತ. ಅಂದರೆ ಬಿಜೆಪಿ ಕಾಂಗ್ರೆಸ್ ಮುಕ್ತ ಸಂಕಲ್ಪ ನಿಜವಾಗುತ್ತಿದೆಯೆನ್ನಿ. ಇಂತಹ ಕಷ್ಟದ ಸಮಯದಲ್ಲಿ ಅಧ್ಯಕ್ಷನಾಗುವುದಿಲ್ಲ, ಬೇರೆ ಯಾರಿಗಾದರೂ ಆ ಸ್ಥಾನ ಕೊಡಿ ಎಂದು ರಾಹುಲ್ ಹೇಳುತ್ತಿರುವುದು ಅವರೇ ಕಾಂಗ್ರೆಸ್ಸಿಗೆ ಗುಂಡಿಯನ್ನು ತೋಡಿ ಇಟ್ಟಂತಾಗುವುದಿಲ್ಲವೇ? ಆ ಗುಂಡಿಗೆ ಬೇರೆಯವರು ದೂಡಿ ಹಾಕಿ ದರೆ ಎಲ್ಲವೂ ಮುಗಿಯಿತು.

ಪೀನಿಕ್ಸ್ ಹಕ್ಕಿ ಸತ್ತರೂ ಜೀವಂತ ವಾಗುತ್ತದೆ ಎಂಬ ಮಾತಿದೆ. ಆದರೆ ಆ ಹಕ್ಕಿ ಹಾಗೆ ಆಗಿರುವುದನ್ನು ಯಾರೂ ನೋಡಿದ್ದಿಲ್ಲ. ಜೀವಸತ್ವ ಇಲ್ಲದ ಪಕ್ಷವೊಂದು ಜೀವ ಕಳೆಹಿಡಿದು ಕೊಬ್ಬಿದ್ದು ಮಾತ್ರ ಭಾರತದಲ್ಲಿ ಬಹುತೇಕ ಹಿರಿಯರು ನೋಡಿದ್ದಾರೆ. ಈ ಛಲ ರಾಹುಲ್‍ರಲ್ಲಿ ಸೋರಿ ಹೋಗಿದ್ದು ಕಾಂಗ್ರೆಸ್ಸಿನ ದುರದೃಷ್ಟ. ಇನ್ನು ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದ ಪರಿಸ್ಥಿತಿಯಂತೂ ನಾಚಿಕೆಗೇಡಿನದ್ದು. ಕಾಂಗ್ರೆಸ್‍ನ ಹಿರಿಯ ನಾಯಕ ರೋಶನ್ ಬೇಗ್, ರಾಮಲಿಂಗಾ ರೆಡ್ಡಿ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ತಾನು ಬಿಜೆಪಿ ಸೇರಲು ಹಿಂಜರಿಯುವುದಿಲ್ಲ, ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸಿ ಎಂದು ರೋಶನ್ ಬೇಗ್ ಹೇಳಿದ್ದಾರೆ. ಅವರ ಈ ಮಾತಿನ ಹಿಂದೆ ಯಾರಿ ದ್ದಾರೆ ಎ ನ್ನುವುದು ಈ ಮಾತಿನಲ್ಲೇ ಇದೆ. ಇವೆಲ್ಲ ಬೆಳವಣಿಗೆಗಳು ಕಾಂಗ್ರೆಸ್ ಐಸಿಯುವಿನಲ್ಲಿದೆ ಎಂಬುದನ್ನು ಸಾಬೀತು ಪಡಿಸುತ್ತಿದೆ. ಅಧಿಕಾರ ಸಿಗದ, ಮಂತ್ರಿಯಾಗದ ಹತಾಶೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ನಿಕೃಷ್ಟ ಮಟ್ಟದ ಆರೋಪ ಹೊರಿಸಲು ಕಾಂಗ್ರೆಸ್ ಶಾಸಕರು, ನಾಯಕರು ಹಿಂದೆ ಬಿದ್ದಿಲ್ಲ. ಅಪ ರೇಷನ್ ಕಮಲವಿಲ್ಲದೆ ಕಾಂಗ್ರೆಸ್‍ನ್ನು ಪತನಗೊಳಿಸುವಷಚ ತಂತ್ರವೇನಾದರೂ ಬಿಜೆಪಿಯಿಂದಾಗುತ್ತಿದೆಯೇ ಎಂಬ ಸಂಶಯ ಸದ್ಯಕ್ಕೆ ಬಲವಾಗುತ್ತಿದೆ. ಹರಿಯಾಣದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಲೋಕಸಭಾ ಚುನಾ ವಣೆಯಲ್ಲಿ ಇಲ್ಲಿ ಕಾಂಗ್ರೆಸ್ ತಲೆ ಎತ್ತಿಲ್ಲ. ಆದರೂ ಅಲ್ಲಿ ಕಾಂಗ್ರೆಸಿನ ನಾಯಕರೊಳಗಿನ ಒಳಜಗಳ ದಿಲ್ಲಿ ಯಲ್ಲಿ ನಡೆದ ಪಾರ್ಟಿಯ ಸಭೆಯಲ್ಲಿ ಬಹಿರಂಗವಾಗಿ ಸ್ಫೋಟವಾಯಿತು. ಪಕ್ಷದ ಸೋಲಿಗೆ ಕಾರಣಗಳನ್ನು ಚರ್ಚಿ ಸಲು ಗುಲಾಂ ನಬಿ ಆಝಾದ್‍ರು ಕರೆದಿದ್ದ ಸಭೆಯಲ್ಲಿ ಮಾಜಿ ಮುಖ್ಯ ಮಂತ್ರಿ ಭೂಪೇಂದ್ರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತಂವರ್‍ನ ಬಣಗಳ ನಡುವೆ ಮಾರಾಮಾರಿಯೇ ನಡೆಯಿತು. ಮಹಾರಾಷ್ಟ್ರದಲ್ಲಿ ಎನ್‍ಸಿಪಿ, ಕಾಂಗ್ರೆಸ್‍ನೊಳಗೆ ಒಳ ಜಗಳ ಕಾವೇರುತ್ತಿದೆ. ಅಲ್ಲಿ ವಿಧಾನಸಭೆಯ ವಿಪಕ್ಷ ನಾಯಕರೇ ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿಯಾಗಿದೆ. ಒಟ್ಟು ಕಾಂಗ್ರೆಸ್ ಪಾಲಿಗೆ ಇದೆಂತಹ ದುರ್ದಿನಗಳು! ವಿವರಿಸಲಾಗದಷ್ಟು ಕಗ್ಗಂಟ್ಟಾಗುತ್ತಾ ಪರಿಸ್ಥಿತಿ ಸಾಗುತ್ತಿದೆ. ಇಂತಹ ವೇಳೆ ರಾಹುಲ್ ಗಾಂಧಿ ಮೌನಕ್ಕೆ ಶರಣಾಗಿದ್ದಾರೆ. ಕನಿಷ್ಠ ತನ್ನ ಪಕ್ಷದ ನಾಯಕರಿಗೂ ಮುಖ ತೋರಿಸುತ್ತಿಲ್ಲ. ಇಂತಹ ನಿರಾಶೆ, ಹತಾಶೆಗಳು ಒಬ್ಬ ಪಕ್ಷದ ಅಧ್ಯಕ್ಷನಾಗಿದ್ದವನಿಗೆ ಹೇಗೆ ಒಪ್ಪುತ್ತದೆ? ಕಾಂಗ್ರೆಸ್ಸಿಗರ ಒಳಜಗಳವನ್ನು ಕಂಡು ಕಾಣದಂತೆ ವರ್ತಿಸುವ ಅವರಿಂದಲೇ ದೇಶದ ಅತೀದೊಡ್ಡ ಮತ್ತು ತೀರಾ ಹಳೆಯ ಪಕ್ಷವೊಂದು ಅವಸಾನದ ಮೊಳೆ ಹೊಡೆಯಿಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ನಾಶಕ್ಕೆ ಬಿಜೆಪಿ ಒಂದು ನೆ ಪಮಾತ್ರ. ಅದು ಒಂದು ವೇಳೆ ತಂತ್ರಗಾರನ ಪಾತ್ರ ನಿರ್ವಹಿಸುತ್ತಿರಬಹುದು. ನಿಜವಾಗಿ ಕಾಂಗ್ರೆಸ್ಸನ್ನು ಕಾಂಗ್ರೆಸಿಗರೇ ಮುಳುಗಿಸುತ್ತಿದ್ದಾರೆ. ಬಹುಶಃ ಈ ಕಾಂಗ್ರೆಸ್ಸಿಗರಿಗೂ ಕಾಂಗ್ರೆಸ್ ಮುಳುಗುವ ನಾವೆಯಂತೆ ಕಾಣುತ್ತಿರಬಹುದು. ಸರಿಯಾಗಿ ಹೇಳುವುದಾದರೆ ಕಾಂಗ್ರೆಸ್ ಮಾತ್ರವಲ್ಲ ಭಾರತದಲ್ಲಿ ಇತರ ಪ್ರಾದೇಶಿಕ ಪಕ್ಷಗಳಿಗೂ ಇದೇ ಗತಿಯಾಗಲಿದೆ. ಜೆಡಿಯು, ಟಿಎಂಸಿ, ಟಿಡಿಪಿ, ಟಿಆರ್‍ಎಸ್, ಆರ್‍ಜೆಡಿ, ಎನ್‍ಸಿಪಿ ಇಂಥ ಪಕ್ಷಗಳೆಲ್ಲವೂ ಬಿಜೆಪಿಯ ಕಪಿ ಮುಷ್ಠಿಯ ಮುಂದೆ ಈಗ ನರಳುತ್ತಿದೆ. ನಾಳಿನ ಅದರ ಗತಿ!
ಕೊನೆ ಮಾತು,

“ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಪರ್ಯಾಯ ಸೂಚಿಸದೆ ರಾಜೀನಾಮೆ ನೀಡ ಬಾರದು. ನಮಗೆಲ್ಲರಿಗೂ ಪಕ್ಷದ ಬಗ್ಗೆ ಕಾಳಜಿ ಇದೆ. ನಾಯಕತ್ವ ದುರ್ಬಲವಾದಾಗ ಇಂಥ ಬೆಳವಣಿಗೆಗಳು ನಡೆಯುತ್ತವೆ. ರಾಹುಲ್ ಗಾಂಧಿ ರಾಜೀನಾಮೆ ನೀಡಲು ಬಯಸಿದರೂ ಅದಕ್ಕೆ ಇದು ಸಕಾಲವಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಪರ್ಯಾಯ ನಾಯಕತ್ವ ಸೂಚಿಸದೇ ಅವರು ಸ್ಥಾನದಿಂದ ನಿರ್ಗಮಿಸುವುದು ಸರಿಯಲ್ಲ.”
ಕಾಂಗ್ರೆಸ್‍ನ ಹಿರಿಯ ನಾಯಕ ವೀರಪ್ಪ ಮೊಯಿಲಿಯವರ ಈ ಮಾತು ಕನ್ನಡಿಯಷ್ಟು ಸ್ಪಷ್ಟ. ಆದರೆ ಕಾಂಗ್ರೆಸ್‍ಗೆ ಬುದ್ಧಿ ಬಂದೀತೆ?