ಸಲೀಮ್ ಬೋಳಂಗಡಿ
ಈ ದೇಶದಲ್ಲಿ ಅಪರಾಧ ಪೃವೃತ್ತಿ ವ್ಯಾಪಕವಾಗುತ್ತಿರಲು ಮುಖ್ಯ ಕಾರಣ ಜನರಲ್ಲಿ ಕಾನೂನಿನ ಭಯ ಇಲ್ಲದೇ ಇರುವುದಾಗಿದೆ. ಏನೇ ಅಪರಾಧ ಮಾಡಿದರೂ ಪ್ರತಿಷ್ಠಿತ ರಾಜಕಾರಣಿಗಳ ಪ್ರಭಾವ ಪಡೆದು ಜಾಮೀನು ಮೂಲಕ ಹೊರಬರಬಹುದೆಂಬ ಭಾವನೆ ಅಪರಾಧಿಗಳಲ್ಲಿ ಮನೆ ಮಾಡಿದೆ. ಅಪರಾಧ ಮಾಡಿದವರನ್ನು ತಿರಸ್ಕರಿಸುವ ಬದಲು ಸಂಸತ್ತಿಗೆ ಆಯ್ಕೆ ಮಾಡಲೂ ಜನರು ಹಿಂದೆ ಮುಂದೆ ನೋಡುವುದಿಲ್ಲವೆಂಬುದನ್ನು ಇತ್ತೀಚಿನ ಚುನಾವಣೆಯ ಫಲಿತಾಂಶ ಬಹಿರಂಗಪಡಿಸಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಬೇಕಾದ ಕೆಲ ಮಾಧ್ಯಮಗಳು ಕೂಡಾ ತಮ್ಮ ಜವಾಬ್ದಾರಿಕೆ ಯನ್ನು ಸರಿಯಾದ ನಿಟ್ಟಿನಲ್ಲಿ ನಿಭಾಯಿಸುತ್ತಿಲ್ಲ. ಒಂದು ವೇಳೆ ಈ ದೇಶದಲ್ಲಿರುವ ಎಲ್ಲಾ ಮಾಧ್ಯಮಗಳು ಸರಿಯಾದ ರೀತಿಯಲ್ಲಿ ತಮ್ಮ ಕರ್ತವ್ಯ ನಿಭಾಯಿಸಿದ್ದಿದ್ದರೆ ಈ ದೇಶದ ಪರಿ ಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಅನ್ಯಾಯದ ವಿರುದ್ಧ ದನಿಯೆತ್ತುವಂತಹ ಪ್ರಕ್ರಿಯೆ ಇಲ್ಲಿ ವ್ಯಾಪಕವಾಗಬೇಕಾದ ಅಗತ್ಯವಿದೆ, ಇದಕ್ಕೆ ಈ ದೇಶದಲ್ಲಿ ನಡೆಯುತ್ತಿರುವ ಹಲವಾರು ದೌರ್ಜನ್ಯದ ಪ್ರಕರಣಗಳೇ ಸಾಕ್ಷಿಯಾಗಿದೆ. ತಪ್ಪಿತಸ್ಥರನ್ನು ರಕ್ಷಿಸುವವರ ವಿರುದ್ಧ, ಗೋರಕ್ಷಣೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧವೂ ದನಿಯೆತ್ತಬೇಕಾಗಿದೆ. ಇಲ್ಲಿ ಗೋರಕ್ಷಕರಿಂದ ದೌರ್ಜನ್ಯಕ್ಕೊಳಗಾದ ಮರ್ದಿತರು ಸರಕಾರದ ವತಿಯಿಂದಲೂ ಕಿರುಕುಳ ಅನುಭವಿಸಬೇಕಾಗುವಂತಹ ಪರಿಸ್ಥಿತಿ ಉಂಟಾಗಿದೆ. ಜನರ ಮುಂದೆ ಮರ್ದಿತರ ಪರವಾಗಿ ಮೋಹಕ ವಾಗ್ದಾನಗಳನ್ನು ಪತ್ರಿಕಾಗೋಷ್ಠಿಯ ಮೂಲಕ ಬಹಿರಂಗಪಡಿಸಿ ಮತ್ತೆ ಅದರಿಂದ ಹಿಂದೆ ಸರಿದ ಘಟನೆಗಳಿಗೂ ಕೊರತೆಯಲ್ಲ. ಅದಕ್ಕೆ ಸ್ಪಷ್ಟವಾದ ಉದಾಹರಣೆ ಅಲೀಮುದ್ದೀನ್ ಅನ್ಸಾರಿಯ ಕುಟು0ಬದ ಸದ್ಯದ ಸ್ಥಿತಿ.
ಸುಮಾರು ಎರಡು ವರ್ಷಗಳ ಹಿಂದೆ 2017 ಜೂನ್ 29ರಂದು ಗೋಮಾಂಸದೊಂದಿಗೆ ವ್ಯಾನಿನಲ್ಲಿ ಸಂಚರಿಸುತ್ತಿದ್ದ 55ರ ಹರೆಯದ ಅಲೀಮುದ್ದೀನ್ ಅನ್ಸಾರಿಯನ್ನು ರಾಮಗಡದಲ್ಲಿ ಗೋಮಾಂಸ ವ್ಯಾಪಾರ ಮಾಡುತ್ತಿದ್ದಾ ರೆಂದು ಆರೋಪಿಸಿ ಗೋರಕ್ಷಕ ಗೂಂಡಾ ಗಳು ಸೇರಿ ಥಳಿಸಿ ಕೊಂದು ವ್ಯಾನನ್ನು ಅಗ್ನಿಗಾಹುತಿ ಮಾಡಿದ್ದರು. ಮಾತ್ರವಲ್ಲ ಈ ಕ್ರೂರ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ದ್ದರು. ಯಾಕೆಂದರೆ ಇವರಿಗೆ ಕಾನೂನಿನ ಯಾವುದೇ ಭಯವಿರಲಿಲ್ಲ. ಈ ಘಟನೆಯ ವಿರುದ್ದ ದೇಶದಾದ್ಯಂತ ಟೀಕೆಗಳು ವ್ಯಾಪಕವಾದಾಗ ಜಾರ್ಖಂಡ್ ಹೈಕೋರ್ಟು ತುರ್ತು ನ್ಯಾಯಾಲಯ ಸ್ಥಾಪಿಸಿ ಹನ್ನೆರಡು ಆರೋಪಿಗಳಲ್ಲಿ ಹನ್ನೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಆದರೆ ಇಷ್ಟೆಲ್ಲಾ ಸಾಕ್ಷ್ಯಾಧಾರಗಳಿದ್ದರೂ ಒಂದು ತಿಂಗಳಾಗುವಷ್ಟರಲ್ಲಿ ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದರು. ನಷ್ಟ ಪರಿಹಾರವಾಗಿ ಏಳು ಲಕ್ಷ ರೂಪಾಯಿ ಹಣವನ್ನು ಅಲೀಮುದ್ದೀನ್ ಅನ್ಸಾರಿ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ತೀರ್ಪಿತ್ತಿತು.
ಈಗ ಅಲೀಮುದ್ದೀನ್ ಅನ್ಸಾರಿಯ ಕುಟುಂಬದ ಸ್ಥಿತಿ ಶೋಚನೀಯವಾಗಿದೆ. ತನ್ನ ಪತಿ ದಾರುಣವಾಗಿ ಗೋರಕ್ಷಕ ಗೂಂಡಾಗಳಿಂದ ಹಲ್ಲೆಗೊಳಗಾಗಿ ಮರಣವನ್ನಪ್ಪುವ ಘೋರ ದೃಶ್ಯವನ್ನು ವೀಡಿಯೋ ಮೂಲಕ ವೀಕ್ಷಿಸಬೇಕಾಗಿ ಬಂದ ಪತ್ನಿ ಮರಿಯಮ್ ಖಾತೂನ್ ಈಗ ಆಘಾತದ ಮೇಲೆ ಆಘಾತವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉನ್ನತ ಮಟ್ಟದ ಚಿಕಿತ್ಸೆ ನೀಡಲು ಹಣವಿಲ್ಲದ ಕಾರಣ ಹಿರಿಯ ಮಗ ಶಹ್ಝಾದ್(19) ಇಹಲೋಕ ತ್ಯಜಿಸಬೇಕಾಯಿತು. ತನ್ನ ಪತಿಯನ್ನು ಕೊಂದ ಕೊಲೆಗಾರರು ಶಿಕ್ಷೆಯಾಗದೆ ಜಾಮೀನು ಪಡೆದು ಹೊರಬರುವುದನ್ನು ನೋಡಬೇಕಾಯಿತು. ಮಕ್ಕಳಿಗೆ ಸರಕಾರಿ ಉದ್ಯೋಗ ನೀಡುವುದಾಗಿ ರಾಜ್ಯ ಸರಕಾರ ಆರಂಭದಲ್ಲಿ ಭರವಸೆ ನೀಡಿತ್ತು. ಈಗ ಆ ಭರವಸೆಯೂ ಹುಸಿಯೆನ್ನುವಂತೆ ಸರಕಾರ ಉದ್ಯೋಗ ನೀಡಿಲ್ಲ. ಮತ್ತೋರ್ವ ಮಗನೂ ಕೂಡ ಮಾರಕ ರೋಗಕ್ಕೆ ತುತ್ತಾಗಿದ್ದಾನೆ. ಈತನ ಚಿಕಿತ್ಸೆಗೆ ಹಣವಿಲ್ಲದೆ ಮರಿಯಮ್ ಖಾತೂನ್ ಕಣ್ಣೀರಿಂದ ಜೀವನ ಸವೆಸುತ್ತಿದ್ದಾರೆ.
ತನಗೆ ವಾಗ್ದಾನ ಮಾಡಿದ್ದರಲ್ಲಿ ಅರ್ಧ ಮಾತ್ರ ನೀಡಿ ಸರಕಾರ ನನ್ನನ್ನು ಕೈಬಿಟ್ಟಿದೆಯೆಂದು ಖಾತೂನ್ ಆರೋಪಿಸುತ್ತಾರೆ. “ಕುಟುಂಬದಲ್ಲಿ ಓರ್ವನಿಗೆ ಉದ್ಯೋಗ ನೀಡುವುದಾಗಿಯೂ ಪಡಿ ತರ ಅಂಗಡಿಗೆ ಅನುಮತಿ ನೀಡುವುದಾಗಿಯೂ ಸರಕಾರ ಮಾತು ಕೊಟ್ಟಿತ್ತು. ಆದರೆ ಈ ಎರಡನ್ನೂ ಸರಕಾರ ಪಾಲಿ ಸಿಲ್ಲ. ಸರಕಾರಿ ಕಚೇರಿಗೆ ಹಲವು ಬಾರಿ ಅಲೆಯಬೇಕಾಯಿತು. ಇದು ಯಾವುದೂ ಫಲ ನೀಡುವ ಲಕ್ಷಣ ಕಾಣದಿದ್ದಾಗ ಸುಸ್ತಾಗಿ ಕೊನೆಗೆ ಇವೆಲ್ಲದರಿಂದ ದೂರ ನಿಲ್ಲಬೇಕಾಯಿತು. ನಿರ ಪರಾಧಿಯಾದ ಪತಿಯನ್ನು ಅನ್ಯಾಯವಾಗಿ ಕೊಲೆಗೈದ ದ್ದರಿಂದ ನಮ್ಮ ಕುಟುಂಬ ಅನಾಥ ವಾಗಿದೆ. ಈ ಕುಟುಂಬ ಮುನ್ನಡೆಸುವ ವರಮಾನಕ್ಕಾಗಿ ನಾನು ಈ ವರೆಗೆ ಅಲೆದಾಡಿದೆ” ಎಂದು ಖಾತೂನ್ ಪತ್ರ ಕರ್ತರೊಂದಿಗೆ ವಿವರಿಸಿದರು. ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸುತ್ತಿರುವ ಈ ಕುಟುಂಬಕ್ಕೆ ಮತ್ತೆ ಬಿರುಗಾಳಿಯಂತೆ ಶಹಬಾಝ್(18) ಎಂಬ ಮತ್ತೋರ್ವ ಪುತ್ರ ಕೂಡಾ ಮಾರಕ ರೋಗಕ್ಕೆ ತುತ್ತಾಗಿದ್ದು ಈಗಾಗಲೇ ಶಸ್ತ್ರಕ್ರಿಯೆಯೊಂದು ಮುಗಿದು ತೀವ್ರ ಚಿಕಿತ್ಸೆಯಲ್ಲಿದ್ದಾನೆ. ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ದಾಖಲೆಗಳೆಲ್ಲವನ್ನು ಸಂಬಂಧ ಪಟ್ಟವರಿಗೆ ಒಪ್ಪಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ಖಾತೂನ್ ಆರೋಪಿಸುತ್ತಾರೆ.
ಇಂತಹ ಹೃದಯ ವಿದ್ರಾವಕ ಸುದ್ದಿಗಳು ಕೆಲ ಮಾಧ್ಯಮಗಳಿಗೆ ಗೋಚರಿಸುವುದೇ ಇಲ್ಲ. ಅವು ಸ್ಟಾರ್ ನಟ ನಟಿಯರ ಮೆಹಂದಿಯಿಂದ ಹಿಡಿದು ಮದುವೆ ಸೀಮಂತದವರೆಗೆ ಧಾರಾವಾಹಿಗಳಂತೆ ವರದಿ ಪ್ರಕಟಿಸುವುದರಲ್ಲಿಯೇ ನಿರತ ವಾಗಿದೆ. ಭವಿಷ್ಯ ಜಾತಕ ಅಂತ ಹೇಳಿ ಕಾಲಹರಣ ಮಾಡುವ ಮಾಧ್ಯಮ ಗಳಿಗೂ ಈ ನಾಡಿನಲ್ಲಿ ಕೊರತೆಯಿಲ್ಲ. ಅನ್ಯಾಯದ ವಿರುದ್ಧ ರಣಕಹಳೆ ಮೊಳಗಿಸಬೇಕಾದ ಮಾಧ್ಯಮಗಳು ತಮ್ಮ ಕರ್ತವ್ಯದಿಂದ ವಿಮುಖರಾಗಿರುವುದೇ ರಾಜಕಾರಣಿಗಳು ಇಷ್ಟೊಂದು ಮೆರೆಯಲು ಹಾಗೂ ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದೇ ಇರಲು ಮುಖ್ಯ ಕಾರಣವಾಗಿದೆ. ಒಂದು ಕಾಲದಲ್ಲಿ ಮಾಧ್ಯಮಗಳೆಂದರೆ ಅಧಿಕಾರಿಗಳು, ರಾಜಕಾರಣಿಗಳು ಬೆವರುತ್ತಿದ್ದರು. ಲಂಕೇಶ್ರಂತಹ ಅನೇಕ ದಿಟ್ಟ ಪತ್ರ ಕರ್ತರು ಅಂತಹ ಒಂದು ವಾತಾವರಣವನ್ನು ನಿರ್ಮಿಸಿದ್ದರು. ಜನರಿಗಾದ ಅನ್ಯಾಯವನ್ನು ಎತ್ತಿ ತೋರಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಲು ಮಾಧ್ಯಮಗಳು ಮುಂದಾಗುತ್ತಿತ್ತು. ಒಂದು ವೇಳೆ ಮಾಧ್ಯಮಗಳು ಇಂತಹ ಘಟನೆಗಳನ್ನು ಹದ್ದುಗಣ್ಣಿಂದ ನೋಡಿರುತ್ತಿದ್ದರೆ ಎರಡು ವರ್ಷಗಳ ಕಾಲ ಜಾರ್ಖಂಡ್ ಸರ ಕಾರದ ಕಚೇರಿಗಳ ಮುಂದೆ ಅಲೀಮುದ್ದೀನ್ ಅನ್ಸಾರಿ ಕುಟುಂಬ ಅಲೆಯ ಬೇಕಾಗುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಮರ್ದಿತರಿಗೆ ನ್ಯಾಯ ಒದಗಿಸಲು ಸರಕಾರ ಖಂಡಿತ ವಿಮುಖವಾಗುತ್ತಿರಲಿಲ್ಲ.












