ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಕಾಮಿಡಿಯನ್ ವೀರ್ ದಾಸ್ ರವರ ‘ಐ ಕಂ ಫ್ರಂ ಟು ಇಂಡಿಯಾ’ ವೀಡಿಯೋ: ದೇಶಕ್ಕೆ ಅವಮಾನ ಮಾಡಿದ್ದಾರೆಂದು ಬಿಜೆಪಿಯಿಂದ ದೂರು

0
470

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತದ ಕಾಮಿಡಿಯನ್ ವೀರ್‌ ದಾಸ್ ರವರು ಅಮೇರಿಕಾದ ಕೆನಡಿ ಸೆಂಟರ್​ನಲ್ಲಿ ನೀಡಿದ್ದ ‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ’ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವುದರೊಂದಿಗೆ ತೀವ್ರ ವಿವಾದವನ್ನು ಸೃಷ್ಟಿಸಿದೆ.

‘‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ. ಭಾರತದಲ್ಲಿ ಹಗಲು ವೇಳೆ ಸ್ತ್ರೀಯರನ್ನು ಪೂಜಿಸುತ್ತೇವೆ, ರಾತ್ರಿ ವೇಳೆ ಸ್ತ್ರೀಯರನ್ನು ಗ್ಯಾಂಗ್‌ರೇಪ್ ಮಾಡುತ್ತೇವೆ. ಭಾರತದಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 900 ಇರುತ್ತೆ, ಆದರೂ ರಾತ್ರಿ ಆಕಾಶದಲ್ಲಿ ನಕ್ಷತ್ರ ನೋಡಲು ಬಯಸುತ್ತೇವೆ. ನಾವು ಪರಸ್ಪರರನ್ನು ಆಲಂಗಿಸುತ್ತೇವೆ, ಆದರೆ ಮಾಸ್ಕ್ ಧರಿಸಲ್ಲ’’ ಎಂದು ಹೇಳಿದ್ದರು. ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ‘ಭಾರತ, ಹಿಂದುತ್ವವನ್ನು ವೀರ್ ದಾಸ್ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರು ಕ್ಷಮೆ ಕೇಳಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿ ಬಂದಿದೆ. ಈ ಹೇಳಿಕೆಯ ಕುರಿತಂತೆ ವೀರ್ ದಾಸ್ ಪ್ರತಿಕ್ರಿಯಿಸಿ, ಸ್ಪಷ್ಟನೆ ನೀಡಿದ್ದಾರೆ.

ವೀರ್ ದಾಸ್ ವಿಡಿಯೋ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿದೆ. ಮಹಾರಾಷ್ಟ್ರದ ಪಾಲಘಾರ್ ಜಿಲ್ಲೆ ಬಿಜೆಪಿಯ ಕಾನೂನು ಸಲಹೆಗಾರ ಹಾಗೂ ಮುಂಬೈ ಹೈಕೋರ್ಟ್ ವಕೀಲ ಆಶುತೋಷ್ ದುಬೆ ದೂರು ನೀಡಿದ್ದಾರೆ. ವೀರ್ ಮಂಗಳವಾರ, ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದು, ತಮ್ಮ ಉದ್ದೇಶ ದೇಶವನ್ನು ಅಪಮಾನಿಸುವುದು ಆಗಿರಲಿಲ್ಲ ಎಂದಿದ್ದಾರೆ. ಸದ್ಯ ಅಮೇರಿಕಾದಲ್ಲಿರುವ ಅವರು, ವಾಷಿಂಗ್ಟನ್ ಡಿಸಿಯ ಜಾನ್ ಎಫ್​​ ಕೆನಡಿ ಸೆಂಟರ್​ನಲ್ಲಿ ಮಾತನಾಡುವಾಗ ಹೇಳಿದ ವಿಡಿಯೋ ವಿವಾದ ಸೃಷ್ಟಿಸಿತ್ತು.

ವೀರ್ ದಾಸ್ ತಮ್ಮ ಮಾತಿನಲ್ಲಿ ಭಾರತದಲ್ಲಿ ಸದ್ಯ ಚರ್ಚೆಯಲ್ಲಿರುವ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಕೋವಿಡ್ 19, ರೈತರ ಪ್ರತಿಭಟನೆ, ಸಾಮೂಹಿಕ ಅತ್ಯಾಚಾರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ವಿಡಂಬನೆಯ ರೂಪದಲ್ಲಿ ‘ಎರಡು ರೀತಿಯ ಭಾರತ’ ಎಂದು ಸ್ವಗತ ಪ್ರಸ್ತುತಪಡಿಸಿದ್ದರು. ಅದರಲ್ಲಿನ ಅವರ ಹೇಳಿಕೆಯಾದ ‘ಭಾರತದಲ್ಲಿ ಹಗಲು ವೇಳೆ ಸ್ತ್ರೀಯರನ್ನು ಪೂಜಿಸುತ್ತೇವೆ, ರಾತ್ರಿ ವೇಳೆ ಸ್ತ್ರೀಯರನ್ನು ಗ್ಯಾಂಗ್‌ರೇಪ್ ಮಾಡುತ್ತೇವೆ’ ಎಂಬುದರ ಕುರಿತಂತೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ಕುರಿತಂತೆ ನೀಡಿರುವ ಸ್ಪಷ್ಟನೆಯಲ್ಲಿ ವೀರ್ ದಾಸ್, ಪ್ರತಿ ದೇಶಕ್ಕೂ ಕತ್ತಲು ಹಾಗೂ ಬೆಳಕಿನ ಎರಡು ಆಯಾಮಗಳಿರುತ್ತವೆ. ಒಳ್ಳೆಯದು ಹಾಗೂ ಕೆಟ್ಟದ್ದು ಇರುತ್ತದೆ. ಅದೇನು ರಹಸ್ಯವಾದ ವಿಷಯವಲ್ಲ. ಆ ಹೇಳಿಕೆಯಲ್ಲಿ ನಾವು ಯಾವುದಕ್ಕೆ ಶ್ರೇಷ್ಠರು ಎಂಬುದನ್ನು ಹೇಳುತ್ತಾ, ಎಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂಬುದನ್ನು ವಿಡಂಬನೆಯ ಮೂಲಕ ತಿಳಿಸಿದ್ದೆ. ವಿಡಿಯೋದ ಕೊನೆಯಲ್ಲಿ ಎಲ್ಲರೂ ಪ್ರೀತಿಸುವ, ಹೊಗಳುವ, ಹೆಮ್ಮೆ ಪಡುವ ದೇಶದ ಪರಿಕಲ್ಪನೆಯ ಕುರಿತು ಹೇಳಲಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ವಿಡಿಯೋದ ತುಣುಕುಗಳನ್ನು ಎಡಿಟ್ ಮಾಡಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ವೀರ್ ದಾಸ್ ಹೇಳಿದ್ದಾರೆ. ಎಡಿಟೆಡ್ ವಿಡಿಯೋ ತುಣುಕಗಳಿಂದ ಯಾರೂ ಅಪಾರ್ಥ ಕಲ್ಪಿಸಬೇಡಿ. ಭಾರತಕ್ಕೆ ಎಲ್ಲರೂ ಹೆಮ್ಮೆಯಿಂದ ಹೊಗಳುತ್ತಾರೆಯೇ ಹೊರತು ದ್ವೇಷಕ್ಕಾಗಿಯಲ್ಲ. ನಾನು ಕೂಡ ದೇಶದ ಹೆಮ್ಮೆಯನ್ನು ಪ್ರಪಂಚದ ಉದ್ದಗಲಕ್ಕೆ ಹೊತ್ತೊಯ್ಯುತ್ತೇನೆಯೇ ಹೊರತು ದ್ವೇಷವನ್ನಲ್ಲ. ನಾನು ಎಲ್ಲರಲ್ಲೂ ಕೋರುವುದು ಒಂದೇ. ಬೆಳಕಿನ ಕಡೆಗೆ ಗಮನ ಹರಿಸಿ. ನಮ್ಮ ಶ್ರೇಷ್ಠತೆಯನ್ನು ನೆನಪಿಡಿ, ಪ್ರೀತಿಯನ್ನು ಹಂಚಿ ಎಂದು ವೀರ್ ದಾಸ್ ತಮ್ಮ ಪ್ರತಿಕ್ರಿಯೆಯಲ್ಲಿ ಬರೆದಿದ್ದಾರೆ.

ವೀಡಿಯೋ ನೋಡಿ: Coutesy: Vir Das COMEDY