ಬಿಜೆಪಿ ಶಾಸಕನ ಬಳಿಕ ಈಗ ಕಾಂಗ್ರೆಸ್ ಶಾಸಕನ ಗೂಂಡಾಗರ್ದಿ: ಅಧಿಕಾರಿ ಮೇಲೆ ಕೆಸರು ಸುರಿದು ಹಲ್ಲೆ

0
771

ಮುಂಬೈ ಜು. 4: ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯ ಅವರ ಪುತ್ರ ಆಕಾಶ್ ವಿಜಯ ವರ್ಗಿಯ ಅವರು ಮುನ್ಸಿಪಲ್ ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ ಘಟನೆ ಇನ್ನೂ ಮರೆಯುವ ಮೊದಲೇ ಅದೇ ರೀತಿಯ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಶಾಸಕ ನಿತೇಶ್ ರಾಣೆ ಎಂಬವರು ಕಾರ್ಯಕರ್ತರೊಂದಿಗೆ ಎಂಜಿನಿಯರ್ ಮೇಲೆ ಕೆಸರು ಸುರಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸೇತುವೆಗೆ ಕಟ್ಟಿಹಾಕಿದ್ದಾರೆ. ಇವರು ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ್ ರಾಣೆ ಅವರ ಪುತ್ರ.

ಮಹಾರಾಷ್ಟ್ರ, ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆ ಮಾಡಲು ಶಾಸಕ ನಿತೇಶ್ ರಾಣೆ ತೆರಳಿದ್ದರು. ಈ ಸಂದರ್ಭದಲ್ಲಿ ರಸ್ತೆ ಗುಂಡಿಗಳನ್ನು ಕಂಡು ಅವರು ಕೆರಳಿದರು ಎನ್ನಲಾಗಿದೆ. ಅದೇ ಸಿಟ್ಟಿನಿಂದ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ನಡೆಸುವ ವೀಡಿಯೊ ವೈರಲ್ ಆಗಿದೆ.