ಸನ್ಮಾರ್ಗ ವಾರ್ತೆ
ಮುಂಬೈ, ಮಾ. 17: ಭಾರತದಲ್ಲಿ ಕೊರೊನಾಕ್ಕೆ ಇನ್ನೊಬ್ಬರು ಬಲಿಯಾಗಿದ್ದು ಮಹಾರಾಷ್ಟ್ರದ 64 ವರ್ಷದ ವ್ಯಕ್ತಿ ಮುಂಬೈ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೊರೊನಾದಿಂದ ಮೃತಪಟ್ಟರು. ಇದರೊಂದಿಗೆ ದೇಶದಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. ಈ ಹಿಂದೆ, ರಾಜ್ಯದಲ್ಲಿ, ದಿಲ್ಲಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದರು. ಪತ್ನಿ ಮಗನೊಂದಿಗೆ ದುಬೈಯಿಂದ ಬಂದಿದ್ದ 64 ವರ್ಷದ ವ್ಯಕ್ತಿಗೆ ಉಸಿರಾಟದಲ್ಲಿ ಅಡ್ಡಿ ಕಾಣಿಸಿಕೊಂಡಿತ್ತು. ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಶುಕ್ರವಾರ ಕೊರೊನಾ ಇದೆ ಎಂಬುದು ದೃಢಗೊಂಡಿತು. ನಂತರ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತವ್ಯಕ್ತಿಯ ಜೊತೆಯಲ್ಲಿದ್ದ ಪತ್ನಿ ಮಗನಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಇವರಿಗೂ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊರೊನಾ ವೈರಸ್ ಪೀಡಿತರ ಸಂಖ್ಯೆ ಈಗ ಭಾರತದಲ್ಲಿ 125ಕ್ಕೆ ತಲುಪಿದೆ. ನೊಯಿಡದಲ್ಲಿ ಇಬ್ಬರಲ್ಲಿ ಹೊಸದಾಗಿ ಕೊರೊನಾ ದೃಢಪಟ್ಟಿದೆ. ನೊಯಿಡಾ ಸೆಕ್ಟರ್ 78 ಮತ್ತು 100ರಲ್ಲಿ ತಲಾ ಒಬ್ಬರಿಗೆ ಕೊರೊನಾ ಕಂಡು ಬಂದಿದೆ. ಇವರು ಫ್ರಾನ್ಸಿನಿಂದ ಬಂದಿದ್ದರು. ಉತ್ತರಪ್ರದೇಶದಲ್ಲಿ ಈವರೆಗೆ ಹದಿಮೂರು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಒಡಿಸ್ಸದಲ್ಲಿ ಪ್ರಯಾಣ ನಿಷೇಧ ಹೇರಲಾಗಿದೆ. ಬುಧವಾರದಿಂದ ಯುರೋಪ್, ಇಂಗ್ಲೆಂಡಿನಿಂದ ಬರುವವರನ್ನು ರಾಜ್ಯದೊಳಗೆ ನಿರ್ಬಂಧಿಸಲಾಗಿದೆ.
ಜಮ್ಮು ಕಾಶ್ಮೀರ, ಲಡಾಕ್, ಕೇರಳಗಳಲ್ಲಿ ಹೊಸದಾಗಿ 19 ಮಂದಿಗೆ ಕೊರೊನಾ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ 39 ಮಂದಿಗೆ ಕೊರನಾ ಇದೆ ಎಂದು ಅಲ್ಲಿನ ಸರಕಾರ ತಿಳಿಸಿದೆ.












