ಪ್ರಾತಿನಿಧ್ಯದ ಕೊರತೆಯನ್ನು ಸರಿದೂಗಿಸಲು ಬಿಜೆಪಿ ರಾಜಭವನವನ್ನು ಬಳಸಿಕೊಳ್ಳುತ್ತಿದೆ: ರಾಜ್ಯಪಾಲರ ವಿರುದ್ಧ ಸಿಪಿಐ ಟೀಕಾ ಪ್ರಹಾರ

0
169

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್‌ರವರ ವಿರುದ್ಧ ಸಿಪಿಐ ಪತ್ರಿಕೆ ಜನಯುಗ ಟೀಕಾ ಪ್ರಹಾರ ನಡೆಸಿದೆ. ರಾಜ್ಯಪಾಲರು ಸುಗ್ರಿವಾಜ್ಞೆಗೆ ಸಹಿ ಹಾಕದೆ ರಾಜಕೀಯ ಆಟಕ್ಕಿಳಿದಿದ್ದಾರೆ ಎಂದು ಪತ್ರಿಕೆ ಆರೋಪಿಸಿದ್ದು, ಕೇರಳದಲ್ಲಿ ಬಿಜೆಪಿಗೆ ಶಾಸಕರಿಲ್ಲ ಆದ್ದರಿಂದ ಆ ಸ್ಥಾನವನ್ನು ತುಂಬುವುದು ರಾಜ್ಯಪಾಲರಿಗೆ ಅನಿವಾರ್ಯವಾಗಿದೆ. ಹಾಗಾಗಿ, ರಾಜಭವನವನ್ನು ಬಿಜೆಪಿ ಉಪಯೋಗಿಸುತ್ತಿದೆ ಎಂದು ಪತ್ರಿಕೆ ಆರೋಪಿಸಿದೆ.

ರಾಜ್ಯಪಾಲರದು ಸಂವಿಧಾನಾತ್ಮಕ ಸ್ಥಾನವಾಗಿದ್ದು, ಅದಕ್ಕೆ ಹಲವು ಮಿತಿಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ರಾಜ್ಯಪಾಲರು ಸರಕಾರದ ವಿರುದ್ಧ ಚಾಟಿ ಬೀಸಲು ಪ್ರಯತ್ನಿಸಿ ವಿಫಲರಾದ ಹಲವು ಉದಾಹರಣೆಗಳಿವೆ. ಇತರ ಹಲವು ರಾಜ್ಯಗಳ ರಾಜ್ಯಪಾಲರು ಇದನ್ನು ಅನುಭವಿಸಬೇಕಾಗಿ ಬಂದಿದೆ. ಆದರೂ ರಾಜಕೀಯದಲ್ಲಿ ರಾಜ್ಯಪಾಲರು ಮುಂದುವರಿಯುತ್ತಿದ್ದಾರೆ.

ಕೇರಳದಲ್ಲಿ ಬಿಜೆಪಿಗೆ ಪ್ರತಿನಿಧಿಗಳಿಲ್ಲ. ಇದನ್ನು ತುಂಬಲು ರಾಜ್ಯಪಾಲರು ತನ್ನ ಸ್ಥಾನಮಾನವನ್ನು ಉಪಯೋಗಿಸುತ್ತಿದ್ದಾರೆ. ಆಡಳಿತಾತ್ಮಕ ಬಿಕ್ಕಟ್ಟಿಗೆ ಕಣ್ಣಿಟ್ಟು, ಅದಕ್ಕೆ ಬೇಕಾದ್ದನ್ನೆಲ್ಲ ಮಾಡಲು ಹೋಗಿ ಸಫಲರಾಗದೇ ಇದೀಗ ಆಡಳಿತ ನಿರ್ವಹಣೆಯಲ್ಲಿ ಅಡ್ಡಿ ಸೃಷ್ಟಿಸುತ್ತಿದ್ದಾರೆ ಎಂದು ಸಿಪಿಐ ಪತ್ರಿಕೆ ಆರೋಪಿಸಿದೆ.

ಹನ್ನೊಂದು ಸುಗ್ರಿವಾಜ್ಞೆಗಳಿಗೆ ರಾಜ್ಯಪಾಲರು ಸಹಿ ಹಾಕಿಲ್ಲ ಎಂದೂ ಪತ್ರಿಕೆ ಆರೋಪಿಸಿದೆ. ಆದರೆ, ಪರಿಶೀಲನೆ ನಡೆಸದೇ ಸುಗ್ರಿವಾಜ್ಞೆಗಳಿಗೆ ಕಣ್ಣುಮುಚ್ಚಿ ಸಹಿ ಹಾಕುವುದಿಲ್ಲ ಎಂದು ರಾಜ್ಯಪಾಲರು ದಿಲ್ಲಿಯಲ್ಲಿ ಹೇಳಿದ್ದರು.