ಜಿಲ್ಲಾ ಬಂದ್; ಸೆಂಟ್ರಲ್ ಮಾರ್ಕೆಟ್ ಗೆ ಸಂಪೂರ್ಣ ಬಿಸಿ ತಟ್ಟಿಲ್ಲ

0
848

ಸನ್ಮಾರ್ಗ ವಾರ್ತೆ

ಮಂಗಳೂರು; ಮಾ. 28- ಕೊರೋನಾ ಪ್ರಕರಣಗಳು ತಹಬಂದಿಗೆ ಬರದಿರುವ ಹಿನ್ನೆಲೆಯಲ್ಲಿ ಮಾರ್ಚ್ 28 ಶನಿವಾರದಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಗೆ ಜಿಲ್ಲಾಡಳಿತ ಕರೆಕೊಟ್ಟಿದ್ದರೂ ಬೆಳಗಿನ ಅವಧಿಯಲ್ಲಿ ಮಂಗಳೂರು ಅದನ್ನು ಸಂಪೂರ್ಣ ಪಾಲಿಸದೆ ಇರುವುದು ವರದಿಯಾಗಿದೆ. ಆದರೆ, ಮಂಗಳೂರಿಗೆ ಹಾಸನ, ಚಿಕ್ಕಮಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ತರಕಾರಿಗಳು ಬರಬೇಕಿದ್ದು, ಅವು ಬರದೇ ಇರುವ ಕಾರಣ ತರಕಾರಿಗಳ ಅಭಾವವಿದೆ. ಮಾರುಕಟ್ಟೆ ತೆರಿದಿರುವುದು ಪೊಲೀಸರಿಗೆ ಗೊತ್ತಾಗಿ ಆ ಬಳಿಕ ಬಂದ್ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.

ವಾಣಿಜ್ಯ ವ್ಯವಹಾರಗಳನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಹಾಲು ಮತ್ತು ಔಷಧಗಳಿಗೆ ಹೊರತಾಗಿ ಇನ್ನಾವುದಕ್ಕೂ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಗೆ ಇವತ್ತು ಗ್ರಾಹಕರು ಅಗತ್ಯ ವಸ್ತುಗಳಿಗಾಗಿ ಬಂದಿರುವುದು ಮತ್ತು ಅಂಗಡಿಗಳು ತೆರೆದಿರುವುದು ಕೂಡ ಪತ್ತೆಯಾಗಿದೆ. ಜಿಲ್ಲಾಡಳಿತ ಜಿಲ್ಲಾ ಬಂದ್ ಗೆ ತಡವಾಗಿ ಕರೆಕೊಟ್ಟಿರುವುದೂ ಇದಕ್ಕೆ ಕಾರಣವಾಗಿರಬಹುದು ಎಂದೂ ಹೇಳಲಾಗುತ್ತಿದೆ. ಜಿಲ್ಲಾಡಳಿತವು ಶುಕ್ರವಾರ ಸಂಜೆಯ ವೇಳೆ ಈ ಕರೆ ಕೊಟ್ಟಿತ್ತು. ಜನರಿಗೆ ಸೂಕ್ತ ತಯಾರಿ ನಡೆಸುವುದಕ್ಕೆ ಮತ್ತು ಜನರಿಗೆ ಸುದ್ದಿ ತಲುಪುವುದಕ್ಕೂ ಈ ವಿಳಂಬ ಕರೆಯಿಂದ ಸಮಸ್ಯೆಯಾಗಬಹುದು ಎಂದು ಅಭಿಪ್ರಾಯ ಪಡಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಏಳು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ನೆರೆಯ ಕಾಸರಗೋಡ್ ನಲ್ಲಂತೂ ನಿನ್ನೆ ಒಂದೇ ದಿನ 34 ಪ್ರಕರಣಗಳು ಬೆಳಕಿಗೆ ಬಂದಿತ್ತು.