ಬಂಟ್ವಾಳದಲ್ಲಿ 10 ತಿಂಗಳ ಮಗುವಿಗೆ ಕೊರೋನಾ; ಸಜಿಪನಡು ಗ್ರಾಮ ನಿಗಾದಲ್ಲಿ

0
1285

ಸನ್ಮಾರ್ಗ ವಾರ್ತೆ

ದ ಕ ಜಿಲ್ಲೆಯಲ್ಲಿ ಸ್ಥಳೀಯರಿಗೆ ಕೊರೋನಾ ಸೋಂಕು ತಗುಲಿದ ಮೊದಲ ಪ್ರಕರಣ ಬಂಟ್ವಾಳದಿಂದ ವರದಿಯಾಗಿದೆ. ಬಂಟ್ವಾಳದ ಸಜಿಪನಡು ಗ್ರಾಮದ 10 ತಿಂಗಳ ಮಗುವಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಜ್ವರ ಮತ್ತು ಉಸಿರಾಟದ ತೊಂದರೆಯ ಕಾರಣದಿಂದ ಮಗುವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಮಾರ್ಚ್ ೨೩ ರಂದು ದಾಖಲಿಸಲಾಗಿತ್ತು. ಮಗುವಿನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆ ರವಾನಿಸಲಾಗಿತ್ತು. ಗುರುವಾರ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿತ್ತು ಮತ್ತು ಇವತ್ತು ಪ್ರಕರಣ ಬಹಿರಂಗಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

ಈ ಮಗುವಿನ ಕುಟುಂಬ ವಿದೇಶದಿಂದ ಬಂದಿರಲಿಲ್ಲ. ಆದರೆ, ಕೇರಳದಲ್ಲಿರುವ ತಮ್ಮ ಕುಟುಂಬಿಕರ ಮನೆಗೆ ಹೋಗಿರುವುದಾಗಿ ಹೇಳಲಾಗುತ್ತಿದೆ. ಆದರೆ, ಈಗ ಮಗು ಚೇತರಿಸಿಕೊಂಡಿದ್ದು, ಐಸಿಯು ನಿಂದ ವಾರ್ಡ್ ಗೆ ತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೆಯೇ, ಕುಟುಂಬದ ಆರು ಸದಸ್ಯರನ್ನು ಮನೆಯಲ್ಲಿರುವಂತೆ ಸೂಚಿಸಲಾಗಿದೆ. ಅಲ್ಲದೆ ಹತ್ತಿರ ಸಂಬಂಧಿಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.

ಇದೇವೇಳೆ, ಮುನ್ನೆಚ್ಚರಿಕೆಯ ಭಾಗವಾಗಿ ಸಜಿಪನಾಡು ಗ್ರಾಮವನ್ನು ಕ್ವಾರಂಟೈನ್ ಮಾಡಲಾಗಿದ್ದು, ಯಾರೂ ಸಜಿಪನಡು ಗ್ರಾಮದಿಂದ ಹೊರಗೆ ಹಾಗೂ ಒಳಗೆ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚಿಸಿದೆ.

ಹಾಗೆಯೇ ಬಂಟ್ವಾಳದಿಂದ ಇನ್ನೊಂದು ಪ್ರಕರಣ ವರದಿಯಾಗಿದ್ದು, ಇಲ್ಲಿನ ಮೇರಮಜಲು ನಿವಾಸಿ 56 ವರ್ಷದ ಸದಾಶಿವ ಶೆಟ್ಟಿ ಎಂಬವರು ತನಗೆ ಕೊರೋನಾ ತಗುಲಿದೆ ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಪೆಟ್ರೋಲ್ ಪಂಪ್ ನಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಕೊರೋನಾ ಅನುಮಾನ ಶುರುವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ತನ್ನಿಂದಾಗಿ ಮನೆಯವರು ಸಂಕಷ್ಟಕ್ಕೀಡಾಗದಿರಲಿ ಎಂಬ ಕಾರಣಕ್ಕಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.