ಹಥ್ರಾಸ್‍ಗೆ ಭೇಟಿ ನೀಡದ ಮಾಯಾವತಿ: ದಲಿತ ಸಮಾಜದಿಂದ ಫೋಟೋಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ

0
965

ಸನ್ಮಾರ್ಗ ವಾರ್ತೆ

ಆಗ್ರಾ,ಅ.7: ದಲಿತರ ರಾಜಧಾನಿ ಎನ್ನಲಾಗುತ್ತಿರುವ ಆಗ್ರದಲ್ಲಿ ಜಾಟವ ಸಮಾಜ ಬಿಎಸ್ಪಿಯಿಂದ ಜಿಗುಪ್ಸೆಗೊಂಡಿರುವುದು ಕಂಡು ಬಂದಿದೆ. ಇಲ್ಲಿನ ಒಂಬತ್ತು ವಿಧಾನಸಭಾ ಸೀಟುಗಳಲ್ಲಿ ಬಿಎಸ್ಪಿ ಒಂದು ಸಮಯದಲ್ಲಿ 7 ಸೀಟುಗಳಲ್ಲಿ ಗೆದ್ದಿತ್ತು. ಆದರೆ ಜಾಟವ ಮಹಾ ಪಂಚಾಯತ್ ಸಮಾಜ ಬಿಎಸ್ಪಿಯ ಧ್ವಜ ಮತ್ತು ಅದರ ಅಧ್ಯಕ್ಷೆ ಮಾಯಾವತಿಯ ಫೋಟೊವನ್ನು ಸುಟ್ಟುಹಾಕಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯ ವಿರುದ್ಧ ಘೋಷಣೆ ಕೂಗಿದೆ.

ಮಾಯಾವತಿಯವರಲ್ಲಿ ಕಣ್ಣುಮುಚ್ಚಿ ಅನುಸೂಚಿತ ಜಾತಿಯ ಜನರು ಭರವಸೆ ಇಟ್ಟಿದ್ದರು. ಆದರೆ, ಸಮಾಜದಲ್ಲಿ ಜ್ವಲಂತ ಸಮಸ್ಯೆಗಳು ಎದುರಾದಾಗ ಅವರು ಕೇವಲ ಟ್ವೀಟ್ ಮಾಡಿ ಸುಮ್ಮನಿರುತ್ತಾರೆ ಎಂದು ಆಗ್ರಾದ ಜಾಟವ ಮಹಾ ಪಂಚಾಯತ್‍ನ ಅಧ್ಯಕ್ಷ ರಾಮವೀರ್ ಸಿಂಗ್ ಕರ್ದಮ್ ಹೇಳಿದರು.

ಒಂದು ಕಡೆ ಎಲ್ಲ ರಾಜಕಾರೀಣಿಗಳು ಹಾಥ್ರಸ್‍ನ ಸಂತ್ರಸ್ತೆಯ ಕುಟುಂಬದ ಭೇಟಿಗೆ ಹೋಗಿವೆ. ಆದರೆ, ಮಾಯಾವತಿ ದಲಿತ ಯುವತಿಯ ಪೀಡಿತ ಕುಟುಂಬವನ್ನು ಭೇಟಿಯಾಗುವ ಮನಸ್ಸೇ ಮಾಡಿಲ್ಲ. ಅವರು ಹಾಥ್ರಸ್‍ಗೆ ಭೇಟಿ ನೀಡದೆ ಕುಟುಂಬದೊಂದಿಗೆ ಮಾತಾಡದೆ ಕೇವಲ ತೋರಿಕೆಗಾಗಿ ದಲಿತರನ್ನು ಬೆಂಬಲಿಸುತ್ತಾರೆ ಮತ್ತು ದಲಿತರ ಮತಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಈಗ ಸಮಾಜ ಎಚ್ಚರಗೊಂಡಿದೆ ಯಾರು ಸಮಾಜದ ಪರ ಕೆಲಸ ಮಾಡುತ್ತಾರೆ ಅವರಿಗೆ ಮಾತ್ರ ಸಮಾಜ ಮತ ನೀಡಲಿದೆ. ಅಲ್ಲಿ ನೆರೆದಿದ್ದ ದಲಿತ ಸಮಾಜದ ಜನರು ಮಾಯಾವತಿಯ ವರ್ತನೆಯಿಂದ ಬೇಸರಗೊಡು ಮಾಯಾವತಿಯ ನಿರ್ಲಕ್ಷ್ಯದ ಕುರಿತು ಹಲವು ಉದಾಹರಣೆಗಳನ್ನು ಎತ್ತಿ ತೋರಿಸಿದ್ದಾರೆ.

ಆಗ್ರಾದ ಜಗದೀಶ್‍ಪುರ ಬಿಎಸ್ಪಿಯ ಶಕ್ತಿ ಕೇಂದ್ರವಾಗಿದೆ. ಇಲ್ಲಿ ಜಾಟವ ಸಮಾಜ ಬಹುಸಂಖ್ಯಾತರು. ಜಾಟವ ಸಮಾಜ ನಗರದ ಹಲವು ವಿಧಾನಸಭಾ ಕ್ಷೇತ್ರದ ಗೆಲುವು ಸೋಲಿನಲ್ಲಿ ನಿರ್ಣಾಯಕರಾಗಿದ್ದಾರೆ. ಆದರೆ ಈಗ ಜಾಟವ ಸಮಾಜ ಮಾಯಾವತಿಯವರಿಂದ ಮುನಿಸಿಕೊಂಡು ಬಿಎಸ್ಪಿಯಿಂದ ದೂರವಾಗುತ್ತಿರುವ ಸೂಚನೆಗಳು ವ್ಯಕ್ತವಾಗುತ್ತಿದೆ.