ಹಥ್ರಾಸ್ ತನಿಖಾ ವರದಿ: ಯುಪಿ ಸರಕಾರದಿಂದ ಎಸ್‌ಐಟಿಗೆ 10 ದಿನಗಳ ಗಡುವು

0
376

ಸನ್ಮಾರ್ಗ ವಾರ್ತೆ

ಲಕ್ನೊ,ಅ.7: ಹಥ್ರಾಸ್ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸಲು ಉತ್ತರಪ್ರದೇಶ ಸರಕಾರವು ವಿಶೇಷ ತನಿಖಾ ತಂಡಕ್ಕೆ 10 ದಿನಗಳ ಗಡುವು ವಿಸ್ತರಿಸಿದೆ. ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇಂದು ತನಿಖಾ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕಿತ್ತು. ಆದರೆ, ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸಮಯವನ್ನು ಹೆಚ್ಚಿಸಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಕೆ.ಅಶ್ವತಿ ತಿಳಿಸಿದ್ದಾರೆ.

ತನಿಖಾ ತಂಡ ಕಳೆದ ರವಿವಾರ ಬಾಲಕಿಯ ಮನೆಯಲ್ಲಿ ಹೇಳಿಕೆಯನ್ನು ಪಡೆದುಕೊಂಡಿತ್ತು. ಪ್ರಾಥಮಿಕ ವರದಿ ಆಧಾರದಲ್ಲಿ ಕರ್ತವ್ಯಲೋಪ ಎಸಗಿದ ಹಥ್ರಾಸ್ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಘಟನೆ ವಿವಾದ ಬಳಿಕ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ.

ಇದೇವೇಳೆ, ಅಂತಾರಾಷ್ಟ್ರೀಯ ಫಂಡ್ ಉಪಯೋಗಿಸಿ ಜಾತಿ-ಕೋಮು ಗಲಭೆಗೆ ಬುನಾದಿ ಹಾಕುವುದು ಪ್ರತಿಪಕ್ಷಗಳ ಪ್ರತಿಭಟನೆಯಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದರು. ಮುಖ್ಯಮಂತ್ರಿಯ ಆರೋಪವನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂತಾದವರು ರಂಗಪ್ರವೇಶಿಸಿದ್ದರು. ಬಾಲಕಿಯ ಕುಟುಂಬಕ್ಕೆ ಬೆದರಿಕೆಯೊಡ್ಡುವ ಹೇಳಿಕೆಯನ್ನು ಆದಿತ್ಯನಾಥ್ ನೀಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದರು.