ಸನ್ಮಾರ್ಗ ವಾರ್ತೆ
ಹೊಸ ದೆಹಲಿ: ದೆಹಲಿ ಪೊಲೀಸರು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಮತ್ತು ನಿಷೇಧಿತ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಜೊತೆ ಸಂಬಂಧ ಹೊಂದಿದ್ದ ಅಂತರರಾಜ್ಯ ಭಯೋತ್ಪಾದನೆ, ಶಸ್ತ್ರಾಸ್ತ್ರ ಮತ್ತು ಗೂಢಚರ್ಯೆ ಜಾಲವನ್ನು ಭೇದಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರಿದಿ ಮಾಡಿದೆ. ಎರಡು ಸಂಘಟಿತ ಕಾರ್ಯಾಚರಣೆಗಳಲ್ಲಿ ಪಂಜಾಬ್ ಮತ್ತು ದೆಹಲಿಯಿಂದ 11 ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಎನ್ಕ್ರಿಪ್ಟ್ ಮಾಡಿದ ಆ್ಯಪ್ಗಳ ಮೂಲಕ ಪಾಕಿಸ್ತಾನ ಮೂಲದ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು.
ಆರೋಪಿಗಳನ್ನು ಮನ್ಪ್ರೀತ್ ಸಿಂಗ್, ಅನ್ಮೋಲ್, ಸಾಹಿಲ್, ಅತುಲ್ ರಾಠಿ, ರೋಹಿತ್, ಅಜಯ್, ಗುರ್ಜಿತ್ ಸಿಂಗ್, ರಿಂಪಲ್ದೀಪ್ ಸಿಂಗ್, ಸಲ್ವಿಂದರ್ ಸಿಂಗ್, ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮತ್ತು ಬೂಟಾ ಸಿಂಗ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳು ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಅಕ್ರಮ ಸಾಗಣೆಯ ಮೂಲಕ ಗಳಿಸಿದ ಹಣದ ಆಮಿಷವೊಡ್ಡಿ ಭಾರತೀಯ ಯುವಕರನ್ನು ಸೆಳೆಯುತ್ತಿದ್ದರು. ಈ ವ್ಯಕ್ತಿಗಳಿಗೆ ಸೂಕ್ಷ್ಮ ಸೇನಾ ಮತ್ತು ಅರೆಸೇನಾ ನೆಲೆಗಳ ಸ್ಥಳಗಳು, ವಿಡಿಯೋಗಳು ಮತ್ತು ಛಾಯಾಚಿತ್ರಗಳನ್ನು ಸೆರೆಹಿಡಿಯುವ ಕೆಲಸ ನೀಡಲಾಗಿತ್ತು. ಅಂತಹ ಸ್ಥಳಗಳ ಬಳಿ ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅವರಿಗೆ ಸೂಚನೆ ನೀಡಲಾಗಿತ್ತು. ಇಂತಹ ಒಂಬತ್ತು ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.












