ದೆಹಲಿ | ತುಘಲಕ್ ಲೈನ್ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಸದ್ಗುರು ಆಗ್ರಹ

0
247

ಸನ್ಮಾರ್ಗ ವಾರ್ತೆ

ಹೊಸ ದೆಹಲಿ: ದೆಹಲಿಯಲ್ಲಿರುವ ಐತಿಹಾಸಿಕ ‘ತುಘಲಕ್ ಲೈನ್’ ರಸ್ತೆಯ ಮರುನಾಮಕರಣ ಮಾಡಬೇಕೆಂದು ಸದ್ಗುರು ಜಗ್ಗಿ ವಾಸುದೇವ್ ಒತ್ತಾಯಿಸಿದ್ದಾರೆ. ಅಕ್ಷರಧಾಮ ದೇವಸ್ಥಾನದಲ್ಲಿ ದೆಹಲಿ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ‘ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಸಮಾವೇಶ 2026’ ಅನ್ನು ಉದ್ಘಾಟಿಸುವ ವೇಳೆ ಅವರು ಈ ಸಲಹೆ ನೀಡಿದರು.

ತಮ್ಮ ವಿನಾಶಕಾರಿ ನಿರ್ಣಯಗಳು ಮತ್ತು ವಿಫಲ ಆಡಳಿತಾತ್ಮಕ ಸುಧಾರಣೆಗಳಿಗೆ ಹೆಸರುವಾಸಿಯಾದ ಮುಹಮ್ಮದ್ ಬಿನ್ ತುಘಲಕ್ ಹೆಸರನ್ನು ರಾಜಧಾನಿಯ ಪ್ರಮುಖ ರಸ್ತೆಗೆ ಇಟ್ಟಿರುವುದು ಸೂಕ್ತವಲ್ಲ ಎಂದು ಸದ್ಗುರು ಹೇಳಿದರು. ಇಂತಹ ಐತಿಹಾಸಿಕ ಮಹತ್ವದ ರಸ್ತೆಗಳಿಗೆ ದೇಶದ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮತ್ತು ಸ್ಪೂರ್ತಿದಾಯಕವಾದ ಹೆಸರುಗಳನ್ನು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ದೆಹಲಿಯನ್ನು ಪ್ರಮುಖ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಪ್ರವಾಸೋದ್ಯಮ ತಾಣವಾಗಿ ಉತ್ತೇಜಿಸಲು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಉಪಸ್ಥಿತಿಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿತ್ತು. ನಗರದ ಪ್ರಮುಖ ಅಧ್ಯಾತ್ಮಿಕ ಮತ್ತು ಐತಿಹಾಸಿಕ ಕೇಂದ್ರಗಳನ್ನು ಸಂಪರ್ಕಿಸುವ ನಾಲ್ಕು ಹೊಸ ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ಸಹ ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಈ ಹಿಂದೆ ದೆಹಲಿಯ ವಿಐಪಿ ಪ್ರದೇಶದಲ್ಲಿದ್ದ ತುಘಲಕ್ ರಸ್ತೆಯ ಒಂದು ಭಾಗವನ್ನು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ‘ಎ.ಪಿ.ಜೆ. ಅಬ್ದುಲ್ ಕಲಾಂ ಮಾರ್ಗ್’ ಎಂದು ಮರುನಾಮಕರಣ ಮಾಡಲಾಗಿತ್ತು. ಸದ್ಗುರು ಅವರ ಹೊಸ ಹೇಳಿಕೆಯೊಂದಿಗೆ, ರಾಜಧಾನಿಯಲ್ಲಿ ರಸ್ತೆಗಳ ಮರುನಾಮಕರಣದ ಕುರಿತಾದ ಚರ್ಚೆಯು ಪುನರುಜ್ಜೀವನಗೊಂಡಿದೆ.

ಆಕ್ರಮಣ ಮತ್ತು ಕ್ರೌರ್ಯದ ನೆನಪಿಸುವ ಹೆಸರುಗಳನ್ನು ಬದಲಾಯಿಸಬೇಕೆಂಬ ವಾದವನ್ನು ಈ ಹಿಂದೆ ವಿವಿಧ ವಲಯಗಳಿಂದ ಎತ್ತಲಾಗಿದೆ. ಇದರ ಭಾಗವಾಗಿ, ಈ ಹಿಂದೆ ಔರಂಗಜೇಬ್ ರಸ್ತೆಯನ್ನು ‘ಎ.ಪಿ.ಜೆ. ಅಬ್ದುಲ್ ಕಲಾಂ ಮಾರ್ಗ್’ ಎಂದು, ರೇಸ್ ಕೋರ್ಸ್ ರಸ್ತೆಯನ್ನು ‘ಲೋಕ ಕಲ್ಯಾಣ ಮಾರ್ಗ್’ ಎಂದು ಮತ್ತು ರಾಜ್‌ಪಥ್ ಅನ್ನು ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಲಾಗಿತ್ತು.