ಅಮೇರಿಕಾದ ತ್ರಿಮುತ್ತುಗಳು

0
1176

ಲೇಖಕಿ: ಸಿಹಾನ ಬಿ.ಎಂ.

ಜಗತ್ತಿನ ಪ್ರಜಾಪ್ರಭುತ್ವ ಪ್ರೇಮಿಗಳಿಗಿಂದು ಸಂಭ್ರಮದ ಕ್ಷಣಗಳು. ವಿಧಿಯ ಆಟದಲ್ಲಿ ದಾಖಲೆ ನಿರ್ಮಿಸಿದ ವಿಜಯದ ಹೆಜ್ಜೆಗಳು. ಅಮೇರಿಕನ್ನರ ಪಾಲಿಗೆ ಸುವಾಸನೆಭರಿತ ಪುಷ್ಪಗಳಿಂದ ಪ್ರಕಾಶಮಾನವಾದ ದಿನಗಳು ಇಂದು. ಅದರ ಜೊತೆ ಜೋ ಬೆಡನ್ ವಿಜಯದ ಹಿಂದಿರುವ ಮೂವರು ಮಹಿಳಾ ರತ್ನಗಳ‌ ಕುರಿತು ಬರೆಯದಿದ್ದರೆ ಈ ಸಂಭ್ರಮದಲ್ಲಿ ಹಿಗ್ಗಲು ಮನಸ್ಸು ಒಪ್ಪಲಾರದು.

ಮಿತಭಾಷಿಯಾದ ಜೋ ಬೆಡನ್ ವೈಟ್ ಹೌಸ್ ಹೊಕ್ಕರೆ, ವಿವಾದಿತನಾದರೂ ಯುದ್ಧ ಬಯಸದ ಡೊನಾಲ್ಡ್ ಟ್ರಂಪ್ ಸೋಲಿನ ಬೋನಿನೊಳಗೆ ಸಿಲುಕಿ ಹಲ್ಲು ಕಚ್ಚುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದ ಪ್ರಮುಖ ಸುದ್ದಿಯಾಗಿದೆ. ಬಲಪಂಥೀಯ ಧೋರಣೆಯಲ್ಲಿ ವರ್ಣಬೇಧ ಮತ್ತು ಧರ್ಮಾಂಧತೆಯ ಹೇಳಿಕೆಗಳೊಂದಿಗೆ ಕಾರ್ಯದಕ್ಷತೆಯಲ್ಲಿ ಎಡವಿದ ಟ್ರಂಪ್‌ ಸೋಲು ಅಮೇರಿಕಾ ಜನತೆಯನ್ನು ಸಂತಸದ ಕಡಲಲಿ ತೇಲಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಅಮೇರಿಕನ್ನರು ಈ ಬಾರಿಯ ಚುನಾವಣೆಯಲ್ಲಿ ಒಗ್ಗಟ್ಟಾಗಿ ವಿಜಯದ ಸೊಂಪಾದ ಚೆಲುವನ್ನು ಆಸ್ವಾದಿಸಲು ಅಣಿಯಾಗಿರುವುದು ಭಾರತದ ಜನತೆಗೆ ಪಾಠವಾಗಲಿ. ಜೋ‌ ಬೈಡನ್‌ರ ವಯಸ್ಸಿನ ಆಧಿಕ್ಯದ ಕುರಿತ ಟೀಕೆ, ಕುಹಕು ಮಾತುಗಳು ಅವರ ಶ್ರವಣರೋಮವನ್ನು ಒಂದು ಚೂರೂ ಕೊಂಕಿಸಲಿಲ್ಲ. ಬದಲಾಗಿ ಮನುಷ್ಯತ್ವದ ಚಿಂತನೆ ಮತ್ತು ಶಬ್ಧಗಳೇ ಕಿವಿ ನಿಮಿರುವಿಕೆಗೆ ಪ್ರೇರೇಪಿತವಾದವು.

ಶುದ್ಧ ನಯನದ ಸುಂದರಿಗಳ ಪ್ರೀತಿಯ ಹೃದಯಗಳು ಆ ಭೂಖಂಡದ ಮೇಲೆ ಕುಸುವಿಟ್ಟವು. ಅದರಲ್ಲಿ ಒಬ್ಬಾಕೆ ನಮ್ಮೂರ ಗುಲಾಬಿ ಕಮಲಾದೇವಿ ಹ್ಯಾರಿಸ್. ಲಕ್ಷಾಂತರ ಮನಸ್ಸುಗಳ ನಿಷ್ಪಲಗೊಂಡ ಬೆಸೆಯುವಿಕೆಯ ಕನಸುಗಳನ್ನು ಮೊಗೆದು ಪೋಣಿಸಿ ಮತ್ತೊಮ್ಮೆ ಕನಸು ನನಸಾಗಿಸಲು ಅರಳಿದ ಕುಸುಮವದು. ಪಕ್ಷಪಾತ, ಕರಿ-ಬಿಳಿಯರೆಂಬ ವರ್ಣಬೇಧದಲಿ ಆಟವಾಡಿದ ನಾಯಕನ ಸೋಲಿನಲ್ಲಿ ಭರವಸೆಯ ಮತಗಳೊಂದಿಗೆ ಪ್ರಥಮ ಹೆಜ್ಜೆಯ ರೂವಾರಿಯವರು. ಆ ಮಾತೆಯನ್ನು ಅಟ್ಟಕ್ಕೇರಿಸಿ ಹರಿಹಾಯ್ದ ಹಲವಾರುವ ಪೋಸ್ಟ್ ಗಳೇ ಇದಕ್ಕೆ ಸಾಕ್ಷಿ.

ಪ್ರಿಯರೇ…. ಗಮನವಿಟ್ಟು ಆಲಿಸಿ ನೋಡಿ….ಇನ್ನುಳಿದ ವೀರಮಹಿಳೆಯರ ಹಿಂಚಲನೆಯ ಹೊಡೆದು ಮುಂದಕ್ಕಿಟ್ಟ ಹೆಜ್ಜೆಯ ಗುರುತುಗಳನ್ನು ಅರಿಯಬೇಡವೇ….ಅವರೇ ಸ್ಟೇಯ್ಸೀ ಅಬ್ರಹಾಮ್ಸ್ ಮತ್ತು ಇಲ್ಹಾನ್ ಉಮರ್.

 

ಆಫ್ರಿಕಾದ ಮೂಲನಿವಾಸಿಯಾದ ಸ್ಟೇಯ್ಸೀ ಅಬ್ರಹಾಮ್ ಕಳೆದ ಹತ್ತು ವರುಷಗಳಿಂದ ಹೋರಾಟದ ಕಿಚ್ಚಿನ ಪಟ್ಟು ಹಿಡಿದು ಬಿಡದೆ ನಡೆದ ಪಯಣಗಾಥೆಯ ವೀರ ನಾಯಕಿ. ಹೀಯಾಳಿಕೆ, ದಬ್ಬಾಳಿಕೆಗೆ ಮರುಗಟ್ಟಿದ ಆ ಹೃದಯ ಸಾಮಾಜಿಕ ದುಃಸ್ಥಿತಿ, ಗುಲಾಮಗಿರಿ, ವರ್ಣಬೇಧದ ತಾರತಮ್ಯತೆ, ಮತ ಚಲಾವಣೆಯ ವಂಚಿತ ಹಕ್ಕುಗಳಂತಹ ತರತರದ ಸಮಸ್ಯೆಗಳಿಂದ ತುಂಬಿದ್ದರೂ ತನ್ನವರಿಗೆ ಬದುಕು ಕಟ್ಟಿಕೊಡಲು ನಿರಂತರ ಹೆಣಗಾಡಿದ ಜೀವವದು.

ಚುನಾವಣೆಯಲ್ಲಿ ಎಣಿಕೆಗಳ ಗಣಕ ಎಲ್ಲಿ ಹಾದಿ ತಪ್ಪುವುದೋ ಎಂಬ ದುಗುಡ ಆ ಮುಗ್ದೆಯೊಡಲಲಿ ಪ್ರತಿಕ್ಷಣ ಸಂಚಲನ ಮೂಡಿಸುತ್ತಿತ್ತು. ನಾವು ಕೇಳಿ ಅರಿತ ಅಮೇರಿಕಾದ ಪ್ರಗತಿಯ ಹಿಂದಿರುವ ನೋವಿನ ಮುಖಗಳ ಕಥೆಯೇ ಬೇರೆ.

ವಾಷಿಂಗ್ಟನ್, ನ್ಯೂಯಾರ್ಕ್‌ನ ಅಭಿವೃದ್ಧಿಯ ಹೆಸರಿನಲ್ಲಿ ಅಮೇರಿಕಾವನ್ನು ದೊಡ್ಡಣ್ಣನ ಸಾಲಿಗೆ ಸೇರಿಸಿದರೆ ಸಾಲದು. ಅಲ್ಲಿರುವ ಇನ್ನಿತರ ರಾಜ್ಯಗಳು ನಮ್ಮ ಬಿಹಾರಕ್ಕಿಂತಲು ಅತೀ ದಾರುಣ ಸ್ಥಿತಿಯನ್ನು ಎದುರಿಸುತ್ತಿದೆ. ಅಂತಹ ಸಮಸ್ಯೆಗಳ ಬೀಡಾದ ಜೋರ್ಜೆ ಎಂಬ ಕ್ಷೇತ್ರದಲ್ಲಿ ಡೆಮಾಕ್ರಸಿ ಪಕ್ಷದ ಅಭ್ಯರ್ಥಿಯಾಗಿ ನಿಂತ ಸ್ಟೇಯ್ಸೀ ಅಬ್ರಹಾಮ್ಸ್ ಮತ ಚಲಾವಣೆ ಹಾಗೂ ಇನ್ನಿತರ ಹಕ್ಕುಗಳಿಂದ ವಂಚಿತರಾದ ತನ್ನವರಿಗೆ ಮತ ಚಲಾವಣೆಯ ಹಕ್ಕನ್ನು ಒದಗಿಸಿ ಟ್ರಂಪ್‌ನ ಸೋಲಿಗೂ ಬೆಡನ್ ರ ಗೆಲುವಿಗೂ ಧ್ವನಿಯಾದರು.

ಇಲ್ಹಾನ್ ಉಮರ್ ಮೂಲತಃ ಆಫ್ರಿಕಾದ ಸೋಮಾಲಿಯಾದ ಅಮೇರಿಕಾ ನಿವಾಸಿ. 62 .8% ಮತಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿದ ವೀರ ಮಹಿಳೆ. ಬಲಪಂಥೀಯ ದುಷ್ಟಶಕ್ತಿಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಿದ ಕಣ್ಮಣಿ. ಸೋಮಾಲಿಯಾ ನಿವಾಸಿ ಹಾಗೂ ಮುಸ್ಲಿಮಳೆಂಬ ಕಾರಣಕ್ಕೆ ಟ್ರಂಪ್ ಆಕೆಯನ್ನು ಹೀಯಾಳಿಸಿದೆಷ್ಟು….ಆಕೆಯ ವಿರುದ್ಧ ಕಥೆ ಕಟ್ಟಿ ಸೃಷ್ಟಿಸಿದ ತಿರುವುಗಳೆಷ್ಟೋ, ಎಷ್ಟೊಂದು ನಿಷ್ಠೂರಗಳು, ದಬ್ಬಾಳಿಕೆಗಳು, ಮೇಲೆ ಕೆಂಡ ಕೆಳಗೆ ಬೆಂಕಿಯಂತಹ ಬದುಕಿನ ನಡುವೆ ಕನಸುಗಳನ್ನು ಬೆಂಬೆತ್ತಿ ಆಕೆ ಪಟ್ಟ ಪಾಡೆಷ್ಟು….ಅಲ್ಲಿಯ ಅಲ್ಪಸಂಖ್ಯಾತರ ಸಮಸ್ಯೆಗಳ ವಿರುದ್ಧ ಹೋರಾಡಿದ ವರುಷಗಳೆಷ್ಟು, ಎದುರಾಳಿ ಆಗರ್ಭ ಶ್ರೀಮಂತ ಕ್ರಿಶ್ಚಿಯನ್ ಅಭ್ಯರ್ಥಿಯಾದರೂ ಅಲ್ಲಿರುವ ಬಹುಸಂಖ್ಯಾತ ಕ್ರಿಶ್ಚಿಯನ್ ಪ್ರಜೆಗಳ ಚುರುಕುತನದ ಮೆದುಳು ಇಲ್ಹಾನ್ ಉಮರರ ಗೆಲುವಿಗೆ ಜೊತೆಯಾದುವು.

ಒಮ್ಮೆ ಆ ಅಮೇರಿಕನ್ನರ ವಿವೇಚನಾಶೀಲ ಚಿಂತನೆಯ ಅರಿಯಲು ಪ್ರಯತ್ನಿಸಿ, ಸೌಹಾರ್ದತೆಯ ಉಸಿರು ಹೃದಯ ಸ್ಪರ್ಶಿಸಿ ಲೋಕವ ಸಂತೈಸಲೆತ್ನಿಸುವ ಪರಿಯ ಕೇಳಿ ನೋಡಿ ಅದಾಗಿದೆ ಸ್ಥಿತಪ್ರಜ್ಞೆಯ ಕೊಡುಗೆ, ಸಮಯ ಪ್ರಜ್ಞೆಯ ಹೆಜ್ಜೆಗಳು, ಜೋ ಬೆಡನ್ ವಿಜಯ ಮತ್ತು ಅಮೇರಿಕಾದ ಹೊಸ ಇತಿಹಾಸಕ್ಕೆ ಕರ ಜೋಡಿಸಿದ ಭಾರತೀಯ ಬಾಂಧವರಿಗೆ ಹಾಗೂ ಕನ್ನಡ ನಾಡಿನ ಸಹೋದರ ಬಳಗಕ್ಕೆ ನನ್ನದೊಂದು ಸಲಾಂ. ಅಮೇರಿಕಾ ನಿಮ್ಮ ಹೆತ್ತಬ್ಬೆಯಲ್ಲದಿದ್ದರೂ ಆ ಸಾಕವ್ವನ ಋಣ ತೀರಿಸುವಿಕೆಯಲ್ಲಿ ನಿಮ್ಮ ಹೃದಯ ಹಗುರವಾಗಲಿ. ಜೋ ಬೆಡನ್ ರ ಭರವಸೆಯ ಗೆಲುವು ಅಮೇರಿಕನ್ನರ ಸ್ವಪ್ನಗಳ ಈಡೇರಿಕೆಗೆ ಶುಭ ಹಾಡಲಿ. ಓಲೈಕೆ , ಹುಸಿ ಭರವಸೆ , ಪೊಳ್ಳು ಆಶ್ವಾಸನೆಗಳು ಆ ನಾಡಿನ ಸ್ವಸ್ಥತೆಯನ್ನು ನಿರ್ವಾಣಗೊಳಿಸದಿರಲಿ. ನೆರೆರಾಷ್ಟ್ರಗಳ ದಮ್ಮು ಕಟ್ಟುವಿಕೆಯನ್ನು ಸಡಿಲಗೊಳಿಸಿ ನಿರಾಳವಾದ ಉಸಿರಾಟಕ್ಕೆ ಹೊಸ ಗಾಳಿಯ ಪಸರಿಸಲಿ.

ಭಾರತೀಯರು ಶೋಷಣೆಗಳಿಂದ ಬೇಯುತ್ತಿರುವ ಈ ಕಾಲದಲ್ಲಿ ನಮ್ಮ ವಿವೇಚನಾ ಪ್ರಜ್ಞೆಯೊಂದೇ ನಮ್ಮನ್ನು ಬದುಕಿಸಬಲ್ಲದು. ಭಾರತ ಮಾತೆಯ ಮಕ್ಕಳು ಹೃದಯಗಳ ಬೆಸುಗೆಯಲ್ಲಿ ಕುಪ್ಪಳಿಸಿ ನಲಿದಾಡುವಂತಾಗಬೇಕು. ನಮ್ಮ ಒಗ್ಗಟ್ಟಿನ ಶಕ್ತಿಯೇ ನಮ್ಮನ್ನು ಉಳಿಸಲಿ…ಮತ್ತೊಂದು ಅಮೇರಿಕಾದ ಇತಿಹಾಸವು ಭಾರತ ದೇಶದ ಭೂಪಟದಲ್ಲಿ ಸೇರ್ಪಡೆಯಾಗಲಿ…..