“ಪ್ರಚೋದನೆ, ಬೆಂಕಿ ಹಚ್ಚೋ ಕೆಲಸ ಸುಲಭ, ಅದನ್ನ ಆರಿಸೋದು ಕಷ್ಟ”; ಮಂಗಳೂರು ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

0
405

ಸನ್ಮಾರ್ಗ ವಾರ್ತೆ

ದ.ಕ ಜಿಲ್ಲೆ ಉಸ್ತುವಾರಿ ವಹಿಸಿರೋದು ನನಗೆ ಹೆಮ್ಮೆಯ ವಿಚಾರ. ಯೂತ್ ಕಾಂಗ್ರೆಸ್ ಸಮಯದಿಂದಲೂ ನಾನು ಇಲ್ಲಿಗೆ ಬರುತ್ತಿದ್ದೆ. ಇಲ್ಲಿನ ಜನರ ನಾಡಿ‌ಮಿಡಿತ ಸ್ವಲ್ಪ ಮಟ್ಟಿಗೆ ನನಗೆ ತಿಳಿದಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ದಿನೇಶ್ ಗುಂಡುರಾವ್ ಅವರು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತಾಡುತ್ತಿದ್ದರು.

ದ.ಕ ಜಿಲ್ಲೆ ಈ ರಾಜ್ಯದ ಅತ್ಯಂತ ಪ್ರತಿಷ್ಠಿತ ಜಿಲ್ಲೆ, ಇಲ್ಲಿ ಬಂದು ಕೆಲಸ ಮಾಡೋದು ನನಗೆ ಒಂದು ಉತ್ತಮ ಅವಕಾಶವಾಗಿದೆ. ಈ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ, ಖಾದರ್ ಸಾಹೇಬರಿಗೆ ಸ್ಪೀಕರ್ ಸ್ಥಾನವನ್ನು ನೀಡಲಾಗಿದೆ.

ನಾನು ಜಿಲ್ಲೆಗೆ ನಿರಂತರ ಬಂದು ಜನರ ಜೊತೆ ಸಂಪರ್ಕದಲ್ಲಿರುವೆ. ನನ್ನ ಪ್ರಥಮ ಆದ್ಯತೆ ಅಭಿವೃದ್ಧಿ, ಯೋಜನೆಗಳ ಅನುಷ್ಠಾನವಾಗಿದೆ ಎಂದವರು ಹೇಳಿದರು.

ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಬೇಕು. ಜನ ಬಂದು ಬಂಡವಾಳ ಹೂಡುವಂತಹ ಅಭಿವೃದ್ಧಿಗೆ ಪೂರಕವಾದ ಶಾಂತಿ, ನೆಮ್ಮದಿ, ಸಾಮರಸ್ಯದ ವಾತಾವರಣ ನಿರ್ಮಾಣವಾಗಬೇಕು.

ಜಿಲ್ಲೆಯಲ್ಲಿ ಅನೇಕ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ಪಕ್ಷಪಾತ ಮಾಡದೇ ಕಾನೂನು‌ ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.

ಪ್ರಚೋದನೆ, ಬೆಂಕಿ ಹಚ್ಚೋ ಕೆಲಸ ಸುಲಭ, ಅದನ್ನ ಆರಿಸೋದು ಕಷ್ಟ, ಹೀಗಾಗಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ನಾನು ಯಾವುದೇ ಪಕ್ಷ, ಸಂಘಟನೆ ಅಂತ ಹೇಳಲ್ಲ, ಎಲ್ಲರೂ ಸರಿಯಿರಬೇಕು. ಯಾವುದೇ ಜಾತಿ ಧರ್ಮದ ತಾರತಮ್ಯ ಇಲ್ಲದೇ ಜನರು‌ ನೆಮ್ಮದಿಯಿಂದ ಬದುಕುವಂತಾಗಬೇಕು.

ಮಳೆಗಾಲಕ್ಕೆ ಸಂಭಂದಿಸಿದಂತೆ ಜಿಲ್ಲಾಡಳಿತವು ಸಕಲ ಸಿದ್ದತೆ ನಡೆಸಬೇಕಾಗಿದೆ. ಇಂದು ಸಭೆ ನಡೆಸಿದಂತೆ ಮುಂದಿನ ವಾರ ಪುನಃ ಸಭೆ ನಡೆಸಿ ಪ್ರಕೃತಿ ವಿಕೋಪಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೆಯುವೆ.

ನಮ್ಮ ಯೋಜನೆಗಳ ಜಾರಿಯ ಕುರಿತು ಕೂಡಾ ನಾನು ಚರ್ಚೆ ನಡೆಸುವುದಾಗಿಯೂ ಸಚಿವರು ಹೇಳಿದ್ದಾರೆ.