ರೋಗ: ಒಂದು ಪರೀಕ್ಷೆ

0
935

ಸನ್ಮಾರ್ಗ ವಾರ್ತೆ

ಮನುಷ್ಯನಿಗೆ ಸಿಗುವ ಹಲವಾರು ಅನುಗ್ರಹಗಳಲ್ಲಿ ಆರೋಗ್ಯವು ಅತ್ಯಮೂಲ್ಯವಾದುದು. ಆರೋಗ್ಯದ ಬೆಲೆಯು ಅರಿವಾಗುವುದು ಅದನ್ನು ಕಳೆದುಕೊಳ್ಳುವಾಗ ಮಾತ್ರವಾಗಿರುತ್ತದೆ. ಶ್ರೀಮಂತ, ಬಡವ, ಹಿರಿಯ, ಕಿರಿಯ ಎಂಬ ಬೇಧವಿಲ್ಲದೆ ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ವಿವಿಧ ಸಮಯಗಳಲ್ಲಿ ಅನಾರೋಗ್ಯವನ್ನು ಅನುಭವಿಸುತ್ತಾನೆ. ಕೆಲವೊಂದು ರೋಗಗಳು ಕೆಲವು ದಿನಗಳಲ್ಲಿ ಗುಣಮುಖವಾಗುತ್ತದೆ. ಆದರೆ ಕೆಲವು ರೋಗಗಳು ಮನುಷ್ಯನ ಜೀವನದಾದ್ಯಂತ ಶಾಶ್ವತವಾಗಿ ಕಾಡುತ್ತಿರುತ್ತದೆ.

“ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ. ಅಂತಹವರ ಮೇಲೆ ವಿಪತ್ತೇನಾದರೂ ಎರಗಿದಾಗ ಅವರು “ನಿಶ್ಚಯವಾಗಿಯೂ ನಾವು ಅಲ್ಲಾಹನವರು ಮತ್ತು ಅಲ್ಲಾಹನೆಡೆಗೇ ನಮಗೆ ಮರಳಲಿಕ್ಕಿದೆ” ಎನ್ನುವರು.”
(ಪವಿತ್ರ ಕುರ್ ಆನ್ 2: 155 156)

ಮನುಷ್ಯನ ಶರೀರದ ಪ್ರಮುಖ ಭಾಗವಾದ ಮೆದುಳು, ಕರುಳು, ಹೊಟ್ಟೆ, ಕಣ್ಣು, ಕೈ ಕಾಲು, ಹೃದಯಗಳ ಶಸ್ತ್ರಕ್ರಿಯೆ, ಮಾರಕವಾದ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಅಪಘಾತದಲ್ಲಿ ಯಾವುದೇ ಭಾಗವನ್ನು ಕಳೆದುಕೊಳ್ಳುವುದು, ಪಾರ್ಶ್ವವಾಯು ಇತ್ಯಾದಿ ಆಧುನಿಕ ಕಾಲದಲ್ಲಿ ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿರುತ್ತದೆ. ರೋಗ ಬಂದಾಗ ಮನುಷ್ಯನು ಭಯಪಡುವುದು, ದುಃಖಿಸುವುದು ಸಹಜವಾಗಿರುತ್ತದೆ. ತನಗೆ ಯಾವುದಾದರೂ ಮಾರಕ ರೋಗ ತಗಲುವಾಗ ಅದನ್ನು ಒಪ್ಪಿಕೊಳ್ಳಬೇಕು. ಆ ರೋಗಗಳಿಗೆ ಆಧುನಿಕ ಕಾಲದಲ್ಲಿ ಲಭ್ಯವಿರುವ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ತಯಾರಾಗಬೇಕು. ಹೆಚ್ಚಿನ ಚಿಕಿತ್ಸೆ, ಶಸ್ತ್ರಕ್ರಿಯೆ, ಔಷಧಿಗಳು ದುಬಾರಿಯಾಗಿರುತ್ತದೆ. ಆದುದರಿಂದ ರೋಗವು ನಮಗೆ ಆರ್ಥಿಕ ನಷ್ಟವನ್ನೂ ಉಂಟು ಮಾಡುತ್ತದೆ. ಆರೋಗ್ಯವಂತರಾಗಲು ಹಣ ಖರ್ಚು ಮಾಡಲು ಮಾನಸಿಕವಾಗಿ ತಯಾರಿರಬೇಕು. ಜೀವನದಲ್ಲಿ ಅನಾರೋಗ್ಯದ ಸಮಯಕ್ಕಾಗಿ ಒಂದು ಮೊತ್ತವನ್ನು ಉಳಿತಾಯ ಮಾಡಿಡುವುದು ಉತ್ತಮವಾಗಿದೆ.

ಪ್ರವಾದಿ(ಸ) ಹೇಳಿದರು: “ಸತ್ಯವಿಶ್ವಾಸಿಗೆ ರೋಗ, ದೈಹಿಕ ಬೇನೆ, ಬಳಲಿಕೆ ಅಥವಾ ಇನ್ನಾವುದೇ ರೀತಿಯಲ್ಲಿ ದುಃಖವಾದರೆ ದೇವನು ಅದಕ್ಕೆ ಪ್ರತಿಯಾಗಿ ಮರದಿಂದ ಎಲೆಗಳನ್ನು ಉದುರಿಸುವಂತೆ ಅವನ ಪಾಪಗಳನ್ನು ಉದುರಿಸುತ್ತಾನೆ.” (ಬುಖಾರಿ, ಮುಸ್ಲಿಮ್)

ಮಾನವನ ಶರೀರದಲ್ಲಿ ಕೆಲವೊಂದು ನೋವುಗಳುಂಟಾಗುವುದು ಸಹಜವಾಗಿರುತ್ತದೆ. ಸಣ್ಣಪುಟ್ಟ ನೋವುಗಳನ್ನು ಸಹನೆಯಿಂದ ಸಹಿಸಿಕೊಳ್ಳುವುದರಿಂದ ಪಾಪಗಳು ಮನ್ನಿಸಲ್ಪಡುವುದು. ಯಾವುದೇ ರೋಗ, ನೋವನ್ನು ದೂಷಿಸಬೇಡಿರಿ, ಶಾಪ ಹಾಕಬೇಡಿರಿ. ರೋಗವನ್ನು ಭಯಪಡಬೇಡಿರಿ. ರೋಗದ ಶಮನವು 50% ಔಷಧಿಯನ್ನು ಅವಲಂಬಿಸಿದರೆ 50% ನಮ್ಮ ಮನಃಸ್ಥಿತಿಯನ್ನು ಅವಲಂಭಿಸಿರುತ್ತದೆ. ಅಲ್ಲಾಹನ ಮೇಲೆ ಉತ್ತಮ ನಿರೀಕ್ಷೆಗಳೊಂದಿಗೆ ಪ್ರಾರ್ಥಿಸಿರಿ. ಎಲ್ಲಾ ನೋವುಗಳೂ ರೋಗ ಅಲ್ಲ. ಕೆಲವೊಂದು ನೋವು ರೋಗದ ಲಕ್ಷಣವಾಗಿರುತ್ತದೆ. ಶರೀರದ ಯಾವುದೇ ಭಾಗದಲ್ಲಿ ನಿರಂತರವಾಗಿ ಕಂಡುಬರುವ ನೋವಿಗೆ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮವಾಗಿದೆ.

ಕೆಲವೊಂದು ರೋಗಗಳ ಮೂಲಕ ಕೆಲವರನ್ನು ಅನಿರ್ದಿಷ್ಟಾವಧಿಯವರೆಗೆ ಅಲ್ಲಾಹನು ಪರೀಕ್ಷಿಸುವನು. ಇದು ನಮ್ಮ ಕೆಲವು ಲೌಖಿಕ ಕೆಲಸ ಕಾರ್ಯಗಳಿಗೆ ವಿಶ್ರಾಂತಿ ನೀಡಿ ಅಲ್ಲಾಹನೊಂದಿಗೆ ಪ್ರಾರ್ಥಿಸಲು, ಪಾಪಗಳಿಗೆ ಕ್ಷಮಾಯಾಚನೆ ಮಾಡಲು, ಆರಾಧನೆಯಲ್ಲಿ ತಲ್ಲೀನರಾಗಲು, ಅಲ್ಲಾಹನೊಂದಿಗೆ ನಮ್ಮ ಸಂಬಂಧ ನಿಕಟಗೊಳಿಸಲು ಸಿಗುವ ಅವಕಾಶವಾಗಿದೆ. ಮನುಷ್ಯನು ಹಗಲು ರಾತ್ರಿ ಪ್ರಾರ್ಥಿಸಿದಾಗ ಅವನ ಹೃದಯವು ಮೃದುವಾಗುವುದು, ಅಲ್ಲಾಹನ ಕೃತಜ್ಞದಾಸನಾಗಿ ಮಾರ್ಪಡುವ ಸಾಧ್ಯತೆ ಇದೆ. ರೋಗವು ಮನುಷ್ಯನ ಸತ್ಯವಿಶ್ವಾಸವನ್ನು ಪ್ರಬಲಗೊಳಿಸುತ್ತದೆ. ರೋಗ, ಕಷ್ಟ ನಷ್ಟವನ್ನು ಸ್ವೀಕರಿಸುವುದು ವಿಧಿಯ ಮೇಲಿನ ವಿಶ್ವಾಸದ ಭಾಗವಾಗಿದೆ.

ರೋಗವು ಸಹನೆ ಮತ್ತು ತಾಳ್ಮೆಯ ಪರೀಕ್ಷೆಯೂ ಆಗಿರುತ್ತದೆ. ಕೆಲವರಿಗೆ ರೋಗ, ಆಸ್ಪತ್ರೆಯಲ್ಲಿ ರೋಗಿಯ ಆವಶ್ಯಕತೆಗಳಿಗಾಗಿ ಆಪ್ತ ಬಂಧುಗಳು ಸೇವೆ ಮಾಡುವುದು, ಬಿಲ್ ಪಾವತಿಸಲು ಹಣಕಾಸಿನ ವ್ಯವಸ್ಥೆ ಮಾಡುವುದು, ಬಡತನದಲ್ಲಿ ಕುಟುಂಬ ನಿರ್ವಹಣೆ ಹೀಗೆ ಆರ್ಥಿಕವಾಗಿ, ಶಾರೀರಿಕವಾಗಿ ಮತ್ತು ಮಾನಸಿಕವಾಗಿ ನೋವು ಅನುಭವಿಸುವುದು ಕೂಡಾ ಪರೀಕ್ಷೆಯ ಭಾಗವಾಗಿರುತ್ತದೆ. ಆಹಾರವಿದ್ದರೂ ರೋಗಿಯು ಕೆಲವೊಮ್ಮೆ ಪಥ್ಯ ಮಾಡಬೇಕಾದ ಹಾಗೂ ಹಸಿವೆಯನ್ನೂ ಅನುಭವಿಸಬೇಕಾದ ಸಂದರ್ಭವೂ ಬರುತ್ತದೆ.

ರೋಗಿಯ ಆಪ್ತ ಬಂಧುಗಳಿಗೆ ಸತ್ಕರ್ಮದ ತಟ್ಟೆಯನ್ನು ಭಾರಗೊಳಿಸಲು ಸಿಗುವ ಅವಕಾಶವಾಗಿರುತ್ತದೆ. ರೋಗಿಯ ಮೂಲಭೂತ ಬೇಡಿಕೆಯನ್ನು ಈಡೇರಿಸುವುದು, ಅಗತ್ಯವಿರುವಾಗ ಆರ್ಥಿಕ ಸಹಾಯ ಮಾಡುವುದು, ಉತ್ತಮ ಮಾತುಗಳಿಂದ ಅವರನ್ನು ಸಂತೋಷ ಪಡಿಸುವುದು. ರೋಗಿಯನ್ನು ಶುಷ್ರೂಷೆ ಮಾಡುವವರು ವಿಶಾಲವಾದ ಹೃದಯ, ಪ್ರಬಲವಾದ ಮನಸ್ಸನ್ನು ಹೊಂದಿರಬೇಕು. ಬುದ್ಧಿಮಾಂದ್ಯ, ಮಾನಸಿಕ ರೋಗಿ, ಕೈಕಾಲು ದುರ್ಬಲವಾದವರೊಂದಿಗೆ ಸಹನೆ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು.

ಮುಸ್ಲಿಮನು ರೋಗಿಯಾದಾಗ ಸಂದರ್ಶಿಸುವುದು ಇನ್ನೊಬ್ಬ ಮುಸ್ಲಿಮನ ಹಕ್ಕು ಮತ್ತು ಪುಣ್ಯ ಕಾರ್ಯವಾಗಿದೆ. ರೋಗಿಯನ್ನು ಸಂದರ್ಶಿಸುವಾಗ ಅವರ ದುಃಖ, ನೋವು, ಬೇಸರವನ್ನು ಕಡಿಮೆಗೊಳಿಸುವಂತಹ ಮನಸ್ಸು ಸಂತೋಷಗೊಳ್ಳುವಂತಹ, ಧೈರ್ಯ ನೀಡುವಂತಹ ಸಾಂತ್ವನದ ಮಾತನ್ನಾಡಿರಿ. ಅವರ ಮನಸ್ಸು ಸಂತೋಷವಾದಾಗ ಶರೀರದ ನೋವು ಕಡಿಮೆಯಾಗುತ್ತಾ ಆರೋಗ್ಯದ ಸುಖವನ್ನು ಅನುಭವಿಸುವುದು ಮತ್ತು ಆನಾರೋಗ್ಯ ಪೀಡಿತ ವ್ಯಕ್ತಿಯು ತನ್ನ ಜೀವನದ ದೃಷ್ಟಿಕೋನವನ್ನು ಬದಲಿಸಬಹುದು.

ನೀವು ರೋಗದ ನೋವು, ಚಿಕಿತ್ಸೆಯ ತೀವ್ರತೆ ಮತ್ತು ಹಣಕಾಸಿನ ಕಾರಣದಿಂದ ಮರಣವನ್ನು ಬಯಸಬೇಡಿರಿ. ಆತ್ಮಹತ್ಯೆಯಂತಹ ನೀಚ ಕಾರ್ಯದ ಬಗ್ಗೆ ಎಂದೂ ಆಲೋಚಿಸಬೇಡಿರಿ.

ಪ್ರವಾದಿ ಮುಹಮ್ಮದ್(ಸ) ಹೇಳಿದರು: “ನಿಮ್ಮ ಪೈಕಿ ಯಾರೂ ಅವನಿಗೆ ಆಗುವ ಕಷ್ಟದ ಕಾರಣ ಮರಣವನ್ನು ಬಯಸಬಾರದು. ಒಂದು ವೇಳೆ ಅವನಿಗೆ ಹಾಗೆ ಮಾಡಲೇ ಬೇಕೆಂದಾದರೆ ಅವನು ಹೀಗೆ ಪ್ರಾರ್ಥಿಸಲಿ – “ಓ ಅಲ್ಲಾಹ್! ಜೀವಿಸಿರುವುದು ನನ್ನ ಪಾಲಿಗೆ ಒಳಿತಾಗಿರುವ ತನಕ ನನ್ನನ್ನು ಜೀವಂತವಿರಿಸು ಮತ್ತು ಯಾವಾಗ ಸಾಯುವುದು ನನ್ನ ಪಾಲಿಗೆ ಉತ್ತಮವಾಗಿದೆಯೋ ಆಗ ನನಗೆ ಮರಣ ಕೊಡು.” (ಬುಖಾರಿ, ಮುಸ್ಲಿಮ್)

✍️ಖದೀಜ ನುಸ್ರತ್

LEAVE A REPLY

Please enter your comment!
Please enter your name here