ಸನ್ಮಾರ್ಗ ವಾರ್ತೆ
ಮಂಗಳೂರು: ಕರ್ನಾಟಕದ ನೆರೆಯ ರಾಜ್ಯವಾಗಿರುವ ಕೇರಳದಲ್ಲಿ ಎರಡನೇ ಹಂತದ ಕೊರೋನಾ ಭೀತಿ ಎದುರಾಗಿದ್ದು, ದಿನ ನಿತ್ಯ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಕೇವಲ ನಾಲ್ಕು ಗಡಿಗಳು ಮಾತ್ರ ತೆಗೆಯಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಎರಡನೇ ಹಂತದ ಕೊರೋನಾ ಹರಡುವಿಕೆಯು ಕೇರಳ ಸೇರಿದಂತೆ ಐದು ರಾಜ್ಯದಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿರುವ ಬೆನ್ನಿಗೇ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರಿಗೆ ಕೆಲವು ಕಟ್ಟನಿಟ್ಟಿನ ನಿಬಂಧನೆಗಳನ್ನು ವಿಧಿಸಲಾಗಿದೆ.
ಅಲ್ಲದೇ, ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ಕೇವಲ ಪ್ರಮುಖ ನಾಲ್ಕು ರಸ್ತೆಗಲ್ಲಿ ಮಾತ್ರ ಅವಕಾಶಕ್ಕೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಪ್ರಮಾಣ ಪತ್ರವು 72 ಗಂಟೆಯ ಒಳಗಿನದ್ದಾಗಿರಬೇಕು. ದೈನಂದಿನ ಶಿಕ್ಷಣ, ವ್ಯಾಪಾರ, ಉದ್ಯೋಗ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರು ತಪಾಸಣೆಗೆ ಮಾಡಬೇಕಿದ್ದು, ಪ್ರತೀ 15 ದಿನಕ್ಕೊಮ್ಮೆ ತಮ್ಮ ಕೋವಿಡ್ ವರದಿಯನ್ನು ನವೀಕರಿಸಬೇಕು ಎಂದು ಆದೇಶಿಸಿದ್ದಾರೆ.
ಕೇರಳದಿಂದ ಮಂಗಳೂರಿಗೆ ಬರುವವರು ತಲಪಾಡಿ ಮೂಲಕ, ಬಂಟ್ವಾಳಕ್ಕೆ ಬರುವವರು ವಿಟ್ಲದ ಸಾರಡ್ಕ ಮೂಲಕ, ಪುತ್ತೂರಿಗೆ ಆಗಮಿಸುವವರು ನೆಟ್ಟಣಿಗೆ ಮುಡ್ನೂರಿನ ಮೇಣಾಲ ಮೂಲಕ ಹಾಗೂ ಸುಳ್ಯಕ್ಕೆ ಆಗಮಿಸುವವರು ಜಾಲ್ಸೂರು ಮೂಲಕ ಪ್ರಯಾಣಕ್ಕೆ ಮಾತ್ರವೇ ಆಗಮಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಎಲ್ಲಾ ಗಡಿ ರಸ್ತೆಗಳಲ್ಲಿ ನಿರ್ಬಂಧ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೇರಳದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಜಿಲ್ಲೆಯಲ್ಲೂ ಹರಡದಂತೆ ತಡೆಯುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ಮತ್ತಿತರ ವಿಚಾರಗಳಿಗೆ ಕೇರಳದಿಂದ ಪ್ರತಿದಿನ ಎರಡು ಲಕ್ಷದಷ್ಟು ಜನ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರ ವಿನಿಮಯ ಮಾಡುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.












