ಸನ್ಮಾರ್ಗ ವಾರ್ತೆ
ಮುಂಬೈ: ದೇಶದ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿರುವ ಮುಂಬೈಯಲ್ಲಿ ದಿನನಿತ್ಯ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆತಂಕಗೊಂಡಿರುವ ಮಹಾರಾಷ್ಟ್ರ ಸರಕಾರ, ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದ್ದು, ನಿಯಮ ಉಲ್ಲಂಘನೆ ನಡೆಸುತ್ತಿರುವವರಿಗೆ ತಕ್ಕ ಪಾಠ ಕಲಿಸುತ್ತಿದೆ.
ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಕಾರ್ಯಾಚರಣೆಗಿಳಿದಿದ್ದು, ಕೊರೋನಾ ನಿಯಮ ಹಾಗೂ ಅಗ್ನಿಶಾಮಕ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಹೀಮ್ನ ಓಲ್ಡ್ ಕ್ಯಾಡೆಲ್ ರಸ್ತೆಯಲ್ಲಿರುವ ಹೋಟೆಲ್ಗೆ ನಿನ್ನೆ ಸೀಲ್ ಹಾಕಲಾಗಿದೆ. ಅಲ್ಲದೇ, ಮಾಸ್ಕ್ ಧರಿಸದಿದ್ದ ಕಾರಣಕ್ಕೆ ಹೊಟೇಲ್ ನ ಐವರು ಸಿಬ್ಬಂದಿಗಳಿಗೆ ದಂಡ ವಿಧಿಸಿರುವ ಬಗ್ಗೆ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ. ಅಲ್ಲದೇ, ಹೊಟೇಲ್ ನ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಿ, ಸೀಲ್ ಮಾಡಲಾಗಿದೆ.
ಕೋವಿಡ್ ಲಸಿಕೆಯನ್ನು ನೀಡುವ ಎರಡನೇ ಹಂತದ ಅಭಿಯಾನ ನಡೆಯುತ್ತಿರುವಾಗಲೇ ಮಹಾರಾಷ್ಟ್ರ ಸೇರಿದಂತೆ ಕೇರಳ, ಪಂಜಾಬ್, ಮಧ್ಯಪ್ರದೇಶ ಹಾಗೂ ಚತ್ತೀಸ್ ಗಡಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿತ್ತು. ಹೀಗಾಗಿ ಮಹಾರಾಷ್ಟ್ರ ಸರಕಾರವು ಕಟ್ಟುನಿಟ್ಟಿನ ನಿಯಮಗಳಿಗೆ ಮುಂದಾಗಿದೆ.
ಈ ಮಧ್ಯೆ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕರ್ನಾಟಕ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕೋವಿಡ್ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದರು.














