AIMIM ನ ಒವೈಸಿಯನ್ನು ಮೈತ್ರಿ ಸಭೆಗೆ ಆಹ್ವಾನಿಸಿಲ್ಲ: ಡಿಎಂಕೆ ಸ್ಪಷನೆ

0
645

ಸನ್ಮಾರ್ಗ ವಾರ್ತೆ

ಚೆನ್ನೈ: ಜನವರಿ 6 ರಂದು ಚೆನ್ನೈನಲ್ಲಿ ನಡೆಯಲಿರುವ ಮೈತ್ರಿ ಸಭೆಗೆ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲೀಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಒವೈಸಿಯವರನ್ನು ಆಹ್ವಾನಿಸಿದ್ದಾರೆ ಎಂಬ ವಿಚಾರವನ್ನು ನಿರಾಕರಿಸಿ ಸ್ಪಷ್ಟೀಕರಣ ನೀಡಿರುವ ಡಿಎಂಕೆ ಪಕ್ಷವು, ನಾವು ಆಹ್ವಾನಿಸಿಲ್ಲ ಎಂದು ತಿಳಿಸಿದೆ.

ನಿಗದಿತ ಸಭೆ ಮೈತ್ರಿ ಪಾಲುದಾರರೊಂದಿಗೆ ಮಾತ್ರ ನಡೆಯಲಿದೆ ಎಂದು ಡಿಎಂಕೆ ತಿಳಿಸಿದೆ. ಆದರೆ ಡಿಎಂಕೆಯವರ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಡಾ.ಮಸ್ತಾನ್ ರವರು ಒವೈಸಿ ಅವರನ್ನು ಭೇಟಿಯಾದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲಾದ ಬಳಿಕ ಡಿಎಂಕೆ ಪಕ್ಷವು ಸ್ಪಷ್ಟನೆ ನೀಡಿದೆ‌.

AIMIM ಪಕ್ಷವು ಬಿಹಾರ ಚುನಾವಣೆಗಳಲ್ಲಿ ನಮ್ಮ ಮತಗಳನ್ನು ವಿಭಜಿಸಿದೆ ಎಂಬ ಆರೋಪವಿದ್ದು, ಇದು ಆರ್ ಜೆಡಿ ಯ ಸೋಲಿಗೆ ಕಾರಣವಾಯಿತು ಎಂದು ಹೇಳಲಾಗಿತ್ತಾದರೂ ಅಂಕಿ ಅಂಶಗಳಿಂದ ಅದು ಸಾಬೀತಾಗಿಲ್ಲ.

ತಮಿಳುನಾಡಿನ ಮುಸ್ಲಿಂ ಸಂಘಟನೆಗಳು ಸಹ ಬಿಹಾರ ಚುನಾವಣಾ ಫಲಿತಾಂಶವನ್ನು ಗಮನಿಸಿ ಎಐಐಎಂಐಎಂ ಅನ್ನು ಟೀಕಿಸಿದೆ ಮತ್ತು ವಿರೋಧ ಪಕ್ಷಗಳ ಮತಗಳನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ, ಒವೈಸಿ ಬಿಜೆಪಿಯ ಬಿ ತಂಡ ಎಂದು ಕರೆದಿದ್ದರು.

ಆದಾಗ್ಯೂ, ಓವೈಸಿ ಅಂತಹ ಟೀಕೆಗಳನ್ನು ಬಲವಾಗಿ ತಿರಸ್ಕರಿಸಿದ್ದಾರೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಯಾವುದೇ ಪಕ್ಷಕ್ಕೆ ಯಾವುದೇ ಪ್ರದೇಶದಲ್ಲಿ ಸ್ಪರ್ಧಿಸುವ ಹಕ್ಕಿದೆ ಮತ್ತು ಪ್ರಮುಖ ಪಕ್ಷಗಳು ಮುಸ್ಲಿಮರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಐಎಂಐಎಂ ಈ ಹಿಂದೆಯೇ ಮಾಧ್ಯಮಗಳಿಗೆ ತಿಳಿಸಿದ್ದು, ಸಂಭಾವ್ಯ ಮೈತ್ರಿ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಪಕ್ಷವು ಗೆಲ್ಲಬಹುದಾದ ಕ್ಷೇತ್ರಗಳನ್ನು ಪ್ರಸ್ತುತ ಸಮೀಕ್ಷೆ ನಡೆಸುತ್ತಿದೆ ಎಂದು AIMIM ನ ತಮಿಳುನಾಡು ರಾಜ್ಯಾಧ್ಯಕ್ಷ ವಕೀಲ್ ಅಹ್ಮದ್ ತಿಳಿಸಿದ್ದಾರೆ.