ಸನ್ಮಾರ್ಗ ವಾರ್ತೆ
ದಿಲ್ಲಿ: ಪಾರ್ಲಿಮೆಂಟಿನಲ್ಲಿ ಸಾಮಾನ್ಯವಾಗಿ ಬಳಸುವ ಪದಗಳು ಸೇರಿದಂತೆ 65 ಪದಗಳಿಗೆ ನಿಷೇಧ ಹೇರಲಾಗಿದೆ. ‘ವಿನಾಶ್ ಪುರುಷ’, ಗೂಂಡಾಗಿರಿ, ಭ್ರಷ್ಟ, ಹೇಡಿ, ಅಪರಾಧ, ಮೊಸಳೆ ಕಣ್ಣೀರು, ಅಪಮಾನ, ನಾಟಕ, ಕಣ್ಣೊರೆಸೋ ತಂತ್ರ, ಕಪಟ, ಅಸಮರ್ಥ, ತಪ್ಪು, ಸುಳ್ಳು, ಅಸತ್ಯ, ಅರಾಜಕತಾವಾದ, ‘ಗದ್ದರ್’, ‘ಗಿರ್ಗಿಟ್’, ಗೂಂಡಾಗಳು, ‘ಘಡಿಯಾಲಿ ಅಂಶ’, ‘ಅಪಮಾನ’, ‘ಅಸತ್ಯ’, ‘ಅಹಂಕಾರ’, ‘ಕಾಲಾ ದಿನ್’, ‘ದಂಗಾ’, ‘ದಲಾಲ್’, ‘ದಾದಗಿರಿ’, ‘ದೋಹ್ರಾ ಚರಿತ್ರೆ’, ‘ಬೇಚಾರ’, ‘ವಿಶ್ವಾಸ್ಘಾತಕ್’, ‘ಸಂವೇದನ್ ಹೀನ್’, ಮೂರ್ಖ, ಕಿವುಡ ಸರಕಾರ, ಲೈಂಗಿಕ ಕಿರುಕುಳ, ಶಕುನಿ, ಸರ್ವಾಧಿಕಾರಿ, ‘ತಾನಾಶಾಹಿ’, ರಕ್ತಪಾತ, ರಕ್ತಸಿಕ್ತ, ದ್ರೋಹ, ನಾಚಿಕೆ, ದುರುಪಯೋಗ, ಮೋಸ, ‘ಚಮ್ಚಾ’, ‘ಚಮಚಾಗಿರಿ’, ಚೇಲಾಗಳು ಮತ್ತು ಬಾಲಿಶತ್ವ ಹೀಗೆ 65 ಪದಗಳನ್ನು ಪಟ್ಟಿ ಮಾಡಲಾಗಿದ್ದು ಸಂಸತ್ತಿನಲ್ಲಿ ಇವುಗಳ ಬಳಕೆಗೆ ನಿಷೇಧ ಹೇರಲಾಗಿದೆ.
ಸೋಮವಾರ ಆರಂಭವಾಗುವ ಮಳೆಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಪಟ್ಟಿಯನ್ನು ಹೊರತರಲಾಗಿದೆ.
ಪಾರ್ಲಿಮೆಂಟು ಚರ್ಚೆಯ ನಡುವೆ ಈ ಮಾತುಗಳು ಉಪಯೋಗಿಸಿದರೆ ದಾಖಲೆಗಳಿಂದ ತೆಗೆದು ಹಾಕಲಾಗುವುದು. ಮಾತು ಬಳಕೆಯ ವಿಷಯದಲ್ಲಿ ರಾಜ್ಯಸಭೆ ಅಧ್ಯಕ್ಷ ಮತ್ತು ಲೋಕಸಭಾ ಸ್ಪೀಕರ್ ತೀರ್ಮಾನ ಕೈಗೊಳ್ಳಬೇಕಾಗಿದೆ. ಲೋಕಸಭೆಯ ಅಧಿಕಾರಿಗಳು ಎರಡು ಸಭೆಗಳಲ್ಲಿ ಬಳಸುವ ಪಟ್ಟಿಯನ್ನು ತಯಾರಿಸಿದೆ.
ಸರಕಾರವನ್ನು ಟೀಕಿಸುವುದನ್ನು ತಡೆಯುವುದಕ್ಕಾಗಿ ಈ ಪದಗಳನ್ನು ನಿಷೇಧಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ನಿಷೇಧಿತ ಮಾತುಗಳನ್ನು ಪಾರ್ಲಿಮೆಂಟಿನಲ್ಲಿ ಹೇಳುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರಿಕ್ ಒಬ್ರಿಯಾನ್ ತಿಳಿಸಿದರು. ನಾನು ಆ ಮಾತುಗಳನ್ನು ಉಪಯೋಗಿಸುವೆ. ನನ್ನನ್ನು ಸಸ್ಪೆಂಡ್ ಮಾಡಬಹುದು. ಇದು ಪ್ರಜಾಪ್ರಭುತ್ವಕ್ಕಿರುವ ಹೋರಾಟ ಎಂದು ಅವರು ಹೇಳಿದ್ದಾರೆ.












