ಕೌಟುಂಬಿಕ ಬಜೆಟ್‌ನ ಬಗ್ಗೆ ನೀವು ಆಲೋಚಿಸುವುದಿಲ್ಲವೇ?

0
600

ಸನ್ಮಾರ್ಗ ವಾರ್ತೆ

ಲೇಖಕಿ: ಖದೀಜ ನುಸ್ರತ್

ಕೋಟ್ಯಾಂತರ ರೂಪಾಯಿ ಹಣ, ಆರೋಗ್ಯ ,ಸಂಪತ್ತು, ಅಧಿಕಾರ, ಸ್ಥಾನಮಾನ, ಸಂತಾನ, ಮನೆ, ಕಾರು ಮತ್ತು ಐಷಾರಾಮ ವಸ್ತುಗಳು ಇದ್ದರೆ ಮಾನವನು ಶಾಂತಿ ಮತ್ತು ನೆಮ್ಮದಿದಾಯಕವಾದ ಜೀವನವನ್ನು ನಡೆಸಬಹುದೆಂದು ಹೆಚ್ಚಿನ ಜನರು ಭಾವಿಸುತ್ತಾರೆ. ಅದನ್ನು ಗಳಿಸಲು ತನ್ನ ಜೀವನದ ಅಮೂಲ್ಯವಾದ ಆರೋಗ್ಯ ಮತ್ತು ಸಮಯವನ್ನು ವ್ಯರ್ಥಗೊಳಿಸುತ್ತಾರೆ. ಆದರೆ ಇವೆಲ್ಲವನ್ನೂ ಗಳಿಸಿದ ನಂತರವೂ ಮನುಷ್ಯನು ಶಾಂತಿ, ಸಮಾಧಾನ ಮತ್ತು ಸಂತೋಷದಿಂದ ಜೀವನವನ್ನು ನಡೆಸಲು ಸಾಧ್ಯವೇ? ನಮ್ಮಲ್ಲಿ ಸಂಪತ್ತಿದ್ದರೆ ಸಂತೃಪ್ತಿಯ ಜೀವನ ನಡೆಸಲು ಸಾಧ್ಯವೇ?

ನಮ್ಮ ಕುಟುಂಬ ಜೀವನವು ಶಾಂತಿಯುತವಾಗಿ ಮುಂದೆ ಸಾಗಬೇಕಾದರೆ ಅದು ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗು ಇನ್ನಿತರ ವಿಷಯಗಳಲ್ಲಿ ಸಮತೋಲನವನ್ನು ಕಾಪಾಡಬೇಕು. ಮನೆಯ ಸದಸ್ಯರ ಮಾನಸಿಕ ಆರೋಗ್ಯ ಮತ್ತು ಶಾಂತಿಯ ವಾತಾವರಣ ನಿರ್ಮಿಸುವಲ್ಲಿ ಕುಟುಂಬ ಬಜೆಟ್ ಪ್ರಮುಖ ಪಾತ್ರ ವಹಿಸುತ್ತದೆ. ಕುಟುಂಬದಲ್ಲಿ ದುಡಿಯುವವರಿಗೆ ತಮ್ಮ ಸಂಪಾದನೆಯ ಧಾರ್ಮಿಕ ರೀತಿ ನೀತಿಗಳ ಬಗ್ಗೆ ಸರಿಯಾದ ಜ್ಞಾನವಿರಬೇಕು. ಸಂಪಾದಿಸಿದ ಹಣವನ್ನು ಹೇಗೆ ಮತ್ತು ಏಕೆ ಖರ್ಚು ಮಾಡಬೇಕೆಂಬುದರ ಬಗ್ಗೆ ಅರಿವಿರಬೇಕು. ಇಲ್ಲಿ ನಮ್ಮ ವರಮಾನ ಎಷ್ಟು ಎಂಬುದು ವಿಷಯವಲ್ಲ. ಎಲ್ಲ ಖರ್ಚುಗಳನ್ನು ಯಾವ ರೀತಿ ವ್ಯವಸ್ಥಿತವಾಗಿ ನಿರ್ವಹಿಸುತ್ತೇವೆಂಬುದು ಮುಖ್ಯವಾಗಿರುತ್ತದೆ. ತಮ್ಮಲ್ಲಿರುವುದರ ಬಗ್ಗೆ ಮನಸ್ಸಿನಲ್ಲಿ ಕೃತಜ್ಞತಾಭಾವ ಇರುವವರಿಗೆ ಮಾತ್ರ ಸಂತೃಪ್ತಿಯಿಂದ ಜೀವನ ನಡೆಸಲು ಸಾಧ್ಯ. ಹಣ ಖರ್ಚು ಮಾಡುವಾಗ ಮಾತ್ರ ನಿಮ್ಮನ್ನು ಪ್ರೀತಿಸುವವರನ್ನು ಎಂದೂ ನಂಬಬೇಡಿರಿ. ನಿಮ್ಮನ್ನು ನಿಜವಾಗಿ ಪ್ರೀತಿಸುವವರು ಹಣ ಇಲ್ಲದಿರುವಾಗಲೂ ನಿಮ್ಮ ಜೊತೆಗಿರುತ್ತಾರೆ.

ಮನೆ ನಿರ್ಮಾಣ ,ವಿವಾಹ, ವಿದ್ಯಾಭ್ಯಾಸ, ಉಡುಗೊರೆ, ವಾಹನಗಳು, ವಿನೋದ ಯಾತ್ರೆ, ಕುಟುಂಬ ಸಮ್ಮಿಲನ ಕಾರ್ಯಕ್ರಮಗಳ ಖರ್ಚು, ಉಳಿತಾಯ ಇತ್ಯಾದಿ ಎಲ್ಲವನ್ನು ತಮ್ಮ ವರಮಾನಕ್ಕೆ ತಕ್ಕಂತೆ ತೀರ್ಮಾನಿಸಬೇಕು. ಅದರಲ್ಲಿ ತುರ್ತು ಪರಿಸ್ಥಿತಿ ಹಾಗೂ ಚಿಕಿತ್ಸೆಗಾಗಿ ಯಾವಾಗಲೂ ಒಂದು ನಿರ್ದಿಷ್ಟ ಮೊತ್ತವನ್ನು ಮೀಸಲಿಡಬೇಕು ಮತ್ತು ಒಂದು ಪಾಲು ದಾನಧರ್ಮಕ್ಕಾಗಿ ತೆಗೆದಿಡಬೇಕು. ಅಗತ್ಯಕ್ಕಿಂತ ಹೆಚ್ಚು ಹಣವಿದ್ದರೆ ಒಂದು ಸಣ್ಣ ಪಾಲನ್ನು ಸಾಲದ ರೂಪದಲ್ಲಿ ಯಾರಿಗಾದರೂ ಸಹಾಯ ಮಾಡಬೇಕು.

ನಮ್ಮ ಕುಟುಂಬ ಬಜೆಟ್ ಎಷ್ಟು ಸಣ್ಣದೂ ಸರಳವೂ ಆಗಿರುತ್ತದೋ ನಮ್ಮ ಜೀವನವೂ ಅಷ್ಟೇ ಸುಂದರ, ಸಮಾಧಾನಕರ ಹಾಗೂ ತೃಪ್ತಿಕರವಾಗಿರುವುದು. ಇದರಿಂದ ದುಡಿಯುವವರ ಮೇಲಿನ ಒತ್ತಡವು ಕಡಿಮೆಯಾಗುತ್ತದೆ. ಅಲ್ಲಿ ಬೆಳೆಯುವ ಮಕ್ಕಳು ಕೂಡಾ ಹೊಂದಿಕೊಂಡು ಜೀವಿಸಲು ಕಲಿಯುತ್ತಾರೆ. ಮಾತ್ರವಲ್ಲ ಜೀವನದಲ್ಲಿ ಎಂತಹ ಸನ್ನಿವೇಶ ಬಂದಾಗ ಅದನ್ನು ಧೈರ್ಯದಿಂದ ಎದುರಿಸಲು ಶಕ್ತರಾಗಿರುತ್ತಾರೆ. ಐಷಾರಾಮದಲ್ಲಿ ಬೆಳೆದ ಮಕ್ಕಳು ಕೈಯಲ್ಲಿ ಹಣ ಇಲ್ಲದಿರುವಾಗ ಕಡಿಮೆ ಖರ್ಚಿನಲ್ಲಿ ಅವರಿಗೆ ಜೀವಿಸಲು ತಿಳಿದಿರುವುದಿಲ್ಲ. ಯಾವುದೇ ಸಮಾಲೋಚನೆಗಳಿಲ್ಲದೆ ಖರ್ಚು ಮಾಡುವವರನ್ನು ನೋಡಲು ಸುಂದರವಾಗಿಯೂ, ಅತ್ಯಾಕರ್ಷಕವಾಗಿಯೂ ಕಂಡರೂ ನಂತರ ಅದು ಜೀವನದಲ್ಲಿ ಬೀರುವ ದುಷ್ಪರಿಣಾಮವು ಭಯಾನಕವಾಗಿರುತ್ತದೆ. ತಮ್ಮ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಲು ಅವರು ಅನುಭವಿಸುವ ನೋವು, ಕಷ್ಟ ಮತ್ತು ಮಾನಸಿಕ ಸಂಘರ್ಷ ವಿವರಿಸಲಾಧ್ಯವಾಗಿರುತ್ತದೆ. ಜಗತ್ತಿನಲ್ಲಿ ಹೆಚ್ಚಿನ ಶ್ರೀಮಂತರು ಸಾಲಗಾರರಾಗಿಯೇ ಇರುತ್ತಾರೆ.

ತನ್ನ ಪತಿಯ ಅಥವಾ ಮಕ್ಕಳ ವರಮಾನ ಮತ್ತು ಸಾಲದ ಬಗ್ಗೆ ಮನೆಯ ಸ್ತ್ರೀಯರಿಗೆ ಸರಿಯಾದ ಅರಿವು ಇರಬೇಕು. ಪ್ರತಿಯೊಬ್ಬರೂ ತಮ್ಮ ಕುಟುಂಬದ ಮಾಸಿಕ ಹಾಗೂ ವಾರ್ಷಿಕ ಬಜೆಟ್ ನ ಬಗ್ಗೆ ಪತ್ನಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಬೇಕು. ನಮ್ಮಲ್ಲಿ ಹೆಚ್ಚಿನವರು ಪತಿ ಹಾಗೂ ಮಕ್ಕಳ ವರಮಾನವೆಷ್ಟು ,ಅದನ್ನು ಗಳಿಸುವ ಮೂಲಗಳು ಯಾವುವು ಎಂದು ಅರಿಯದೆ ತಮಗೆ ಬೇಕಾಗಿರುವುದನ್ನೆಲ್ಲ ಖರೀದಿಸಲು ಹಠ ಹಿಡಿಯುತ್ತಾರೆ. ಇದರಿಂದಾಗಿ ಮನೆಯ ಸ್ತ್ರೀಯರ ಹಣದ ಒತ್ತಡಕ್ಕೆ ತಲೆಬಾಗಿ ವಕ್ರವಾದ ವರಮಾನ ಮಾರ್ಗವನ್ನು ಅನುಸರಿಸುತ್ತಾರೆ ಮತ್ತು ಬ್ಯಾಂಕಿನಿಂದ ಸಾಲ ಪಡೆಯುವ ಅವಸ್ಥೆಗೂ ತಲುಪುತ್ತಾರೆ. ನಮ್ಮದಲ್ಲದ ಹಣದಿಂದ ಅನಗತ್ಯ ಖರ್ಚು, ದುಂದುವೆಚ್ಚ, ತೋರಿಕೆ, ಆಡಂಭರದ ಜೀವನ ನಮ್ಮ ನೆಮ್ಮದಿಗೆಡಿಸುವುದರೊಂದಿಗೆ ಕುಟುಂಬದ ಸದಸ್ಯರ ಮಧ್ಯೆ ಕೆಟ್ಟದಾದ ಸ್ಪರ್ಧಾತ್ಮಕ ಭಾವನೆಗಳನ್ನುಂಟು ಮಾಡುತ್ತದೆ.

ಯಾವುದೇ ವಸ್ತು ಕಂಡ ತಕ್ಷಣ ಖರೀದಿಸಬೇಕೆಂದು ಆಶೆಪಡುವುದು ಮಾನವನ ನೈಸರ್ಗಿಕ ಗುಣವಾಗಿರುತ್ತದೆ. ಆದರೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಾಗ ಸರಿಯಾಗಿ ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳಬೇಕು. ಅಗತ್ಯವಿದ್ದರೆ ತಮ್ಮ ಆಪ್ತ ಸಂಬಂಧಿಕರ, ಸ್ನೇಹಿತರ ಮತ್ತು ಗುರುಹಿರಿಯರ ಸಲಹೆ ಪಡೆಯುವುದು ಉತ್ತಮ. ನಮಗೆ ಅಗತ್ಯ ಮತ್ತು ಅತ್ಯಗತ್ಯ ಬೇಕಾಗಿರುವುದು ಯಾವುದು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಇವೆರಡರ ಮಧ್ಯೆ ತುಂಬಾ ವ್ಯತ್ಯಾಸವಿದೆ. ಇಂದು ಹೆಚ್ಚಿನವರಿಗೆ ತಮಗೆ ಬೇಕಾಗಿರುವುದನ್ನು ತಿನ್ನುವ, ಕುಡಿಯುವ, ಉಡುವ ಮತ್ತು ಅಗತ್ಯಗಳನ್ನು ಪೂರೈಸುವುದಕ್ಕಿಂದಲೂ ಹೆಚ್ಚಾಗಿ ಜಗತ್ತಿಗೆ ತೋರಿಸಿ ಮಾನಸಿಕವಾಗಿ ಸಂತೋಷ ಪಡುವುದು ಒಂದು ಹವ್ಯಾಸವಾಗಿದೆ. ಇದು ದಿನದಿಂದ ದಿನಕ್ಕೆ ಹೆಚ್ಚಾದಂತೆ ಅದು ಕಾಲ ಕ್ರಮೇಣ ಮಾನಸಿಕ ರೋಗವಾಗಿ ಮಾರ್ಪಡುತ್ತದೆ.

ನಮ್ಮ ಸಂತೋಷವನ್ನು ಕುಟುಂಬದವರೊಂದಿಗೆ ಸಂಭ್ರಮಿಸುವುದರಲ್ಲಿ ,ಆಚರಿಸುವುದಲ್ಲಿ ಯಾವುದೇ ತಪ್ಪಿಲ್ಲ. ಇಷ್ಟ ಪಡುವ ವಸ್ತ್ರವನ್ನು ನಮ್ಮ ಸಂತೋಷಕ್ಕಾಗಿ ಧರಿಸಬೇಕು ಹೊರತು ಇತರರಿಗೆ ತೋರಿಸಲಿಕ್ಕಾಗಿ ಮತ್ತು ಜನರ ಮೆಚ್ಚುಗೆ ಗಳಿಸಲಿಕ್ಕಾಗಿ ಧರಿಸಬೇಡಿರಿ. ತಿನ್ನುವುದನ್ನು, ಕುಡಿಯುವುದನ್ನು, ಧರಿಸುವುದನ್ನು, ಗಳಿಸಿದ್ದನ್ನು ಮತ್ತು ಕುಟುಂಬದ ಎಲ್ಲಾ ರಹಸ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಬೇಡಿರಿ. ಅದು ಇಲ್ಲದವರ ಮನಸ್ಸಿನಲ್ಲಿ ಆಸೆಯುಂಟಾಗಬಹುದು. ಅಥವಾ ಕೆಲವರ ಮನಸ್ಸಿನಲ್ಲಿ ಅಸೂಯೆಯೂ ಉಂಟಾಗಬಹುದು.

ಎಲ್ಲಾ ಆಚರಣೆಗಳನ್ನು ಕೇಕ್ ಕತ್ತರಿಸುವ ಒಂದು ಪಾಶ್ಚಾತ್ಯದೇಶಗಳ ಸಂಸ್ಕೃತಿ ನಮ್ಮ ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಕೇಕ್ ಗಳನ್ನು ಕಟ್ ಮಾಡಬೇಕೆಂದಿಲ್ಲ. ಹೊಸ ತಲೆಮಾರುಗಳಿಗೆ ಹಲವಾರು ದಿನಗಳ ಹೊಸ ಆಚರಣೆಗಳು, ಚಾಕಲೇಟ್, ಕೇಕ್ ಮತ್ತು ಇನ್ನಿತರ ಸಿಹಿತಿಂಡಿ ತಿನ್ನುವುದು ಮನೋರಂಜನೆಯಾಗಿ ಮಾರ್ಪಡುತ್ತಿದೆ. ಹೊಸ ಹೊಸ ದಿನಗಳ ಆಚರಣೆ, ಸ್ನೇಹಿತರೊಂದಿಗೆ ತಿರುಗಾಟ, ವಿವಾಹದ ಹಿಂದಿನ ಮುಂದಿನ ದಿನದ ನವೀನ ಆಚರಣೆಗಳು ಹೆಚ್ಚಿನವರಿಗೆ ಹೊರೆಯಾಗುತ್ತಿದೆ. ನಮ್ಮಲ್ಲಿ ವಿವಾಹದ ವೇಳೆ ಹೆಣ್ಣು ಮಕ್ಕಳಿಗೆ ನೀಡುವ ಚಿನ್ನವು ಸಮಾಜದಲ್ಲಿ ಒಂದು ಅತಿ ದೊಡ್ಡ ಸಮಸ್ಯೆಯಾಗಿದೆ. ಬಡ ಮತ್ತು ಮಧ್ಯಮ ಕುಟುಂಬಗಳಿಗೆ ಇದೊಂದು ಸವಾಲಾಗುತ್ತಿದೆ. ನಮ್ಮ ಜೀವನ ರೀತಿಯಲ್ಲಿ ಒಂದು ಬದಲಾವಣೆಯನ್ನು ತರುವುದೇ ಇದಕ್ಕೆ ಪರಿಹಾರವಾಗಿರುತ್ತದೆ. ಯಾರೂ ಇನ್ನೊಬ್ಬರನ್ನು ಯಾವುದೇ ವಿಷಯದಲ್ಲಿ ಖರ್ಚು ಮಾಡಲು ನಿರ್ಬಂಧಿಸಬೇಡಿರಿ.

ಜೀವನದಲ್ಲಿ ಎಲ್ಲಾ ಖರ್ಚುವೆಚ್ಚಗಳು ಸುಸೂತ್ರವಾಗಿ ಕಳೆದು ಕೈಯಲ್ಲಿ ಸ್ವಲ್ಪ ಹಣ ಉಳಿತಾಯವಾದಾಗ ಮಾತ್ರ ಮನಸ್ಸಿಗೆ ನೆಮ್ಮದಿ, ಕುಟುಂಬದಲ್ಲಿ ಸಮಾಧಾನ ಹಾಗೂ ಜೀವನದಲ್ಲಿ ದುಡಿಯಲು ಉತ್ಸಾಹವು ಸಿಗುತ್ತದೆ. ಅದರ ಬದಲಾಗಿ ಎಷ್ಟು ದುಡಿದರೂ ಸಾಕಾಗುವುದಿಲ್ಲ, ಕೈಯಲ್ಲಿ ಒಂದು ರೂಪಾಯಿ ಬಾಕಿಯಾಗುವುದಿಲ್ಲ, ಸಾಲಕ್ಕೆ ಕೊನೆಯೂ ಇಲ್ಲವಾದರೆ ನಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆ. ದೈಹಿಕ ಮತ್ತು ಮನಸ್ಸಿನ ಆರೋಗ್ಯವೇ ದೊಡ್ಡ ಸಂಪತ್ತು. ನಮ್ಮ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಮ್ಮಲ್ಲಿರುವ ಸಂಪತ್ತಿನ ಸವಿಯನ್ನು ಪಡೆಯಬಹುದು.

ನಮ್ಮ ಧರ್ಮವು ಆರಾಧನೆ, ವಿವಾಹ ಅಥವಾ ಇನ್ನಾವುದೇ ವಿಷಯಗಳಲ್ಲಿ ತಮಗೆ ಸಾಧ್ಯವಿಲ್ಲದ್ದನ್ನು ಖರ್ಚು ಮಾಡಲು ನಿರ್ಬಂಧಿಸುವುದಿಲ್ಲ. ನಮ್ಮಲ್ಲಿ ಯಾರಾದರೂ ನಮ್ಮಲ್ಲಿ ಇಲ್ಲದ ಹಣದಿಂದ ದಾನಧರ್ಮ ನೀಡಲು ತಯಾರಿದ್ದೇವೆಯೇ? ಖಂಡಿತ ಇಲ್ಲ. ಅದೇ ರೀತಿ ನಮ್ಮಲ್ಲಿ ಇಲ್ಲದ ಹಣದಿಂದ ಖರ್ಚು ಮಾಡುವಾಗಲೂ ಕೂಡಾ ನಾವು ಅನೇಕ ಬಾರಿ ಯೋಚಿಸಬೇಕು.